ರಂಗಭೂಮಿಗೆ ರಂಗೇರಿಸಿದ ಬಿ.ವಿ.ಕಾರಂತರ ರಂಗು ಕಳೆದುಕೊಂಡ ಬಡತನದ ಆ ಕೊನೆಯ ದಿನಗಳು 
ಅಪರೂಪದಲ್ಲೊಂದು ಅಪರೂಪದ ಲೇಖನ ●
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ ಕಾಸರಗೋಡು 
      ಇದು ರಂಗಭೂಮಿ ದಿಗ್ಗಜ ಬಿ.ವಿ.ಕಾರಂತರಿಗೆ ಸಂಬಂಧಿಸಿದ ಲೇಖನ. ಅವರ ಕೊನೆಯ ದಿನಗಳ ಮಾನಸಿಕ ಮತ್ತು ಆರ್ಥಿಕ ತೊಂದರೆಗಳ ವಿವರ ಇಲ್ಲಿದೆ. ಈ ಲೇಖನವನ್ನು ನಾನು ಬರೆದದ್ದು 18 ವರ್ಷಗಳ ಹಿಂದೆ. 2002ನೇ ಇಸವಿಯ ಒಂದು ದಿನ ನಾನು ಅಚಾನಕವಾಗಿ ಗಿರಿನಗರದ ಅವರ ಮನೆಗೆ ಹೋಗಿದ್ದೆ. ಅದು ಕಾರಂತರ ಕೊನೆಯ ದಿನಗಳು. ಪ್ರಾಯಶಃ ನಾನು ಭೇಟಿಕೊಟ್ಟದ್ದೇ ಕೊನೆ, ನಂತರದ ದಿನಗಳಲ್ಲಿ ಮತ್ತೊಬ್ಬ ಪತ್ರಕರ್ತ ಅವರನ್ನು ಭೇಟಿಯಾಗಿ ಸಂದರ್ಶಿಸಿದ ದಾಖಲೆ ಇಲ್ಲ.
     ಮೂಲ ಲೇಖನ ತುಂಬಾ ದೀರ್ಘವಾಗಿದೆ. ಅದರ ಆಶಯಕ್ಕೆ ಭಂಗ ಬಾರದ ರೀತಿಯಲ್ಲಿ ಸಾಕಷ್ಟು ಎಡಿಟ್ ಮಾಡಿ ಇಲ್ಲಿ ರಿಕ್ರಿಯೆಟ್ ಮಾಡಲು ಪ್ರಯತ್ನಿಸಿದ್ದೇನೆ. ತಾಳ್ಮೆಯಿಂದ ಓದಿ. ಒಂದು ಅಪರೂಪದ ಲೇಖನ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಪೀಠಿಕೆ. ಇನ್ನು ನೀವುಂಟು, ಲೇಖನವುಂಟು...
     ◆ ಒಂದಿಡೀ ಜನ್ಮಕ್ಕಾಗುವಷ್ಟು ದುಡಿದು ಇನ್ನು ಸಾಧ್ಯವಿಲ್ಲ ಎನ್ನುವಂಥಾ ಸಂದರ್ಭದಲ್ಲಿ ಉಸ್ಸಪ್ಪಾ ಅಂತ ಉದ್ದಕ್ಕೆ ಕಾಲು ಚಾಚಿ ಆರಾಮ ಕುರ್ಚಿಯಲ್ಲಿ ಗುಬ್ಬಚ್ಚಿಯಂತೆ ಕೂತು ಶೂನ್ಯವನ್ನು ದಿಟ್ಟಿಸುತ್ತಿರುವ ಈ ವ್ಯಕ್ತಿ ಬೇರೆ ಯಾರೂ ಅಲ್ಲ, ರಂಗಚೇತನ ಬಿ.ವಿ.ಕಾರಂತರು. ಎಡಗೈ ಮಣಿಕಟ್ಟಿನಲ್ಲಿ ಹಳೆಯ ಹೆಚ್.ಎಂ.ಟಿ.ವಾಚು, ಜೇಬಿನಲ್ಲಿ ಅಷ್ಟೇ ಹಳೆಯದಾದ ಓಬೀರಾಯನ ಕಾಲದ ಪೆನ್ನು! ವಯಸ್ಸು ಮಾಗಿದ್ದರೂ ಪೊದೆ ತಲೆಗೂದಲ ಸೊಗಸು ಮತ್ತು ಗಡ್ಡದ ಆಕರ್ಷಣೆ ಮಾತ್ರ ಕಿಂಚಿತ್ತೂ ಕಮ್ಮಿಯಾಗಿರಲಿಲ್ಲ. ಕಣ್ಣಳತೆಗೂ ಮೀರಿದ ಕನ್ನಡಕದ ಫ್ರೇಮು ಮತ್ತು ಆ ಫ್ರೇಮಿನಿಂದ ಹೊರಬರಲು ತವಕಿಸುತ್ತಿರುವ ದಣಿದ ಮಸುಕು ಕಣ್ಣುಗಳು. ಅವರು ಕಾಯಿಲೆಯಿಂದ ತತ್ತರಿಸಿ ಹೋಗಿದ್ದರು.
◆ ಇಷ್ಟಕ್ಕೂ ಕಾರಂತರನ್ನು ಕಾಡುತ್ತಿರುವ ಕಾಯಿಲೆಯಾದರೂ ಏನು? ಸಿಂಪಲ್ಲಾಗಿ ಹೇಳಬೇಕೆಂದರೆ : ಕ್ಯಾನ್ಸರ್. ಈಗಾಗಲೇ ನಾಲ್ಕು ಆಪರೇಷನ್'ಗಳಾಗಿವೆ. ಇನ್ನೊಂದು ಆಪರೇಷನ್'ಗೆ ದೇಹ ಕೇಳದು. ಹೀಗಾಗಿ ಅವರ ಪತ್ನಿ ಶ್ರೀಮತಿ ಪ್ರೇಮಾ ಕಾರಂತರು ಹೈರಾಣಾಗಿದ್ದಾರೆ. ಎಲ್ಲಕ್ಕಿಂತಲೂ ಕಾಡುವ ಹಿಂಸೆಯೆಂದರೆ ಶೂನ್ಯ ಸಂಪಾದನೆಯ ಪಡಿಪಾಟಲು! ಇಬ್ಬರಿಗೂ ಸಂಪಾದನೆಯೇ ಇಲ್ಲದ ದಿನಗಳು. ಯಾರು, ಎಷ್ಟು ಅಂತ ಕೊಡುತ್ತಾರೆ? ದೈನಂದಿನ ಮನೆ ಖರ್ಚು ಇರುತ್ತಲ್ವಾ? ಜತೆಗೆ ಆಸ್ಪತ್ರೆ, ಔಷಧಿ ಖರ್ಚುಗಳು! ದೇಶ ತುಂಬಾ ಹೆಸರು ಮಾಡಿದ ಈ ದಂಪತಿಗಳು ಜೇಬು ತುಂಬಾ ದುಡ್ಡು ಮಾಡಲು ಮರೆತು ಅಕ್ಷರಶಃ ಬಡವರಾಗಿಯೇ ಬದುಕು ದೂಡುತ್ತಿದ್ದರು! ಆ ಕಾಲದಲ್ಲಿ ಹದಿನಾರು ಲಕ್ಷ ಕೊಟ್ಟು ಖರೀದಿಸಿದ ಈ ಮನೆಯನ್ನು ಮಾರುವುದೊಂದೇ ಉಳಿದಿರುವ ದಾರಿ. ಆದರೆ ಆ ಮನೆ ಕಾರಂತರ ಜೀವ! 
