ರಬಕವಿ-ಬನಹಟ್ಟಿ ಪಂಚಮಸಾಲಿ ಸಮಾಜದ ನೂತನ ಅಧ್ಯಕ್ಷರಾಗಿ ಶ್ರೀಶೈಲ ದಲಾಲ ಆಯ್ಕೆಗೊಂಡರು.
ಸಮಾಜ ಅಭಿವೃದ್ಧಿಗೆ ಸಂಘಟನೆ ಅವಶ್ಯ
ರಬಕವಿ-ಬನಹಟ್ಟಿ ತಾಲೂಕಾ ಪಂಚಮಸಾಲಿ ಅಧ್ಯಕ್ಷರಾಗಿ ಶ್ರೀಶೈಲ ದಲಾಲ ಆಯ್ಕೆ
ರಬಕವಿ-ಬನಹಟ್ಟಿ,ಜೂ30: ಸಮಾಜ ಅಭಿವೃದ್ಧಿಗಾಗಿ ಸಂಘಟನೆ ಅವಶ್ಯವಿದೆ. ಶಿಕ್ಷಣ ಹಾಗು ಹಕ್ಕುಗಳಿಗೆ ಧ್ವನಿಯಾಗುವಲ್ಲಿ ಪಂಚಮಸಾಲಿ ಸಮಾಜ ಗಟ್ಟಿಯಾಗಬೇಕೆಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ನಗರದ ವಿಶ್ರಾಂತಿ ಗೃಹದಲ್ಲಿ ನಡೆದ ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷರ ಆಯ್ಕೆ ಸಂದರ್ಭ ಮಾತನಾಡಿದ ಅವರು, ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ಸಮುದಾಯ ಪಂಚಮಸಾಲಿ ಆದರೆ ಆರ್ಥಿಕವಾಗಿ ತೀವ್ರ ಹಿಂದುಳಿದು, ಕೇವಲ ಒಕ್ಕಲುತನದಿಂದ ದುಡಿಮೆ ಸಾಗಿಸುತ್ತ ಸಮಸ್ಯೆಗಳಿಂದಲೇ ಹಿಂದುಳಿದ ಜನಾಂಗವಾಗಿದೆ. ಸರ್ಕಾರ ಇವೆಲ್ಲವನ್ನೂ ಗುರ್ತಿಸಿ 2ಎ ಗುಂಪಿಗೆ ಸೇರಿಸುವಲ್ಲಿ ತಾರತಮ್ಯ ನಡೆಸುತ್ತಿರುವದು ಸಲ್ಲದು. ಶೀಘ್ರವೇ ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದರು.
ಇದೇ ಸಂದರ್ಭ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿ, ಶೇ.90 ರಷ್ಟು ಜನ ವ್ಯವಸಾಯವನ್ನೇ ನಂಬಿರುವ ಪಂಚಮಸಾಲಿ ಸಮುದಾಯ, ಸೌಲಭ್ಯಗಳ ಹೋರಾಟದಲ್ಲಿಯೇ ಜೀವನ ಕಳೆಯುವಂತಾಗಿದೆ. ಒಗ್ಗಟ್ಟಿನ ಮಂತ್ರದೊಂದಿಗೆ ನ್ಯಾಯಯುತವಾಗಿ ದೊರಕಬೇಕಾದ ಹಕ್ಕುಗಳನ್ನು ಪಡೆಯುವಲ್ಲಿ ಮುಂದಾಗಬೇಕೆಂದರು.
ರಬಕವಿ-ಬನಹಟ್ಟಿ ನೂತನ ತಾಲೂಕಿನ ಪಂಚಮಸಾಲಿ ಸಮಾಜದ ಅಧ್ಯಕ್ಷರನ್ನಾಗಿ ಶ್ರೀಶೈಲ ದಲಾಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಸವರಾಜ ದಲಾಲ, ಬಾಬಾಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಈರಪ್ಪ ದಿನ್ನಿಮನಿ, ಸಿದ್ದು ಅಮ್ಮಣಗಿ, ಲಕ್ಷ್ಮಣ ಪಾಟೀಲ, ದಯಾನಂದ ಧರಿಗೊಂಡ, ವಿಜಯಕುಮಾರ ಪೂಜಾರಿ, ಬಸವರಾಜ ಯಾದವಾಡ, ಶೇಖರ ನೀಲಕಂಠ, ಪ್ರಭು ಪಾಲಭಾಂವಿ, ಅಲ್ಲಪ್ಪ ಮುಗಳಖೋಡ, ಹುಲ್ಲೆಪ್ಪ ಹುಕ್ಕೇರಿ ಸೇರಿದಂತೆ ಅನೇಕರಿದ್ದರು.

- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698