ಬನಹಟ್ಟಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ದುಸ್ಥಿತಿ.....
ಇದ್ದೂ ಇಲ್ಲದಂತಾಗಿದೆ ಬಸ್ ನಿಲ್ದಾಣದ ಶೌಚಾಲಯ
ತಡೆಗೋಡೆ ನಿರ್ಮಿಸಲು ಒತ್ತಾಯ
ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿ ತಾಲೂಕಿನ ಗರಿ ಪಡೆದಿರುವ ಬನಹಟ್ಟಿ ಬಸ್ ನಿಲ್ದಾಣದ ಶೌಚಾಲಯ ಅಧೋಗತಿ ತಲುಪಿದೆ. ಶೌಚಕ್ಕೆಂದು ತೆರಳಿದರೆ ಗಬ್ಬು ದುರ್ನಾತ ಮೂಗಿಗೆ ರಾಚುತ್ತದೆ. ಹೀಗಾಗಿ ಪ್ರಯಾಣಿಕರು ನಿಲ್ದಾಣದ ಆವರಣದಲ್ಲಿಯೇ ನಿಸರ್ಗದ ಕರೆಗೆ ಓಗೊಡಬೇಕಾಗಿದೆ.
ಲಾಕ್‍ಡೌನ್ ನಂತರ ಈ ಶೌಚಾಲಯ ನಿಯಂತ್ರಣಕ್ಕೆ ಯಾರೋಬ್ಬರೂ ಇಲ್ಲ. ನಿತ್ಯ ಸಂಚರಿಸುವ ಪ್ರಯಾಣಿಕರು ತೀರಾ ದುಸ್ಥಿತಿಯಲ್ಲಿ ಆವರಣದೊಳಗೆ ಹೋಗದಂತೆ ಗಲೀಜಾಗಿ ಇಡೀ ಬಸ್ ನಿಲ್ದಾಣವೇ ಗಬ್ಬೆದ್ದು ಹೋಗಿದೆ.
ದಿನಂಪ್ರತಿ ಸಂಚರಿಸುವ ಜನರು ಅಧಿಕಾರಿಗಳಿಗೆ ಛೀ..ಥೂ.. ಎನ್ನದೇ ಹೋಗುತ್ತಿಲ್ಲ ಹೀಗಿದಾಗ್ಯೂ ಸಂಬಂಧಪಟ್ಟ ಅಧಿಕಾರಿಗಳು ನಮಗೇನು ಸಂಬಂಧವಿಲ್ಲವೆಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ತಡೆಗೋಡೆಯಿಲ್ಲ: ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಸಂಬಂಧ ರಸ್ತೆ ನಿರ್ಮಾಣ ನಡೆಸುವ ನೆಪದಲ್ಲಿ ಬಸ್ ನಿಲ್ದಾಣದ ತಡೆಗೋಡೆಯನ್ನು ಒಡೆದು ಹಾಕಿದ್ದಲ್ಲದೆ ಕಳೆದೊಂದು ತಿಂಗಳಿಂದ ಇನ್ನೂ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ನಿಲ್ದಾಣದೊಳಗೆ ರಾತ್ರಿ ಹೊತ್ತು ನಾಯಿ, ದನ-ಕರು ಹಾಗು ಕತ್ತೆಗಳ ತಾಣವಾಗಿ ದಿನಂಪ್ರತಿ ಗಲೀಜು ಸಾಮಾನ್ಯವಾಗಿದೆ.
ಅಪಘಾತಕ್ಕೆ ಕಾರಣವಾದ ಸಿಸಿ ರಸ್ತೆ: ಈಚೆಗಷ್ಟೇ ನಿಲ್ದಾಣದ ಆವರಣದೊಳಗೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ ಸಿಸಿ ರಸ್ತೆಯಿಂದಾಗಿ ಬೈಕ್ ಮೂಲಕ ಆಗಮಿಸುವ ಜನರು ನಿತ್ಯ ಅಪಘಾತಗಳಿಂದ ಕೈ-ಕಾಲು ಮುರಿದುಕೊಂಡ ಘಟನೆಗಳು ಹಲವಾರು. ಅಲ್ಲದೆ ಪ್ರಯಾಣಿಕರು ಬಸ್‍ನತ್ತ ತೆರಳುವ ಸಂದರ್ಭ ಜಾರಿ ಬೀಳುವದೂ ಸಾಮಾನ್ಯವಾಗಿದೆ. ಇವೆಲ್ಲ ಸಮಸ್ಯೆಗಳಿಗೆ ತಕ್ಷಣವೇ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ಮೂಲಕ ಬಸ್ ನಿಲ್ದಾಣದಲ್ಲಿರುವ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮಾಹೇಶ್ವರಿ ಸಮಾಜದ ಹಿರಿಯರಾದ ಮುರಳಿಧರ ಕಾಬರಾ, ಶ್ಯಾಮ ಲೋಯಾ, ತಾತು ಚಿಂಡಕ ಆಗ್ರಹಿಸಿದ್ದಾರೆ.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ + 91 9902523698

Social Plugin