ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಕೊರೊನಾ ತಡೆಗಟ್ಟುವಲ್ಲಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಮಹತ್ವದ ಸಭೆ ಜರುಗಿತು.
ಊರಿಗೆ ಉರುಳಾದ ಹೋಂ ಕ್ವಾರಂಟೈನ್
35 ಕ್ಕೂ ಅಧಿಕ ಶಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್
ರಬಕವಿ-ಬನಹಟ್ಟಿ,ಜೂ27: ಈಚೆಗೆ ಮಹಾರಾಷ್ಟ್ರದಿಂದ ಬಂದಿದ್ದ ಮಹಿಳೆಯೋರ್ವಳನ್ನು ಹೋಂ ಕ್ವಾರಂಟೈನ್ ಮಾಡಿದ್ದರ ಎಡವಟ್ಟಿಗೆ ಸಂಬಂಧ ಐವರು ಕುಟುಂಬದವರಿಗೂ ಕೊರೊನಾ ಒಕ್ಕರಿಸಿತ್ತು. ಸದ್ಯ ಇವರ ಪ್ರಾಥಮಿಕ ಸಂಪರ್ಕ ಹೊಂದಿರುವ ಬನಹಟ್ಟಿ ಹಾಗು ನಾವಲಗಿ ಗ್ರಾಮ ಸೇರಿ 35 ಕ್ಕೂ ಅಧಿಕ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೋಂ ಕ್ವಾರಂಟೈನ್ ಮಾಡುವ ಸಂದರ್ಭ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಮನೆಯಲ್ಲಿರುವವರು ಬೇರೆ ಕಡೆ ವಾಸ ಮಾಡುವ ಮೂಲಕ ಹೋಂ ಕ್ವಾರಂಟೈನ್‍ಗೆ ಅವಕಾಶ ಕಲ್ಪಿಸಬೇಕೆಂದು ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು.
ರಬಕವಿ-ಬನಹಟ್ಟಿ ನಗರಸಭೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ಯಾಂಪಲ್ ಪರೀಕ್ಷೆ ಬರುವವರೆಗೂ ಹೋಂ ಕ್ವಾರಂಟೈನ್‍ನಲ್ಲಿರುವವರು ಪ್ರತ್ಯೇಕವಾಗಿ ವಾಸ ಇರಬೇಕೆಂದರು. ಇದಕ್ಕೆ ಸಂಬಂಧ ನಿರ್ಲಕ್ಷ್ಯವಹಿಸಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಹೋಂ ಕ್ವಾರಂಟೈನ್ ಸಂದರ್ಭ ನಿಯಮ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಜರುಗಿಸುವಲ್ಲಿ ಸಭೆ ತೀರ್ಮಾಣಿಸಿತು.
ಅನುಮತಿ ಕಡ್ಡಾಯ: ಮದುವೆ ಸಮಾರಂಭ ಸಾಮಾನ್ಯವಾಗಿ ನಡೆಯುತ್ತಿವೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಸೇರಿದಂತೆ ಕಡ್ಡಾಯವಾಗಿ 50 ಕ್ಕಿಂತಲೂ ಹೆಚ್ಚಿನ ಜನ ಸೇರುವಂತಿಲ್ಲ. ಅನುಮತಿ ಪಡೆಯದೆ ಸಮಾರಂಭ ನಡೆಸಿದ್ದಲ್ಲಿ ಯೋಗ್ಯ ಕ್ರಮ ಜರುಗಿಸಲಾಗುವದೆಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು. ಅಂತ್ಯ ಸಂಸ್ಕಾರ ಸಂದರ್ಭದಲ್ಲಿಯೂ 20 ಕ್ಕಿಂತ ಹೆಚ್ಚು ಜನ ಸೇರುವದು ತಪ್ಪು. ಇದಕ್ಕೆ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವದೆಂದರು. ಕ್ವಾರಂಟೈನ್‍ಗೆ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಮಯ ಪಾಲನೆಯೊಂದಿಗೆ ಮಾನವೀಯತೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳಿಂದ ಕ್ರಮ ಜರುಗಿಸುವಲ್ಲಿ ಯಾವದೇ ಹಿಂದೇಟಿಲ್ಲವೆಂದರು.
ರಬಕವಿ-ಬನಹಟ್ಟಿ ತಾಲೂಕಾದ್ಯಂತ ಒಟ್ಟು 522 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು ಒದರಲ್ಲಿ 10 ಜನರಿಗೆ ಇಲ್ಲಿಯವರೆಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 457 ಜನರನ್ನು ಬಿಡುಗಡೆಗೊಳಿಸಲಾಗಿದೆ 55 ಜನರ ಗಂಟಲು ದ್ರವ ಹಾಗು ರಕ್ತದ ಮಾದರಿ ಬರಬೇಕಿದೆ. ಇಲ್ಲಿಯವರೆಗೆ 12 ಜನರು ವಿದೇಶದಿಂದ ಬಂದಿದ್ದು ಓರ್ವ ವ್ಯಕ್ತಿ ಪರೀಕ್ಷೆ ಬಾಕಿಯಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದ್ದಾಗಿದೆ. ಸದ್ಯ 104 ಜನ ಸಾಂಸ್ಥಿಕ ಕ್ವಾರಂಟೈನ್ ಹಾಗು 189 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ತಾಲೂಕಾ ವೈದ್ಯಾಧಿಕಾರಿ ಗಲಗಲಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಬಸವರಾಜ ತಾಳಿಕೋಟಿ ಉಪಸ್ಥಿತರಿದ್ದರು.
- ನಿಮ್ಮ ಜಾಹೀರಾತುಗಳಿಗೆ ಸಂಪರ್ಕಿಸಿ

Social Plugin