◆ ಚಿತ್ರೋದ್ಯಮ ಮರೆತು ಬಿಟ್ಟಿತಾ ಈ ಸಂಗೀತ 'ರತ್ನ'ವನ್ನು? 
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು 

◆ 'ಬೆಳೆದಿದೆ ನೋಡಾ ಬೆಂಗಳೂರು ನಗರ' - ಎಂಬ ಸೊಗಸಾದ ಹಾಡಿಗೆ ಟ್ಯೂನ್ ಹಾಕಿದ ಸಂಗೀತಗಾರ ಬದುಕು ಕಂಡುಕೊಂಡದ್ದು ಚೆನ್ನೈ ಜೋಪಡಿಯಲ್ಲಿ! ◆
     ಈ ದಿಗ್ಗಜ ಸಂಗೀತ ನಿರ್ದೇಶಕರನ್ನು ನಾನು ಕಳೆದ ಸಾರಿ ಭೇಟಿಯಾದಾಗ ಇವರಿಗೆ 98 ವರ್ಷ ವಯಸ್ಸಾಗಿತ್ತು. ಈಗ ಎರಡು ವರ್ಷಗಳ ನಂತರ ಭೇಟಿಯಾಗೋಣವೆಂದು ಇವರ ಎಲ್ಲಾ ಕಾಂಟ್ಯಾಕ್ಟ್'ಗಳಿಗೆ ಕಾಲ್ ಮಾಡಿದಾಗ 'ಈ ನಂಬರ್ ಚಾಲನೆಯಲ್ಲಿಲ್ಲ' ಎಂಬ ಮಾಹಿತಿ ಬರುತ್ತಿದೆ. ನೂರರ ಈ ಅಜ್ಜನಿಗೆ ಶುಭಕೋರುತ್ತಾ ಇವರ ಬಗ್ಗೆ ನನಗೆ ತಿಳಿದಿರುವಷ್ಟನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ : 
     ಇವರ ಹೆಸರು ಆರ್.ರತ್ನ. ಪುಟ್ಟ ಹೆಸರು, ದೊಡ್ಡ ಖ್ಯಾತಿ! ಇವರು ಸಂಗೀತ ನಿರ್ದೇಶಿಸಿದ ಒಂದಷ್ಟು ಹಾಡುಗಳ ಇಂಪನ್ನು ಸವಿದು ಬಿಡಿ : ◆ ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು, ◆ ಈ ಚೆಂದದ ಮನೆಯಲ್ಲಿ, ◆ ಹೋಗದಿರೀ ಸೋದರರೇ, ◆ ಈಶ್ವರನೆಂದರೂ ಒಬ್ಬನೇ ಅಲ್ಲ ಎಂದರೂ ಒಬ್ಬನೇ, ◆ ಚೆಲುವಿನ ಗಣಿಯಾಗಿ ನಮ್ಮೂರಾ, ◆ ಮಮತೆಯ ತೋಟದ ಮನೆಯಲ್ಲಿ, ◆ ಚೂರಾಯಿತೇ ಒಲವಿನ ಚಿತ್ರ, ◆ ಕದ್ದು ನೋಡುವಿ ಏಕೆ ಎಲೆ ಹೆಣ್ಣೇ, ◆ ನಾನೋಡಿ ನಲಿಯುವ ಕಾರವಾರ, ◆ ಬೆಳೆದಿದೆ ನೋಡಾ ಬೆಂಗಳೂರು ನಗರ...