◆ ವಿಷಯ ಇದಲ್ಲ. ಕಾಯಿಲೆ ಬಿದ್ದ ಈ ರಂಗ ದಿಗ್ಗಜನನ್ನು ನೋಡಲು ಮತ್ತು ಆರೋಗ್ಯ ವಿಚಾರಿಸಲು ಮತ್ತೆ ನಾಲ್ಕು ಮಂದಿ ದಿಗ್ಗಜರು ಆ ಮನೆಯನ್ನು ಪ್ರವೇಶಿಸಿದ್ದೇ ದೊಡ್ಡ ಸುದ್ದಿ! ಹೌದು, ಅಂದು ಕಾರಂತರ ಮನೆಗೆ ಏಕಕಾಲದಲ್ಲಿ ಬಂದವರೆಂದರೆ : ವರನಟ ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ರಾಜ್ ಸೋದರ ವರದರಾಜ್ ಮತ್ತು ಜಿ.ವಿ.ಅಯ್ಯರ್! ಕಾರಂತ ದಂಪತಿಗಳೂ ಸೇರಿದಂತೆ ಒಟ್ಟು ಆರು ಮಂದಿ ದಿಗ್ಗಜರ ಅಪರೂಪದ ಸಮಾಗಮ! ಪಾವನವಾಯಿತು ಕಾರಂತರ ನಿವಾಸ. ಪ್ರೇಮಾ ಕಾರಂತರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ಬಿ.ವಿ.ಕಾರಂತರು ಕೂಡಾ ತಮ್ಮ ಕಾಯಿಲೆಯನ್ನು ತಾತ್ಕಾಲಿಕವಾಗಿ ಮರೆತೇ ಬಿಟ್ಟರು! ಎದ್ದು ಕೂರಲಾಗದ ಪರಿಸ್ಥಿತಿಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ಕಾರಂತರು ರಾಜಕುಮಾರ್ ಮನೆ ಪ್ರವೇಶಿಸಿದೊಡನೆಯೇ ಎದ್ದು ನಿಂತುಬಿಟ್ಟರು! ಶಾಲು ಹೊದ್ದು ರಾಜ್'ರನ್ನು ಬಿಗಿದಪ್ಪಿಕೊಂಡಾಗ ಇಬ್ಬರ ಕಣ್ಣಲ್ಲೂ ನೀರು.
◆ ಐದು ನಿಮಿಷಗಳ ಕಾಲ ಮೂಕ ಸಂವಾದ! ನಂತರ ಕಾರಂತರು ರಾಜ್ ಜತೆ ಮಾತಿಗಿಳಿದರು. ನಾಟಕ, ಗುಬ್ಬಿ ಕಂಪೆನಿ, ಹೊಟ್ಟೆಪಾಡು, ಅಭಿನಯ, ರಿಹರ್ಸಲ್, ಚಪ್ಪಾಳೆ, ಕಲೆಕ್ಷನ್...ಒಂದಾ ಎರಡಾ? ಕಪ್ಪು ಬಿಳುಪು ಫ್ಲ್ಯಾಶ್ ಬ್ಯಾಕ್'ನಲ್ಲಿ ಅದಿನ್ನೆಂಥಾ ರಂಗು ರಂಗಿನ ಕಥೆಗಳು! ನೆನಪಾಗಿ ಕಾಡಿತು, ಹೃದಯ ಹಾಡಿತು. ಒಳಮನೆಯಿಂದ ನೆಲಮನೆಯ ಲೈಬ್ರರಿಗೆ ಬಂದಾಗ ಮತ್ತೊಬ್ಬ ದಿಗ್ಗಜನ ಎಂಟ್ರಿ! ಅವರು ಬೇರೆ ಯಾರೂ ಅಲ್ಲ, ಜಿ.ವಿ.ಅಯ್ಯರ್. ಎಲ್ಲವೂ ಕಾಕತಾಳೀಯ. ನಾಟಕಗಳ ಪರಿಕರಗಳನ್ನಿಟ್ಟಿರುವ ಪುಟ್ಟ ಮ್ಯೂಜಿಯಮ್'ನಂಥಾ ಹಾಲ್ ಅದು. ಹತ್ತಾರು ಬಗೆಯ ವಾದ್ಯಗಳನ್ನು ಕಂಡು ಪುಳಕಿತರಾದರು. ಜಾಗಟೆ, ತಾಳ, ತುತ್ತೂರಿ, ಕೊಂಬು, ಕಹಳೆ, ತಬಲ, ಡೋಲಕಿ, ಢಂಗೂರ...ಒಂದಾ ಎರಡಾ? ರಾಜ್ ಅವರಂತೂ ಪುಟ್ಟ ಮಗುವಿನಂತೆ ಕುಣಿದಾಡಿ ಬಿಟ್ಟರು!
