■ 'ರಂಗನಾಯಕಿ' ಆರತಿ ಈಗ ಎಲ್ಲಿದ್ದಾರೆ? ■
ಹದಿನೈದು ವರ್ಷಗಳ ಹಿಂದೆ ದಿಢೀರನೆ ಅಮೆರಿಕಾದಿಂದ ಬಂದು ಕನ್ನಡದಲ್ಲಿ 'ಮಿಠಾಯಿ ಮನೆ' ಎಂಬ ಚಿತ್ರವನ್ನು ನಿರ್ಮಿಸಿ ಸುದ್ದಿ ಮಾಡಿದ ನಟಿ ಆರತಿ ಈಗೆಲ್ಲಿದ್ದಾರೆ? ಹುಡುಕಿದರೆ ಸಿಗಬಹುದೆಂದು ಜೆ.ಪಿ.ನಗರದ ಅವರ ಮನೆಗೆ ಹೋದರೆ ಗೇಟಿಗೆ ದೊಡ್ಡದಾದ ಬೀಗ! ಹಸಿರಿನಿಂದ ಕಂಗೊಳಿಸುತ್ತಿದ್ದ ಕೈತೋಟ ಒಣಗಿ ಹೋಗಿದೆ. ಮನೆಯ ಹೊರ ಗೋಡೆಯ ತುಂಬಾ ಹರಡಿಕೊಂಡಿದ್ದ ಬಳ್ಳಿಗಳೆಲ್ಲಾ ಕರಕಲು. ಧೂಳು ಹೊದ್ದು ನಿಂತಿದ್ದ 'ಬೆಳ್ಳಿತೆರೆ' ಮಸುಕು ಮಸುಕು. ಹೌದು 'ಬೆಳ್ಳಿತೆರೆ' ಆರತಿಯವರ ಮನೆಯ ಹೆಸರು. 50×80 ಅಡಿ ವಿಸ್ತೀರ್ಣ ಹೊಂದಿದ ಸೈಟ್'ನಲ್ಲಿ ಕಟ್ಟಿಸಿದ ಮನೆಗೆ ಆ ಕಾಲದಲ್ಲಿ ಖರ್ಚಾದದ್ದು ಕೇವಲ ಕೆಲವೇ ಲಕ್ಷ! ಈಗ ಈ ಜಾಗ ಮತ್ತು ಮನೆ ಕೋಟಿ ಕೋಟಿ ಬಾಳುತ್ತದೆ. ಇಂಥಾ ಮನೆಯಲ್ಲಿ ಆರತಿ ವಾಸವಿಲ್ಲ. ವಾಸವಿಲ್ಲದ ಮನೆ ಇದ್ದರೇನು ಬಿಟ್ಟರೇನು ಎಂಬ ನಿಲುವಿನಿಂದಾಗಿ ಮಾರಿಕೊಂಡರೋ ಗೊತ್ತಿಲ್ಲ.
ಹದಿನೈದು ವರ್ಷಗಳ ಹಿಂದೆ 'ಮಿಠಾಯಿ ಮನೆ' ಚಿತ್ರ ನಿರ್ಮಿಸಲೆಂದೇ ಅಮೆರಿಕಾದಿಂದ ಬೆಂಗಳೂರಿಗೆ ಬಂದ ಆರತಿ ನೆಲೆಸಿದ್ದು ಇದೇ ಮನೆಯಲ್ಲಿ. ನೆಲೆಸುವ ಮುನ್ನ ನಡೆದದ್ದೇನು? ಮನೆ ತುಂಬಾ ಧೂಳು. ಚಂದ್ರಶೇಖರ ದೇಸಾಯಿ ಗೌಡರ್ ಎಂಬ ಹೆಸರಿನ ಶ್ರೀಮಂತ ವ್ಯಕ್ತಿಯ ಕೈ ಹಿಡಿದು ಭಾರತ ಬಿಟ್ಟು ಅಮೆರಿಕಾಕ್ಕೆ ಹೊರಟು ನಿಂತಾಗ ಈ ಮನೆಗೆ ಬೀಗ ಹಾಕಲಾಗಿತ್ತು. ಯಾರಿಗೂ ಬಾಡಿಗೆಗೆ ಕೊಟ್ಟಿರಲಿಲ್ಲ. ಮಾರಿರಲಿಲ್ಲ. ಹಾಕಿದ ಬೀಗವನ್ನು ತೆರೆದಿರಲೂ ಇಲ್ಲ! ಹೀಗಾಗಿಯೇ ಮನೆ ತುಂಬಾ ಧೂಳು ತುಂಬಿಕೊಂಡಿತ್ತು. ಅದನ್ನು ಕ್ಲೀನ್ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿತ್ತು. ಏನಿಲ್ಲವೆಂದರೂ ಬರೋಬ್ಬರಿ ಒಂದು ತಿಂಗಳ ಕಾಲ ಹೋರಾಡಿದ ಮೇಲೆ ಮನೆಗೊಂದು ಶೇಪ್ ಬಂತು!
