ಬನಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಶಾಸಕ ಸಿದ್ದು ಸವದಿ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಪರಿಶೀಲನೆ ನಡೆಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಪರಿಶೀಲನೆ
ರಬಕವಿ-ಬನಹಟ್ಟಿ,ಜೂ20: ಜೂನ್ 25 ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳನ್ನು ತೇರದಾಳ ಶಾಸಕ ಸಿದ್ದು ಸವದಿ ಪರಿಶೀಲಿಸಿದರು. 
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲು ನಿಗಾವಹಿಸಬೇಕೆಂದರು.
ಆರೋಗ್ಯ ತಪಾಸಣೆ: ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ ಆರೋಗ್ಯ ತಪಾಸಣಾ ಕೌಂಟ್ ತೆರೆಯಲು ಸೂಚಿಸಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ನಡೆಸಿ ವಿದ್ಯಾರ್ಥಿಗಳ ಪ್ರವೇಶ ನಡೆಯುವದು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಮಾತನಾಡಿ, ಕೌಂಟರ್‍ಗಳಲ್ಲಿ ಆರೋಗ್ಯ ಸಿಬ್ಬಂದಿ, ಇಲಾಖೆ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಬಗ್ಗೆ ಮತ್ತೊಮ್ಮೆ ನಿಗಾವಹಿಸಿ ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಪುನಃ ಗ್ರಾಮಗಳಿಗೆ ಕಳುಹಿಸಿಕೊಡಲು ವಿಶೇಷ ಗಮನ ನೀಡಲಿದೆ. ಒಟ್ಟು 24 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು 7746 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ 300 ಸಿಬ್ಬಂದಿ ಬದಲಾಗಿ 700 ಜನರಿಂದ ಸೇವೆ ನಡೆಯಲಿದೆ. ದೂರದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಮಖಂಡಿ ತಾಲೂಕಾ ನೋಡಲ್ ಅಧಿಕಾರಿ ರವಿಂದ್ರ ಸಂಪಗಾಂವಿ, ಮುಖ್ಯಾಧ್ಯಾಪಕ ರವಿ ಬಸಗೊಂಡನವರ ಇದ್ದರು.


       - FOR ADVERTISEMENT CONTACT -
                         - 9902523698 -