■ ರವಿಬೆಳಗೆರೆ ಮತ್ತು ಉಪೇಂದ್ರರ ನಡುವಿನ ಭಿನ್ನಾಭಿಪ್ರಾಯ ನೀಗಿಸಲು ನಾನೇ ಬೇಕಾದೆನಾ? ■
● 'ಓಂ' ದಿನಗಳಲ್ಲಿ ಹೊತ್ತಿ ಕೊಂಡ ಬೆಂಕಿ! ●
ಲೇಖನ : ಹಿರಿಯ ಸಿನಿಮಾ ಪತ್ರಕರ್ತ ಶ್ರೀ ಗಣೇಶ್ ಕಾಸರಗೋಡು 
     ಯಾವ ಕಾರಣಕ್ಕೆ ರವಿಬೆಳಗೆರೆ ಮತ್ತು ಉಪೇಂದ್ರರ ನಡುವೆ ಭಿನ್ನಾಭಿಪ್ರಾಯ ಹುಟ್ಟಿತೋ ಗೊತ್ತಿಲ್ಲ. ಆದರೆ ಇದರ ದುರುಪಯೋಗ ಪಡೆದುಕೊಂಡವರದ್ದೊಂದು ದೊಡ್ಡ ಲಿಸ್ಟಿದೆ! ಈ ಕಾರಣಕ್ಕಾಗಿಯೇ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲೆಂದೇ ಒಂದು ಸಾರಿ ನಾನು ಪ್ರಯತ್ನ ಪಟ್ಟಿದ್ದೆ! ಇಬ್ಬರಿಗೂ ಗೆಳೆಯನಾಗಿ ಅಷ್ಟನ್ನೂ ಮಾಡದಿದ್ದರೆ ಹೇಗೆ ಅಲ್ಲವೇ? ಹೀಗಾಗಿ ಇಬ್ಬರಿಗೂ ವಿಷಯ ತಿಳಿಸಿದೆ. ಉಪೇಂದ್ರರ ಬಳಿ ಗೋಗರೆದೆ, ರವೀ ಬಳಿ ರಚ್ಚೆ ಹಿಡಿದೆ. ಕೊನೆಗೆ ಹೇಗೋ ಇಬ್ಬರೂ ಹಠಮಾರಿಗಳು ಪರಸ್ಪರ ಭೇಟಿಯಾಗಲು ಒಪ್ಪಿಕೊಂಡರು. ಹೀಗಾಗಿ ರವಿ ಮತ್ತು ಉಪ್ಪಿ ಭೇಟಿಯ ವೇದಿಕೆ ಸಿದ್ಧವಾಯಿತು. 
     ಆಗ ಉಪ್ಪಿಗೆ ಮದುವೆಯಾಗಿರಲಿಲ್ಲ. ತಮ್ಮ ಪಟಾಲಂ ಜೊತೆ ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಎದುರಿನ ರಸ್ತೆಯಲ್ಲಿರುವ ಅಗ್ನಿಶಾಮಕ ದಳ ಆಫೀಸಿನ ಪಕ್ಕದ ಬಂಗಲೆಯಲ್ಲಿ ಉಪ್ಪಿ ವಾಸವಾಗಿದ್ದರು. ನಾನು ಅಲ್ಲಿಗೆ ಹೋದಾಗ ಉಪೇಂದ್ರ ಸಿದ್ಧವಾಗಿ ನಿಂತಿದ್ದರು. ಜೊತೆಗೆ ಕ್ಯಾಮರಾಮನ್ ವೇಣು. 'A' ಚಿತ್ರದ ಮೂಲಕ ಇದೇ ವೇಣುವನ್ನು ಕ್ಯಾಮರಾಮನ್ ಆಗಿ ಪರಿಚಯಿಸಿದ ಉಪ್ಪಿ ಇವರನ್ನು ತುಂಬಾ ಹಚ್ಚಿಕೊಂಡಿದ್ದರು. ಉಪ್ಪಿಯವರ ಹಳೆಯ 'ವಾಯಂಜರ್' ಗಾಡಿಯಲ್ಲಿ ಮೂವರೂ ಹೊರಟೆವು.  ನೇರವಾಗಿ ರವಿಬೆಳಗೆರೆ ಕೋಣೆಗೆ ಹೋದ್ವಿ. ಉಪೇಂದ್ರರನ್ನು ಕಾಣುತ್ತಲೇ ಕುರ್ಚಿಯಿಂದೆದ್ದು ಬಂದ ರವಿ ಗಾಢವಾಗಿ ಅಪ್ಪಿಕೊಂಡು ಬಿಟ್ಟರು! 'ಎಷ್ಟು ವರ್ಷಗಳಾದುವಲ್ಲಾ ನಾವು ಮೀಟ್ ಮಾಡಿ?' - ಎಂದು ಹೇಳುತ್ತಾ ಕುಳಿತುಕೊಳ್ಳಲು ಕುರ್ಚಿ ತೋರಿಸಿದರು ರವಿ. 
