ಬನಹಟ್ಟಿಯಲ್ಲಿ ಕಾರು ಹುಣ್ಣಿಮೆಯ ನಿಮಿತ್ತವಾಗಿ ಸಮೀಪದ ಹೊಸೂರಿನ ಕುಂಬಾರ ಮಹಿಳೆಯರು  ಬಸವಣ್ಣನ ಮೂರ್ತಿಗಳನ್ನು ಮಾಡುತ್ತಿರುವುದು.
ಕೊರೊನಾ ಮಧ್ಯದಲ್ಲಿಯೂ ಬಸವಣ್ಣನ ಮೂರ್ತಿಗಳಿಗೆ ಭಾರಿ ಬೇಡಿಕೆ
ರಬಕವಿ-ಬನಹಟ್ಟಿ,ಜೂ4: ಕಾರು ಹುಣ್ಣಿಮೆ ಹಬ್ಬಗಳನ್ನು ಕರೆದುಕೊಂಡು ಬರುವ ಹುಣ್ಣಿಮೆಯಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿ ಹಬ್ಬಗಳು ಬರತೊಡುಗುತ್ತವೆ. ಕೊರೊನಾ ಮಧ್ಯದಲ್ಲಿಯೂ ಸ್ಥಳೀಯರು ಬಸವಣ್ಣನ ಮೂರ್ತಿಗಳನ್ನು ಖರೀದಿಸಲು ಮುಗಿ ಬಿದ್ದರು. 
ಗುರುವಾರ ಬನಹಟ್ಟಿಯಲ್ಲಿ ಬಸವಣ್ಣನ ಮೂರ್ತಿಗಳಿಗೆ ಭಾರಿ ಬೇಡಿಕೆಯ ಇತ್ತು. ಸಮೀಪದ ಹೊಸೂರಿನ ಮೂವತ್ತಕ್ಕೂ ಹೆಚ್ಚು ಕುಂಬಾರಿಕೆಯನ್ನು ಮಾಡುತ್ತಿರುವ ಕುಟುಂಬಗಳು ಬೆಳಗ್ಗೆ ಎಂಟಕ್ಕೆ ಆಗಮಿಸಿ ಮಲ್ಲಿಕಾರ್ಜುನ ಮತ್ತು ಹನಮಂತ ದೇವಸ್ಥಾನಗಳ ಕಟ್ಟೆಯ ಮೇಲೆ ಕುಳಿತು ಬಸವಣ್ಣನ ಮೂರ್ತಿಗಳನ್ನು ಮಾಡತೊಡಗಿದರು.
ಒಂದು ಜೋಡಿ ಬಸವಣ್ಣನ ಮೂರ್ತಿಗಳು ರೂ.40 ರಿಂದ 100 ಮಾರಾಟವಾದವು. ಕಳೆದ ಮೂರು ತಿಂಗಳುಗಳಿಂದ ಕುಂಬಾರಿಕೆಯ ಉದ್ಯೋಗವೂ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ ಬಸವಣ್ಣನ ಮೂರ್ತಿಗಳನ್ನು ಮಾಡಿದ ಬಹಳಷ್ಟು ಕುಂಬಾರರ ಮೊಗದಲ್ಲಿ ಸ್ವಲ್ಪ ಪ್ರಮಾಣದ ಮಂದಹಾಸ ಮೂಡಿತ್ತು.
ಕಾರು ಹುಣ್ಣಿಮೆಯ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳ ಪ್ರಮುಖ ಸಾಧನವಾಗಿರುವ ಎತ್ತುಗಳ ಪೂಜೆಯನ್ನು ಮಾಡಲಾಗುತ್ತದೆ. ಜನರು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಮನೆಗೆ ತಂದು ಅವುಗಳನ್ನು ಪೂಜೆ ಮಾಡುತ್ತಾರೆ. ನಂತರ ಅವುಗಳಿಗೆ ಕೋಡಬಳಿಗೆಗಳನ್ನು ಮಾಡಿ ಶೃಂಗಾರ ಮಾಡುತ್ತಾರೆ. ರೈತರು ಕೂಡಾ ಎತ್ತುಗಳನ್ನು ತೊಳೆದು ಅವುಗಳಿಗೆ ಬಣ್ಣಗಳನ್ನು ಹಚ್ಚಿ ಶೃಂಗಾರ ಮಾಡುತ್ತಾರೆ. ಮತ್ತು ಎತ್ತುಗಳನ್ನು ಕಟ್ಟಲು ಹೊಸ ಬಣ್ಣ ಬಣ್ಣದ ಹಗ್ಗಗಳನ್ನು ಖರೀದಿ ಮಾಡುತ್ತಾರೆ. ಒಂದು ವರ್ಷದಲ್ಲಿ ಐದು ಬಾರಿ ಮಣ್ಣಿನ ಪೂಜೆ ಮಾಡಲಾಗುತ್ತದೆ. ಅದರಲ್ಲಿ ಕಾರು ಹುಣ್ಣಿಮೆಯ ಸಂದರ್ಭದಲ್ಲಿ ಎತ್ತುಗಳನ್ನು ಪೂಜಿಸುವುದರ ಮೂಲಕ ಮಣ್ಣಿನ ಪೂಜೆ ನಡೆಯುತ್ತದೆ.
ಹೊಸೂರಿನ 86 ವರ್ಷದ ಅಜ್ಜಿ ಕಾಶವ್ವ ಕುಂಬಾರ ಒಂದು ಕಡೆಗೆ ಎತ್ತುಗಳನ್ನು ಮಾಡುತ್ತಿದ್ದರೆ ಮತ್ತೊಂದು ಕಡೆಗೆ ಹತ್ತು ವರ್ಷದ ಬಾಲೆ ಭಾಗ್ಯಶ್ರೀ ಕುಂಬಾರ ಎತ್ತುಗಳನ್ನು ಮಾಡಿ ಗಮನ ಸೆಳೆದರು.


-FOR ADVERTISEMENT CONTACT -
                 9902523698