◆ ಸುಂದರ ಕೃಷ್ಣ ಅರಸ್ ಶವವನ್ನು ಸ್ಮಶಾನಕ್ಕೆ ಕಳಿಸಿಕೊಟ್ಟ ಮಂದಿ ಮತ್ತೆ ಈ ಕಡೆ ಸುಳಿಯಲಿಲ್ಲ! ◆
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು 

● ಬದುಕಿದ್ದೀರಾ ಸತ್ತಿದ್ದೀರಾ ಅಂತ ವಿಚಾರಿಸಲು ಉದ್ಯಮದ ಯಾರೂ ಮುಂದೆ ಬರಲಿಲ್ಲ ಯಾಕೆ? ●

     ಮೊದಲೇ ಹೇಳಿ ಬಿಡುತ್ತೇನೆ : ಇದು ಖ್ಯಾತ ಖಳನಟ ಸುಂದರಕೃಷ್ಣ ಅರಸ್ ಅವರ ಕಥೆಯಲ್ಲ, ಅವರ ಮಗಳಂತಿದ್ದ ಧರ್ಮಪತ್ನಿ ಲಕ್ಷ್ಮೀ ಅರಸ್ ಅವರ ಕಥೆ! ಮತ್ತೆ ಕನ್ಫ್ಯೂಷನ್! ಇದೇನಿದು ಧರ್ಮಪತ್ನಿಯನ್ನು 'ಮಗಳಂತಿದ್ದ' ಅಂತ ಹೇಳ್ತಿದ್ದಾನಲ್ಲ ಈ ವ್ಯಕ್ತಿ ಎನ್ನುವ ಪ್ರಶ್ನೆ ನಿಮ್ಮ ತಲೆ ತಿನ್ನುತ್ತಿರಬಹುದು! ಹೌದು, ಇದಕ್ಕೆ ಕಾರಣ ಸ್ವತಃ ಸುಂದರ ಕೃಷ್ಣ ಅರಸರೇ! ಏಕೆಂದರೆ ಲಕ್ಷ್ಮೀ ಅರಸ್ ಅವರೇ ಹೇಳುವ ಪ್ರಕಾರ 'ನಮಗೆ ಮೂವರು ಗಂಡು ಮಕ್ಕಳು. ಹೆಣ್ಣು ಮಕ್ಕಳಿಲ್ಲವಲ್ಲ ಎನ್ನುವ ಕೊರಗು ಅವರನ್ನು ಎಂದೂ ಕಾಡಿಲ್ಲ. ಕಾರಣ, ನನ್ನನ್ನು ಅವರು ತಮ್ಮ ಹಿರಿಯ ಮಗಳಂತೆಯೇ ಸಾಕಿದರು...!'
     ಕಥೆ ಆರಂಭವಾಗುವುದೇ ಇಲ್ಲಿಂದ : ಪ್ರಕಾಶ ನಗರದ 'ನಾಗರಹೊಳೆ' ಹೆಸರಿನ ತಮ್ಮ ಮನೆಯ ಚಾವಡಿಯ ಸೋಫಾ ಮೇಲೆ ಕೂತು ಲಕ್ಷ್ಮೀ ಅರಸ್ ಮಾತಾಡುತ್ತಾ ಹೋದರು. ನಾನು ರೆಪ್ಪೆ ಅಲುಗಾಡಿಸದೇ ಕೇಳುತ್ತಾ ಹೋದೆ : 'ಅವರು ನಮ್ಮನ್ನೆಲ್ಲಾ ಬಿಟ್ಟು ಹೋದ ಮೇಲೆ ಉದ್ಯಮದ ಒಬ್ಬೇ ಒಬ್ಬ ವ್ಯಕ್ತಿ ಬಂದು ಹೇಗಿದ್ದೀರಿ ಎಂದು ವಿಚಾರಿಸಲಿಲ್ಲ. ಹೆಣವನ್ನು ಸ್ಮಶಾನಕ್ಕೆ ಸಾಗಿಸಿ ಹೋದವರು ಅವರಂತೆಯೇ ಮಾಯವಾದರು! ಬದುಕಿದ್ದೀರಾ ಸತ್ತಿದ್ದೀರಾ ಅಂತ ಕೇಳಲು ಅವರ ಆತ್ಮೀಯ ಸ್ನೇಹಿತರೇ ಈ ಕಡೆ ಸುಳಿಯಲಿಲ್ಲ. ಅವರು ಯಾರಿಗೂ ಅನ್ಯಾಯ ಮಾಡಿದವರಲ್ಲ, ಮೋಸ-ಗೀಸ ಮಾಡಿದವರೂ ಅಲ್ಲ. ಅವರು ಅಜಾತಶತ್ರುವಾಗಿದ್ದರು, ದಯಾಮಯರೂ ಆಗಿದ್ದರು. ನಡೆಯುವಾಗ ಇರುವೆ ಅಡ್ಡ ಬಂದರೂ ದಾರಿ ತಪ್ಪಿಸಿಕೊಂಡು ಹೋಗುತ್ತಿದ್ದರು! ಉದ್ಯಮದ ಬಹುತೇಕರಿಗೆ ಸಹಾಯ ಮಾಡಿದರು. ಕೇಳಿ ಕೇಳಿದವರಿಗೆಲ್ಲಾ ಕೇಳಿದಷ್ಟು ಕೊಟ್ಟರು. ಭವಿಷ್ಯತ್ತಿನ ಯೋಚನೆ ಮಾಡದೇ ದಾನ ಮಾಡಿದರು. ಆದರೆ ಯಾವತ್ತೂ 'ದಾನಶೂರಕರ್ಣ' ಅಂತ ಕುತ್ತಿಗೆಗೆ ಬೋರ್ಡ್ ತಗುಲಿಸಿಕೊಂಡು ಓಡಾಡಲಿಲ್ಲ! ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ನಿಲುವಿನವರು ಅವರು. ಹಾಗೆಂದು ಅವರೆಂದೂ ಮನೆಯನ್ನು, ನಮ್ಮನ್ನು ಕಡೆಗಣಿಸಿದವರಲ್ಲ. ಈ ಮನೆಯನ್ನು ಪರ್ಚೆಸ್ ಮಾಡಿದವರೂ ಅವರೇ. ತಮಗೆ ಲೈಫ್ ಕೊಟ್ಟ ನೆನಪಿಗಾಗಿ ಮನೆಗೆ 'ನಾಗರಹೊಳೆ' ಎನ್ನುವ ಹೆಸರಿಟ್ಟವರೂ ಅವರೇ...
     'ನಮಗೆ ಮೂವರು ಗಂಡು ಮಕ್ಕಳು. ಹೆಣ್ಣು ಮಕ್ಕಳಿರಲ್ಲಿಲ್ಲ ಎನ್ನುವ ಕೊರಗು ಅವರಿಗಿರಲಿಲ್ಲ. ಏಕೆಂದರೆ ನನ್ನನ್ನೇ ದೊಡ್ಡ ಮಗಳಂತೆ ಸಾಕಿದವರು ಅವರು! ಆರತಿ ಎತ್ತಿದರೆ ಉಷ್ಣ, ತೀರ್ಥ ಕುಡಿದರೆ ಶೀತವಾದೀತೆನ್ನುವ ಜಾಗ್ರತೆ ಅವರದ್ದು. ದುಃಖಿಸಲು ಬಿಡಲಿಲ್ಲ, ಕಣ್ಣೀರು ಹಾಕಲೂ ಬಿಡಲಿಲ್ಲ. ಒಟ್ಟಿನಲ್ಲಿ ಕುಟುಂಬವೆಂದರೆ ಅವರಿಗೆ ಪ್ರಾಣ, ಉಸಿರು, ಜೀವ ಎಲ್ಲವೂ ಆಗಿತ್ತು...
     'ಒಂದು ವಿಷ್ಯ ಹೇಳ್ತೇನೆ ಕೇಳಿ : ಅವ್ರಿಗೆ ರಾಗಿ ರೊಟ್ಟಿ ಅಂದ್ರೆ ಪಂಚಪ್ರಾಣ. ರಾತ್ರಿಗೆ ಒಂದು ಹಿಡಿ ರೈಸ್. ನನ್ನ ಕೈಯ ಬಸ್ಸಾರಿನ ರುಚಿ ಸವಿಯೋದೆಂದ್ರೆ ಅವರಿಗಿಷ್ಟ. ಶೂಟಿಂಗಿಗೆ ಹೋಗೋವಾಗ ಅಂಬರೀಷ್'ಗಾಗಿ ರಾಗಿಮುದ್ದೆ, ಬಸ್ಸಾರು ಕಟ್ಟಿಸ್ಕೊಂಡು ಹೋಗೋರು! ಸಮಯ ಸಿಕ್ಕಾಗಲೆಲ್ಲಾ ನನ್ನನ್ನು ನಾಟಕಕ್ಕೆ ಕರ್ಕೊಂಡು ಹೋಗೋರು. ಮಕ್ಕಳ ಜತೆ ಮಕ್ಕಳಾಗಿ ಆಟ ಆಡೋರು. ಫ್ರೆಂಡ್'ಶಿಪ್ ಮಾಡಿದ್ರೆ ಬಡವರ ಫ್ರೆಂಡ್'ಶಿಪ್ ಮಾಡಿ ಎಂದು ಮಕ್ಕಳಿಗೆ ಹೇಳೋರು. ಸ್ವಂತ ಕಾರಿದ್ದರೂ ನಡಕೊಂಡೇ ಮಕ್ಕಳನ್ನು ಕರ್ಕೊಂಡು ಶಾಲೆಗೆ ಹೋಗೋರು. ತಾವೊಬ್ಬ ಸ್ಟಾರ್ ಅಂತ ಯಾವತ್ತೂ ಪೋಸ್ ಕೊಟ್ಟಿದ್ದನ್ನು ನಾನು ನೋಡಿಲ್ಲ! 
     'ನಿಜ ಹೇಳಬೇಕು ಅಂದ್ರೆ ಅವ್ರು ಎಂದೂ ನನ್ನ ಹೆಸರಿಡಿದು ಕರೆದೊರೇ ಅಲ್ಲ. ನನ್ನನ್ನು ಅವ್ರು ಮುದ್ದು ಮಾಡುವ ರೀತಿಯನ್ನು ಕಂಡು ವಿಷ್ಣುಸಾರ್ 'ಅರಸು ಬೊಂಬೆ’ ಅಂತ ನನ್ನನ್ನು ರೇಗಿಸೋರು! ಇಂಥಾ ಒಬ್ಬ ಬಾಳಸಂಗಾತಿ ತೀರಿಕೊಂಡಾಗ ನನ್ನ ಪರಿಸ್ಥಿತಿ ಏನಾಗಬೇಡ ನೀವೇ ಹೇಳಿ? ಅವರಿಂದ ಉಪಕೃತರಾದವರೆಲ್ಲಾ ಎಲ್ಲಿ ಮಾಯವಾದರೋ ಕಾಣೆ. ಅವರು ಡೆತ್ ಬೆಡ್'ನಲ್ಲಿ ಮಲಗಿದ್ದಾಗ ಸದಾ ಅಳೋರು. ನನ್ನ ಕೈ ಹಿಡಿದು 'ಅರ್ಧಕ್ಕೇ ಬಿಟ್ಟು ಹೋಗ್ತೇನೆ ಅಂತ ಬೇಜಾರ್ ಮಾಡ್ಕೋ ಬೇಡ ಕಂದಾ, ಮಕ್ಕಳನ್ನು ಚೆನ್ನಾಗಿ ನೋಡ್ಕೋ' ಅನ್ನೋರು. 