ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನೂರಾರು ಮನೆಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮುಕ್ತಾಯ ಹಂತದಲ್ಲಿರುವದು.
ಸಾಲಕ್ಕೆ ತಳ್ಳಿದ ಪ್ರಧಾನಮಂತ್ರಿ ಆವಾಸ್ ಯೋಜನೆ
ರಬಕವಿ-ಬನಹಟ್ಟಿ,ಜೂ22: ದೇಶದ ಬಡಕುಟುಂಬಗಳಿಗೆ ಕೇಂದ್ರದ ಮಹತ್ತರ ಯೋಜನೆಯಲ್ಲಿ ಪ್ರಮುಖವಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಎಲ್ಲರಿಗೂ ಸೂರು ದೊರಕಬೇಕೆಂಬ ಉದ್ಧೇಶ ಸ್ವಾಗತಾರ್ಹ, ಆದರೆ ರಬಕವಿ-ಬನಹಟ್ಟಿ ತಾಲೂಕಿನ ನೂರಾರು ಬಡಕುಟುಂಬಗಳು ಇದೇ ಯೋಜನೆಯನ್ನು ನಂಬಿ ಸದ್ಯ ಸಾಲದ ಸುಳಿಯಲ್ಲಿ ಸಿಲುಕಿ ಬದುಕಿನ ಬಂಡೆ ಸಾಗಿಸಲು ತೀವ್ರ ಜರ್ಜಿತಗೊಂಡಿದ್ದು ಶೋಚನೀಯ ಸಂಗತಿ.
2018 ರಲ್ಲಿ ಸ್ಥಳೀಯ ರಬಕವಿ-ಬನಹಟ್ಟಿ ನಗರಸಭೆ ಅಧೀನದಿಂದ ಕೇಂದ್ರದ ಯೋಜನೆಯಾಗಿರುವ ಇದಕ್ಕೆ ಸಂಬಂಧ ಸಾವಿರಕ್ಕೂ ಅಧಿಕ ಕುಟುಂಬಗಳು ಅರ್ಹ ಫಲಾನುಭವಿಗಳು ಮನೆಗಳ ನಿರ್ಮಾಣಕ್ಕೆ ತಯಾರಾಗಿದ್ದರು. ತಾಂತ್ರಿಕವಾಗಿ ಎಲ್ಲ ಅರ್ಹತೆಗಳನ್ನು ಪಡೆದು 2.70 ಲಕ್ಷ ರೂ.ಗಳ ಸಹಾಯ ಧನಕ್ಕೆ ಸಂಬಂಧ ರಾಜ್ಯ ಹಾಗು ಕೇಂದ್ರದ ಅಧೀನದಲ್ಲಿ ಕಂತಿನ ಮೊದಲನೇಯ ಪಾವತಿಯಾಗಿ 2018 ರಲ್ಲಿ ಎಲ್ಲರಿಗೂ ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ದೊರಕಿತ್ತು. ಮನೆ ಕಟ್ಟಡದ ಕಾರ್ಯ ಮುಕ್ತಾಯಗೊಂಡಂತೆ ಬಿಡುಗಡೆಗೊಳ್ಳಬೇಕಿದ್ದ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಇನ್ನುಳಿದ 1.5 ಲಕ್ಷ ರೂ. ಕಳೆದೆರಡು ವರ್ಷಗಳಿಂದ ಬಡಕುಟುಂಬಗಳಿಗೆ ದೊರಕದ ಕಾರಣ ಎಲ್ಲೆಂದರಲ್ಲಿ ಸಾಲ ಮಾಡಿರುವ ಬಡನೇಕಾರ ಕುಟುಂಬಗಳು ಸದ್ಯ ಸಾಲದ ಬಡ್ಡಿಯನ್ನೂ ಕಟ್ಟಲು ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ದುಪ್ಪಟ್ಟು ಖರ್ಚು: ಪ್ರಧಾನಮಂತ್ರಿ ಆವಾಸ್ ಯೋಜನೆಯು ಬಡಕುಟುಂಬಗಳಿಗೆ ವರವಾಗಬೇಕಿತ್ತು ಬದಲಾಗಿ ಮಾರಕವಾಗಿದೆ. ಮೊದಲಿದ್ದ ಅಷ್ಟೋ ಇಷ್ಟೋ ಗಟ್ಟಿ ಮನೆಯನ್ನು ನೆಲಸಮಗೊಳಿಸಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಜ್ಜಾಗಿದ್ದರು. ಕೈಯಲ್ಲಿದ್ದ ಹಣವನ್ನೆಲ್ಲಾ ಖಾಲಿ ಮಾಡಿ ಖಾಸಗಿ ಸಾಲವನ್ನೂ ಮಾಡಿ ಮನೆ ಮುಕ್ತಾಯಗೊಳ್ಳಲು ಆರ್ಥಿಕ ಸಮಸ್ಯೆ ಒಂದೆಡೆಯಾದರೆ ಹಣ ಬಿಡುಗಡೆಗೊಳ್ಳದ ಕಾರಣ ಮನೆ ಅಂತಿಮಗೊಂಡಿಲ್ಲ. ಸದ್ಯ ಬಾಡಿಗೆ ಮನೆಯಲ್ಲಿ ವಾಸವಾಗುತ್ತಿರುವ ಕುಟುಂಬಗಳಿಗೆ ಎರಡು ವರ್ಷಗಳಿಂದ ಬಾಡಿಗೆ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ.