ಈ ಮನೆಯನ್ನು ಆರತಿಯವರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೇ ಗಿಫ್ಟಾಗಿ ಕೊಟ್ಟಿದ್ದು ಎನ್ನುವ ಮಾತಿದೆ! ಏಕೆಂದರೆ ಆರತಿ ಮೊದಲು ಮದುವೆಯಾದದ್ದೇ ಪುಟ್ಟಣ್ಣನವರನ್ನು. ಅವರಲ್ಲಿ ಹುಟ್ಟಿದ ಮಗುವೇ ಯಶಸ್ವಿನಿ. 'ಮಿಠಾಯಿ ಮನೆ' ಚಿತ್ರವನ್ನು ನಿರ್ದೇಶಿಸಿದ್ದು ಇದೇ ಯಶಸ್ವಿನಿ. ಈ 'ಮಿಠಾಯಿ ಮನೆ'ಯ ಎಲ್ಲಾ ಸ್ಕ್ರಿಪ್ಟ್ ಕೆಲಸಗಳು ನಡೆದದ್ದು ಇದೇ 'ಬೆಳ್ಳಿತೆರೆ' ಮನೆಯಲ್ಲಿ. ಇಂಥಾ 'ಬೆಳ್ಳಿತೆರೆ'ಯನ್ನು ಆರತಿ ಒಳ್ಳೆಯ ರೇಟಿಗೆ ಮಾರಿದ್ದಾರೆ ಎನ್ನುವ ಸುದ್ದಿ ಇದೆ. ಈ ಚಿತ್ರದ ನಂತರ ಮನೆಗೆ ಹಾಕಿರುವ ಬೀಗ ತೆರೆದಿರುವುದನ್ನು ನೋಡಿದವರಿಲ್ಲ...ಅಂದ ಹಾಗೆ, ಇದೀಗ ಬಂದಿರುವ ಸುದ್ದಿ : ಆರತಿಯವರು ಈ ಮನೆಯನ್ನು ಸಂಸ್ಥೆಯೊಂದಕ್ಕೆ ಮಾರಿದ್ದಾರೆ. 'ಬೆಳ್ಳಿತೆರೆ' ಬೋರ್ಡು ಮಾಯವಾಗಿದೆ. ಒಂದು ಕಾಲದಲ್ಲಿ ಕನ್ನಡದ 'ರಂಗ ನಾಯಕಿ'ಯ ಕನಸಿನ ಸೌಧವಾಗಿದ್ದ ಈ ಮನೆ ಈಗ ಟೆಕ್ಕಿಗಳ ಸ್ವರ್ಗವಾಗಿ ಬಿಟ್ಟಿದೆ!