◆ ಅಲ್ಲೇ ಮೂಲೆಯಲ್ಲಿ ಜೋಡಿಸಿದ್ದ ಬೃಹತ್ ಗಾತ್ರದ ತಾಳವಾದ್ಯವನ್ನೆತ್ತಿ ರಾಜ್ ಅವರು ಜೋರಾಗಿ ಬಡಿದರು. ಅದರ ಸದ್ದಿಗೆ ಪಾರ್ವತಮ್ಮ ಬೆಚ್ಚಿಬಿದ್ದು ತಮ್ಮ ಪತಿರಾಯನ ಕಡೆ ಒಂದು ತುಂಟ ನೋಟ ಬೀರಿದರು! ಮತ್ತೆ ಗುಬ್ಬಿ ಕಂಪೆನಿಯ ಫ್ಲ್ಯಾಶ್ ಬ್ಯಾಕ್. ಬಲರಾಮ ಪಾತ್ರ ಮಾಡಿದ್ದು, 'ಬೇಡರ ಕಣ್ಣಪ್ಪ'ದಲ್ಲಿ ಅವಕಾಶ ಸಿಕ್ಕಿದ್ದು, ಟೆಂಟೊಂದರಲ್ಲಿ ನಾಟಕವಾಡುತ್ತಿದ್ದಾಗ ಮಳೆರಾಯ ಆರ್ಭಟಿಸಿದ್ದು, ಜನ ದಿಕ್ಕಾಪಾಲಾಗಿ ಓಡಿದ್ದು, ಕಲೆಕ್ಷನ್ ಡಲ್ಲಾದದ್ದು, ಹೊಟ್ಟೆ ಹಸಿದದ್ದು...ಎಲ್ಲೆ ಮೀರಿದ ವಾಗ್ಝರಿ. ವಯಸ್ಸು ಮರೆತ ಚರ್ಚೆ, ನಗು, ಕೀಟಲೆ...
◆ ರಾಜಕುಮಾರ್ ಮಂಡಿ ನೋವನ್ನು ಮರೆತರು, ಕಾರಂತರು ಕ್ಯಾನ್ಸರನ್ನು ಮರೆತರು! ಈ ಇಬ್ಬರ ಉತ್ಸಾಹವನ್ನು ನೋಡಿ ಉಳಿದವರೂ ಮೈ ಮರೆತರು! ಎಲ್ಲರಿಗೂ ಹಿರಿಯರಾದ ಅಯ್ಯರ್ ಕೂಡಾ ತಮ್ಮ ವಯಸ್ಸನ್ನು ಮರೆತು ಸಂಭ್ರಮಿಸಿದ್ದು ಅಂದಿನ ಹೈಲೈಟ್ - ಇವೆಲ್ಲವನ್ನೂ ಹೇಳುತ್ತಾ ಹೇಳುತ್ತಾ ಪ್ರೇಮಾ ಕಾರಂತರು ಕೂಡಾ ತನ್ಮಯರಾದರು. ಆರಾಮ ಕುರ್ಚಿಯಲ್ಲಿ ಕೂತಿದ್ದ ಕಾರಂತರು ಒಮ್ಮೆ ಜೋರಾಗಿ ತೇಗಿದರು. ಆದರೆ ಅದು ಹೊಟ್ಟೆ ತುಂಬಿದ ತೇಗಲ್ಲ. ಊಟ ಮಾಡಿ ಎಷ್ಟು ದಿನಗಳಾದುವೋ? ತಕ್ಷಣ ಪ್ರೇಮಾ ಅವರು ಪುಟ್ಟ ಸ್ಪೂನಿನಲ್ಲಿ ಶುಂಠಿ ಬೆಲ್ಲದ ಪಾಕವನ್ನು ತೆಗೆದು ತಮ್ಮ ಪತಿಯ ನಾಲಗೆಗೆ ತಾಕಿಸಿದರು! ಹಸಿರು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿಟ್ಟ ಕುದಿಸಿದ ನೀರನ್ನು ಗಂಟಲಿಗಿಳಿಸಿದರು...
