■ ಸೈನಿಕರ ಟೆಂಟಲ್ಲಿ ಜೀವಕ್ಕಾಗಿ ಪರದಾಟ ■
● ಆಕ್ಷಿಜನ್ ಇಲ್ಲದೇ ಲೇಹ್-ಲಡಾಖ್'ನಲ್ಲಿ ಪ್ರಜ್ಞಾಹೀನರಾಗಿ ಜೀವಕ್ಕಾಗಿ ಒದ್ದಾಡಿದ ಸಿನಿಮಾ ಪತ್ರಕರ್ತರು ●
 ◆ ಇದು 18 ವರ್ಷಗಳ ಹಿಂದಿನ ಕಥೆ. 2002ರಲ್ಲಿ ರಾಜಕಾರಣಿಯೂ ಆಗಿರುವ ನಟ, ನಿರ್ಮಾಪಕ ಸಿ.ಪಿ.ಯೋಗೀಶ್ವರ್ ಅವರು 'ಸೈನಿಕ' ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಅದರ ಚಿತ್ರೀಕರಣ ವೀಕ್ಷಿಸಲೆಂದು ಬೆಂಗಳೂರಿನ ಒಂದಷ್ಟು ಮಂದಿ ಸಿನಿಮಾ ಪತ್ರಕರ್ತರನ್ನು ಲೇಹ್, ಲಡಾಖ್'ಗೆ ಕರೆಸಿಕೊಂಡಿದ್ದರು...ಇದು ಇಲ್ಲಿ ಯಾಕೆ ಪ್ರಸ್ತುತ ಅಂದರೆ : ಅದು ರಕ್ತ ಹೆಪ್ಪುಗಟ್ಟಿಸುವ ರಣಚಳಿಯ ತಾಣ. ಒಂದೇ ಒಂದು ಹೆಜ್ಜೆ ಮುಂದಿಟ್ಟರೂ ಏದುಸಿರು ಬರುತ್ತಿತ್ತು! ಅಲ್ಲಿನ ಪ್ರಯಾಣ ಮತ್ತು ವಾಸದ ರಣಭೀಕರ ಅನುಭವದ ನೆನಪಾದದ್ದು ಮೊನ್ನೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿಯವರು ಅಲ್ಲಿಗೆ ಭೇಟಿ ನೀಡಿ ಸೈನಿಕರ ಜತೆ ಬರೋಬ್ಬರಿ ಐದಾರು ಗಂಟೆಗಳ ಕಾಲ ಕಳೆದ ಸುದ್ದಿಯನ್ನು ಟಿವಿಯಲ್ಲಿ ನೋಡಿದಾಗ! ಅಲ್ಲಿ ಎಂಥಾ ಅನುಭವವಾಯಿತೆನ್ನುವುದನ್ನು ನಾನು 'ಶುಭಂ' ಪುಸ್ತಕದ ಹತ್ತು ಪುಟಗಳಲ್ಲಿ ಫೋಟೋ ಸಹಿತ ದಾಖಲಿಸಿದ್ದೇನೆ. ಅದರ ಆಯ್ದ ಭಾಗ ಇಲ್ಲಿದೆ:
