◆ ಮೌನ ಮಾತಾದಾಗ 'ಮೇಲೊಬ್ಬ ಮಾಯಾವಿ' ಪ್ರತ್ಯಕ್ಷ! 
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು. 

     ಮೌನವನ್ನೇ ಹೊದ್ದು ಸಿನಿಮಾ ಟೀಮುಗಳ ಪತ್ರಿಕಾಗೋಷ್ಠಿಗಳಲ್ಲಿ ಕೂರುತ್ತಿದ್ದ ಹಿಂದಿನ ಬೆಂಚಿನ ಹುಡುಗನೊಬ್ಬನನ್ನು ಯಾವ ಮಾಯೆ ಕರೆಯಿತೋ ಗೊತ್ತಿಲ್ಲ, ಮೌನ ಬಿಟ್ಟಾಕಿ ಮಾತಿಗಿಳಿದು ಬಿಟ್ಟ! ಸೃಷ್ಠಿಯಾದದ್ದೇ : 'ಮೇಲೊಬ್ಬ ಮಾಯಾವಿ'. ಈ ಟೈಟಲ್ ಫಿಕ್ಸ್ ಅದಾಗಲೇ 'ಹುಡುಗ ಅರ್ಧ ಗೆದ್ದು ಬಿಟ್ಟ' ಎಂದು ಬೀಗಿದವನು ನಾನು. ಮೌನದ ಭಾಷೆ ಎಲ್ಲರಿಗೂ ಸಿದ್ದಿಸೋದಿಲ್ಲ, ಅದು ನಾಜೂಕಿನ ತಂತಿ ಸರ್ಕಸ್! ಅದರಲ್ಲೂ ಚಂಡೆ, ಮದ್ದಳೆ, ಡೋಲು, ಗಂಟೆ, ಜಾಗಟೆಗಳನ್ನೇ ಬೇಡುವ ಈ ರಂಗದಲ್ಲಿ ಮೌನ ಮಾತಾಗುವುದು ತುಂಬಾ ಕಷ್ಟ. ಇಂಥಾ ಕಷ್ಟಕರ ಕೆಲಸವನ್ನು ನೀರು ಕುಡಿದಷ್ಟು ಸುಲಭವಾಗಿ ಮಾಡಿ ಮುಂದಿನ ಬೆಂಚಿನಲ್ಲಿ ಬಂದು ಕೂತಿದ್ದಾನೆ ಈ ಸೈಲೆಂಟ್ ಚೆಲುವ! ಈತನ ಹೆಸರು : ನವೀನ ಕೃಷ್ಣ! ಈತ ಎಷ್ಟೊಂದು ಸೈಲೆಂಟ್ ಅಂದ್ರೆ, 'ಈತ ಸಿನಿಮಾ ಪತ್ರಕರ್ತನಾ?' - ಎಂದು ಪ್ರಶ್ನಿಸುವ ವಾಚಾಳಿ ಪತ್ರಕರ್ತರೂ ಇದ್ದಾರೆ! 
     ಹೋಗ್ಲಿ ಬಿಡಿ, ಕನ್ನಡದ ಪ್ರತಿಷ್ಠಿತ ಸಿನಿಮಾ ಪತ್ರಿಕೆಯೊಂದರ ಸಂಪಾದಕನಾಗಿಯೂ ದುಡಿಯುತ್ತಿರುವ ನವೀನ ಕೃಷ್ಣ ನಿರ್ದೇಶಿಸಿರುವ 'ಮೇಲೊಬ್ಬ ಮಾಯಾವಿ' ಸೆನ್ಸಾರ್ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದೆ! ಕೊರೊನಾ ಕಾರಣಕ್ಕೆ ಟೆನ್ಷನ್'ನಲ್ಲಿ ನೊಂದು ಬೆಂದ ಜೀವಕ್ಕೀಗ ಸ್ವಲ್ಪ ಸಮಾಧಾನ. ನವೀನ ಕೃಷ್ಣ ಜಾಣ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಈ ಟೀಮಿನಲ್ಲಿರುವ ಕಲಾವಿದರು! ಸಂಚಾರಿ ವಿಜಯ್ ನಾಯಕ ಮತ್ತು ಅನನ್ಯ ಶೆಟ್ಟಿ ನಾಯಕಿ. ಪತ್ರಕರ್ತ ನವೀನ್ ಕೃಷ್ಣ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಮತ್ತಿಬ್ಬರು ಪತ್ರಕರ್ತರು ನಟಿಸಿದ್ದಾರೆ : ಒಬ್ಬರು ಸಾರ್ವಕಾಲಿಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ, ಮತ್ತೊಬ್ಬರು ಮಾಜಿ ಪತ್ರಕರ್ತ ಎಂ.ಕೆ.ಮಠ! ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದುಕೊಂಡರೆ, ನಾನೇನು ಕಮ್ಮಿ ಎನ್ನುವಂತೆ ಎಂ.ಕೆ.ಮಠ ಕೂಡಾ 'ಗಗ್ಗರ' ತುಳು ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದವರೇ! ಚಂದ್ರಚೂಡ ಈ ಚಿತ್ರಕ್ಕಾಗಿ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ ಎನ್ನುವುದು ಇದರ ಮತ್ತೊಂದು ಪ್ಲಸ್ ಪಾಯಿಂಟ್. 
ಕೃಷ್ಣಮೂರ್ತಿ ಕವತ್ತಾರ್ ಎಂಬ ಸಕಲಕಲಾವಲ್ಲಭ ತಮ್ಮ ಕೊಡುಗೆಯನ್ನು ಸೇರಿಸಿರುತ್ತಾರೆ, ಸಂಶಯವೇ ಬೇಡ! ಪುತ್ತೂರಿನ ಭರತ್ ಮತ್ತು ಕೊಲ್ಯದ ತನ್'ವೀರ್ ಅಮೀನ್ ಜಂಟಿಯಾಗಿ ನಿರ್ಮಿಸಿರುವ 'ಮೇಲೊಬ್ಬ ಮಾಯಾವಿ' ಚಿತ್ರ ಹಲವು ವೈಶಿಷ್ಟ್ಯಗಳ ಸಂಗಮ. ದಿಯಾ, ಲವ್ ಮೊಕ್ಟೈಲ್, ಬೀರಬಲದಂಥಾ ಸಿನಿಮಾಗಳನ್ನು ಅಮೆಜಾನ್'ನಲ್ಲಿ ನೋಡಿ ಮನೆಯಲ್ಲೇ ಕೂತು ಕ್ಲಾಪ್ ಹಾಕುವ ಬದಲು 'ಮೇಲೊಬ್ಬ ಮಾಯಾವಿ' ಚಿತ್ರವನ್ನು ಥಿಯೇಟರ್'ನಲ್ಲಿ ನೋಡಿ ಖುಷಿ ಪಟ್ಟರೆ ಈ ಹುಡುಗರ ಮುಖದಲ್ಲಿ ನಗು ಅರಳೀತು!

      - FOR ADVERTISEMENT CONTACT -
                        - 9902523698 -