◆ ಜೀವಕ್ಕೆ ಜೀವವಾಗಿದ್ದ 'ಭಾಗ್ಯ'ಮ್ಮ ಹೋದ ಮೇಲೆ ಪ್ರೇಂ ಹೇಗಿದ್ದಾರೆ? ◆
● 'ಕರಿಯ' ಚಿತ್ರದ ವೇಳೆಯೇ ಅಮ್ಮನ ಪ್ರೀತಿಯ 'ಜೋಗಿ' ಸಿನಿಮಾದ ಸ್ಕೆಚ್ ಹಾಕಿದ್ರಾ ಪ್ರೇಂ? ●
ಈ ಇಸವಿಗಳದ್ದೇ ದೊಡ್ಡ ಗೊಂದಲ. ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತೇನೆ, ಇಸವಿಯನ್ನೇ ಮರೆತು ಬಿಡುತ್ತೇನೆ. ಈಗಲೂ ಅದೇ ಗೋಳು. ಅದು ಪ್ರೇಂ ನಿರ್ದೇಶನದ 'ಕರಿಯ' ಸಿನಿಮಾಕ್ಕೆ ಸಂಬಂಧಿಸಿದ ವಿಚಾರ. ಚಿತ್ರೀಕರಣವೆಲ್ಲಾ ಮುಗಿದ ನಂತರ ಪ್ರೇಂ'ಗೂ ನಿರ್ಮಾಪಕರಾದ ಆನೇಕಲ್ ಬಾಲರಾಜ್ ಅವರಿಗೂ ಅದೆಂಥದ್ದೋ ಕ್ಲಾಶ್ ಬಂತು. ಪ್ರೇಂ ತಲ್ಲಣಿಸಿ ಹೋದ. ತನ್ನೊಳಗಿನ ದುಗುಡವನ್ನು ಹೇಳಿಕೊಳ್ಳಲು ಆಗ ಪ್ರೇಂ ಬಳಿ ಯಾರೂ ಇರಲಿಲ್ಲ. ಅಷ್ಟರಲ್ಲಾಗಲೇ ಕೆಲವೊಂದು ವಾದ-ವಿವಾದಕ್ಕೆ ಸಿಕ್ಕುಹಾಕಿಕೊಂಡಿದ್ದ ಪ್ರೇಂ'ಗೆ ಆ ಕಾಲದಲ್ಲಿ ಪತ್ರಕರ್ತರ ಪರಿಚಯವೂ ಸರಿಯಾಗಿ ಇರಲಿಲ್ಲ.
ಪ್ರೇಂ'ನ ಈ ತೊಳಲಾಟದ ವಿವರವನ್ನು ತಿಳಿದ ನಾನು ಸುಮ್ಮನೇ ಒಂದು ಕಾಲ್ ಮಾಡಿದೆ. ಅತ್ತೇ ಬಿಟ್ಟ ಪ್ರೇಂ. ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಕೈಗೆ ಸಿಕ್ಕಂತಾಯಿತು! 'ಮಾತಾಡ್ಬೇಕಣ್ಣಾ, ಆಫೀಸಿಗೆ ಬರ್ಲಾ?' - ಅಂದ. 'ಬಾ' ಅಂದೆ. ಅರ್ಧ ಗಂಟೆಯಲ್ಲೇ ನನ್ನ ಟೇಬಲ್ ಮುಂದಿದ್ದ. ತುಂಬಾ ಕಂಗಾಲಾಗಿದ್ದ. ಮುಖ ಮೊದಲೇ ಕಪ್ಪು, ಈಗ ಇನ್ನಷ್ಟು ಕಪ್ಪೇರಿತ್ತು. ಬಂದವನೇ ತಾನಾಗಿ ಎಲ್ಲವನ್ನೂ ಹೇಳಿಕೊಂಡ. ನಾನು ನನ್ನಿಂದಾದಷ್ಟು ಸಮಾಧಾನ ಮಾಡಿದೆ...ಆತನಿಗೆ ಎಷ್ಟು ಸಮಾಧಾನವಾಯಿತೋ ಗೊತ್ತಿಲ್ಲ. ಆದರೆ ಬಂದಾಗ ಇದ್ದ ದುಗುಡ ಮಾಯವಾಗಿತ್ತು...
