ರಬಕವಿಯ ಕಂಬಳಿ ಬಜಾರ್ ಸೀಲ್‍ಡೌನ್ ಮಾಡಿದ ಚಿತ್ರ. ತಹಸೀಲ್ದಾರ ಪ್ರಶಾಂತ ಚನಗೊಂಡ, ಪೌರಾಯುಕ್ತ ಶ್ರೀನಿವಾಡ ಜಾಧವ ಸೇರಿದಂತೆ ಅನೇಕರಿದ್ದರು.
ರಬಕವಿ-ಬನಹಟ್ಟಿ: ಕೊರೊನಾ ಅಸಲಿಯಾಟ ಶುರು
*ಸೋಮವಾರದಿಂದ ರಬಕವಿ ಲಾಕ್‍ಡೌನ್?
ರಬಕವಿ-ಬನಹಟ್ಟಿ,ಜು18: ತಾಲೂಕಿನಾದ್ಯಂತ ಪಟ್ಟಣ ಹಾಗು ಗ್ರಾಮಗಳಲ್ಲಿ ಕೊರೊನಾ ವೈರಸ್ ತನ್ನ ಅಸಲಿಯಾಟ ಶುರು ಮಾಡಿದ್ದರ ಹಿನ್ನಲೆ ಜನತೆ ತೀವ್ರ ಭಯಭೀತರಾಗುವಲ್ಲಿ ಕಾರಣವಾಗಿದೆ.
ರಬಕವಿಯ ಕಂಬಳಿ ಬಜಾರನ 50 ವರ್ಷದ ಮಹಿಳೆಯೋರ್ವಳಿಗೆ ಕೊರೊನಾ ದೃಢಪಟ್ಟ ಹಿನ್ನಲೆ ಚಾವಡಿ ಗಲ್ಲಿಯ ಲಕ್ಷ್ಮೀ ದೇವಸ್ಥಾನ ಹಾಗು ಕಂಬಳಿ ಬಜಾರ ಸೀಲ್‍ಡೌನ್ ಮಾಡಲಾಗಿದೆ.
ಸೋಂಕಿತ ಮಹಿಳೆಯು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆಗೆಂದು ತೆರಳಿದ್ದರು. ಈ ಸಂದರ್ಭ ಗಂಟಲು ದ್ರವ ಹಾಗು ರಕ್ತದ ಮಾದರಿ ಪರೀಕ್ಷೆಗೆಂದು ಸ್ವ್ಯಾಬ್‍ಗೆ ಕಳಿಸಿದ ನಂತರ ಪತ್ತೆಯಾಗಿದ್ದು, ಇವರಿಗೆ ಹೇಗೆ ತಗುಲಿತು ಎಂಬುದೇ ತಿಳಿದಿಲ್ಲ.
ಸೋಮವಾರದಿಂದ ಲಾಕ್‍ಡೌನ್: ರಬಕವಿ-ಹೊಸೂರ ಹಾಗು ರಾಮಪೂರ ಪಟ್ಟಣಗಳ ಜನತೆ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡುವ ನಿರೀಕ್ಷೆಯಿದ್ದು, ಇಂದು ರವಿವಾರ ಎಲ್ಲ ಪಟ್ಟಣಗಳ ಪ್ರಮುಖ ಸಭೆಯಲ್ಲಿ ನಿರ್ಣಯವಾಗಲಿದೆ.
ಶಾಸಕರ ಮನವಿ: ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು, ಯಾರೋಬ್ಬರೂ ಮಾಸ್ಕ್ ಹಾಗು ಸಾಮಾಜಿಕ ಅಂತರದಿಂದ ನಿರ್ಲಕ್ಷ್ಯಬೇಡ. ಅಂಗಡಿಕಾರರು ಸ್ಯಾನಿಟೈಜರ್ ಬಳಕೆಯಿಂದ ವ್ಯವಹರಿಸಬೇಕೆಂದು ಶಾಸಕ ಸಿದ್ದು ಸವದಿ ಮನವಿ ಮಾಡಿದ್ದಾರೆ.