■ ಸಾಗರದಂಥಾ ಚಿತ್ರರಂಗವನ್ನು ನಂಬಿ ಫುಟ್'ಪಾತ್ ಪಾಲಾದ ಸಾಗರದ ಹುಡುಗ ಗಣಪತಿ ಭಟ್ಟ! ■
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು 
      
ಯೋಗ್ಯತೆ ಇದ್ದೂ ಯೋಗ ಇಲ್ಲವಾದರೆ ಏನಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದ್ದಾನೆ ಈ ಹುಡುಗ. ಈತನ ಹೆಸರು : ಗಣಪತಿ ಭಟ್ಟ! ಸಾಗರದವನು. ಅಲ್ಲಿನ ದೇವಸ್ಥಾನವೊಂದರಲ್ಲಿ ಅರ್ಚಕರಾಗಿರುವವರೊಬ್ಬರ ಮಗ. ಸಿನೆಮಾ ಹುಚ್ಚು ಹತ್ತಿಸಿಕೊಂಡು ಬೆಂಗಳೂರು ಸೇರಿಕೊಂಡ ಗಣಪತಿಗೆ ಆರಂಭದ ದಿನಗಳಲ್ಲಿ ಒಂದಷ್ಟು ಅವಕಾಶಗಳು ಸಿಕ್ಕವು. ಮಲಯಾಳಿ ಮಾಂತ್ರಿಕ ದಿನೇಶ್ ಬಾಬು ಕರೆದು ಅವಕಾಶ ಕೊಟ್ಟರು. ಅವರ 'ಪಾಂಚಾಲಿ', 'ಚಿತ್ರಾ'...ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ ಗಣಪತಿ ತನ್ನ ವೃತ್ತಿ ಬದುಕು ಭದ್ರವಾಯಿತೆಂದೇ ಭಾವಿಸಿದ. ಆದರೆ ಯೋಗ ಕೈಕೊಟ್ಟಿತು. ಗಣಪತಿ ಅನಾಥನಾದ. ಹುಚ್ಚನಾದ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿ ಬೀದಿ ಸುತ್ತ ತೊಡಗಿದ. ಆದರೂ ಗಾಂಧೀನಗರವನ್ನು ಬಿಡಲಿಲ್ಲ. ಅಲ್ಲಿನ ಕಾನಿಷ್ಕಾ ಎದುರಿಗಿರುವ ಭವಾನಿ ಹೋಟೆಲಿನ ಫುಟ್'ಪಾತ್'ನಲ್ಲಿ ಕುಳಿತು ಅವರಿವರು ತಿಂದು ಬಿಸಾಡುವ ಪ್ಲೇಟ್ ಅನ್ನಕ್ಕಾಗಿ ಕಾದ! 'ಅಯ್ಯೋ ಪಾಪ' - ಅಂತಂದುಕೊಂಡ ಗೆಳೆಯರನೇಕರು ಸೇರಿಕೊಂಡು ಗಣಪತಿಯನ್ನು ಉಪ್ಪಾರಪೇಟೆ ಪೊಲೀಸರ ಮೂಲಕ ನಿಮ್ಹಾನ್ಸ್'ಗೆ ಸೇರಿಸಿದ್ದೂ ಆಯಿತು. ಅಲ್ಲೂ ಕಾಟ ತಪ್ಪಲಿಲ್ಲ. ಉಪಟಳ ಹೆಚ್ಚಾದಾಗ ನಿಮ್ಹಾನ್ಸ್ ಸಿಬ್ಬಂದಿಗಳಿಗೂ ಪೇಚಿಗಿಟ್ಟುಕೊಂಡಿತು. ಹೇಗೆ ಹೊರ ಬಂದನೋ ಗೊತ್ತಿಲ್ಲ. ಮತ್ತೆ ವಿಭ್ರಾಂತ ಲೋಕದ ಏಕಾಂತ ಪಯಣ ಆರಂಭವಾಯಿತು! 
     ಮೊನ್ನೆ ಸಾಗರದಲ್ಲಿ 'ಉಪ್ಪಿ ಕಮ್ಯುನಿಕೇಶನ್ಸ್' ಹೆಸರಿನ ಮೊಬೈಲ್ ಶಾಪ್'ವೊಂದನ್ನು ನಡೆಸುತ್ತಿರುವ ಕಿರಿಯ ಮಿತ್ರ ಉದಯ್ ಕೆಲವು ಫೋಟೋಗಳನ್ನು ವಾಟ್ಸಪ್'ನಲ್ಲಿ ಕಳಿಸಿ 'ಇಲ್ಲಿನ ಬಸ್ ಸ್ಟಾಂಡ್'ನಲ್ಲಿ ನಿಮ್ಮ ಗಣಪತಿ ಅಡ್ಡಾಡುತ್ತಿದ್ದಾನೆ' - ಎಂಬ ಒಕ್ಕಣೆ ಸೇರಿಸಿದ್ದ! ಬೇಜಾರಾಯಿತು. ಇಷ್ಟಕ್ಕೂ ನಾನಂದ್ರೆ ಈ ಗಣಪತಿಗೆ ಪ್ರಾಣ! ಎಲ್ಲಿ ಸಿಕ್ಕರೂ ಕೈ ಚಾಚುತ್ತಿದ್ದ. ಹೊಟ್ಟೆಗೆ ಊಟವಿಲ್ಲದೇ ಹಸಿವಿನಿಂದ ವ್ಯಗ್ರನಾಗುತ್ತಿದ್ದ. ಥಿಯೇಟರ್'ಗಳಲ್ಲಿ, ಸ್ಟುಡಿಯೋಗಳಲ್ಲಿ, ಪ್ರೆಸ್ ಮೀಟ್'ಗಳಲ್ಲಿ ನಾನು ಸಿಕ್ಕರೆ ಸಾಕು ಊಟ ಸಿಕ್ಕಷ್ಟೇ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದ! ಅವನ ಹಸಿವಿನ ಗೋಳನ್ನು ನೋಡಲಾಗದೇ ಜೇಬಲ್ಲಿದ್ದಷ್ಟನ್ನೂ ಅವನ ಕೈಗೆ ತುರುಕುತ್ತಿದ್ದೆ. ಬೇರೆ ಯಾವ ಚಟವೂ ಇಲ್ಲದ ಗಣಪತಿ ಆ ದುಡ್ಡನ್ನು ಊಟಕ್ಕಾಗಿ ಮಾತ್ರ ಉಪಯೋಗಿಸುತ್ತಿದ್ದ. ನನ್ನೊಳಗೆ ಏನೋ ಸಂಕಟ. ಗಣಪತಿ ಯಾಕೆ ಹೀಗಾದ? ಹೇಳುವವರು, ಕೇಳುವವರು ಯಾರೂ ಇಲ್ಲವೇ? ಗೊತ್ತಿಲ್ಲ.
