ತೇರದಾಳ:ಮಾರಣಾಂತಿಕ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ಕಾರಣದಿಂದ ಸರ್ಕಾರವು ಲಾಕಡೌನ ಮಾಡಿದ್ದರಿಂದ ಸಾಕಷ್ಟು ನಾಗರಿಕರು,ಬೇರೆ ಜಿಲ್ಲೆಗಳಲ್ಲಿ,ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡು ತುಂಬಾ ತೊಂದರೆಗೊಳಗಾಗಿದ್ದರು. ಇದನ್ನರಿತ ಮಾನ್ಯ ಘನಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವೊಂದು ಕಡ್ಡಾಯ ಷರತ್ತುಗಳನ್ನು ವಿಧಿಸಿ ಸ್ವಸ್ಥಳಕ್ಕೆ ಮರಳಲು ಅವಕಾಶ ಕಲ್ಪಿಸಿದೆ.ಆ ಪ್ರಕಾರ ಸ್ವಸ್ಥಾನಕ್ಕೆ ಮರಳುವ ಸಾರ್ವಜನಿಕರು ಕಡ್ಡಾಯವಾಗಿ ನಿಯಮದ ಪ್ರಕಾರ ಹೋಮಕ್ವಾರಂಟೈನ ಅಥವಾ ಸಾಂಸ್ಥಿಕ ಕ್ವಾರಂಟೈನಕ್ಕೊಳಗಾಗಿ ಸರ್ಕಾರದ ಅನುಮತಿ ಪಡೆದು ತಮ್ಮ ಮನೆಗೆ ಮರಳಬಹುದಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಸರ್ಕಾರ ಸಾರ್ವಜನಿಕರಿಗೆ ಸ್ವಸ್ಥಾನಕ್ಕೆ ಮರಳಲು ಅವಕಾಶ ನೀಡಿದರೂ ಸಹ, ಹಲವಾರು ಸಾರ್ವಜಿನಕರು ಕಣ್ಣುತಪ್ಪಿಸಿ ರಾತ್ರೋರಾತ್ರಿ ಬಂದು ಮನೆಸೇರಿಕೊಳ್ಳುತ್ತಿರುವ ಸಂಗತಿ ಆಡಳಿತದ ಗಮನಕ್ಕೆ ಬಂದಿದೆ, ಸಾರ್ವಜನಿಕರು ಈ ರೀತಿ ಮಾಡುತ್ತಿರುವುದು ಸರಿಯಲ್ಲ,ಈ ರೀತಿ ಮಾಡುತ್ತಿರುವುದರ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ. ಅಲ್ಲದೆ ಈ ನಿಮ್ಮ ಬೇಜವಾಬ್ದಾರಿ ವರ್ತನೆಯಿಂದ ನಿಮ್ಮನ್ನು ನಂಬಿಕೊಂಡ ನಿಮ್ಮ ಕುಟುಂಬಕ್ಕೆ ,ಹಾಗೂ ಇಡಿ ಸಮುದಾಯಕ್ಕೂ ದಕ್ಕೆಯಾಗುವಂತಹ ಸಂದರ್ಭ ಬಂದೊದಗಬಹುದು.ಏಕೆಂದರೆ ಕಣ್ಣಿಗೆ ಕಾಣದ ಈ ವೈರಸ್ ಕ್ಷಣಾರ್ಧದಲ್ಲಿ ನಿಮ್ಮನ್ನು ಆವರಿಸಬಹುದು. ಕಾರಣ ನಿಮ್ಮ ಪ್ರಾಣ ರಕ್ಷಣೆಗಾಗಿಯೇ ಹಗಲಿರುಳು ಶ್ರಮಪಡುತ್ತಿರುವ ಸರ್ಕಾರಕ್ಕೆ ನಿಮ್ಮ ಪ್ರಾಮಾಣಿಕ ಸಹಕಾರದ ಅವಶ್ಯಕತೆ ಇದೆ.ನೀವು ಯಾರೇ ಇರಲಿ ನಿಮ್ಮ ಸ್ವಸ್ಥಾನಕ್ಕೆ ಮರಳಬಹುದು.