ಮದುವೆ ತಂದ ಆತಂಕ: ಭೀತಿಯಲ್ಲಿ ಬನಹಟ್ಟಿ, ನಾವಲಗಿ...
ರಬಕವಿ-ಬನಹಟ್ಟಿ,ಜೂ30: ಕಳೆದ 10 ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಬನಹಟ್ಟಿಯಿಂದ ದಿಬ್ಬಣ ವಾಹನವೊಂದು ಮದುವೆಗೆಂದು ತೆರಳಿತ್ತು. ಪಟ್ಟಣದ ಓರ್ವಳನ್ನು ಹೋಮ್ ಕ್ವಾರಂಟೈನ್ ಮಾಡಿದ್ದವರ ಮನೆಯವರಲ್ಲಿ ಇಬ್ಬರು ಭಾಗಿಯಾಗಿದ್ದರು. ಪಟ್ಟಣದ ಒಂದೇ ಕುಟುಂಬದ ಒಟ್ಟು 6 ಜನರಿಗೂ ಕೊರೊನಾ ವಕ್ಕರಿಸಿದರ ಪರಿಣಾಮ ಬನಹಟ್ಟಿ ನಾವಲಗಿ ಗ್ರಾಮಗಳಲ್ಲಿನ 50 ಕ್ಕೂ ಅಧಿಕ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವಲ್ಲಿ ಕಾರಣವಾಗಿದ್ದು, ಇನ್ನೂ ಕೆಲ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. 
ಜೂನ್ 21 ರಂದು ಮಹಾರಾಷ್ಟ್ರದಿಂದ ಬಂದ ಮಹಿಳೆಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆ ಹೋಮ್ ಕ್ವಾರಂಟೈನ್ ಮಾಡಿದ್ದ ಇಡೀ ಕುಟುಂಬದ ಐವರು ಗಂಟಲು ದ್ರವ ಹಾಗು ರಕ್ತ ಮಾದರಿ ಪರೀಕ್ಷೆ ನಡೆಸಿದ ನಂತರ ಅವರಿಗೂ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನಲೆ ಬೇಕಾಬಿಟ್ಟಿಯಾಗಿ ಸಂಚಾರ ನಡೆಸಿದ್ದ ಕಾರಣ ಇಷ್ಟೊಂದು ಆವಾಂತರವಾಗುವಲ್ಲಿ ಕಾರಣವಾಗಿದೆ. 
ಕೈಕೊಟ್ಟ ಲ್ಯಾಬ್: ವಿಳಂಬವಾದ ವರದಿ: ರಬಕವಿ-ಬನಹಟ್ಟಿ ತಾಲೂಕನ್ನೇ ತಲ್ಲಣಗೊಳಿಸಿರುವ ಈ ಪ್ರಕರಣದ ವರದಿಗೆ ಇಡೀ ತಾಲೂಕು ಕಾದು ಕುಳಿತಿದೆ. ಐದಾರು ದಿನಗಳ ಹಿಂದೆಯೇ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ದ್ವಿತೀಯ ಸಂಪರ್ಕಿತರ ಸ್ವ್ಯಾಬ್ ಪರೀಕ್ಷೆಗೆ ಕಳಿಸಲಾಗಿದ್ದರೂ ಇನ್ನೂ ವರದಿ ಬಂದಿಲ್ಲ. ಹೀಗಾಗಿ ಸಿಕ್ಕಾಪಟ್ಟೆ ಕುತೂಹಲ ಮೂಡಿದ್ದು, ಬೆಂಗಳೂರಿಗೆ ಸ್ಯಾಂಪಲ್ಸ್ ಕಳಿಸಲಾಗಿದ್ದು, ಅಲ್ಲಿಯೂ ಬಾಗಲಕೋಟೆ ವಿಭಾಗದ ಪರೀಕ್ಷಾ ಕೇಂದ್ರ ಬಂದ್ ಆಗಿರುವದಕ್ಕೆ ವರದಿ ತಡವಾಗಲು ಕಾರಣವೆನ್ನಲಾಗುತ್ತಿದೆ. 
ಬನಹಟ್ಟಿ ಹಾಗು ನಾವಲಗಿ ಗ್ರಾಮಸ್ಥರ ಬಹುತೇಕ ಹಿರಿಯರ ಗುಂಪೇ ಇದ್ದು ಪರೀಕ್ಷಾ ವರದಿ ಅತಿ ಕುತೂಹಲವಾಗಿದೆ. ತೀಕ್ಷ್ಣವಾಗಿ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಬೇಗನೇ ವರದಿ ಬರಬೇಕಿದೆ. ವಿಳಂಬವಾದಷ್ಟು ಗಂಡಾಂತರ ಕಟ್ಟಿಟ್ಟ ಬುತ್ತಿ.