     - ಇಂಥಾ ಇಂಪಾದ ಗೀತೆಗಳಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತ ನಿರ್ದೇಶಕ ಇದೇ ಆರ್.ರತ್ನ! ಇಂಥಾ ಒಬ್ಬ ಪ್ರತಿಭಾನ್ವಿತ ವ್ಯಕ್ತಿ ಚೆನ್ನೈನ ಜೋಪಡಿಯೊಂದರಲ್ಲಿ ಬದುಕು ನಡೆಸಿದ್ದಾರೆ ಎಂದರೆ ನಂಬುವುದು ಕಷ್ಟ. ಆದರೆ ನಂಬಲೇ ಬೇಕು, ಏಕೆಂದರೆ ಇದು ನಿಜ! ಈ ವಿವರವನ್ನು ಆ ಮೇಲೆ ಹೇಳುತ್ತೇನೆ, ಮೊದಲು ರತ್ನ ಅವರ ಬಯೋಡಾಟದತ್ತ ಬರುವುದಾದರೆ :
     ಇವರ ಒರಿಜಿನಲ್ ಹೆಸರು : ಜೀವರತ್ನ. ಹುಟ್ಟಿದ್ದು ಮಧುರೈನಲ್ಲಿ. ಆದರೆ ಇವರ ಪೂರ್ವಿಕರು ಬೇಲೂರಿನವರು. ವಿಶೇಷವೆಂದರೆ ರತ್ನ ಅವರು ಅಮರಶಿಲ್ಪಿ ಜಕಣಾಚಾರಿ ವಂಶಸ್ಥರೆನ್ನುವ ಪ್ರತೀತಿ ಇದೆ. ಹೀಗಾಗಿ ಇವರ ಮತ್ತೊಂದು ಹೆಸರು : ರತ್ನಾಚಾರಿ! ತಂದೆ ಹಿರಣ್ಣಯ್ಯಾಚಾರಿ, ತಾಯಿ ವೇಲಮ್ಮಾಳ್. 4ನೇ ತರಗತಿಯಲ್ಲಿ ಓದುತ್ತಿರುವಾಗಲೇ ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡರು ರತ್ನ. ಮೂಲತಃ ಶಿಲ್ಪಿಯಾಗಿದ್ದರೂ ಸಂಗೀತ ಪ್ರೇಮಿಯೂ ಆಗಿದ್ದ ತಂದೆಯ ಬೆಂಬಲ ಪಡೆದು ವಿದ್ವಾನ್ ಆರತ್ತೂರು ವೆಂಕಟೇಶ್ ಅಯ್ಯರ್ ಬಳಿ ಹಾರ್ಮೋನಿಯಂ ಕಲಿತರು ರತ್ನ. ನಂತರ ಅಭಿನಯದತ್ತ ವಾಲಿದ ಅವರು ತಮಿಳಿನ 'ದಾನಶೂರ ಕರ್ಣ' ಚಿತ್ರದಲ್ಲಿ ಋಷಕೇತುವಿನ ಪಾತ್ರ ನಿರ್ವಹಿಸಿದರು. ಆ ನಂತರದ ದಿನಗಳಲ್ಲಿ ಬೆಳ್ಳಿತೆರೆಯತ್ತ ಪರ್ಮನೆಂಟಾಗಿ ಮುಖ ಮಾಡಿದರು. ನೀವು ನಂಬಲೇ ಬೇಕು, ಆರ್.ರತ್ನ ಅವರ ಧ್ವನಿ ಪರೀಕ್ಷೆ ಮಾಡಿದವರು ಆ ಕಾಲದಲ್ಲಿ ತಮಿಳ್ನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ!
     ಅಲ್ಲಿಂದ ಆರಂಭವಾದ ವೃತ್ತಿ ಬದುಕು ಅವ್ಯಾಹತವಾಗಿ ಸಾಗಿತು. ಈ ನಡುವೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ತಂದೆ ಶೇಖರ್ ಇವರ ಸಹಾಯಕರಾಗಿ ಕೆಲಸ ಮಾಡಿದ ದಾಖಲೆಯೂ ಇದೆ. ಅಷ್ಟೇ ಯಾಕೆ, ಸುಪ್ರಸಿದ್ಧ ಸಂಗೀತ ನಿರ್ದೇಶಕರಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರೂ ಕೂಡಾ ಇವರ ಸಹಾಯಕರಾಗಿದ್ದರು ಎಂಬ ಸತ್ಯವನ್ನು ನೀವು ಒಪ್ಪಲೇ ಬೇಕು! 1961ರಲ್ಲಿ ಎಂ.ಜಿ.ಆರ್.ಅಭಿನಯದ 'ಚಕ್ರವರ್ತಿ ತಿರುಮಗಳ್' ಚಿತ್ರದ ಹಿಂದಿ ಅವತರಣಿಕೆಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಆರ್.ರತ್ನ. 