      'ಸೈನಿಕ' ಚಿತ್ರದ ಚಿತ್ರೀಕರಣ ವೀಕ್ಷಿಸಲೆಂದು ಸಿ.ಪಿ.ಯೋಗೀಶ್ವರ್ ಅವರು 'ಲೇಹ್'ಗೆ ಹೋಗಿ ಬರೋಣ ಬನ್ನಿ..' - ಎಂದು ಕರೆದಾಗ ನಾನು ಹೊರಟೇ ಬಿಟ್ಟಿದ್ದೆ! ಅಂದು ಬೆಂಗಳೂರಿನಿಂದ ಹೊರಟ ಪತ್ರಕರ್ತರ  ತಂಡ ದೆಹಲಿ ತಲುಪಿ ಅಲ್ಲಿಂದ ಬಸ್ ಮೂಲಕ ಲೇಹ್ ಕಡೆ ಹೊರಟಿತು. ಇದೊಂದು ಭಯಂಕರ ರೋಮಾಂಚಕ ಯಾತ್ರೆ...ಮೊದಲು ದೆಹಲಿ, ನಂತರ ಕುಲು ಮನಾಲಿ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಅಲ್ಲಿಂದ ಮುಂದೆ ಯಮಯಾತನೆಯ ಪ್ರಯಾಣ. ಸುತ್ತಲೂ ರುದ್ರರಮಣೀಯ ಬೆಟ್ಟಗಳ ಸಾಲು. ಮುಂಜಾನೆ, ಮಧ್ಯಾಹ್ನ, ಸಂಜೆ ಹೊತ್ತಿಗೆ ಬದಲಾಗುವ ಬೆಟ್ಟಗಳ ಬಣ್ಣ. ನಡುವೆ ಹೆಬ್ಬಾವಿನ ರಸ್ತೆ. ಚೂರು ಆಚೀಚೆಯಾದರೂ ಸಾವಿರಾರು ಅಡಿ ಪಾತಾಳಕ್ಕೆ ಬೀಳುವ ಆತಂಕ. ಕೆಲವರು ಅಸ್ವಸ್ಥರಾದರು. ಇನ್ನೂ ಕೆಲವರು ವಾಂತಿ ಮಾಡಿಕೊಂಡರು. ಮತ್ತೆ ಕೆಲವರು ಉಸಿರಾಟದ ತೊಂದರೆಯಿಂದ ಬಳಲಿದರು. ಲಡಾಖ್ ಹತ್ತಿರವಾಗುತ್ತಿರುವಂತೆಯೇ ವಾಂತಿ ಮಾಡಿ ಮಾಡಿ ಸುಸ್ತು ಹೊಡೆದ ಕೆಲವರು ಪ್ರಜ್ಞೆ ತಪ್ಪಿದವರಂತೆ ಬಸ್ಸಿನ ಸೀಟಲ್ಲೇ ನಿದ್ದೆ ಹೋಗಿದ್ದರು! ಅಲ್ಲಿಯ ವಾತಾವರಣ ರುದ್ರ ಭೀಕರ! ಕಡಿದಾದ ಬೆಟ್ಟ, ಒಣ ಭೂಮಿ,  ಮರಗಿಡಗಳಿಲ್ಲದೇ ಉಸಿರಾಡಲೂ ಪರದಾಡುವಂಥಾ ಸ್ಥಿತಿ. ಸಂಜೆ 5 ಗಂಟೆ ನಂತರ ಯಾರೂ ಪ್ರಯಾಣಿಸುವಂತಿಲ್ಲ. ಅದಕ್ಕೆ ಅನುಮತಿ ನೀಡುವುದಿಲ್ಲ. ಅಲ್ಲಿನ ಸೈನಿಕರ ಟೆಂಟ್'ಗಳಲ್ಲೇ ರಾತ್ರಿ ಕಳೆಯ ಬೇಕು...
