◆ ಕಡಲೇ ಕಾಯಿ ತಿನ್ನುತ್ತಾ ಗಾಂಧೀನಗರಕ್ಕೆ ನಡೆದು ಬಂದಾತ ಪ್ರೇಕ್ಷಕರಿಗೆ ಸೆಲ್ಯೂಲಾಯಿಡ್ ಅಮೃತವುಣಿಸಿದ ಕಥೆ...◆
ಆ ಹುಡುಗನಿಗೆ ಗೊತ್ತಿರಲಿಲ್ಲ, ಮುಂದೊಮ್ಮೆ ತಾನು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕನಾಗುತ್ತೇನೆಂದು! ಬೆಳಿಗ್ಗೆ ಎದ್ದೊಡನೆಯೇ ಹರಿದು ಹೋದ ಹವಾಯಿ ಚಪ್ಪಲಿ ತುಳಿಯುತ್ತಾ ಬಿನ್ನಿ ಮಿಲ್'ನಿಂದ ಗಾಂಧೀನಗರದ ತನಕ ನಡೆದುಕೊಂಡೇ ಬರ್ತಿದ್ದ. ಹೊರಡುವ ಹೊತ್ತಿನಲ್ಲಿ ನಾಲ್ಕಾಣೆ ಕಡ್ಲೆಕಾಯಿ ಬೀಜ ಜೇಬಿಗೆ ಹಾಕ್ಕೊಂಡ್ರೆ ಮುಗೀತು, ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ! ಸರಿಯಾಗಿ ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನದ ಹತ್ತಿರ ಮುಟ್ಟುವಷ್ಟರಲ್ಲಿ ಕಡ್ಲೆಕಾಯಿ ಬೀಜ ಮುಗಿದಿರೋದು. ಅಲ್ಲಿಂದ ಶುರು ನೋಡಿ, ನಿರ್ಮಾಪಕರ, ನಿರ್ದೇಶಕರ ಬೇಟೆ...ಹೀಗೆ ಬೇಟೆಗೆ ಇಳಿದಿದ್ದ ಹುಡುಗನ ಹೆಸರೇ : ಶಿವಮಣಿ!
ಇಂಥಾ ಕಥೆಗಳ ಹಿನ್ನೆಲೆಯ ಹತ್ತಾರು ವ್ಯಕ್ತಿಗಳ ಹೆಸರನ್ನು ಕೊಡಬಹುದು : ದರ್ಶನ್, ಗಣೇಶ್, ಯಶ್, ರಮೇಶ್, ಪ್ರೇಂ, ಉಪೇಂದ್ರ...ಪಟ್ಟಿ ದೊಡ್ಡದಿದೆ! ಆದರೆ ನಾನು ಇಲ್ಲಿ ಹೇಳಲಿರುವ ವ್ಯಕ್ತಿಯ ಕಥೆ ಇವರೆಲ್ಲರಿಗಿಂತ ಸ್ವಲ್ಪ ಡಿಫರೆಂಟ್. ಶಿವಮಣಿ : ಕನಸುಗಳನ್ನು ಮಿದುಳಲ್ಲಿ ತುಂಬಿಕೊಂಡು ಬೆಂಗಳೂರಿಗೆ ಕಾಲಿಟ್ಟಾಗ ಇವರ ಕೈಲಿ ಏನಿತ್ತು? ಒಂದು ಪುಟ್ಟ ಬಟ್ಟೆಗಳ ಬ್ಯಾಗ್ ಬಿಟ್ಟರೆ ಬೇರೇನೂ ಇರಲಿಲ್ಲ. ಇಂಥಾ ಹುಡುಗನೊಬ್ಬ ಈ ಮಟ್ಟದ ಎತ್ತರಕ್ಕೇರಲು ಈತನ ಮಾನಸಿಕ ದೃಢತೆಯೇ ಕಾರಣ. ಪರಿಶ್ರಮ, ಶ್ರದ್ಧೆ, ಪ್ರಯತ್ನ ಶಿವಮಣಿಯನ್ನು ಕನ್ನಡ ಚಿತ್ರರಂಗದ ಅದ್ಭುತ ತಂತ್ರಜ್ಞರನ್ನಾಗಿ ರೂಪಿಸಿತು. ಆದರೆ ಇವರ ಆಸೆ ಇದ್ದದ್ದು ನಟನಾಗಬೇಕೆಂದು! ಆದದ್ದು ನಿರ್ದೇಶಕ. ಅಲ್ಲಿ ಸೆಟ್ಲ್ ಆಗುತ್ತಿರುವಂತೆಯೇ ಕೂಡಿ ಬಂದ ಅದೃಷ್ಟ ನಟನನ್ನಾಗಿ ಪರಿವರ್ತಿಸಿತು.
ಸೋಲಿಗೆ ಕುಗ್ಗದ, ಗೆಲುವಿಗೆ ಹಿಗ್ಗದ ಶಿವಮಣಿಯನ್ನು ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಂಡಿದೆಯೋ ಗೊತ್ತಿಲ್ಲ. ಆದರೆ ಇದರ ಪರಿವೆಯೇ ಇಲ್ಲದಂತೆ ಕಣ್ಣುಗಳಿಗೆ ಕುದುರೆ ಪಟ್ಟಿಕಟ್ಟಿ ಗುರಿ ತಲುಪುವತ್ತ ಹೆಜ್ಜೆಯಿಟ್ಟರು ಶಿವಮಣಿ. ಅಷ್ಟು ದೂರ ಸಾಗಿದ ನಂತರ ಪಟ್ಟಿ ತೆರೆದು ನೋಡುತ್ತಾರೆ ಸಿನಿಮಾ ಜಗತ್ತಿನ ವೈಶಾಲ್ಯತೆಯ ಅರಿವಾಗುತ್ತದೆ. ತಾನೆಲ್ಲಿ ಬಂದು ನಿಂತಿದ್ದೇನೆ ಎಂಬುದರ ಗುರುತು ಸಿಕ್ಕಿರುತ್ತದೆ.
ಒಂದಾ ಎರಡಾ, ಸಾಲು ಸಾಲು ಚಿತ್ರಗಳು ಹಿಟ್, ಸೂಪರ್ ಹಿಟ್ : ಗೋಲಿಬಾರ್, ದೊರೆ, ಸ್ವಾತಿ, ಜೋಶ್...ಸಾಲು ಸಾಲು ಗೆಲುವು. ನಟನಾಗಿಯೂ ನಟಿಸಿದ್ದಾಯಿತು. ಐದಾರು ಚಿತ್ರಗಳ ಸಂಖ್ಯೆ. ಮತ್ತೆ ನಿರ್ದೇಶನ. ಈಗ ಮತ್ತೆ ನಟನೆ. ರವೀಶ್ರೀವತ್ಸ ಕರೆದು 'ಟೈಗರ್ ಗಲ್ಲಿ' ಎಂಬ ಚಿತ್ರದಲ್ಲಿ ವಿಶಿಷ್ಟ ಪಾತ್ರವೊಂದನ್ನು ನೀಡಿದರು. ನಂತರ 'ಬೆಲ್ ಬಾಟಮ್' ಸರದಿ. ಗಡ್ಡಕ್ಕೆ ಡಿಮಾಂಡ್ ಬಂದಿದ್ದೇ ಆವಾಗ! ನಂತರದ್ದೆಲ್ಲವೂ ಈ ಗಡ್ಡಧಾರಿಯದ್ದೇ ಪ್ರಭಾವ! ಬಯಸಿದಾಗ ಸಿಗದಿರುವ ನಟನೆಯ ಅವಕಾಶ ಈಗ ಸಿಗುತ್ತಿದೆ! ಇದುವೇ ಅಲ್ಲವೇ ಯೋಗ-ಯೋಗ್ಯತೆಯ ಆಟ!
ಇಷ್ಟೆಲ್ಲಾ ಆದರೂ ಈಗಲೂ ಮನೆಯಿಂದ ಹೊರ ಹೋಗುವಾಗ ಗೋಡೆ ಮೇಲೆ ತೂಗು ಹಾಕಿರುವ ಶಂಕರನಾಗ್ ಫೋಟೋಕ್ಕೆ ಒಂದು ನಮಸ್ಕಾರ ಹಾಕುವುದನ್ನು ಬಿಟ್ಟಿಲ್ಲ! ಏಕೆಂದರೆ ಶಂಕರ್ ಇವರ ಪಾಲಿಗೆ ಚಾರ್ಜಿಂಗ್ ಪಾಯಿಂಟ್! 'ದಿಗ್ವಿಜಯ' ಸಿನಿಮಾದಲ್ಲಿ ಶಂಕರ್ ಅವರ ಸಹಾಯಕರಾಗಿ ಕೆಲಸ ಮಾಡಿದ ನಂತರವಂತೂ ಅವರ ಆಪ್ತ ಶಿಷ್ಯನಾಗಿ ಬಿಟ್ಟರು. ಈಗ ಶಂಕರ್ ಇವರ ಮಾನಸ ಗುರುವಾಗಿ ವಿಶ್ ಮಾಡುತ್ತಿದ್ದಾರೆ...
ಇಷ್ಟೆಲ್ಲಾ ಆಗಿಯೂ ಅತಿ ವಿನಮ್ರತೆಯಿಂದ ಶಿವಮಣಿ ಹೇಳುತ್ತಾರೆ : 'ಒಂದು ಯಶಸ್ವೀ ಸಿನಿಮಾ ಒಬ್ಬ ನಿರ್ದೇಶಕನಿಂದ ಮಾತ್ರ ಆಗುವುದಿಲ್ಲ. ಅದು ಮ್ಯಾಜಿಕ್ ಆಫ್ ಟೀಮ್. Not made, it happens...' - ಹೀಗೆಂದು ಹೇಳಿ ತಮ್ಮ ಸಿನಿಮಾದ ಯಶಸ್ಸನ್ನು ಇಡೀ ಟೀಮಿಗೆ ಧಾರೆಯೆರೆಯುವ ಹೃದಯವಂತ ಈ ಶಿವಮಣಿ...ಅಲ್ಲಲ್ಲ...ಸ್ಪರ್ಶಮಣಿ!!!
ಇಂಥಾ ಸಹೃದಯೀ ಗೆಳೆಯ ನನ್ನ 'ಶುಭಂ' ಪುಸ್ತಕವನ್ನು ತರಿಸಿಕೊಂಡಿದ್ದಾರೆ. ಈ ಪುಸ್ತಕದ ಬಗೆಗಿನ ಇವರ ಅಮೂಲ್ಯ ಅಭಿಪ್ರಾಯಕ್ಕಾಗಿ ಕಾದಿದ್ದೇನೆ...ನಿಮಗೆ ಶುಭವಾಗಲಿ ಗೆಳೆಯರೇ...
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin