*ಮಹಾನ್ ದಾರ್ಶನಿಕ, ಸಂತ ಗುರುದೇವ ರಾನಡೆ ಇಂದು ಅವರ ಪುಣ್ಯತಿಥಿ. 🙏🙏🙏🙏🙏*
ಭಾರತದ ಸಂತ, ತತ್ವಜ್ಞಾನಿ, ಸಮಾಜ ಸುಧಾರಕ ಗುರುದೇವ ರಾನಡೆಯವರು *ಬಾಗಲಕೋಟೆಯ ಜಮಖಂಡಿ ಯಲ್ಲಿ ಜುಲೈ 3,1886ರಲ್ಲಿ ಜನಿಸಿದರು. ಧಾರ್ಮಿಕ ಸ್ವಭಾವದ ಅವರ ತಾಯಿ ರಾನಡೆಯವರನ್ನು ಸಂಸ್ಕಾರಯುತರನ್ನಾಗಿ ಬೆಳೆಸಿದರು. ಮುಂಬೈ ವಿಶ್ವವಿದ್ಯಾಲಯದ 1902ರ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ *ಜಮಖಂಡಿಯ P B HIGHSCHOOL* *ವಿದ್ಯಾರ್ಥಿಯಾಗಿ ಎರಡನೆಯ ಸ್ಥಾನವನ್ನು ಪಡೆದು ಸಂಸ್ಕೃತದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದುದಕ್ಕಾಗಿ ಜಗನ್ನಾಥ ಶಂಕರ ಸೇಟ್ ಸ್ಕಾಲರ್ ಶಿಪ್ಅನ್ನು ಪಡೆದರು* . ಇವರ ಸಾಧನೆಯನ್ನು ಮೆಚ್ಚಿ ಸಂತಸಗೊಂಡು ಜಮಖಂಡಿಯ ಮಹಾರಾಜರು ಇಡಿಯ ಊರಿಗೆ ಸಿಹಿ ಹಂಚಿದರಂತೆ. ಬಾಲ್ಯದಲ್ಲಿಯೇ ಉಮದಿಯ ಸಂತ ಭಾವುಸಾಹೇಬ್ ಮಹಾರಾಜ್ ಅವರ ಅನುಗ್ರಹವನ್ನು ಪಡೆದ ಗುರುದೇವ ರಾನಡೆ ಯವರು ಮುಂದೆ ತಮ್ಮ ಬದುಕಿನಲ್ಲಿ ಸಂತರಾಗಿಯೇ ಬಾಳಿದವರು. ಗುರುವು ಬಿತ್ತಿದ ಪರಮಾರ್ಥ ಜ್ಞಾನ ಮತ್ತು ತತ್ವಜ್ಞಾನಗಳ ಬೀಜವು ಮುಂದೆ ಗುರುದೇವ ರಾನಡೆಯೆಂಬ ಮಹಾವೃಕ್ಷವಾಗಿ ಆಧ್ಯಾತ್ಮ ಮತ್ತು ತತ್ವಜ್ಞಾನದ ಫಲವನ್ನು ಈ ನಾಡಿಗೆ ನೀಡಿತು.
ಗುರುದೇವರು ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಹಾ ಮೇಧಾವಿ ವಿದ್ಯಾರ್ಥಿಯಾಗಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಅನೇಕ ವಿದ್ಯಾರ್ಥಿ ವೇತನಗಳನ್ನು ಮತ್ತು ಚಿನ್ನದ ಪದಕಗಳನ್ನು ಪಡೆದವರು.1914ರಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ.ಪದವಿಯನ್ನು ಕುಲಪತಿಗಳ ಚಿನ್ನದ ಪದಕದೊಂದಿಗೆ ಪಡೆದರು. ಮುಂದೆ ಪಾಶ್ಚಾತ್ಯ ಮತ್ತು ಪೌರ್ವಾತ್ಯ ತತ್ವಶಾಸ್ತ್ರಗಳ ಬಗೆಗೆ ವಿಶೇಷ ಅಧ್ಯಯನವನ್ನು ನಡೆಸಿ ಇಸವಿ 1914 ಮತ್ತು 1924 ರ ಅವಧಿಯಲ್ಲಿ ಪುಣೆಯ ಫರ್ಗುಸನ್ ಕಾಲೇಜು ಮತ್ತು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜುಗಳಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಗುರುದೇವರಾನಡೆಯವರ ಅನಾರೋಗ್ಯ, ಸಾಂಸಾರಿಕ ಕಷ್ಟ ಕೋಟಲೆಗಳು ಅವರ ಆಧ್ಯಾತ್ಮ ಸಾಧನೆಯ ದಾರಿಯಲ್ಲಿ ಅವರ ಮನೋಸ್ಥೈರ್ಯವನ್ನು ಅಡಿಗಡಿಗೆ ಪರೀಕ್ಷಿಸುತ್ತಿದ್ದರೂ ಸದ್ಗುರುವಿನ ಪರಮ ಕೃಪೆಯಿಂದ ಅವರು ಇವೆಲ್ಲವನ್ನು ಲೀಲಾಜಾಲವಾಗಿ ಎದುರಿಸಿದರು.
ಅಲಹಾಬಾದ್ ಕಾಲೇಜಿನ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಗುರುದೇವ ರಾನಡೆಯವರು ತಮ್ಮ ನಿವೃತ್ತಿ ಜೀವನವನ್ನು ಆಧ್ಯಾತ್ಮ ಸಾಧನೆ, ಆಧ್ಯಾತ್ಮಜ್ಞಾನ ಪ್ರಸಾರಕ್ಕಾಗಿ ಮೀಸಲಿಟ್ಟು 1924ರಲ್ಲಿ ಸೋಲಾಪುರ ಮತ್ತು ಬಿಜಾಪುರಗಳ ನಡುವೆ ಇರುವ ಒಂದು ಸಣ್ಣ ಗ್ರಾಮ ನಿಂಬಾಳಕ್ಕೆ ಬಂದು ನೆಲೆಸಿದರು. ಭಾರತದ ರಾ‍ಷ್ಟ್ರಪತಿಯಾಗಿದ್ದ ದಿವಂಗತ ಡಾ|| ರಾಧಾಕೃಷ್ಣನ್ ರವರಿಗೆ ಗುರುದೇವ ರಾನಡೆಯವರ ಒಡನಾಟವಿದ್ದು ಅವರು ಗುರುದೇವರನ್ನು ಆಧ್ಯಾತ್ಮ ಗುರುವೆಂದು ಬಣ್ಣಿಸಿ ಅವರ ಆಧ್ಯಾತ್ಮ ವಿಚಾರಗಳಲ್ಲಿ ದೈವಿಕ ಸ್ಪರ್ಶವಿದೆಯೆಂದು ಬಣ್ಣಿಸಿದ್ದರು. 
ರಾಷ್ಟ್ರಪತಿಯಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಿಂಬಾಳದಲ್ಲಿರುವ ಗುರುದೇವ ರಾನಡೆಯವರ ಆಶ್ರಮಕ್ಕೆ ಭೇಟಿಕೊಟ್ಟಾಗ, ನಾನು ಬರಿ ತತ್ತ್ವಜ್ಞಾನದ ಪ್ರಾಧ್ಯಾಪಕ, ಆದರೆ ನೀವು (ರಾನಡೆಯವರು) ಪ್ರಾಧ್ಯಾಪಕರು ಅಷ್ಟೇ ಅಲ್ಲ, ಅನುಭಾವಿಗಳು, ದೇವರನ್ನು ಸಾಕ್ಷಾತ್ಕರಿಸಿಕೊಂಡ ಸಂತವರೇಣ್ಯರು' ಎಂಬ ಉದ್ಗಾರ ತೆಗೆದಿದ್ದರಂತೆ.

ಉಪನಿಷತ್ತು, ಭಗವದ್ಗೀತೆ, ಆಧ್ಯಾತ್ಮಗಳ ಮೇಲೆ ಅವರು ಭಾರತದ ಅನೇಕ ಕಡೆಗಳಲ್ಲಿ ಪ್ರವಚನಗಳನ್ನು ನೀಡಿದ್ದಾರೆ. 1937ರಲ್ಲಿ ಮಹಾರಾ‍ಷ್ಟ್ರದ ನಾಗಪುರದಲ್ಲಿ ನಡೆದ ಭಾರತೀಯ ತತ್ವಜ್ಞಾನ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅವರು ಅಲಂಕರಿಸಿದರು.
'Mysticism in Maharastra, 'A constructive survay of Upanishadic Philosophy' ತತ್ವಜ್ಞಾನದ ಮೇಲೆ ಉಪನಿಷತ್ತುಗಳ ಪ್ರಭಾವ ಕುರಿತಂತೆ ರಾನಡೆಯವರು ಬರೆದ ಗ್ರಂಥ ಆಧ್ಯಾತ್ಮ ಮತ್ತು ತತ್ವಜ್ಞಾನದ ಬಗೆಗೆ ಅಧ್ಯಯನ ನಡೆಸುವವರಿಗೆ ಮಾರ್ಗದರ್ಶಿಯಾಗಿದೆ. 'Pathway to God' (ದೇವರೆಡೆಗೆ ದಾರಿ) ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ, 'ರಾಮದಾಸ ವಚನಾಮೃತ' ಸಮರ್ಥ ರಾಮದಾಸರ ಮನಾಚೆ ಶ್ಲೋಕಗಳನ್ನು ಆಧರಿಸಿ ರಚಿಸಿದ ಕೃತಿ ಹಾಗೂ ಅವರ ವಿವಿಧೆಡೆ ನೀಡಿದ ಆಧ್ಯಾತ್ಮ ಪ್ರವಚನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಇಂತಹ ಸಂತ, ತತ್ವಜ್ಞಾನಿ ಶ್ರೀ ಗುರುದೇವ ರಾನಡೆ ಜುಲೈ3, 1957ರಂದು ಪರತತ್ವದಲ್ಲಿ ಲೀನವಾದರು ನಿಂಬಾಳದಲ್ಲಿ ಅವರು ವಾಸಿಸುತ್ತಿದ್ದ ಮನೆ ಈಗ ಪರಮಾರ್ಥ ಮಂದಿರವಾಗಿ, ಆಧ್ಯಾತ್ಮಿಕ ಕೇಂದ್ರವಾಗಿ, ಧ್ಯಾನ ಕೇಂದ್ರವಾಗಿನ ರೂಪುಗೊಂಡಿದೆ. ಸತ್ಸಂಗಗಳು, ಧ್ಯಾನಯೋಗ, ತತ್ವಜ್ಞಾನ ಕುರಿತಾದ ಬೋಧನೆಗಳು ಅಲ್ಲಿ ನಡೆಯುತ್ತಿದ್ದು ಪರಮಾರ್ಥ ಸಾಧಕರಿಗೆ ಅದು ಒಂದು ಶ್ರದ್ಧಾಕೇಂದ್ರವಾಗಿದೆ.