◆ ನಾನು ಹೊರಡುವ ಹೊತ್ತಾಗಿತ್ತು. ಮೆಲ್ಲನೆ ಬಾಗಿ ಕಾರಂತರ ಪಾದ ಮುಟ್ಟಿ ನಮಿಸಿದೆ. ಅವರು ಮೃದುವಾಗಿ ತಲೆ ಸವರಿದರು. 'ಹೋಗಿ ಬರುತ್ತೇನೆ ಸಾರ್. ಇನ್ನೊಮ್ಮೆ ಬಂದಾಗ ತುಂಬಾ ಮಾತಾಡೋಣ' ಅಂದೆ. ಅವರು ಕ್ಷೀಣವಾಗಿ ನಕ್ಕರು. ಪ್ರೇಮಾ ಕಾರಂತರ ಕಣ್ಣು ಕೊಳವಾಗಿತ್ತು. ಒಳಕೋಣೆಯಿಂದ ಹೊರಬಂದು ಒಂದು ಕ್ಷಣ ಹಿಂದಿರುಗಿ ನೋಡಿದಾಗ ಕಾರಂತರ ದೊಡ್ಡ ಫ್ರೇಮಿನ ಕನ್ನಡಕದೊಳಗಿಂದ ಕಣ್ಣೀರು ಜಿನುಗುವುದು ಕಾಣಿಸಿತು...
◆ ಇದೆಲ್ಲಾ ಆಗಿ 18 ವರ್ಷಗಳೇ ಕಳೆದಿವೆ. ಬಿ.ವಿ.ಕಾರಂತರಿಲ್ಲ, ಪ್ರೇಮಾ ಕಾರಂತರಿಲ್ಲ, ರಾಜಕುಮಾರ್ ಇಲ್ಲ, ಪಾರ್ವತಮ್ಮ ಇಲ್ಲ, ವರದಪ್ಪಣ್ಣ ಇಲ್ಲ, ಜಿ.ವಿ.ಅಯ್ಯರ್ ಕೂಡಾ ಇಲ್ಲ...ಈ ಎಲ್ಲಾ ಇಲ್ಲಗಳ ನಡುವೆಯೇ ನಾನು ಹುಡುಕುತ್ತಲೇ ಇದ್ದೇನೆ, ಬರೆಯುತ್ತಲೇ ಇದ್ದೇನೆ... 
■ ಇದನ್ನು ಓದಿದ ನಂತರವೂ ನೀವು 'ಶುಭಂ' ಪುಸ್ತಕವನ್ನು ತರಿಸಿಕೊಳ್ಳದಿದ್ದರೆ ಅದೊಂದು ದೊಡ್ಡ ಕೊರತೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ ಮೃಷ್ಟಾನ್ನ ಭೋಜನ ನಿಮಗಾಗಿ ಕಾದಿದೆ. 
  ◆ ಬಿ.ವಿ.ಕಾರಂತ Pic : ಉದಯ ಜಾದೂಗಾರ


- FOR ADVERTISEMENT CONTACT -
                 9902523698