ಬನಹಟ್ಟಿಯಲ್ಲಿ ಬೇಕಾಬಿಟ್ಟಿಯಾಗಿ ಸಂಚಾರ ನಡೆಸುತ್ತಿದ್ದ ಜನರಿಗೆ ಲಾಠಿ ರುಚಿ ತೋರಿಸಿದ ತಹಶೀಲ್ದಾರ ಪ್ರಶಾಂತ ಚನಗೊಂಡ.



ಲಾಕ್‍ಡೌನ್ ಮೀರಿದ ಜನತೆ: ರಸ್ತೆಗಿಳಿದ ತಹಶೀಲ್ದಾರ
*ಮತಗಟ್ಟೆಯಂತಾಗಿರುವ ಸರಾಯಿ ಮಳಿಗೆ
ರಬಕವಿ-ಬನಹಟ್ಟಿ,ಮೇ4: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಇಂದು ಬೆಳಿಗ್ಗೆ ಏಕಾಏಕಿ ಎಲ್ಲ ಅಂಗಡಿ-ಮುಗ್ಗಟ್ಟುಗಳು ಪ್ರಾರಂಭಗೊಂಡವು. ಇದನ್ನರಿತ ತಹಶೀಲ್ದಾರ ಪ್ರಶಾಂತ ಚನಗೊಂಡ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಹಾಗು ಪೌರಾಯುಕ್ತ ಶ್ರೀನಿವಾಸ ಜಾಧವ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಸಾಮಾನ್ಯರಂತೆ ರಸ್ತೆ ಮೇಲೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸುವಲ್ಲಿ ಕಾರಣವಾಯಿತು.
ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊರೊನಾ ವೈರಸ್ ಪೊಸಿಟಿವ್ ಸೋಂಕು ಪ್ರಕರಣವಿಲ್ಲದಿದ್ದರೂ, ಮುಂಜಾಗ್ರತಾ ಕ್ರಮವಾಗಿ ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಪರಿಣಾಮ ಜನತೆ ಎಚ್ಚರಿಂದ ಸಾಮಾಜಿಕ ಅಂತರದಿಂದ ಮನೆಯಲ್ಲಿಯೇ ಇದ್ದು, ಅವಶ್ಯವಿರುವ ಜನತೆ ಮಾತ್ರ ಹೊರಬರುವದು ಸಾಮಾನ್ಯವಾಗಿತ್ತು. ಇಂದು ಮದ್ಯ ಮಾರಾಟದ ವಿಷಯವನ್ನೇ ಮುಂದಿಟ್ಟುಕೊಂಡು ಅಲ್ಲದೆ ಕೆಲವರಿಗೆ ಸಮಪರ್ಕವಾದ ಮಾಹಿತಿ ದೊರಕದ ಕಾರಣ ಎಲ್ಲ ಅಂಗಡಿಗಳನ್ನು ತೆರೆಯುವ ಹಂತದಲ್ಲಿದ್ದುದ್ದನ್ನು ಕಂಡು ಬಂದ್ ಮಾಡಿಸಲಾಯಿತು.
ಮತಗಟ್ಟೆಯಂತಾಗಿದ್ದ ಮದ್ಯದ ಅಂಗಡಿ: ರಬಕವಿ-ಬನಹಟ್ಟಿ ತಾಲೂಕಿನ 15 ಮದ್ಯದ ಮಳಿಗೆಗಳಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಅಂಗಡಿಗಳ ಮುಂದೆ ಮತಗಟ್ಟೆಯೆಂಬಂತೆ ಬಿಂಬಿತಗೊಂಡು, ಚುನಾವಣೆ ವೇಳೆ ಮತಗಟ್ಟೆಯಲ್ಲಿ ಶ್ಯಾಮಿಯಾನದಂತೆ ಇಲ್ಲಿಯೂ ಶ್ಯಾಮಿಯಾನ ನಿರ್ಮಾಣ, ಸಲಾಕೆಯಿಂದ ಸರದಿ, ಮತಪತ್ರ ಪಡೆಯುವಂತೆ ಸಾಮಾಜಿಕ ಅಂತರದಲ್ಲಿ ಸರದಿಯಲ್ಲಿ ನಿಂತಿದ್ದರು. ಶಾಹೆ ಹಾಕುವಂತೆ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿತ್ತು. ಮತದಾನ ಮಾಡುವಂತೆ ಮದ್ಯ ಸ್ವೀಕರಿಸುವ ಕಾರ್ಯ ನೋಡಿದರೆ ಇಲ್ಲೇನು ಬಹುತೇಕ ಚುನಾವಣೆ ಮತಗಟ್ಟೆಗಳಿರಬೇಕೆಂಬಂತೆ ಭಾಸವಾಗುತ್ತಿತ್ತು.
ಅವಮಾನದ ಹಾರ: ಮದ್ಯದಂಗಡಿ ಮುಂದೆ ನಸುಕಿನ ಜಾವದಿಂದಲೇ ಜನ ಅಲ್ಲಲ್ಲಿ ಸೇರುತ್ತಿರುವದು ಕಂಡು ಬಂದಿತ್ತು. ಇದನ್ನು ನೋಡಿದ ವ್ಯಕ್ತಿಯೋರ್ವ ಮದ್ಯ ಪ್ರಿಯನಿಗೆ ಹಾರ ಹಾಕಿ ಮನೆಯಲ್ಲಿ ಊಟಕ್ಕೂ ಗತಿಯಿಲ್ಲವೆಂದರೂ ಮದ್ಯ ಪಡೆಯುತ್ತಿರುವದು ಎಷ್ಟರಮಟ್ಟಿಗೆ ಸಮಂಜಸವೆಂದು ಮದ್ಯವೆಸನಿಗೆ ಛೀಮಾರಿ ಹಾಕಿದ ಘಟನೆಯೂ ನಡೆಯಿತು.