      ನಾವು ಕೂಡಾ ಟೆಂಟ್ ಸೇರಿಕೊಂಡೆವು. ರಾತ್ರಿಯ 12 ಗಂಟೆಯ ಹೊತ್ತಿನಲ್ಲಿ ನಮ್ಮ ಜೊತೆಗಿದ್ದ ಸತ್ಯಮೂರ್ತಿ ಆನಂದೂರು ದಿಢೀರೆಂದು ಅಸ್ವಸ್ಥರಾದರು. ವಾಂತಿ ಮಾಡಿ ಮಾಡಿ ಸುಸ್ತಾದ ಅವರು ಏದುಸಿರು ಬಿಡುತ್ತಾ ಆಕ್ಷಿಜನ್'ಗಾಗಿ ಒದ್ದಾಡುವಂತಾಯಿತು. ಅವರ ಪಕ್ಕದಲ್ಲಿದ್ದ ಪಿ.ಆರ್.ಓ.ಕಲ್ಲೇಶ್ ಕೂಡಾ ವಾಂತಿ ಮಾಡಿ ಮಾಡಿ ಸುಸ್ತಾಗಿದ್ದರು. ಇಬ್ಬರದ್ದೂ ಒಂದೇ ಸ್ಥಿತಿ. ಯಾರೋ ಹೇಳಿದರು 'ಬಿಸಿ ನೀರಿದ್ದರೆ ತನ್ನಿ' ಅಂತ. ಆ ಹೊತ್ತಿನಲ್ಲಿ ಎಲ್ಲಿಂದ ತರೋದು ಬಿಸಿ ನೀರನ್ನು? ಆದರೂ ನಾನು ಎದ್ದು ಟೆಂಟ್'ನಿಂದ ಹೊರಗೆ ಓಡಿದೆ. ಕತ್ತಲೋ ಕತ್ತಲು. ಏನೇನೂ ಕಾಣಿಸದು. ಕರೆಂಟಿಲ್ಲ, ಬೆಳಕಿಲ್ಲ. ಅಂದಾಜು ಮೇಲೆ ನಡೆಯುತ್ತಾ ಮುನ್ನುಗ್ಗಿದೆ. ಎದುರು ಬೃಹತ್ತಾದ ಶೀಟ್ ಕಟ್ಟಡ. ನಮ್ಮಲ್ಲಿರುವ ದೊಡ್ಡ ದೊಡ್ಡ ಗೋದಾಮುಗಳನ್ನು ನೆನಪಿಸುವಂಥಾ ಸಾಲು ಸಾಲು ಕಟ್ಟಡಗಳು. ಅದು ಯಾವ ಕಟ್ಟಡವೆಂದೂ ತಿಳಿಯದೇ ಅದರ ಬೃಹತ್ತಾದ ಬಾಗಿಲನ್ನು ಜೋರಾಗಿಯೇ ಬಡಿದೆ. ರಣ ಕತ್ತಲು. ಯಾರೋ ಬಾಗಿಲು ತೆರೆದರಾದರೂ ಹಿಂದಿಯಲ್ಲಿ ಬಾಯಿಗೆ ಬಂದ ಹಾಗೆ ಬೈದರು! ಕೊನೆಗೆ ಟಾರ್ಚ್ ಬೆಳಕಲ್ಲಿ ನನ್ನ ಮುಖ ನೋಡಿ 'ಯಾಕೆ ಬಂದಿದ್ದೀಯಾ? ಏನಾಗಬೇಕಿತ್ತು?' ಎಂದು ಪ್ರಶ್ನಿಸಿದ. 'ಹಾಟ್ ವಾಟರ್' ಅಂದೆ. ಆತ ಮರು ಮಾತಾಡದೇ ಒಳ ಹೋಗಿ ಬಿಸಿ ನೀರು ತಂದು ಕೊಟ್ಟ. ನಾನು ಹೊರಡುತ್ತಿರುವಂತೆಯೇ ಮತ್ತೆ ಕರೆದು ಹೇಳಿದ 'ನೀನು ಎಲ್ಲಿಂದ ಬಂದಿದ್ದೀಯಾ ಅಂತ ಗೊತ್ತಿಲ್ಲ. ಆದ್ರೆ ನಿನ್ನನ್ನು ನೋಡಿದ್ರೆ ದಕ್ಷಿಣ ಭಾರತದವನ ಥರಾ ಇದ್ದೀಯಾ. ಹುಷಾರ್. ವೈರಿ ಸೇನೆಗೆ ಸೇರಿದವನೂಂತ ನಮ್ಮವರೇ ನಿನ್ನನ್ನು ಹೊಡೆದು ಹಾಕಿ ಬಿಡ್ತಾರೆ, ಈ ರಾತ್ರಿ ಇಂಥಾ ಟೈಟ್ ಸೆಕ್ಯುರಿಟಿ ಜಾಗದಲ್ಲಿ ಸುತ್ತುವುದು ಕೂಡಾ ಅಪಾಯಕಾರಿ...' ಎಂದು ಹೇಳುತ್ತಾ ಬಾಗಿಲೆಳೆದುಕೊಂಡ. ನಾನು ಮತ್ತಷ್ಟು ಗಾಬರಿಯಿಂದ ಆ ಬಿಸಿ ನೀರಿನ ಜಗ್ ಹಿಡಿದುಕೊಂಡು ನಮ್ಮ ಟೆಂಟ್ ಸೇರಿಕೊಂಡೆ. ಸತ್ಯಮೂರ್ತಿ ಆನಂದೂರು ಮತ್ತು ಕಲ್ಲೇಶ್ ಗಡ ಗಡ ನಡುಗುತ್ತಿದ್ದರು. ಕುಡಿಯಲು ಬಿಸಿ ನೀರು ಕೊಟ್ಟೆ. ಎಲ್ಲರೂ ಆಶ್ಚರ್ಯದಿಂದ ನನ್ನನ್ನೇ ನೋಡಿದರು! ನಾನು ಏನೋ ಸಾಹಸ ಮಾಡಿದವನಂತೆ ಪೋಸ್ ಕೊಟ್ಟೆ...! ಬಿಸಿ ನೀರು ಕುಡಿದವರೇ ನಿದ್ದೆಗೆ ಜಾರಿದರು ಸತ್ಯಮೂರ್ತಿ ಮತ್ತು ಕಲ್ಲೇಶ್.
    ಮಾರನೇ ಮುಂಜಾನೆ ಹೊರಟು ಲಡಾಖ್ ಮಾರ್ಗವಾಗಿ ಲೇಹ್ ಸೇರಿಕೊಂಡಾಗ ಸಂಜೆಯ ಹೊತ್ತು. ಮತ್ತೆ ಆಕ್ಷಿಜನ್ ಇಲ್ಲದೇ ಉಸಿರಾಟದ ತೊಂದರೆ ಉಂಟಾಯಿತು. ಎರಡೇ ಎರಡು ಹೆಜ್ಜೆ ಹಾಕಿದರೂ ಸಾಕು ಏದುಸಿರು. ಕುತ್ತಿಗೆ ಬಿಗಿದಿಟ್ಟ ಅನುಭವ! ಲೇಹ್'ನಲ್ಲಿ ನಮಗಾಗಿ ರೂಮುಗಳನ್ನು ಕಾದಿರಿಸಿದ್ದರು ಯೋಗೀಶ್. ಒಂದು ರೂಮಲ್ಲಿ ನಾನು ಮತ್ತು ಮೈಸೂರು ಹರೀಶ್ ಸೇರಿಕೊಂಡೆವು. ಮಾರನೇ ಮುಂಜಾನೆಯೇ ಚಿತ್ರೀಕರಣ ವೀಕ್ಷಣೆಗೆ ತೆರಳಿದ್ದಾಯಿತು. ಅದು ಯುದ್ಧದ ದೃಶ್ಯದ ಚಿತ್ರೀಕರಣ. ಭಯಂಕರ ಕಷ್ಟ ಬಿದ್ದು ಕೆಲಸ ಮಾಡಿದರು. ಎಲ್ಲರಿಗೂ ಆಕ್ಷಿಜನ್ ಸಮಸ್ಯೆ! ಮಧ್ಯಾಹ್ನ ರೋಟಿ ದಾಲ್, ಸಂಜೆ ಮಾಂಸದೂಟ. ಯಾವ ಪ್ರಾಣಿಯ ಮಾಂಸವೋ ಗೊತ್ತಿಲ್ಲ, ನಾನಂತೂ ಉಪವಾಸ ಕೂತೆ! 
