ರಬಕವಿ-ಬನಹಟ್ಟಿ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ರೈತರು ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಿಲ್ ಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕಬ್ಬಿನ ಬಿಲ್ ಬಾಕಿ: ಅಧಿಕಾರಿಗಳ ಆಶ್ವಾಸನೆಗಳು ಸಾಕಾಗಿವೆ
ರಬಕವಿ-ಬನಹಟ್ಟಿ,ಜು13: ರೈತರು ಈ ದೇಶದ ಬೆನ್ನೆಲಬು ಎಂದು ಹೇಳುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಂದು ರೈತರನ್ನು ಭಿಕ್ಷುಕರಂತೆ ಬೀದಿಗೆ ತಂದು ನಿಲ್ಲಿಸಿದ್ದಾರೆ. ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಎರಡು ನಾಲಿಗೆಗಳಿವೆ. ಕಬ್ಬಿನ ಬಿಲ್ ಪಾವತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಆಶ್ವಾಸನೆಗಳು ಸಾಕಾಗಿವೆ ಎಂದು ತೇರದಾಳ ಮತಕ್ಷೇತ್ರದ ರೈತ ಸಂಘದ ಅಧ್ಯಕ್ಷ ಶ್ರೀಕಾಂತ ಘೂಳನ್ನವರ ತಿಳಿಸಿದರು.
ಅವರು ಸೋಮವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಸಾವರಿನ್ ಸಕ್ಕರೆ ಕಾರ್ಖಾನೆಯ ಕಬ್ಬಿನ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಕಬ್ಬಿನ ಬಿಲ್ ಪಾವತಿಸುವ ಸಂದರ್ಭದಲ್ಲಿ ಬಿಲ್ಲಿನ ಜೊತೆಗೆ ಎರಡು ವರ್ಷದ ಬಡ್ಡಿಯನ್ನು ಕೂಡಾ ಸೇರಿಸಿಕೊಡಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಸ್ಪಂದಿಸದ ಜನಪ್ರತಿನಿಧಿಗಳ ತಕ್ಕ ಪಾಠ ಕಲಿಸುವುದಾಗಿ ಘೂಳನ್ನವರ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಮುಖಂಡ ಗಂಗಾಧರ ಮೇಟಿ ಮಾತನಾಡಿ, ಕಬ್ಬಿನ ಬಿಲ್ ಪಾವತಿಗಾಗಿ ಎರಡು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹತ್ತಾರು ಸಭೆಗಳಾಗಿವೆ. ಆದರೂ ಇದುವರೆಗೂ ಯಾವುದೆ ಪರಿಹಾರ ದೊರೆತಿಲ್ಲ. ಆದ್ದರಿಂದ ನಮಗೆ ನ್ಯಾಯ ದೊರೆಯುವವರೆಗೆ ಧರಣಿ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ರೈತ ಮುಖಂಡ ಹೊನ್ನಪ್ಪ ಬಿರಡಿ ಮಾತನಾಡಿ, ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ಒಟ್ಟು 996 ರೈತರಿಗೆ ರೂ.21ಕೋಟಿ 8 ಲಕ್ಷ ಬಾಕಿ ಹಣ ಬರಬೇಕಾಗಿದೆ ಎಂದರು. ಸಭೆಯಲ್ಲಿ ಬಂಡು ಪಕಾಲಿ ಮಾತನಾಡಿದರು.
ರಬಕವಿಯ ನಿರೀಕ್ಷಣಾ ಮಂದಿರದಿಂದ ರೈತರು ಬೈಕ್ ಮೂಲಕ ತಹಶೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿದರು. ಸರ್ಕಾರ, ಕಾರ್ಖಾನೆ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಶಿವಪ್ಪ ಹೋಟಕರ್, ಹನಮಂತ ಪೂಜಾರಿ, ಶಿವಪ್ಪ ಚೌಗಲಾ, ಮಲ್ಲು ಗೊರವ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ 
  ಸಂಪರ್ಕಿಸಿ +91 9902523698