ಪ್ರೇಂ ಬಗ್ಗೆ ನನ್ಗೆ ಆ ಕಾಲದಿಂದಲೂ ಕುತೂಹಲವಿತ್ತು. ನಿಜವಾದ ಮಂಡ್ಯದ ಗಂಡು. ಈ ಫೀಲ್ಡಿನಲ್ಲಿ ಏನಾದ್ರೂ ಸಾಧಿಸಲೇ ಬೇಕೆನ್ನುವ ತುಡಿತವಿತ್ತು. ಸುಮ್ನೇ ಕೇಳಿದೆ : 'ಮುಂದೇನು ಪ್ರೇಂ?' ಪ್ರೇಂ ಭಯಂಕರ ಮಾತುಗಾರ. ಕರಿಕಾಗೆಯನ್ನು ಬಿಳಿಕಾಗೆ ಎಂದು ವಾದಿಸಿ ಗೆಲ್ಲುವ ತಾಖತ್ತು ಆಗಲೇ ಇತ್ತು. ಒಂದು ಪ್ರಶ್ನೆ ಕೇಳಿದರೆ ವಿವಿಧ ಆಂಗಲ್'ನ ಹತ್ತು ಉತ್ತರ ಸಿದ್ಧವಿರುತ್ತಿತ್ತು! ನನ್ನ ಪ್ರಶ್ನೆಗೆ ಪ್ರೇಂ ಉತ್ತರಿಸಿದ್ದು ಹೀಗೆ : 'ಅಣ್ಣಾ, ಏನಾದ್ರೂ ಸಾಧಿಸದೇ ನಾನು ಸುಮ್ಮನಿರೋ ಆಸಾಮಿಯಲ್ಲ. ಫೀಲ್ಡಿಗೆ ಇಳಿದಿದ್ದಾಯಿತು. 'ಕರಿಯ' ಬಗ್ಗೆ ಎಂಥಾ ಹೈಪ್ ಕ್ರಿಯೇಟ್ ಮಾಡಿದ್ದೇನೆ ಅಂತ ನಿಮ್ಗೆ ಗೊತ್ತು. ಖಂಡಿತಾ ಇದು ಹಿಟ್ ಆಗೋ ಪ್ರಾಡಕ್ಟ್. ಮುಂದೊಮ್ಮೆ ಅಮ್ಮನ ಬಗ್ಗೆನೇ ಒಂದು ಸಿನಿಮಾ ಮಾಡ್ಬೇಕು ಅಂತಿದ್ದೇನೆ. ಏಕೆಂದ್ರೆ ಅಮ್ಮ ನನ್ನ ಪ್ರಾಣ. ಅವ್ಳು ನನ್ನನ್ನು ಹೇಗೆ ಸಾಕಿ ಈ ಮಟ್ಟಕ್ಕೆ ತಂದಿದ್ದಾಳೆ ಅನ್ನೋದು ನನ್ಗೆ ಮತ್ತು ಆಕೆಗೆ ಮಾತ್ರ ಗೊತ್ತು. ಅವಳ ನೆನಪಾದ್ರೂ ಸಾಕು ಕಣ್ಣೀರು ಬರ್ತದೆ ಅಣ್ಣಾ. ಅಂಥಾ ತಾಯಿ ಪ್ರೀತಿಯ ಒಂದು ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಕನಸು. ನಿಮ್ಮ ಆಶೀರ್ವಾದ ಇರ್ಲಿ ಅಣ್ಣಾ...' - ಅಂದಿದ್ದ ಪ್ರೇಂ.
'ಜೋಗಿ' ಸಿನಿಮಾ ನೋಡುತ್ತಿದ್ದಂತೆಯೇ ಪ್ರೇಂ ಅಂದು ಆಡಿದ್ದ ಮಾತು ನೆನಪಾಗಿತ್ತು. ಈಗ ಮತ್ತೆ ನೆನಪಾಗುತ್ತಿದೆ. ಪ್ರೇಂ ಯಾರನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರೋ ಆಕೆಯ ನಿರ್ಗಮನವಾಗಿದೆ. ಪ್ರೇಂ ಹೃದಯ ಕೂಗಿ ಹೇಳಿತು : 'ನಾನು ಎಷ್ಟೇ ಹೋರಾಟ ಮಾಡಿದ್ರೂ ಕೊನೆಗೂ ನಿನ್ನನ್ನು ಉಳಿಸೋಕೆ ಆಗ್ಲಿಲ್ಲ. ನಿನ್ನ ಋಣ ತೀರಿಸೋಕೆ ಮತ್ತೆ ನಿನ್ನ ಹೊಟ್ಟೇಲಿ ಹುಟ್ಟಿ ಬರ್ತೇನೆ. ಮತ್ತೊಂದು ಅವಕಾಶ ಕೊಡು ತಾಯೀ...' ಪ್ರೇಂ ಅಮ್ಮ ನಿಧನರಾದ ಸುದ್ದಿ ಗೊತ್ತಾದಾಗ ಏಕಕಾಲದಲ್ಲಿ 'ಜೋಗಿ' ಮತ್ತು 'ಭಾಗ್ಯಮ್ಮ' ನೆನಪಾದರು. ಫೋನ್ ಮಾಡಿ ನಾಲ್ಕು ಸಾಂತ್ವನದ ಮಾತಾಡೋಣವೆಂದರೆ ಫೋನಿಗೆ ಸಿಗದಷ್ಟು ಪ್ರೇಂ ಬಿಜಿಯಾಗಿದ್ದಾರೆ. ಪರ್ವಾಗಿಲ್ಲ, ಇಲ್ಲಿಂದಲೇ ಆ ಮಹಾ ತಾಯಿಗೆ ವಿದಾಯ ಹೇಳುತ್ತಿದ್ದೇನೆ : ಓಂ ಶಾಂತಿ...

Social Plugin