ಹಾಗಿದ್ದರೆ ಆರತಿ ಎಲ್ಲಿ ಮಾಯವಾದರು? ಒಂದು ಮೂಲದ ಪ್ರಕಾರ ಬೆಂಗಳೂರಿನ ಲೀಮೆರಿಡಿಯನ್ ಹೋಟೆಲಿನ ಪಕ್ಕದ ಅಪಾರ್ಟ್ಮೆಂಟ್'ನಲ್ಲೊಂದು ಪ್ಲಾಟ್ ಖರೀದಿಸಿರುವ ಮಾಹಿತಿ ಇದೆ. ಈ ಮಾಹಿತಿಯ ಜಾಡು ಹಿಡಿದು ಆ ಅಪಾರ್ಟ್ಮೆಂಟ್'ನ ಸೆಕ್ಯುರಿಟಿಯವನಲ್ಲಿ ವಿಚಾರಿಸಿದರೆ 'ಕೌನ್ ಹೈ ಆರತಿ?' ಎನ್ನುವ ಉತ್ತರ ಬಂತು! ಹಾಗಿದ್ದರೆ ಆರತಿ ಮತ್ತೆ ಅಮೆರಿಕಾಕ್ಕೆ ಹಾರಿ ಹೋದರಾ ಗೊತ್ತಿಲ್ಲ. 'ಮಿಠಾಯಿ ಮನೆ' ಯಶಸ್ವಿಯಾದರೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಯೋಚನೆ ಆರತಿಯವರಿಗಿತ್ತು. ಆದರೆ ಆ ಚಿತ್ರ ಶೋಚನೀಯ ಸೋಲು ಕಂಡಿರುವುದರಿಂದ ನಿರಾಶೆಗೊಂಡ ಆರತಿ ಮತ್ತೆ ಅಮೆರಿಕಾ ಸೇರಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
◆
'ನನ್ಗೆ ವಯಸ್ಸಾಗಿದೆ ನಿಜ, ಆದ್ರೆ ಅರುಳು ಮರುಳಲ್ಲ' - ಎಂದಿದ್ದರು ಆರತಿ. ವಿಷ್ಣುವರ್ಧನ್ ಅವರ ಸಮಕಾಲೀನರಾಗಿದ್ದ ಆರತಿಯವರಿಗೆ ಅರವತ್ತೈದು ದಾಟಿದೆಯಾ ಅವರೇ ಹೇಳಬೇಕು. ಬೆಂಗಳೂರಿಗೆ ಬಂದಾಗಲೆಲ್ಲಾ ಸಲೀಸಾಗಿ ಮಾರುಕಟ್ಟೆಗೆ ಹೋಗಿ ತಾವೇ ತರಕಾರಿ, ದಿನಸಿ ಖರೀದಿಸಿ ತರುತ್ತಿದ್ದರಂತೆ! ಆಟೋದಲ್ಲೇ ಓಡಾಡುತ್ತಿದ್ದರಂತೆ. 'ಯಾರೂ ನನ್ನ ಗುರ್ತು ಹಿಡಿಯೋದಿಲ್ಲ. ಎಲ್ಲರೂ ನನ್ನನ್ನು ಮರ್ತಿದ್ದಾರೆ. ಆದರೆ ಕೆಲವು ಮಂದಿ ಹಿರಿಯರು ಮಾತ್ರ ಒಂದೇ ಒಂದು ಸಲ ದುರುಗುಟ್ಟಿ ನೋಡುತ್ತಾರೆ! ಮತ್ತೆ ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರೆ...' - ಎಂದು ಹೇಳಿಕೊಂಡ ಆರತಿ 'ಆದರೆ ನನ್ನ ಧ್ವನಿಯನ್ನು ಮಾತ್ರ ಯಾರೂ ಮರೆತಿಲ್ಲ..' - ಎಂದು ಹೇಳಿ ನಕ್ಕಿದ್ದರು.
■ ಇದನ್ನು ಓದಿದ ನಂತರವೂ ನೀವು 'ಶುಭಂ' ಪುಸ್ತಕವನ್ನು ತರಿಸಿಕೊಳ್ಳದಿದ್ದರೆ ಅದೊಂದು ದೊಡ್ಡ ಕೊರತೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ ಮೃಷ್ಟಾನ್ನ ಭೋಜನ ನಿಮಗಾಗಿ ಕಾದಿದೆ.
◆ ಆರತಿ Pic : ಪ್ರವೀಣ್ ನಾಯಕ್
- FOR ADVERTISEMENT CONTACT -
9902523698

Social Plugin