     ಒಂದು ಸಾರಿ ಕಂಠೀರವಾ ಸ್ಟುಡಿಯೋದಲ್ಲಿ ನಡೆದ ಯಾವುದೋ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಪತ್ರಕರ್ತರಿಗಾಗಿ ವ್ಯವಸ್ಥೆಗೊಳಿಸಿದ್ದ ಊಟದ ಮನೆಗೆ ನುಗ್ಗಿ ನೇರವಾಗಿ ಅನ್ನ-ಸಾಂಬಾರ್'ಗೆ ಕೈ ಹಾಕಿದ್ದ. ಆಗ ಅಡುಗೆ ಭಟ್ಟರು ಆತನನ್ನು ಅಟ್ಟಿಸಿಕೊಂಡು ಹೋದ ದೃಶ್ಯ ಈಗಲೂ ಕಣ್ಣ ಮುಂದಿದೆ. ಹಸಿವು ತಾಳಲಾರದೆ ಅನ್ನಕ್ಕೆ ಕೈ ಹಾಕಿದ್ದ ಆತನನ್ನು ಕರೆದು ನಾನೇ ಕೈಯಾರೆ ಊಟ ಬಡಿಸಿದ್ದೆ. ಎಲ್ಲರೂ ಅವನನ್ನು ಬಿಟ್ಟು ನನ್ನನ್ನು ನೋಡಿ ನಕ್ಕಿದ್ದರು! 
     ಇನ್ನೂ 35-40ರೊಳಗಿನ ಹರೆಯದ ಹಸಿ ಹಸಿ ಯುವಕ ಹೀಗೆ ಗೊತ್ತು ಗುರಿ ಇಲ್ಲದೇ ಬೆಂಗಳೂರಿನ ಹಾದಿ ಬೀದಿ ಸುತ್ತುತ್ತಿರುವುದನ್ನು ನನ್ನ ಕೈಲಿ ನೋಡಲಾಗುತ್ತಿಲ್ಲ. ನಾನು ಹೊಸಕೆರೆಹಳ್ಳಿಯಲ್ಲಿದ್ದಾಗಲೊಮ್ಮೆ ಮನೆಗೂ ಬಂದಿದ್ದ. 'ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ, ನಿಮ್ಮ ಆಶೀರ್ವಾದ ಬೇಕು' ಎಂದು ಹೇಳಿ ಕಾಲು ಮುಟ್ಟಿ ನಮಸ್ಕರಿಸಿದ್ದ. ನಿಮಾನ್ಸ್'ನಲ್ಲಿ ಅಡ್ಮಿಟ್ ಅದಾಗ ನಾನು ಹೋಗಿ ಆತನ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೆ. ಈಗಲೂ ಅಲ್ಲಿ ಇಲ್ಲಿ ಆಗೀಗ ಸಿಗುತ್ತಾನೆ. ಆಸೆಯಿಂದ ನನ್ನ ಜೇಬು ನೋಡುತ್ತಾನೆ. ಕೊಟ್ಟದ್ದನ್ನು ತಗೋತಾನೆ. ವಿಭ್ರಾ0ತ ಲೋಕದ ಏಕಾಂತ ಪಯಣ ನಿರಂತರವಾಗಿ ಸಾಗಿದೆ. ಈ ಗಣಪತಿಯನ್ನು ಆ ಗಣಪತಿಯೇ ಕಾಪಾಡಬೇಕು...
    
 ◆ ಓಂ ಶ್ರೀ ಗಣೇಶಾಯ ನಮಃ 
■ ಇದನ್ನು ಓದಿದ ಮೇಲೂ ನೀವು 'ಶುಭಂ' ಪುಸ್ತಕವನ್ನು ತರಿಸಿಕೊಳ್ಳದಿದ್ದರೆ ಅದೊಂದು ದೊಡ್ಡ ಕೊರತೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ ಮೃಷ್ಟಾನ್ನ ಭೋಜನ ನಿಮಗಾಗಿ ಕಾದಿದೆ. ನೀವು ಬಯಸಿದರೆ, ನಿಮ್ಮ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಲು ನಾನು ರೆಡಿ. 'ಶುಭಂ' ಪುಸ್ತಕ ಬೇಕಿದ್ದವರು ವಾಟ್ಸಾಪ್ ಮೂಲಕ ನೇರವಾಗಿ ನನ್ನನ್ನು ಸಂಪರ್ಕಿಸಬಹುದು 


- FOR  ADVERTISEMENT CONTACT -
                     9902523698