ಮನಗೆದ್ದ ವಾಹನ ಚಾಲಕನ ಕಾರ್ಯ ಪ್ರಶಂಸಿಸಿ, ಬೀಳ್ಕೊಟ್ಟ ಅಧಿಕಾರಿಗಳು
ಡಿ. ದರ್ಜೆ ನೌಕರರಿಗೆ ಸಮವಸ್ತ್ರ ವಿತರಿಸಿದ ನಿವೃತ್ತ ಚಾಲಕ ಕೆಂಪಣ್ಣ
(ಸ್ವರೂಪ ಸಂದರ್ಶನ ನ್ಯೂಜ್ : ಮ.ಕೃ.ಮೇಗಾಡಿ)
ಮಧುರಖಂಡಿ : ಇಲ್ಲಿಯ ಸಾಮಾಜಿಕ ವಲಯ ಅರಣ್ಯ ಇಲಾಖೆಯಲ್ಲಿ 34ವರ್ಷಗಳವರೆಗೆ ಅಪಘಾತ ರಹಿತ ವಾಹನ ಚಾಲಕರಾಗಿ ಸೇವೆಗೈದು ಸೇವಾನಿವೃತ್ತರಾದ ಮಧುರಖಂಡಿ ಗ್ರಾಮದ ಕೆಂಪಣ್ಣ ಮುದರೆಡ್ಡಿಯವರಿಗೆ ಜಮಖಂಡಿ ಕಾರ್ಯಾಲಯದಲ್ಲಿ ಹೃದಯಸ್ಪರ್ಷಿ ಸನ್ಮಾನ, ಬೀಳ್ಕೊಡುಗೆಯ ಸರಳ ಕಾರ್ಯಕ್ರಮ ಶನಿವಾರ ನೆರವೇರಿತು. ಕೆಂಪಣ್ಣನವರ ವಾಹನ ಚಾಲನೆಯಲ್ಲಿನ ಉತ್ತಮ ಅನುಭವ, ದಕ್ಷ ಸೇವೆ, ಅಧಿಕಾರಿಗಳೊಂದಿಗೆ ಹೊಂದಿದ್ದ ವಿನಯ ಗುಣ, ಪ್ರೀತಿ ವಿಶ್ವಾಸ, ಉತ್ತಮ ಒಡನಾಟ ಅಧಿಕಾರಿಗಳ ಮಾತುಗಳಿಂದ ವ್ಯಕ್ತವಾಯಿತು. ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಸೇರಿದ ಸಿಬ್ಬಂದಿಯೂ ಕೂಡಾ ಕೆಂಪಣ್ಣನವರ ವ್ಯಕ್ತಿತ್ವ ನೆನಪಿಸಿಕೊಂಡು ಕಂಬನಿಗರೆಯುವಂತೆ ಮಾಡಿತು.
ಜಿಲ್ಲಾ ಅರಣ್ಯಾಧಿಕಾರಿ ಎ.ಪಿ.ಚೌಗಲಾ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತ ಚಾಲಕ ಕೆಂಪಣ್ಣ ಮುದರೆಡ್ಡಿಯವರನ್ನು ಸನ್ಮಾನಿಸಿ ಮಾತನಾಡಿ, ಅಧಿಕಾರಿಗಳು ಹೇಳಿದ ಸಮಯಕ್ಕೆ ಒಮ್ಮೊಮ್ಮೆ ತಡರಾತ್ರಿಯಾದರೂ ಕೂಡಾ ಸರಿಯಾಗಿ ಆಗಮಿಸಿ ಅಷ್ಟೆ ನಿಷ್ಠೆಯಿಂದ ಕೆಲಸ ನಿರ್ವಹಿಸಿದ ಕೆಂಪಣ್ಣ ಮೃದು ಹೃದಯಿಯಾಗಿ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದರು ಎಂದು ಶ್ಲಾಘಿಸಿದರು. ಅವರ ಗುಣ, ಸರಳ ಜೀವನ, ಮೇರು ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸಿದೆ ಎಂದರು.
