ರಬಕವಿ-ಬನಹಟ್ಟಿಯಲ್ಲಿ ಪ್ರವಾಹಕ್ಕೆ ಸಂದರ್ಭ ಗಂಭೀರ ಚರ್ಚೆ ವೇಳೆ ಖಡಕ್ ನಿದ್ರೆಯಲ್ಲಿ ತಲ್ಲೀಣರಾದ ಅಧಿಕಾರಿಗಳು.
ಪ್ರವಾಹ ಪರಿಸ್ಥಿತಿಗೆ ಮುಂಜಾಗ್ರತಾ ಕ್ರಮಕ್ಕೆ ಸನ್ನದ್ಧ
ರಬಕವಿ-ಬನಹಟ್ಟಿ,ಜೂ27: ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಕಳೆದ ವರ್ಷ ಪ್ರವಾಹ ಸಂದರ್ಭ ತುಂಬಾ ಹಾನಿಯುಂಟಾಗುವ ಜೊತೆಗೆ ಜನರು ಅಸ್ತವ್ಯಸ್ಥ ಕಂಡಿತ್ತು. ಈ ಬಾರಿ ಯಾವದೇ ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಕಲ ರೀತಿಯಲ್ಲಿ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಶಾಸಕ ಸಿದ್ದು ಸವದಿ ಸಲಹೆ ನೀಡಿದರು.
ರಬಕವಿ-ಬನಹಟ್ಟಿಯಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಎಲ್ಲ ಇಲಾಖೆ ಸಿಬ್ಬಂದಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬರುವ ಜುಲೈ ಹಾಗು ಅಗಸ್ಟ್ ತಿಂಗಳಲ್ಲಿ ಮತ್ತೇ ಪ್ರವಾಹ ಭೀತಿ ಎದುರಾಗಬಹುದೆಂಬ ಮಾಹಿತಿ ಕಾರಣ ಸಕಲ ರೀತಿಯಲ್ಲಿ ಎಲ್ಲ ಇಲಾಖೆ ಸಿಬ್ಬಂದಿಗಳು ತಯಾರಾಗಿರಬೇಕೆಂದರು. ಈ ಬಾರಿ ಮಹತ್ವದ ನಿರ್ಣಯ ಕೈಗೊಂಡು ಅನುಭವಿ ಅಭಿಯಂತರರೊಬ್ಬರನ್ನು ಮಹಾರಾಷ್ಟ್ರದ ಸಾಂಗಲಿ ಪ್ರದೇಶಕ್ಕೆ ರವಾನಿಸಿ ಕೃಷ್ಣಾ ನದಿ ನೀರಿನ ಮಟ್ಟದ ಕುರಿತು ಪ್ರತಿ ದಿನ ಅಧಿಕೃತ ಮಾಹಿತಿ ಒದಗಿಸುವಂತೆ ವ್ಯವಸ್ಥೆ ಮಾಡಬೇಕೆಂದು ತಾಲೂಕಾಡಳಿತಕ್ಕೆ ಸೂಚನೆ ನೀಡಿದರು. ಈ ಹಿಂದೆ ಘಟಪ್ರಭಾ ನದಿ ಒಮ್ಮೆಲೆ ಮಹಾಪೂರವಾಗಿತ್ತು. ಇದಕ್ಕೂ ಪರ್ಯಾಯ ವ್ಯವಸ್ಥೆ ಮೂಲಕ ನೀರಿನ ಮಟ್ಟ ಯಾವ ರೀತಿ ಇದೆ. ಅದಕ್ಕೆ ಸಂಬಂಧ ಪೂರಕ ತಯಾರಿ ಮಾಡಬೇಕೆಂದು ಸವದಿ ತಿಳಿಸಿದರು.
ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಗಂಜಿ ಕೇಂದ್ರಗಳನ್ನು ಈಗಾಗಲೇ ತಯಾರಿ ಮಾಡಿಕೊಂಡಿದ್ದು, 4 ಬೋಟ್‍ಗಳ ವ್ಯವಸ್ಥೆಯೊಂದಿಗೆ ಈಜುಪಟುಗಳನ್ನೂ ಗುರ್ತಿಸಲಾಗಿ ಪ್ರವಾಹ ಪರಿಸ್ಥಿತಿ ಮುಂಜಾಗ್ರತಾ ಕ್ರಮ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿದೆ ಎಂದರು.
ಕಳೆದ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ರಬಕವಿ-ಬನಹಟ್ಟಿ ತಾಲೂಕಾದ್ಯಂತ 68 ಮನೆಗಳು ತೀವ್ರ ರೀತಿಯಲ್ಲಿ ಹಾನಿಗೊಳಗಾಗಿದ್ದು, 32.72 ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಅಲ್ಲದೆ ಚಿಮ್ಮಡ, ಕೆಸರಗೊಪ್ಪ, ಬುದ್ನಿ ಪಿ.ಡಿ. ಹಾಗು ಹಣಗಂಡಿ ಗ್ರಾಮಗಳಲ್ಲಿ ಬಾಳೆ ಹಾನಿಯಾಗಿದ್ದು, ಇವೆಲ್ಲದಕ್ಕೂ ಸಂಬಂಧ ಪರಿಹಾರಕ್ಕಾಗಿ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಿದ್ರೆ: ಪ್ರವಾಹಕ್ಕೆ ಸಂಬಂಧ ಗಂಭೀರ ಚರ್ಚೆಗಳನ್ನು ನಡೆಯುತ್ತಿದ್ದರೆ ಕೆಲ ಅಧಿಕಾರಿಗಳು ಮೊದಲನೆ ಸಾಲಿನಲ್ಲಿದ್ದರೂ ನಿದ್ರೆಗೆ ಜಾರಿದ್ದರು.


ಜಾಹೀರಾತುಗಳಿಗೆ ಸಂಪರ್ಕಿಸಿ