● ಇದೊಂದು ಸ್ಟೋರಿ ಓದಿ ನೋಡಿ, ದಂಗಾಗಿ ಬಿಡ್ತೀರಾ...! 
◆ ಅಮಿತಾಬ್ ಬಚ್ಚನ್ ಅವರಿಗೆ ಗಾಡ್ ಫಾದರ್ ಆಗಿದ್ದವರು ಒಬ್ಬರು ಕನ್ನಡಿಗರು! ಅವರ ಹೆಸರು : ರಾಮನಾಥ್. ಇವರು ಬೇರೆ ಯಾರೂ ಅಲ್ಲ, ಹಿರಿಯ ನಟ ಶಿವರಾಂ ಸೋದರ! ◆
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು 
     ಇದು ದಂತಕಥೆಯಂತೆ ಕಂಡರೂ ದಂತಕಥೆಯಲ್ಲ. ಕಟ್ಟುಕಥೆಯಂತೆ ಕಂಡರೂ ಕಟ್ಟುಕಥೆಯಲ್ಲ! ಇದು ನಮ್ಮ ನಿಮ್ಮ ಮುಂದೆ ನಡೆದ ವಾಸ್ತವದ ಕಥೆ. ಈ ಕಥೆಯ ನಾಯಕನ ಹೆಸರು: ಎಸ್.ರಾಮನಾಥ್. ಇವರು ತಮ್ಮ 83ನೇ ವಯಸ್ಸಿನಲ್ಲೇ ಕಾಲವಾಗಿ 'ಭೂತ'ಕ್ಕೆ ಸೇರಿಕೊಂಡಿದ್ದಾರೆ! ವರ್ತಮಾನದಲ್ಲಿ ನಿಂತು ಹೇಳುವ ಈ ಕಥೆ ನಡೆದ ಸಂದರ್ಭದಲ್ಲಿ ರಾಮನಾಥ್ ಯುವಕರಾಗಿದ್ದರು. 
     ತೀರಾ ಹತ್ತಿರದಿಂದ ಹೇಳಬೇಕೆಂದರೆ ಇವರು ನಮ್ಮ 'ಶರಪಂಜರ' ಶಿವರಾಂ ಅವರ ಸೋದರ. ಖ್ಯಾತ ರಂಗತಜ್ಞ ಎ. ಎಸ್.ಮೂರ್ತಿಯವರ ಖಾಸಾ ಸೋದರಿಯ ಪತಿ. ವೃತ್ತಿ ಬದುಕಿನ ಆರಂಭದಲ್ಲಿ ಕು.ರ.ಸೀತಾರಾಮ ಶಾಸ್ತ್ರಿಯವರ ಸಹಾಯಕರಾಗಿ ಕೆಲಸ ಮಾಡಿದ ರಾಮನಾಥ್ ಅವರು ಹಳೆಯ 'ಮಹಾಕವಿ ಕಾಳಿದಾಸ' ಚಿತ್ರದ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 1965ರಲ್ಲಿ 'ಬೆರೆತ ಜೀವ' ಎಂಬ ಚಿತ್ರವನ್ನು ನಿರ್ಮಿಸಿದರು. 1972ರಲ್ಲಿ ತಮ್ಮ ಸೋದರ ಶಿವರಾಂ ಜತೆ ಸೇರಿ 'ಹೃದಯ ಸಂಗಮ' ಎಂಬ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದರು. ನಂತರ 'ರಾಶಿ ಬ್ರದರ್ಸ್' ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ 'ನಾನೊಬ್ಬ ಕಳ್ಳ' ಮತ್ತು 'ಡ್ರೈವರ್ ಹನುಮಂತು' ಎಂಬೆರಡು ಚಿತ್ರಗಳನ್ನು ನಿರ್ಮಿಸಿದರು. 
