ಹೀಗೊಂದು `ಹಸಿರು ಸಿರಿ’
*ಹಸಿರು ಕಾನನದ ನಡುವಿನ ದೇವರ ಕಾನ
ರಬಕವಿ-ಬನಹಟ್ಟಿ,ಜು23: ಮುದ ನೀಡುವ ಉದ್ಯಾನವನ. ನಾಲ್ದೆಸೆಗಳಲ್ಲೂ ಹಸಿಯಾದ ಹಸಿರು ಹೊದಿಕೆ. ಬೇಕಾದ ಬಗೆ-ಬಗೆಯ ತರಕಾರಿ ತೋಟ, ಆರೋಗ್ಯಕ್ಕೆ ಔಷಧ ಗಿಡಗಳ ಸಾಲು.. ಹೀಗೆ ಸಾಲು ಸಾಲು ಯಸ್ಸಿನ ಕಥೆ ಹೇಳುವದು ಯಾವದೇ ಮಾದರಿ ಶಾಲೆ ಅಥವಾ ದೇವಾಲಯವಲ್ಲ ಫಾರ್ಮ್ ಹೌಸ್ ಎಂದರೆ ನಂಬುತ್ತೀರಾ? ನಂಬಲೇಬೇಕು.
ರಬಕವಿಯ ಕೃಷ್ಣಾ ನದಿಯ ರಸ್ತೆಗೆ ತೆರಳುವ ಮಾರ್ಗದಲ್ಲಿರುವ ದಲಾಲ ಫಾರ್ಮ್‍ಹೌಸ್‍ನ `ಹಸಿರು ಸಿರಿ’ ಎಂಬ ಉದ್ಯಾನವನ ಇದೀಗ ಹಸಿರು ಪರಿಸರದ ಸೊಗಡು ಸೊಂಪಾಗಿ ಹರಡಿದ ಮನಮೋಹಕ ದೃಶ್ಯ ಚಿತ್ರಣ ಕಾಣುವದು.
ಸುಮಾರು 6 ಎಕರೆ ಪ್ರದೇಶದಲ್ಲಿ ವ್ಯವಸಾಯಕ್ಕೆಂದು ಕಾರ್ಯನಿರ್ವಹಿಸುತ್ತಿದ್ದರೆ, ಒಂದು ಎಕರೆ ಪ್ರದೇಶದಲ್ಲಿ ಪರಿಶುದ್ಧ ವಾತಾವರಣದಲ್ಲಿ ಗ್ರಾಮೀಣ ಸೊಗಡಿನಿಂದ ತುಂಬಿದ ಪ್ರದೇಶವಾಗಿ, ಬಾವಿ, ಕೋಟೆ, ಹಳ್ಳಿ ಮನೆಗಳ ಅಲಂಕಾರ, ದನದ ಕೊಟ್ಟಿಗೆ ಸೇರಿದಂತೆ ಗ್ರಾಮೀಣ ಸಿರಿವಂತಿಕೆಯನ್ನು ಬಿಂಬಿಸುವಲ್ಲಿ ಫಾರ್ಮ್ ಹೌಸ್‍ನ ಮಾಲಿಕ ಬಸವರಾಜ ದಲಾಲ ನೆಮ್ಮದಿ ಕಂಡವರು. 
ನಡೆದಾಡುವ ದೇವರು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳನ್ನೊಳಗೊಂಡು ಅನೇಕ ಸ್ವಾಮೀಜಿಗಳು ಭೆಟ್ಟಿ ನೀಡಿ ಆನಂದಮಯಗೊಂಡ ಪ್ರಸಂಗಗಳಿವೆ.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ ಸೇರಿದಂತೆ ಬಹುತೇಕ ರಾಜಕೀಯ ಮುಖಂಡರನ್ನು ಕೈ ಬೀಸಿ ಕರೆದ ಉದ್ಯಾನವನ `ಹಸಿರು ಸಿರಿ’ಯಾಗಿದೆ.
ರೆಡಿಯೋ, ಫ್ಯಾನ್, ಲ್ಯಾಂಪ್, ದೂರವಾಣಿ ಹೀಗೆ ಶತಮಾನದ ಹಿಂದಿನ ಹಲವಾರು ವಸ್ತುಗಳನ್ನು `ಕುಟೀರ’ದಲ್ಲಿ ಕಾಣುವದೇ ವಿಶೇಷ. ಒಟ್ಟಾರೆ ಆಗಮಿಸುವ ಜನರಲ್ಲಿ ವಿನೂತನ ಹಾಗು ವಿಶೇಷತೆಯೊಂದಿಗೆ ಮನಸ್ಸಿಗೆ ಮುದ ನೀಡುವಲ್ಲಿ `ಹಸಿರು ಸಿರಿ’ ಯಶಸ್ವಿಯಾಗಿದೆ.
ಕಳೆದ ವರ್ಷ ಕೃಷ್ಣಾ ನದಿ ಪ್ರವಾಹ ಸಂದರ್ಭ ಸಂಪೂರ್ಣ ಮುಳುಗಡೆ ಕಂಡಿತ್ತು. ಇದ್ಯಾವುದಕ್ಕೂ ಎದೆಗುಂದದೆ ಮತ್ತೇ `ಹಸಿರು ಸಿರಿ’ಯನ್ನು `ಸಿರಿವಂತಿಕೆ’ಯನ್ನಾಗಿಸುವಲ್ಲಿ ಬಸವರಾಜ ದಲಾಲ ಯಶಸ್ವಿ ಕಂಡಿರುವದು ವಿಶೇಷ.