ಹೀಗಿದಾಗ್ಯೂ ಜನತೆ ನಿರಾತಂಕವಾಗಿ ಸಂಚಾರ
ರಬಕವಿ-ಬನಹಟ್ಟಿ,ಜು31: ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಗ್ರಾಮ, ಪಟ್ಟಣವೆನ್ನದೆ ಎಲ್ಲೆಂದರಲ್ಲಿ ಮುಗಿಬಿದ್ದಿದೆ.
ಶುಕ್ರವಾರ ಒಂದೇ ದಿನದಲ್ಲಿ ತಾಲೂಕಿನಾದ್ಯಂತ ರಬಕವಿ-ಬನಹಟ್ಟಿ ಹಾಗು ತೇರದಾಳ ಸೇರಿದಂತೆ 23 ಜನರಿಗೆ ಕೊರೊನಾ ವೈರಸ್ ತಗುಲಿದ ಮಾಹಿತಿ ದೃಢಪಟ್ಟಿದೆ.
ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆ ಹಾಗು ತೇರದಾಳ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ರ್ಯಾಪಿಡ್ ಪರೀಕ್ಷೆಯ ಕಿಟ್‍ಗಳು ಏಕಕಾಲಕ್ಕೆ ತಲಾ 250 ಹಾಗು 150 ಕಿಟ್‍ಗಳಂತೆ ಒಟ್ಟು 400 ಕಿಟ್‍ಗಳು ಬಂದಿದ್ದ ಕಾರಣ ಅತಿ ವೇಗವಾಗಿ ಪರೀಕ್ಷೆ ನಡೆಸುವಲ್ಲಿ ಸಹಕಾರಿಯಾಗಿದೆ.
ಕೆಲವರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರನ್ನು ಕಂಟೈನ್ಮೆಂಟ್ ವಲಯ ಹಾಗು ಪ್ರಾಥಮಿಕ ಸಂಪರ್ಕ ಹೊಂದಿದವರನ್ನೂ ಪರೀಕ್ಷೆ ಮಾಡಲಾಗುತ್ತಿದೆ. ಐಎಲ್‍ಐ ಸಾರಿಗೆ ಸಂಬಂಧಿಸಿದ ರೋಗಿಗಳಿಗೆ ಮತ್ತಷ್ಟು ಕಂಟಕವಾಗಿದ್ದು, ಪರೀಕ್ಷೆ ಸಂದರ್ಭ ಬಹುತೇಕರಿಗೆ ಪಾಜಿಟಿವ್ ದೃಢಪಡುತ್ತಿರುವದು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ.
ನಿರಾತಂಕವಾಗಿ ಸಂಚಾರ: ಇಷ್ಟೊಂದು ಸಂದಿಗ್ಧ ಪರಿಸ್ಥಿತಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಇದ್ದರೂ ಕೊರೊನಾ ವೈರಸ್ ಬಗ್ಗೆ ಹಗುರವಾಗಿ ಪರಿಗಣಿಸಿ ಜನತೆ ಸಾಮಾಜಿಕ ಅಂತರ, ಮಾಸ್ಕ್ ವಿಲ್ಲದೆನಿರಾತಂಕವಾಗಿ ಸಂಚಾರ ನಡೆಸುತ್ತಿರುವದು ತೀವ್ರ ಆಘಾತಕ್ಕೆ ಕಾರಣವಾಗಿದೆ.
ಮನೆಯಲ್ಲಿಯೇ ಕ್ವಾರಂಟೈನ್: ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಜನ ತುಂಬಿ ಹೋಗಿರುವ ಕಾರಣ ಕೆಲ ಕೊರೊನಾ ಪಾಜಿಟಿವ್ ಬಂದಿರುವ ವ್ಯಕ್ತಿಯ ಮನೆಯವರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಹೋಂ ಕ್ವಾರಂಟೈನ್ ಮಾಡಿ ಕಂಟೈನ್ಮೆಂಟ್ ವಲಯ ನಿರ್ಮಿಸಲಾಗುತ್ತಿದೆ.

Social Plugin