ಹೋರಾಟದ ಎಚ್ಚರಿಕೆ: ತೀವ್ರ ಹತಾಶೆಯಲ್ಲಿರುವ ಫಲಾನುಭವಿಗಳು ಸದ್ಯ ಕೇಂದ್ರ ಹಾಗು ಸ್ಥಳೀಯ ನಗರಸಭೆ ವಿರುದ್ಧ ಹೋರಾಟ ನಡೆಸುವದಾಗಿ ಎಚ್ಚರಿಸಿದ್ದಾರೆ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಇಲಾಖೆಯ ನಿರ್ಲಕ್ಷ್ಯವೋ ತಿಳಿಯದ ಕಾರಣ ಗೊಂದಲ್ಲಿರುವ ನೂರಾರು ಬಡಕುಟುಂಬಗಳಿಗೆ ಯೋಜನೆ ಕಂಟಕಪ್ರಾಯವಾಗಿದೆ.
ಇದೇ ಸಂದರ್ಭ ಸಲೀಂ ಔರಸಂಗ, ರವೀಂದ್ರ ಹಲಕರ್ಣಿ, ಬಸವರಾಜ ಶಿರೋಳ, ಸುರೇಶ ತಾಂಟೂರ, ಅಶೋಕ ನೀಲವಾಣಿ, ಸದಾಶಿವ ಸಂಕಾನಟ್ಟಿ, ಶೇಖರ ಹುಲ್ಯಾಳ, ಶಿವಾನಂದ ನುಚಚಿ, ನಾಮದೇವ ಪಾಸ್ತೆ, ಸದಾಶಿವ ಮಠದ ಇದ್ದರು.
ಯೋಜನೆಗೆ ಸಂಬಂಧ ಎಲ್ಲ ಫಲಾನುಭವಿಗಳ ಮನೆ ನಿರ್ಮಾಣದ ಕುರಿತು ಸಮಗ್ರ ಮಾಹಿತಿಯನ್ನು ಆನ್‍ಲೈನ್ ಮೂಲಕ ಕೇಂದ್ರ ಸರ್ಕಾರದ ಇಲಾಖೆಗೆ ರವಾನಿಸಿದೆ. ಸದ್ಯದಲ್ಲಿಯೇ ಆಯಾ ಫಲಾನುಭವಿಗಳ ಬ್ಯಾಂಕಿನ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ.’------ಶ್ರೀನಿವಾಸ ಜಾಧವ, ಪೌರಾಯುಕ್ತ, ರಬಕವಿ-ಬನಹಟ್ಟಿ.
`ಫಲಾನುಭವಿಗಳ ಸಮಗ್ರ ಪಟ್ಟಿ ಸಂಗ್ರಹಿಸಿ, ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಕ್ಷಣವೇ ಪರಿಶೀಲಿಸುವ ಮೂಲಕ ಪ್ರಾಮಾಣಿಕವಾಗಿ ಕೇಂದ್ರದಿಂದ ಬರಬೇಕಾದ ಯೋಜನೆಯ ಹಣವನ್ನು ಬಿಡುಗಡೆಗೊಳಿಸುವಲ್ಲಿ ನಗರಸಭಾ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವೆ.’----ಸಿದ್ದು ಸವದಿ, ಶಾಸಕರು.
- FOR ADVERTISEMENT CONTACT -
- 9902523698 -

Social Plugin