ರಬಕವಿ-ಬನಹಟ್ಟಿ ನಗರ ವ್ಯಾಪ್ತಿಯಲ್ಲಿ ಪಿಗ್ಮಿ ಸಂಗ್ರಹಕಾರರ ಬದುಕು ಅತಂತ್ರವಾಗಿರುವದು.

ಅತಂತ್ರದಲ್ಲಿ ಪಿಗ್ಮಿ ಸಂಗ್ರಹಕಾರರ ಬದುಕು
-ಮಲ್ಲಿಕಾರ್ಜುನ ತುಂಗಳ
`ಹನಿ ಹನಿಗೂಡಿದರೆ ಹಳ್ಳ-ತೆನೆ ತೆನೆ ಕೂಡಿದರೆ ಬಳ್ಳ’ ಎನ್ನುವ ಗಾದೆಯ ಆಧಾರದ ಮೇಲೆ ಪಿಗ್ಮಿ ಠೇವಣಿಯನ್ನು ಭಾರತದಲ್ಲಿ ಮೊಟ್ಟಮೊದಲು 1928 ರಲ್ಲಿ ಸಿಂಡಿಕೇಟ್ ಬ್ಯಾಂಕ್‍ನಿಂದ ಪ್ರಾರಂಭವಾಯಿತು.
ನಂತರದ ದಿನಗಳಲ್ಲಿ ಎಲ್ಲ ಕೇಂದ್ರಿಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗು ಸಂಘಗಳು ಪಿಗ್ಮಿ ಠೇವಣಿಯನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಮನೆ ಬಾಗಿಲಿಗೇ ಬ್ಯಾಂಕ್‍ನ ವ್ಯವಹಾರ ನಡೆಸುವಂತ ಕಾರ್ಯ ನಡೆಸುವಲ್ಲಿ ಯಶಸ್ಸು ಕಂಡದ್ದು ವಿಶೇಷ. ಇದೀಗ ಕೊರೊನಾ ವೈರಸ್‍ನ ಲಾಕ್‍ಡೌನ್‍ನಿಂದಾಗಿ ರಬಕವಿ-ಬನಹಟ್ಟಿ ತಾಲೂಕಿನ ನೂರಾರು ಪಿಗ್ಮಿ ಸಂಗ್ರಹಕಾರರು ಅಕ್ಷರ ಸಹ ಬೀದಿಗೆ ಬಿದ್ದಿರುವದು ವಿಪರ್ಯಾಸದ ಸಂಗತಿ.
ಮೊದಲೇ ನೇಕಾರಿಕೆಯಿಂದಲೇ ಕೂಡಿರುವ ಅವಳಿ ನಗರದಲ್ಲಿ ವ್ಯವಹಾರ ನಡೆಸುವಲ್ಲಿ ಪಿಗ್ಮಿ ವ್ಯವಹಾರವು ಜನತೆಗೆ ಪ್ರಮುಖ ಮಧ್ಯವರ್ತಿಯಾಗಿತ್ತು. ಅದರಂತೆ ನೂರಾರು ಪಿಗ್ಮಿ ಏಜೆಂಟರ ಕುಟುಂಬ ನಿರ್ವಹಣೆಗೆ ಆಸರೆಯಾಗಿತ್ತು. ಮೊದಲೇ ನೋಟು ಅಮಾನ್ಯ ಹಾಗು ಕ್ಯಾಶ್‍ಲೆಸ್ ವ್ಯವಹಾರದ ಮೂಲಕ ಗಾಯದ ಮೇಲೆ ಬರೆ ಎಳೆಯುವಲ್ಲಿ ಕಾರಣವಾಗಿತ್ತು. ಈಗಷ್ಟೇ ಚೇತರಿಕೆ ಕಂಡುಕೊಳ್ಳುವ ಹಂತದಲ್ಲಿ ಕೊರೊನಾ ವೈರಸ್‍ನಿಂದಾಗಿ ಎಲ್ಲ ಪಿಗ್ಮಿ ಸಂಗ್ರಹಕಾರರು ಹಣ ಸಂಗ್ರಹದಲ್ಲಿ ತೊಡಗುವ ಬದಲು ಮನೆಯಲ್ಲಿಯೇ ಕುಳಿತುಕೊಳ್ಳುವ ಮೂಲಕ ತೀವ್ರ ಸಂಕಷ್ಟದಲ್ಲಿ ತೊಡಗಿದ್ದಾರೆ. ಈ ಕುಟುಂಬಗಳ ಆಸರೆಗೆ ಸರ್ಕಾರ ಸಹಾಯ ಹಸ್ತ ನೀಡಬೇಕಿದೆ.
`ಪಿಗ್ಮಿ ಸಂಗ್ರಹದಿಂದಲೇ ಬದುಕು ನಿರ್ವಹಣೆ, ಕುಟುಂಬಕ್ಕೆ ಆಸರೆಯಾಗಿದ್ದ ಈ ಉದ್ಯೋಗವನ್ನು ಕೊರೊನಾ ವೈರಸ್ ಕಸಿದುಕೊಂಡಿದ್ದರಿಂದ ತೀವ್ರ ಸಂಕಷ್ಟದ ಬದುಕು ನಮ್ಮದಾಗಿದೆ.’---ಶಿವರಾಜ ಬಾದಾಮಿ.