ಜಮಖಂಡಿ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಆರ್‍ಎಫ್‍ಓ ಡಿ.ಎಲ್.ಕುಲಕರ್ಣಿ, ಬಾದಾಮಿಯ ಪಿ.ಬಿ.ಹಡಲಗೇರಿ, ಬಾಲಕೋಟೆಯ ರಕ್ಕಸಗಿ, ಹುನಗುಂದದ ಸಜ್ಜನ, ಬೀಳಗಿಯ ಪ್ರದೀಪ ರಾಠೋಡ, ಮುಧೋಳದ ಆರ್‍ಎಫ್‍ಓ ಪವನ ಕುರನಿಂಗ ಅತಿಥಿಗಳಾಗಿ ಆಗಮಿಸಿದ್ದರು.
ಮಹಾಲಿಂಗಪುರದ ನಿವೃತ್ತ ಮುಖ್ಯೋಪಾಧ್ಯಾಯರು, ಕೆಂಪಣ್ಣನವರ ಆತ್ಮೀಯ ಸ್ನೇಹಿತರಾದ ಎಸ್.ಎಂ.ಅಣ್ಣಿಗೇರಿಯವರು ಸನ್ಮಾನಿಸಿ ಮಾತನಾಡಿ ಕೆಂಪಣ್ಣನವರೊಂದಿಗೆ ಅಂದಿನ ತಮ್ಮ ಬಾಲ್ಯ ಜೀವನದಲ್ಲಿದ್ದ ಒಡನಾಟ, ಸ್ನೇಹ, ಇಂದಿಗೂ ಉಳಿದುಕೊಂಡು ಬಂದಿದೆ. ಅವರ ವಿನಯ, ತಾಳ್ಮೆ ಗುಣ, ಕರ್ತವ್ಯನಿಷ್ಠೆ ಎಲ್ಲರ ಗಮನ ಸೆಳೆದಿದೆ ಎಂದು ಬಣ್ಣಿಸಿದರು.
ಶಿವಾನಂದ ನಿಂಬಾಳ ಸ್ವಾಗತಿಸಿ, ನಿರೂಪಿಸಿದರು. ಹೂಗಾರ ವಂದಿಸಿದರು.
ಸಮವಸ್ತ್ರ ವಿತರಿಸಿದ ಕೆಂಪಣ್ಣ : ಸೇವೆಯಿಂದ ನಿವೃತ್ತರಾದ ಕೆಂಪಣ್ಣ ಮುದರೆಡ್ಡಿಯವರು ತಮ್ಮ ಇಲಾಖೆಯ ಆತ್ಮೀಯ ಡಿ.ದರ್ಜೆ ಎಲ್ಲ ಪುರುಷ ನೌಕರರಿಗೆ ಅಂಗಿ, ಪ್ಯಾಂಟ್ ಕೊಡುಗೆಯಾಗಿ ನೀಡಿದರೆ, ಮಹಿಳೆಯರಿಗೆ ಸೀರೆ ನೀಡಿದರು. ತಮ್ಮೊಂದಿಗೆ ಅವರ ಒಡನಾಟ, ಕೆಲಸದಲಿ ತೋರುತ್ತಿದ್ದ ನಿಷ್ಠೆಯನ್ನು ಸ್ಮರಿಸಿದರು. ಎಲ್ಲ ಅಧಿಕಾರಿಗಳಿಗೂ ಕೃತಜ್ಞತೆ ಅರ್ಪಿಸಿದರು. ಅಧಿಕಾರಿಯೊಬ್ಬರು ಕೆಂಪಣ್ಣನವರ ಗುಣ ಸ್ವಭಾವ ಮೆಚ್ಚಿ 51ಸಾವಿರ ರೂ.ಗಳನ್ನು ನೀಡಿ ಗೌರವಿಸಿದ್ದು ವಿಶೇಷವೆನಿಸಿತು. ಸರಕಾರಿ ಸೇವೆಯನ್ನು ಮನಃಪೂರ್ವಕವಾಗಿ ಮಾಡಿದ ತೃಪ್ತಿ, ಕೆಂಪಣ್ಣನವರಿಗೆ ಸಾರ್ಥಕವೆನಿಸಿತು.
- FOR ADVERTISEMENT CONTACT -
9902523698

Social Plugin