     ರಾತ್ರಿಯ ಹತ್ತು ಗಂಟೆಗೆ ನಾನು ಮತ್ತು ಮೈಸೂರು ಹರೀಶ್ ಮಾತಾಡುತ್ತಾ ಕೂತಿದ್ದೆವು. ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ, ಹರೀಶ್ ಉಸಿರಾಡುವುದನ್ನೇ ನಿಲ್ಲಿಸಿ ಬಿಟ್ಟವರಂತೆ ಹಾಸಿಗೆ ಮೇಲೆ ಬಿದ್ದುಕೊಂಡರು. ನಾನು ಗಾಬರಿ ಬಿದ್ದೆ. ಬಿಸಿ ನೀರು ಬೇಕಾ ಅಂದೆ. ಬೇಡ ಅಂತ ಸನ್ನೆ ಮಾಡಿದರು. 'ಇಂಥಾ ಸಂದರ್ಭದಲ್ಲಿ ನುಂಗುವಂಥಾ ಮಾತ್ರೆಗಳೇನಾದ್ರೂ ಇದೆಯಾ?' ಅಂತ ಕೇಳಿದೆ. ಹರೀಶ್ ಸ್ವತಃ ಮೆಡಿಕಲ್ ರೆಪ್ ಆಗಿದ್ದವರು. ಏನಾದರೂ ತಮಗೆ ತಾವೇ ಟ್ರೀಟ್ಮೆಂಟ್ ಮಾಡಿಕೊಳ್ಳುತ್ತಾರೆ ಅಂತ ಅವರ ಮುಖವನ್ನೇ ನೋಡಿದೆ. ಬಿಳಿಚಿಕೊಂಡಿದ್ದರು. ಮತ್ತಷ್ಟು ಗಾಬರಿಯಾಯಿತು. 'ಯಾರನ್ನಾದ್ರೂ ಕರೀಲಾ?' ಅಂದೆ. 'ಬೇಡ' ಅಂದ್ರು. ಅವರಿಗಿದು ಮಾಮೂಲಂತೆ, ಹೀಗೆ ಒಂದು ಕ್ಷಣ ಉಸಿರು ಕಟ್ಟಿದಂತಾಗಿ ನಂತರ ಸರಿ ಹೋಗುತ್ತದೆಯಂತೆ. ಆದರೆ ಅರ್ಧ ಗಂಟೆಯಾದರೂ ಹರೀಶ್ ಸರಿ ಹೋಗಲಿಲ್ಲ. ನಾನು ಗಾಬರಿಯಿಂದ ಹೊರ ಹೋಗಲು ಹೊರಟೆ, ಯಾರನ್ನಾದ್ರೂ ಸಹಾಯಕ್ಕೆ ಕರೆಯೋಣ ಅಂತ. ಆದರೆ ಹರೀಶ್ ಬಿಡಲಿಲ್ಲ. ಅವರು ಏದುಸಿರು ಬಿಡುತ್ತಾ ಮಾತಾಡತೊಡಗಿದರು : 'ನನ್ಗೆ ಇದು ಹೊಸತೇನಲ್ಲ, ನಿಮ್ಗೆ ಹೊಸತು! ಇತ್ತೀಚೆಗೆ ಉಸಿರಾಟದ ತೊಂದರೆ ಪದೇ ಪದೇ ಆಗುತ್ತಿದೆ. ಈ ಹೊತ್ತಿನಲ್ಲಿ ನಾನು ನಿದ್ದೆ ಮಾಡಬಾರದು. ನಿದ್ದೆಗೆ ಜಾರಿದರೆ ಅಷ್ಟೇ, ಹೆಣ ತೆಗೆದುಕೊಂಡು ಹೋಗಬೇಕು! ಒಂದು ಕೆಲ್ಸಾ ಮಾಡಿ ಸಾರ್, ಸುಮ್ನೇ ಏನಾದ್ರೂ ಮಾತಾಡುತ್ತಾ ಇರಿ. ಒಟ್ಟಿನಲ್ಲಿ ನನ್ಗೆ ನಿದ್ದೆ ಬಾರದಂತೆ ನೋಡ್ಕೊಳ್ಳಿ...' ಅಂತಂದು ಬಿಟ್ಟರು ಹರೀಶ್. ಒಳ್ಳೇ ಪಜೀತಿಗಿಟ್ಟುಕೊಂಡು ಬಿಟ್ಟಿತು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾನು ರಾತ್ರಿ ಕರೆಕ್ಟಾಗಿ 12 ಗಂಟೆಗೆ ಮಾತಾಡಲು ಶುರು ಮಾಡಿದೆ ನೋಡಿ, ಮುಂಜಾನೆ 6ರ ತನಕ ಮಾತಾಡುತ್ತಲೇ ಇದ್ದೆ! ಅದೇನೇನು ಮಾತಾಡಿದೆನೋ ಆ ಪರಮಾತ್ಮನಿಗೇ ಗೊತ್ತು! ಒಟ್ಟಿನಲ್ಲಿ ಹರೀಶ್ ರಾತ್ರಿ ಪೂರ್ತಾ ನಿದ್ದೆ ಮಾಡದಂತೆ ತಡೆದೆ! ನನ್ನ ಬದುಕಿನಲ್ಲಿ ಇದೊಂದು ಮರೆಲಾಗದ ಘಟನೆಯಾಗಿ ಉಳಿಯಿತು. ಹರೀಶ್'ಗೆ ನಿಜವಾಗಿಯೂ ಅನಾರೋಗ್ಯದ ತೊಂದರೆ ಕಾಡಿತ್ತೋ? ಅಥವಾ ನನ್ನನ್ನು ಕಿಂಡಲ್ ಮಾಡಲೆಂದು ನಾಟಕವಾಡಿದರೋ ಗೊತ್ತಿಲ್ಲ. ಮಾರನೇ ದಿನ ತುಂಬಾ ಚಟುವಟಿಕೆಯಿಂದಿದ್ದರು! ನಾನು ಮಾತ್ರ ನಿದ್ದೆ ಇಲ್ಲದೇ ಮಂಕಾಗಿದ್ದೆ...!
      ◆ ಇವೆಲ್ಲಾ ಸಿನಿಮಾ ರೀಲಿನಂತೆ ಫ್ಲಾಶ್ ಬ್ಯಾಕ್'ನಲ್ಲಿ ನೆನಪಾಗಲು ಕಾರಣ ಮೊನ್ನೆ ಪ್ರಧಾನಿ ನರೇಂದ್ರಮೋದಿಯವರ ಲೇಹ್-ಲಡಾಖ್ ಪ್ರವಾಸ! ಆಕ್ಸಿಜನ್ ಕೊರತೆಯ ಆ ಗುಡ್ಡ-ಬೆಟ್ಟದ ನಾಡಲ್ಲಿ ಬದುಕು ಎಷ್ಟೊಂದು ದುರ್ಭರ-ಅಪಾಯಕಾರಿ. ಇಂಥಾ ದುರ್ಗಮ ಪ್ರದೇಶದಲ್ಲಿ 69ರ ಹರೆಯದ ನರೇಂದ್ರಮೋದಿ ಸೈನಿಕರ ಜತೆ ಐದಾರು ಗಂಟೆಗಳ ಕಾಲ ಕಳೆಯುವುದೆಂದರೆ ಅದು ಹುಡುಗಾಟವಲ್ಲ...


- ನಿಮ್ಮ ಜಾಹೀರಾತುಗಳಿಗಾಗಿ 
    ಸಂಪರ್ಕಿಸಿ +91 9902523698