'ಮುಂದಿನ ಏಳೇಳು ಜನ್ಮದಲ್ಲೂ ನೀನೇ ನನ್ನ ಸಂಗಾತಿಯಾಗಿರು. ಒಂದು ವೇಳೆ ಹೆಂಡತಿಯಾಗುವ ಯೋಗವಿಲ್ಲವಾದ್ರೂ ಮಗಳಾಗಿಯಾದ್ರೂ ಹುಟ್ಟಿ ಬಾ' ಅನ್ನೋರು...' - ಇಷ್ಟು ಹೇಳಿ ಲಕ್ಷ್ಮೀ ಅರಸ್ ಮತ್ತೆ ಮಾತು ಮುಂದುವರಿಸಲಿಲ್ಲ. ಮೌನವಾಗಿ ಕುಳಿತು ಬಿಟ್ಟರು ಅವರು. ಅದು ಮಾತು ಮೌನವಾಗುವ ಹೊತ್ತು. ಮತ್ತೆ ಡಿಸ್ಟರ್ಬ್ ಮಾಡಲು ಮನಸ್ಸಾಗಲಿಲ್ಲ. ಎದ್ದು ಹೊರಟು ಬಿಟ್ಟೆ. 'ನಾಗರಹೊಳೆ'ಯ ಗೇಟು ದಾಟಿ ಹೊರಬಂದಾಗ ನನ್ನ ಕಣ್ಣೂ ಒದ್ದೆಯಾಗಿತ್ತಾ ಗೊತ್ತಿಲ್ಲ...!

- ಇವಿಷ್ಟನ್ನೂ ಮೊಬೈಲ್'ನಲ್ಲಿ ಕಂಪೋಸ್ ಮಾಡಿ ಮುಗಿಸಬೇಕಿದ್ದರೆ ಬೆಂಗಳೂರಿನ ಚೈತ್ರಾ ಭಾರದ್ವಾಜ್  ಮೆಸೇಜ್ ಕಳಿಸಿದ್ದರು : 'ಸರ್, ನೀವು ಬರೆಯುತ್ತಿದ್ದ 'ಚದುರಿದ ಚಿತ್ರಗಳು' ಅಂಕಣವನ್ನು ನನ್ನ ಸ್ಕೂಲ್'ಡೇಸ್'ನಲ್ಲಿ ರೆಗ್ಯುಲರ್ ಆಗಿ ಓದುತ್ತಿದ್ದವಳು ನಾನು. ಆವಾಗ್ಲೇ ಗೊತ್ತಾಗಿದ್ದು ಕಲಾವಿದರ ಬದುಕೆಂದರೆ ಏನೂಂತ...?' - ಉತ್ತರ ಮೇಲಿದೆ!
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ 15 ವರ್ಷಗಳ ಹಿಂದೆ ಇವರು ಹೀಗಿದ್ದರು : ಲಕ್ಷ್ಮೀ ಅರಸ್,   ಹಿರಿಯ ಮಗ - ನಾಗೇಂದ್ರ ಅರಸ್, ಎರಡನೇ ಮಗ - ರಾಘವೇಂದ್ರ ಅರಸ್, ಮೂರನೇ ಮಗ - ರಾಜೇಂದ್ರ ಅರಸ್.     Pic :ಡಿ.ಸಿ.ನಾಗೇಶ್
◆ ಸುಂದರ ಕೃಷ್ಣ ಅರಸ್ Pic : ಪ್ರಗತಿ ಸ್ಟುಡಿಯೋ
               ಶುಭಂ ಪುಸ್ತಕ ತಪ್ಪದೇ ಓದಿ..... 


- FOR ADVERTISEMENT CONTACT -
                9902523698