     ಸ್ವಲ್ಪ ಹಿಂದಕ್ಕೆ ಹೋಗುವುದಿದ್ದರೆ, ಶ್ರೀಲಂಕಾದ ಜಾಫ್ನ, ಕೊಲಂಬೋಗಳಲ್ಲಿ ಸರಣಿ ಕಾರ್ಯಕ್ರಮ ನೀಡಿ ಜನಪ್ರಿಯರಾದ ರತ್ನ ಅವರನ್ನು ಆಗಿನ ರಾಷ್ಟ್ರಪತಿಗಳಾದ ವಿ.ವಿ.ಗಿರಿ ಸನ್ಮಾನಿಸಿದ್ದಾರೆ ಕೂಡಾ! 1955ರಲ್ಲಿ ಟಿ.ವಿ.ಸಿಂಗ್ ಠಾಕೂರ್ ಅವರ 'ಸೋದರಿ' ಚಿತ್ರಕ್ಕಾಗಿ ನೃತ್ಯ ನಿರ್ದೇಶಿಸುವ ಕೆಲಸವನ್ನೂ ಮಾಡಿದ್ದಾರೆ ರತ್ನ! 1963ರಲ್ಲಿ ಹಿರಿಯ ನಿರ್ದೇಶಕರಾದ ಸಿ.ವಿ.ಶಿವಶಂಕರ್ ಅವರು ರತ್ನರ ಪ್ರತಿಭೆಯನ್ನು ಗುರುತಿಸಿ ತಮ್ಮ 'ಮನೆಕಟ್ಟಿ ನೋಡು' ಚಿತ್ರಕ್ಕಾಗಿ ಸಂಗೀತ ನಿರ್ದೇಶಿಸಲು ಆಯ್ಕೆ ಮಾಡಿಕೊಂಡರು. 
     ಆರ್.ರತ್ನ ಅವರ ವೃತ್ತಿ ಬದುಕಿನಲ್ಲಿ ಮೈಲುಗಲ್ಲಾದ ಚಿತ್ರ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಕಪ್ಪು ಬಿಳುಪು'. ಮಿನುಗುತಾರೆ ಕಲ್ಪನಾ ದ್ವಿಪಾತ್ರದಲ್ಲಿ ನಟಿಸಿದ ಈ ಚಿತ್ರದ ಸಂಗೀತ ನಿರ್ದೇಶಿಸಿದ್ದಕ್ಕಾಗಿ ಕರ್ನಾಟಕದಾದ್ಯಂತ ಹೆಸರು ಗಳಿಸಿಕೊಂಡರು ಆರ್.ರತ್ನ.  ಆದರೆ ಈ ಚಿತ್ರದ ಖ್ಯಾತಿಯೇ ಅವರಿಗೆ ಮುಳುವಾಯಿತೇನೋ! ಇದಕ್ಕೆ ಕಾರಣವಾದದ್ದು ಪುಟ್ಟಣ್ಣ ಕಣಗಾಲ್ ಅನಾರೋಗ್ಯಕರ ಅಸೂಯಾ ಮನೋಭಾವ! 'ಕಪ್ಪು ಬಿಳುಪು' ಚಿತ್ರ ತೆರೆ ಕಂಡ ನಂತರ ಆರ್.ರತ್ನ ಅವರಿಗೆ ಸಿಕ್ಕ ಅಭೂತಪೂರ್ವ ಪ್ರಶಂಸೆಗಳಿಂದಾಗಿ ಕಂಗೆಟ್ಟು ಹೋದ ಪುಟ್ಟಣ್ಣ ಆ ನಂತರದ ದಿನಗಳಲ್ಲಿ ಅವರಿಗೆ ಅವಕಾಶ ಕೊಡಲೇ ಇಲ್ಲ! 
     ಇದು ಆರ್.ರತ್ನ ಅವರ ವೃತ್ತಿ ಬದುಕಿನ ಮೇಲೆ ವಿಪರೀತ ಪ್ರಭಾವ ಬೀರಿದ್ದು ಮಾತ್ರ ನಿಜ. 'ಕಪ್ಪು ಬಿಳುಪು' ಚಿತ್ರದ ನಂತರವೂ ಹತ್ತಾರು ಚಿತ್ರಗಳಿಗೆ ಸಂಗೀತ ನೀಡಿದರಾದರೂ ಈ ಎಲ್ಲಾ ಚಿತ್ರಗಳು ಶೋಚನೀಯ ಸೋಲು ಕಂಡದ್ದರಿಂದಾಗಿ ರತ್ನ ಅವರಿಗೆ ಡಿಮಾಂಡ್ ಕಮ್ಮಿಯಾಯಿತು. ಪೂರ್ಣಿಮಾ, ಮಹಡಿಮನೆ, ಚದುರಂಗ, ಬಾಂಧವ್ಯ, ನಾನೂ ಬಾಳಬೇಕು, ಕಾಣದ ಕೈ...ಮೊದಲಾದ ಚಿತ್ರಗಳು ಇವರಿಗೆ ಹೆಸರು ತರಲಿಲ್ಲ....