ಆದರೆ ಸರ್ಕಾರದ ನಿಯಮ ಪಾಲಿಸುವದನ್ನು ಮರೆಯಬಾರದು.ಬೇರೆಯವರಿಂದ ತಮ್ಮ ಬಗ್ಗೆ ಸರ್ಕಾರಕ್ಕೆ ಮಾಹಿತಿ ಬರುವದಕಿಂತ ಮುಂಚೆ ತಾವೇ ಮಾಹಿತಿ ನೀಡಿದಲ್ಲಿ ತಮಗೂ ಗೌರವ. ಅದು ಬಿಟ್ಟು ಕತ್ತಲಿನಲ್ಲಿ ಬಂದು ಅವಿತುಕುಳಿತರೆ ತಮಗೆ ಅಪಾಯ ತಪ್ಪಿದ್ದಲ್ಲ ಎಂದು ತೇರದಾಳ ಉಪತಹಶಿಲ್ದಾರ ಎಸ್.ಬಿ.ಮಾಯನ್ನವರ,ಹಾಗೂ ಕಂದಾಯ ನಿರೀಕ್ಷಕ ಎಸ್.ಬಿ.ತಾಳಿಕೋಟಿ ಸಾರ್ವಜನಿಕರಿಗೆ ಈ ಮೂಲಕ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳ ನಿರ್ದೇಶನದ ಮೇಲೆ ಪಟ್ಟಣದಲ್ಲಿಂದು ಗ್ರಾಮಲೆಕ್ಕಾಧಿಕಾರಿ ಪಿ.ಆರ್.ಮಠಪತಿ, ಸಿಬ್ಬಂದಿ ಮಹಾದೇವ ಯಲ್ಲಟ್ಟಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಬಸವರಾಜ ದೊಡಮನಿಯವರು ಸೇರಿ, ಮಾಹಿತಿ ನೀಡದೆ ಬೇರೆ ರಾಜ್ಯದಿಂದ ಬಂದು ಮನೆಸೇರಿಕೊಂಡ ಸುಮಾರು ಒಂದು ಮಗು ಸೇರಿದಂತೆ ಮೂರು ಜನ ವಯಸ್ಕರನ್ನೊಳಗೊಂಡು ಹೀಗೆ ಒಟ್ಟು ನಾಲ್ಕು ಜನರನ್ನು ಹುಡುಕಿ ಅವರನ್ನು ಮುಂದಿನ ಕ್ರಮಕ್ಕಾಗಿ ಬಾಗಲಕೋಟೆಗೆ ಕಳುಹಿಸಿಕೊಟ್ಟರು.ಕಾರಣ ಸಾರ್ವಜನಿಕರಾದವರು ದಯವಿಟ್ಟು ಈ ರೀತಿ ವಿಷಯ ಮರೆಮಾಚದೆ ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದರೆ ನಿಮಗೆ ಒಳಿತು ಇಲ್ಲದಿದ್ದರೆ ವಿನಾಕಾರಣ ತೊಂದರೆಗೊಳಗಾಗಬೇಕಾಗುತ್ತದೆ.ಕಾರಣ ಸಾರ್ವಜನಿಕರಾದವರು ಯಾವುದೇ ರೀತಿಯ ಆತಂಕಕ್ಕೊಳಗಾಗದೆ ಮಾಹಿತಿ ನೀಡಿ ಸರ್ಕಾರದೊಂದಿಗೆ ಸಹಕರಿಸುವ ಅವಶ್ಯಕತೆ ಇದೆ.ಆದ್ದರಿಂದ ಬೇರೆ ಪ್ರದೇಶಗಳಿಂದ ಯಾರೇ ಬಂದರೂ ಸಹ ಸರ್ಕಾರದ ಗಮನಕ್ಕೆ ತಂದು ಮುಂದೆ ಆಗುವ ಅಪಾಯವನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು. ಕಾರಣ ಎಲ್ಲರೂ ಸೇರಿ ಈ ದೇಶವನ್ನು ಕೊರೊನಾ ಮುಕ್ತದೇಶವನ್ನಾಗಿ ಮಾಡೋಣ ಎಂದು ತಾಲೂಕಾಡಳಿತ ಈ ಮೂಲಕ ಸಾರ್ವಜನಿಕರಲ್ಲಿ ತಿಳಿಸಿದೆ.
Social Plugin