     ಇಂಥಾ ಹಿನ್ನೆಲೆಯ ರಾಮನಾಥ್ ಅವರ ವೃತ್ತಿ ಬದುಕಿನ ಮೈನವಿರೇಳಿಸುವ ಘಟನೆಯೊಂದು ಹಿಂದಿ ಚಿತ್ರರಂಗದಲ್ಲಿ ರಾಮನಾಥ್ ಏರಿರುವ ಎತ್ತರಕ್ಕೊಂದು ಸಾಕ್ಷಿ : ನಿಮಗೆ ಮೆಹಮೂದ್ ಗೊತ್ತಲ್ಲಾ? ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನಾಳಿದ ಖ್ಯಾತ ಹಾಸ್ಯನಟರಿವರು. ಇಂಥಾ ಮೆಹಮೂದ್ ಸಿನಿಮಾ ಸ್ಕ್ರಿಪ್ಟ್'ವೊಂದನ್ನು ರೆಡಿ ಮಾಡಿ ಆ ಕಾಲದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದ ರಾಜೇಶ್ ಖನ್ನಾ ಬಳಿ ಹೋಗುತ್ತಾರೆ. ತಮ್ಮ ಆಫೀಸಿನ ಹೊರ ಜಗುಲಿಯಲ್ಲಿ ಇವರನ್ನು ಎರಡು ಗಂಟೆಗಳ ಕಾಲ ಕಾಯಿಸಿದ ನಂತರ ರಾಜೇಶ್ ಖನ್ನಾ ಸಾಹೇಬರು ತಮ್ಮ ಬಳಿ ಕರೆಸಿಕೊಳ್ಳುತ್ತಾರೆ. ಬಂದಿರುವ ಉದ್ದೇಶವನ್ನು ತಿಳಿಸಿದಾಗ ರಾಜೇಶ್ ಖನ್ನಾ ಮುಖವನ್ನು ಸಿಂಡರಿಸಿಕೊಂಡೇ 'ಯಾರು ಡೈರೆಕ್ಟರ್?' ಎಂದು ಪ್ರಶ್ನಿಸುತ್ತಾರೆ. ಮೆಹಮೂದ್ ಉತ್ತರಿಸುತ್ತಾರೆ : 'ಎಸ್.ರಾಮನಾಥ್'. ಈ ಹೆಸರು ಕೇಳಿದಾಕ್ಷಣ ರಾಜೇಶ್ ಖನ್ನಾ ವ್ಯಂಗ್ಯವಾಡುತ್ತಾರೆ : 'ಸಾಲಾ ಮದರಾಸಿ...'
     ಮೆಹಮೂದ್ ಮೈ ಉರಿದು ಹೋಗುತ್ತದೆ. ಆದರೂ ಸಾವರಿಸಿಕೊಂಡು ಕಥೆ ಹೇಳಲು ಹೊರಡುತ್ತಾರೆ. ಎರಡು ಗಂಟೆಗಳ ಕಾಲ ಕಥಾಕಾಲಕ್ಷೇಪ ನಡೆಯುತ್ತದೆ. ತೀರಾ ಉದಾಶೀನದಿಂದಲೇ ಕಥೆ ಕೇಳಿಸಿಕೊಂಡ ರಾಜೇಶ್ ಖನ್ನಾ ಕೊನೆಯಲ್ಲಿ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ : 'ಡಬ್ಬಾ ಸ್ಕ್ರಿಪ್ಟ್, ಇದನ್ನು ಕಸದ ಬುಟ್ಟಿಗೆ ಹಾಕಿಬಿಡಿ...!'
     ಮೆಹಮೂದ್ ಇಂಥಾದ್ದೊಂದು ಅಸಡ್ಡೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಆಘಾತಗೊಂಡ ಅವರು ನಿರಾಸೆಯಿಂದಲೇ ತಮ್ಮ ಆಫೀಸಿಗೆ ಹಿಂದಿರುಗಿದಾಗ ಅಲ್ಲಿ ಅವರ ಸೋದರ ಅಲಿ ಕುಳಿತಿದ್ದ. ಅಣ್ಣನ ಈ ಹತಾಶ ಮುಖವನ್ನು ಕಂಡು ವಿಷಯವೇನೆಂದು ವಿಚಾರಿಸಿದ್ದಾನೆ : 'ಬಿಟ್ಟಾಕು ಭೈಯ್ಯಾ. ನಾನೊಬ್ಬ ಹೀರೋನನ್ನು ಕರೆಸುತ್ತೇನೆ, ನೋಡು...' ಎಂದು ಹೇಳಿ ಯಾರಿಗೋ ಕಾಲ್ ಮಾಡುತ್ತಾನೆ. ಮುಂದಿನ ಅರ್ಧ ಗಂಟೆಯಲ್ಲೇ ಹೀರೋ ಹಾಜರ್. ಆತನನ್ನು ನೋಡಿ ಮೇಹಮೂದ್ ಕಂಗಾಲು! ನಂತರ ನಿರ್ದೇಶಕ ರಾಮನಾಥ್ ಅವರನ್ನು ಕರೆಸುತ್ತಾರೆ. ಆತನ ಕಾಲ ಕಿರು ಬೆರಳಿನಿಂದ ನೆತ್ತಿಯ ಕೂದಲ ತನಕ ನೋಡಿದ ರಾಮನಾಥ್ ಖಚಿತ ಧ್ವನಿಯಲ್ಲಿ ಘೋಷಿಸುತ್ತಾರೆ : 'ಈತನೇ ನನ್ನ ಹೀರೋ. ಶೂಟಿಂಗ್ ಶೆಡ್ಯೂಲ್ ಫಿಕ್ಸ್ ಮಾಡಿ...'
