ಬನಹಟ್ಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಿದ್ದು ಸವದಿ.

ಅನುದಾನ ಬಗ್ಗೆ ತಿಳಿದು ಮಾತಾಡಲಿ- ಉಮಾಶ್ರೀಗೆ ಟಾಂಗ್ ನೀಡಿದ ಸವದಿ
ರಬಕವಿ-ಬನಹಟ್ಟಿ,ಜೂ.10: 2012 ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿಶೇಷ ಅನುದಾನದಡಿ ಕೈಮಗ್ಗ ನೇಕಾರರಿಗೆ ಸಂಬಂಧ ರಬಕವಿ-ಬನಹಟ್ಟಿ 47 ಲಕ್ಷ ರೂ.ಗಳನ್ನು ವಿಶೇಷ ಅನುದಾನ ನೀಡಿತ್ತು. ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷ 5 ವರ್ಷ ಅವಧಿ ಪೂರ್ತಿಗೊಳಿಸಿದರೂ ಈ ಹಣ ನಿರ್ಲಕ್ಷ್ಯಗೊಳಿಸಿ ನೇಕಾರರಿಗೆ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯವಹಿಸಿತ್ತು. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಪಟ್ಟಣದ ಕೈಮಗ್ಗ ಹಾಗು ವಿದ್ಯುತ್ ಮಗ್ಗಗಳ ಸುಮಾರು 25 ಸಾವಿರ ಕುಟುಂಬಗಳಿಗೆ ಅಹಾರ ಕಿಟ್ ವಿತರಣೆಯಲ್ಲಿ ರಾಜಕೀಯ ದ್ವೇಷ ಬೆಳೆಸುತ್ತಿರುವ ಮಾಜಿ ಸಚಿವೆ ಉಮಾಶ್ರೀಯವರ ಕಾರ್ಯ ಶೋಭೆ ತರುವಂಥದ್ದಲ್ಲವೆಂದು ತೇರದಾಳ ಶಾಸಕ ಸಿದ್ದು ಸವದಿ ಉಮಾಶ್ರೀ ವಿರುದ್ಧ ಟಾಂಗ್ ನೀಡಿದರು.
ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 47 ಲಕ್ಷ ರೂ. ಅನುದಾನ ಬಂದಿತ್ತು. ಬ್ಯಾಂಕ್‍ನಲ್ಲಿ ಠೇವು ಹಣವನ್ನಾಗಿ ಇಟ್ಟಿದ್ದಾರೆಂದು ಹೇಳುತ್ತಾರೆ. ಉಳಿತಾಯ ಖಾತೆಯಲ್ಲಿದೆ. ಕಳೆದೆರಡು ವರ್ಷಗಳ ಹಿಂದೆ ಈ ಹಣವನ್ನು ನೇಕಾರರ ಡಚ್ ಕಾಲನಿ ಸಾಲಕ್ಕಾಗಿ ಮೀಸಲಿಡಬೇಕೆಂಬ ಚಿಂತನೆಯಲ್ಲಿದ್ದಾಗ, ಸುಯೋಗದೊಂದಿಗೆ ಸರ್ಕಾರವೇ ಇಡೀ ಸಾಲಮನ್ನಾ ಮಾಡಿತ್ತು. ಕೈಮಗ್ಗ ನೇಕಾರರಿಗೆ ಸಲಕರಣೆ ಒದಗಿಸಲು ಅವಕಾಶವಿಲ್ಲ. ಬದಲಾಗಿ ಸೋಲಾರ ಸೇರಿದಂತೆ ಇತರೆ ವ್ಯವಸ್ಥೆ ಮಾಡಬೇಕಿತ್ತು. 
ಕೊರೊನಾ ವೈರಸ್‍ನ ಸಂಕಷ್ಟಕ್ಕೀಡಾದ ಸಾವಿರಾರು ನೇಕಾರರಿಗೆ ಸುಮಾರು 1.47 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರಾದ್ಯಂತ ವಿತರಣೆ ಮಾಡಲಾಗಿದೆ. ಬದುಕು ನಿರ್ವಹಣೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಲಾಗಿದೆ. ಈ ಸಂದರ್ಭ ನೀಚ ರಾಜಕಾರಣ ಮಾಡುವದು ಸರಿಯಲ್ಲವೆಂದು ಉಮಾಶ್ರೀ ವಿರುದ್ಧ ಹರಿಹಾಯ್ದರು.
ಪಾರದರ್ಶಕತೆಯಿಲ್ಲದ್ದನ್ನು ಸಾಬೀತುಪಡಿಸಲಿ: ಎಲ್ಲ ಕೂಲಿ ನೇಕಾರರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ರಾಜಕೀಯವಾಗಿ ನನ್ನನ್ನು ವಿರೋಧಿಸಿ ಬದಲಾಗಿ ನೇಕಾರರಿಂದಲೇ ಜಯಗಳಿಸಿ, ಬಡನೇಕಾರರ ಮೇಲೆ ವಿರೋಧ ವ್ಯಕ್ತಪಡಿಸುವದು ಶೋಭೆ ತರುವಂಥದ್ದಲ್ಲ.
ತಿದ್ದುಪಡೆ ಪ್ರಕಟಣೆ: ಈಗಾಗಲೇ ರಬಕವಿ-ಬನಹಟ್ಟಿ ನಗರಸಭೆಗೆ ಸಂಬಂಧ 47 ಲಕ್ಷ ರೂ.ಗಳ ಆಹಾರ ಕಿಟ್ ನೇಕಾರರಿಗೆ ಒದಗಿಸುವ ಸಂಬಂಧ ಟೆಂಡರ್‍ನ ಕೊನೆಯ ದಿನಾಂಕ ಬುಧವಾರ ಕೊನೆಯದಾಗಿತ್ತು. ಸದ್ಯ ಅದನ್ನು ತಿದ್ದುಪಡೆ ಪ್ರಕಟಣೆಯನ್ನಾಗಿ ದಿನಾಂಕ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.


-FOR ADVERTISEMENT CONTACT -
                9902523698