     ಬೇಡಿಕೆ ಕುಸಿದು ತೆರೆಮರೆಗೆ  ಸರಿಯುತ್ತಿರುವಂತೆಯೇ ಸಂಪಾದನೆ ಕೂಡಾ ಕುಸಿಯಿತು. ಇದರಿಂದಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡರು. ಕುಡಿತಕ್ಕೆ ದಾಸರಾದರು. ಇದು ಆರ್ಥಿಕವಾಗಿ ರತ್ನ ಅವರನ್ನು ಮತ್ತಷ್ಟು ಕಂಗಾಲು ಮಾಡಿತು. ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು. ಎಷ್ಟು ಕಂಗಾಲಾದರೆಂದರೆ ಮನೆ ಬಾಡಿಗೆ ಕೊಡಲೂ ಕೈಲಿ ದುಡ್ಡಿಲ್ಲವಾಯಿತು! ಹಾಗೆ ಸೇರಿಕೊಂಡದ್ದೇ ಚೆನ್ನೈನ ಕೊಳಗೇರಿ ಗುಡಿಸಲಿಗೆ...
     ಅಕ್ಷರಶಃ ಅದೊಂದು ಜೋಪಡಿ. ಚೆನ್ನೈನ ಕೆಳವರ್ಗದ ಕೂಲಿಕಾರರು ಬದುಕು ಕಂಡುಕೊಳ್ಳಬಹುದಾದಂಥಾ ಸೋಗೆ ಹೊದ್ದ ಶೀಟಿನ ಪುಟ್ಟ ಮನೆ. ಸುಣ್ಣ ಬಣ್ಣ ಕಾಣದೇ ಅದೆಷ್ಟು ವರ್ಷಗಳಾಗಿತ್ತೋ? ಅಲ್ಲಲ್ಲಿ ಸಿಂಬಳದ ಗಲೀಜು. ಗೋಡೆ ತುಂಬಾ ತಿಗಣೆ ಕೊಂದ ಗುರುತುಗಳು. ಬಿರುಕು ಬಿಟ್ಟ ಗಾರೆಯ ಪ್ಲಾಸ್ಟರ್. ಒಂದೇ ಒಂದು ಕೋಣೆ. ಆ ಕೋಣೆಯ ಮೂಲೆಯೊಂದರಲ್ಲಿ ಹಾಸಿದ್ದ ಹರಕಲು ಚಾಪೆಯ ಮೇಲೆ ಮಲಗಿರುವ ಹಣ್ಣು ಹಣ್ಣು ಮುದುಕ! ಇವರು ಬೇರೆ ಯಾರೂ ಅಲ್ಲ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಸಂಗೀತ ನಿರ್ದೇಶಕ ಆರ್.ರತ್ನ! 
     ಇಂಥಾ ಸಂಗೀತ ರತ್ನ ಅವರ ದುರ್ಭರ ಬದುಕಿನ ವಿವರಗಳನ್ನು ಪತ್ರಿಕೆಗಳಲ್ಲಿ ಓದಿದ ಬೆಂಗಳೂರಿನ ಸಹೃದಯಿಯೊಬ್ಬರು ತಡ ಮಾಡದೇ ಚೆನ್ನೈಗೆ ಧಾವಿಸಿದರು. ಇವರ ಹೆಸರು ವೆಂಕಟರಾಮಯ್ಯ. ಆದರೆ ತಕ್ಷಣಕ್ಕೆ ರತ್ನ ಅವರ 'ನಿವಾಸ'ವನ್ನು ಹುಡುಕುವುದು ಸುಲಭಸಾಧ್ಯವಾಗಿರಲಿಲ್ಲ. ಕೊನೆಗೂ ಚೆನ್ನೈನ ಕೊಳೆಗೇರಿಯೊಂದರ ಸೋಗೆ ಹೊದ್ದ ಶೀಟ್ ಗುಡಿಸಲಿನಲ್ಲಿ ಕನ್ನಡದ ರತ್ನ ಸಿಕ್ಕರು! ಹಾಗೆ ಸಿಕ್ಕ ರತ್ನ ಅವರನ್ನು ಜೋಪಾನವಾಗಿ ತಮ್ಮದೇ ಖರ್ಚಿನಲ್ಲಿ ಬೆಂಗಳೂರಿಗೆ ಕರೆತಂದು ಅಮೃತಹಳ್ಳಿಯ ತಮ್ಮ ಮನೆಯಲ್ಲಿಟ್ಟರು ವೆಂಕಟರಾಮಯ್ಯ. PWD ಇಂಜಿನಿಯರ್ ಆಗಿದ್ದ ವೆಂಕಟರಾಮಯ್ಯ ಸ್ವಲ್ಪ ಮಟ್ಟಿಗೆ ಸ್ಥಿತಿವಂತರಾಗಿದ್ದರು. ನಿವೃತ್ತಿಯ ನಂತರ ಕಟ್ಟಿಸಿಕೊಂಡ ಬಂಗಲೆಯ ಮಹಡಿಯಲ್ಲೊಂದು ಸಂಗೀತ ಶಾಲೆ ತೆರೆದು ರತ್ನ ಅವರನ್ನು ಸ್ವಂತ ತಂದೆಗಿಂತ ಹೆಚ್ಚಾದ ಗೌರವದಿಂದ ಸಾಕತೊಡಗಿದರು. ಅಲ್ಲಿಗೆ ಈ ಸಂಗೀತ ರತ್ನರಿಗೊಂದು ಉತ್ತಮ ಬದುಕು ಸಿಕ್ಕಂತಾಯಿತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ತಮಗೆ ತಾವೇ ಮಾಡಿಕೊಂಡ ಎಡವಟ್ಟಿನಿಂದಾಗಿ ವೆಂಕಟರಾಮಯ್ಯ ಆರ್ಥಿಕವಾಗಿ ಕಂಗಾಲಾದರು. ಮನೆಮಠವನ್ನು ಮಾರ ಬೇಕಾಯಿತು. ತಮಗೇ ನೆಲೆಯಿಲ್ಲದಾದಾಗ ರತ್ನ ಅವರನ್ನು ಜತೆಗಿರಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನರಿತ ವಯೋವೃದ್ಧ ಸಂಗೀತ ನಿರ್ದೇಶಕ ರತ್ನ ಮತ್ತೆ ಚೆನ್ನೈನ ಅದೇ ಕೊಳಗೇರಿ ಗುಡಿಸಿಲನ್ನು ಸೇರಿಕೊಂಡರೋ ಗೊತ್ತಿಲ್ಲ! ಈಗ ರತ್ನ ಅವರಿಗೆ ಭರ್ತಿ ನೂರು ವರ್ಷ ವಯಸ್ಸು. ಎಲ್ಲಿದ್ದಾರೋ, ಹೇಗಿದ್ದಾರೋ ಗೊತ್ತಿಲ್ಲ. ರತ್ನ ಅವರ ನಿಕಟವರ್ತಿಯೊಬ್ಬರಿಗೆ ಫೋನ್ ಮಾಡಿದರೆ ಅದೀಗ 'ರಾಂಗ್ ನಂಬರ್' ವೆಂಕಟರಾಮಯ್ಯನವರಿಗೆ ಫೋನ್ ಮಾಡಿದರೆ 'ನಾಟ್ ರೀಚೆಬಲ್'. ವೆಂಕಟರಾಮಯ್ಯನವರ ಮಗನಿಗೆ ಫೋನ್ ಮಾಡಿದರೆ 'ಸ್ವಿಚ್ಡ್ ಆಫ್'...
      ಈಗ ನೆನಪಾಗುತ್ತಿದೆ ಅವರೇ ಸಂಗೀತ ನಿರ್ದೇಶಿಸಿದ ಹಾಡೊಂದರ ಸಾಲು : 'ಚೂರಾಯಿತೇ ಒಲವಿನ ಚಿತ್ರ...'                                     
■ ಇದನ್ನು ಓದಿದ ನಂತರವೂ ನೀವು 'ಶುಭಂ' ಪುಸ್ತಕವನ್ನು ತರಿಸಿಕೊಳ್ಳದಿದ್ದರೆ ಅದೊಂದು ದೊಡ್ಡ ಕೊರತೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ 'ಅಕ್ಷರ ಯಜ್ಞ' ನಿಮಗಾಗಿ ಕಾದಿದೆ. ನೀವು ಬಯಸಿದರೆ, ನಿಮ್ಮ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಲು  ರೆಡಿ. 'ಶುಭಂ' ಪುಸ್ತಕ ಬೇಕಿದ್ದವರು ವಾಟ್ಸಾಪ್ ಮೂಲಕ ನೇರವಾಗಿ ನನ್ನನ್ನು ಸಂಪರ್ಕಿಸಬಹುದು :

- FOR ADVERTISEMENT CONTACT -
                  9902523698