ಉದ್ಘಾಟನೆಗೊಂಡರೂ ಹಸ್ತಾಂತರಗೊಳ್ಳದ `ನೇಕಾರ ಭವನ’
ರಬಕವಿ-ಬನಹಟ್ಟಿ,ಜೂ4: ಕಳೆದ 2017-18 ರಲ್ಲಿ ಅಂದಿನ ಸಚಿವೆ ಹಾಗು ತೇರದಾಳ ಕ್ಷೇತ್ರದ ಶಾಸಕಿಯಾಗಿದ್ದ ಉಮಾಶ್ರೀ ರಬಕವಿ-ಬನಹಟ್ಟಿ ತಾಲೂಕಿಗೆ ಸಂಬಂಧ ನೇಕಾರ ಭವನವನ್ನು ಉದ್ಘಾಟನೆಗೊಳಿಸಿದ್ದರೂ ಇಲ್ಲಿಯವರೆಗೂ ಸ್ಥಳೀಯ ನಗರಸಭೆಗೆ ಹಸ್ತಾಂತರಗೊಳ್ಳದೆ ನೇಕಾರರ ನಿರ್ವಹಣೆಗೆ ಅವಕಾಶವಾಗದಿರುವದು ವಿಪರ್ಯಾಸದ ಸಂಗತಿ.
ಪಟ್ಟಣದ ಲಕ್ಷ್ಮೀ ನಗರದಲ್ಲಿರುವ ನೇಕಾರ ಭವನ ಉದ್ಘಾಟನೆಗೊಂಡು ಎರಡು ವರ್ಷಗಳೇ ಕಳೆದಿವೆ. ಈ ಕಟ್ಟಡವನ್ನು 50 ಲಕ್ಷ ರೂ.ಗಳ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಡಿ ನಿರ್ಮಾಣಗೊಂಡಿದ್ದರೂ ಇಲ್ಲಿಯವರೆಗೂ ರಬಕವಿ-ಬನಹಟ್ಟಿ ನಗರಸಭೆ ಹಸ್ತಾಂತರಗೊಳಿಸಿಲ್ಲ.
ಸಾವಿರಾರು ನೇಕಾರರನ್ನು ಹೊಂದಿರುವ ಸ್ಥಳೀಯ ನೇಕಾರರಿಗೆ ಈ ಭವನ ಮಹತ್ವ ಪಡೆದಿದ್ದು, ಇದರ ನಿರ್ವಹಣೆಯಾಗದಿರುವದರಿಂದ ನೇಕಾರರಿಗೆ ತೀವ್ರ ಸಮಸ್ಯೆ ಎದುರಾಗಿದೆ.
ಅನೈತಿಕ ಚಟುವಟಿಕೆ ತಾಣ: ಸಂಪೂರ್ಣ ಹೊರವಲಯದಲ್ಲಿರುವ ಈ ಕಟ್ಟಡ ನಿರ್ವಹಣೆಗೆ ಯಾರೂ ಇಲ್ಲ. ಖಾಸಗಿ ವ್ಯಕ್ತಿಯೋರ್ವ ಕಾವಲು ಕಾಯುತ್ತಿದ್ದರೂ ಅಷ್ಟಕಷ್ಟೆ. ದಿನಂಪ್ರತಿ ಕುಡುಕರು ಹಾಗು ಪುಂಡ-ಪೋಕರಿಗಳಿಗೆ ಹೇಳಿ ಮಾಡಿಸಿದ ಜಾಗವಾಗಿದೆ.
ಕಟ್ಟಡ ನಿರ್ವಹಣೆಯಾಗದ ಕಾರಣ ಸಂಪೂರ್ಣ ಅನೈತಿಕ ಚಟುವಟಿಕೆ ತಾಣವಾಗಿದೆ. ಕೂಡಲೇ ಸ್ಥಳೀಯ ನಗರಸಭೆಗೆ ಕಟ್ಟಡ ಹಸ್ತಾಂತರಗೊಳಿಸಿ ಈ ಭಾಗದ ನೇಕಾರರ ಪ್ರಮುಖ ಸಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಜವಳಿ ಕ್ಷೇತ್ರದ ಚಿಂತನ-ಮಂಥನ ನಡೆಯುವ ವೇದಿಕೆಯನ್ನಾಗಿಸಬೇಕೆಂಬುದು ಈ ಭಾಗದ ನೇಕಾರರ ಒಕ್ಕೊರಲಿನ ಒತ್ತಾಯವಾಗಿದೆ.
-FOR ADVERTISEMENT CONTACT -
9902523698

Social Plugin