ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯಂದು ಶಾಸಕ ಸಿದ್ದು ಸವದಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಮನೆಯಲ್ಲಿಯ ಮಗು ಬೆಳೆಸಿದಂತೆ ಸಸಿಗಳನ್ನು ಬೆಳೆಸಿ
ಕಾಂಕ್ರಿಟ್ ಕಾಡುಗಳು ಪರಿಸರಕ್ಕೆ ಮಾರಕ
ರಬಕವಿ-ಬನಹಟ್ಟಿ,ಜೂ5: ಇಂದು ನಾವು ಹಸಿರು ಕಾಡುಗಳನ್ನು ನಿರ್ಮಾಣ ಮಾಡುವ ಬದಲು ಕಾಂಕ್ರಿಟ್ ಕಾಡುಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಕಾಂಕ್ರಿಟ್ ಕಾಡುಗಳು ಪರಿಸರಕ್ಕೆ ಮಾರಕವಾಗಿವೆ ಎಂದು ಸ್ಥಳೀಯ ಶಾಸಕ ಸಿದ್ದು ಸವದಿ ತಿಳಿಸಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಸಂದರ್ಭದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
ಮನೆಯಲ್ಲಿಯ ಮಗುವನ್ನು ಬೆಳೆಸುವಂತೆ ಗಿಡಗಳನ್ನು ಬೆಳೆಸಬೇಕು. ಪರಿಸರದಿಂದಲೇ ಮಾತ್ರ ಜಗತ್ತಿನ ಜೀವ ಸಂಕಲು ಉಳಿಯಲು ಸಾಧ್ಯ. ಅದಕ್ಕಾಗಿ ಗಿಡಗಳನ್ನು ಬೆಳೆಸಿ ಉತ್ತಮ ಕಾಡನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಸಿಗಳನ್ನು ನೆಡುವುದರ ಜೊತೆಗೆ ಇದ್ದ ಗಿಡ ಮರಗಳನ್ನು ರಕ್ಷಣೆ ಮಾಡಬೇಕು. ಕೊರೊನಾದಂತಹ ಮಾರಕ ರೋಗಗಳನ್ನು ತಡೆಯುವಲ್ಲಿ ಹಸಿರು ಕ್ರಾಂತಿ ಬಹುಮುಖ್ಯ ಪಾತ್ರವಾಗಿದೆ. ವನಮಹೋತ್ಸವ ಪ್ರತಿಯೊಬ್ಬರ ಉಸಿರಾಗಬೇಕೆಂದರು.
ತಹಶೀಲ್ದಾರ ಪ್ರಶಾಂತ ಚನಗೊಂಡ, ಜಿಪಂ ಸದಸ್ಯ ಪುಂಡಲೀಕ ಪಾಲಭಾಂವಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಉಪತಹಶೀಲ್ದಾರ ಎಸ್.ಎಲ್. ಕಾಗಿಯವರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಸೇರಿದಂತೆ ಅನೇಕರಿದ್ದರು.
ಪೂರ್ಣಪ್ರಜ್ಞ ಶಾಲೆ: ರಾಮಪೂರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ತಹಶೀಲ್ದಾರ ಪ್ರಶಾಂತ ಚನಗೊಂಡ ಸಸಿ ನೆಡುವ ಮೂಲಕ ಉದ್ಘಾಟಿಸಲಾಯಿತು. ಸಂಘದ ಚೇರಮನ್ ಸಿದ್ದಪ್ಪ ಮೇಣಿ, ಕಾರ್ಯದರ್ಶಿ ಶಕೀಲ್ ನದಾಫ್, ರಾಮದಾಸ ಸಿಂಘನ, ಶಿವಾನಂದ ಕರಡಿ ಉಪಸ್ಥಿತರಿದ್ದರು.
ನಗರಸಭೆಯಲ್ಲಿ: ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ನೇತೃತ್ವದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ನಗರಸಭೆ ಮುಂಭಾಗದಲ್ಲಿ ಸಸಿ ನೆಟ್ಟು ನಂತರ ಮಾತನಾಡಿದ ಅವರು, ಸ್ವಚ್ಛ ಹಾಗು ಆರೋಗ್ಯವಂತ ಬದುಕಿಗೆ ಗಿಡಗಳನ್ನು ಬೆಳೆಸುವದು ಅವಶ್ಯ. ಮನುಷ್ಯನಷ್ಟೇ ಅವಶ್ಯ ಮರಗಳಾಗಿವೆ ಎಂದರು. ಇದೇ ಸಂದರ್ಭ ಎಸ್.ಪಿ. ಪೋತರಾಜ, ರಮೇಶ ಮಳ್ಳಿ, ಉಮೇಶ ಹರಿಜನ ಸೇರಿದಂತೆ ಅನೇಕರಿದ್ದರು.

- For ADVERTISEMENT CONTACT -
                  9902523698