     ಅಂದಹಾಗೆ ಅಂಥಾ ಹತಾಶ ಸ್ಥಿತಿಯಲ್ಲೇ ಆಯ್ಕೆ ಮಾಡಿಕೊಂಡ ಹೀರೋನ ಹೆಸರು : 'ಅಮಿತಾಬ್ ಬಚ್ಚನ್'! ಸಿನಿಮಾದ ಹೆಸರು : 'ಬಾಂಬೆ ಟು ಗೋವಾ'. ಈ ಸಿನಿಮಾ ಯಾವ ಪರಿ ಹಿಟ್ ಆಯಿತೆಂದರೆ ರಾಮನಾಥ್ ಅವರ ಸಹಿತ ಅಮಿತಾಬ್ ಬಚ್ಚನ್ ಅವರಿಗೆ ಹಿಂದಿ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಮಾನ ತಂದು ಕೊಟ್ಟಿತು. ಇದೇ ಪಾತ್ರವನ್ನು ನಿರಾಕರಿಸಿದ ರಾಜೇಶ್ ಖನ್ನಾ ತನ್ನ ದುರಹಂಕಾರದ ನಡೆ-ನುಡಿಯಿಂದಾಗಿ ಅದೇ ಹಿಂದಿ ಚಿತ್ರರಂಗದಲ್ಲಿ ಕಾಲಕಸವಾಗಿ ಬಿಟ್ಟ! ಈಗ ರಾಜೇಶ್ ಖನ್ನಾ ಇಲ್ಲ, ಮೆಹಮೂದ್ ಇಲ್ಲ, ರಾಮನಾಥ್ ಕೂಡಾ ಇಲ್ಲ. ಭಾರತೀಯ ಚಿತ್ರರಂಗದ ಚರಿತ್ರೆಯಲ್ಲಿ ದಾಖಲಾದ 'ಬಾಂಬೆ ಟು ಗೋವಾ' ಸಿನಿಮಾ ಮತ್ತು ಇದರಲ್ಲಿ ನಾಯಕ ನಟರಾಗಿ ನಟಿಸಿದ ಅಮಿತಾಬ್ ಬಚ್ಚನ್ ಹೆಸರು ಶಾಶ್ವತವಾಗಿ ಉಳಿದಿದೆ. ಅಪ್ಪಟ ಕನ್ನಡಿಗ ರಾಮನಾಥ್ ಹಿಂದಿ ಚಿತ್ರರಂಗದಲ್ಲಿ ಪಡೆದುಕೊಂಡ ಸ್ಥಾನ, ಮಾನ ಕೂಡಾ ಶಾಶ್ವತ...
     ಇದು ಒಂದು ಪುಟ್ಟ ಸ್ಯಾ0ಪಲ್ ಮಾತ್ರ. ಮತ್ತೊಂದು ಸ್ಯಾ0ಪಲನ್ನು ನಾಳೆ ಹೇಳುತ್ತೇನೆ. ಕನ್ನಡ ಚಿತ್ರರಂಗದ ತೆರೆಮರೆಯ ಇಂಥಾ ನಿಜವಾದ ಹೀರೋಗಳ ಬದುಕಿನ ಕಥೆ ರೋಚಕ-ರೋಮಾಂಚಕ. ಹಾಂ, ನಾಳೆ ನಾನು ಹೇಳಲಿರುವ ಕಥೆಯ ಹೀರೋ ಡಾ|ರಾಜಕುಮಾರ್. ಈ ಕನ್ನಡದ ಕಣ್ಮಣಿಯನ್ನು ಅಮಿತಾಬ್ ಬಚ್ಚನ್ 'ಹಿಟ್ಲರ್' ಎಂದು ನಿಂದಿಸಿ ಬಿಟ್ಟರು. ಇಡೀ ಕನ್ನಡನಾಡು ಬೆಂಕಿಯಾಯಿತು. ಈ ಬೆಂಕಿಯನ್ನು ಆರಿಸಲು ಮತ್ತದೇ ರಾಮನಾಥ್ ಅವರೇ ಬರಬೇಕಾಯಿತು...ಜಸ್ಟ್ ವೈಟ್ ಎ ಡೇ... 
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ 'ಶುಭಂ' ಪ್ರತಿಗಳಿಗಾಗಿ ಸಂಪರ್ಕಿಸಿ : ಶ್ರೀ   ಗಣೇಶ ಕಾಸರಗೋಡು 
👉  ರಾಮನಾಥ್-ಶಿವರಾಂ Pic : KNN