     ಲೋಕಾಭಿರಾಮದ ಮಾತುಕತೆಯ ನಂತರ ನೇರವಾಗಿ ಸಬ್ಜೆಕ್ಟ್'ಗೆ ಬಂದರು ಅವರು. ರವಿಬೆಳಗೆರೆ 'ಓಂ' ಚಿತ್ರಕ್ಕೆ ಸಂಬಂಧಿಸಿದ ತಮ್ಮ ತಕರಾರನ್ನು ಉಪ್ಪಿ ಬಳಿ ಹೇಳಿಕೊಂಡರು. ಇದಕ್ಕೆ ಪ್ರತಿಯಾಗಿ ಉಪೇಂದ್ರ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು : 'ಸಾರಿ ರವೀ,  ಆ ಚಿತ್ರ ನನ್ನ ವೃತ್ತಿಬದುಕಿನ ನಿರ್ಣಾಯಕ ಚಿತ್ರವಾಗಿತ್ತು. ಯಾವುದೇ ಕಾರಣಕ್ಕೂ ನಿರ್ಮಾಪಕರಾದ ಪಾರ್ವತಮ್ಮನವರ ಜತೆ ವಾದಕ್ಕಿಳಿಯುವ ಪ್ರಮೇಯವೇ ಇರಲಿಲ್ಲ. ದೊಡ್ಡವರು, ದೊಡ್ಡ ಅವಕಾಶ ಕೊಟ್ಟಿದ್ದಾರೆ. ಅಷ್ಟರಲ್ಲಾಗಲೇ ಅಣ್ಣಾವ್ರ ಬ್ಯಾನರಿನಲ್ಲಿ ಕ್ರೈಮ್ ಚಿತ್ರವೊಂದು ನಿರ್ಮಾಣವಾಗುತ್ತಿದೆ ಎಂಬ ಸುದ್ದಿ ಹರಡಿ ದೊಡ್ಡ ರಂಪಾಟ ಶುರುವಾಗಿತ್ತು. ನಾನು ತುಟಿಪಿಟಕ್ ಅನ್ನದೇ ಕೆಲಸ ಮಾಡಬೇಕಾಗಿತ್ತು. ಅವರು ಹೇಳಿದ ಎಲ್ಲಾ ಶರತ್ತುಗಳಿಗೆ ತಲೆಯಾಡಿಸುವುದೊಂದೇ ನನಗೆ ಉಳಿದಿರುವ ದಾರಿ. ಆದರೆ ಸಬ್ಜೆಕ್ಟ್ ಬಗ್ಗೆ ಮಾತ್ರ ಪಟ್ಟಾಗಿ ಕುಳಿತೆ. ಇದೇ ಆಗಬೇಕೆಂದು ಹಠ ಹಿಡಿದೆ. ನಿಜ ಬದುಕಿನ ಭೂಗತರು ಅಭಿನಯಿಸಲೇ ಬೇಕೆಂದು ಪಟ್ಟು ಹಿಡಿದೆ. ಕೊನೆಗೆ ಮಾಧ್ಯಮವನ್ನು ದೂರವಿಟ್ಟಿರಿ ಎಂಬ ಸಲಹೆ ಬಂತು. ಇದನ್ನೂ ಒಪ್ಪಿಕೊಂಡೆ. ಹೀಗಾಗಿ ನಿಮ್ಮ ಹೆಸರನ್ನು ಬಳಸಿಕೊಳ್ಳಲಾಗಲಿಲ್ಲ ಗೆಳೆಯರೇ. ತಪ್ಪಾಗಿದೆ. ನಿಮ್ಗೆ ನೋವಾಗಿದೆ. ದಯವಿಟ್ಟು ಮನ್ನಿಸಿ ಗೆಳೆಯರೇ...' - ಎಂದು ಹೇಳುತ್ತಾ ಉಪೇಂದ್ರ ಎದ್ದು ನಿಂತು ರವಿಬೆಳಗೆರೆಯವರ ಎರಡೂ ಕೈಗಳನ್ನು ಹಿಡಿದು ಕ್ಷಮೆ ಯಾಚಿಸಿದರು. 
     ಇಷ್ಟು ಹೇಳಿದ್ದೇ ತಡ, ಕುರ್ಚಿಯಿಂದೆದ್ದು ಬಂದ ರವಿ, ಉಪ್ಪಿಯನ್ನು ಎರಡನೇ ಬಾರಿ ಅಪ್ಪಿಕೊಂಡರು. ಅಲ್ಲಿಗೆ ಅವರ ನಡುವಿನ ಭಿನ್ನಾಭಿಪ್ರಾಯಕ್ಕೆ ಫುಲ್'ಸ್ಟಾಪ್ ಬಿತ್ತು. 
     ನಂತರ ನಡೆದದ್ದು ತೀರಾ ವೈಯಕ್ತಿಕ ಬದುಕಿನ ನೋವು ನಲಿವುಗಳ ವಿನಿಮಯದ ಮಾತು. ಮಾತುಕತೆಯ ಒಂದು ಹಂತದಲ್ಲಿ ಉಪ್ಪಿ ತಮ್ಮ ಬದುಕಿನ ಫ್ಲಾಶ್ ಬ್ಯಾಕ್'ಗಿಳಿದು ಬಿಟ್ಟರು. ತಮ್ಮ ತಂದೆ ಚಾಮರಾಜಪೇಟೆ ರಸ್ತೆ ಬದಿಯ ಫುಟ್ಪಾತಿನಲ್ಲಿ ವಡೆ ಕಾಯಿಸಿ ತಮ್ಮೆಲ್ಲರನ್ನು ಸಾಕುತ್ತಿದ್ದ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಉಪ್ಪಿಗೆ ದುಃಖ ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ಮಾತು ನಿಲ್ಲಿಸಿ ಐದು ನಿಮಿಷ ಅಳುತ್ತಾ ಕೂತು ಬಿಟ್ಟರು. ನಾನು ಸಮಾಧಾನ ಪಡಿಸಲು ಹೋದೆ. ಆದರೆ 'ಅಳಲಿ ಬಿಡಿ, ಅದೊಂದು ಸಮಾಧಾನ ಆತನಿಗಿರಲಿ' ಎಂದು ಹೇಳಿ ರವಿ ನನ್ನನ್ನು ತಡೆದರು. ಉಪ್ಪಿ ಅಳು ನಿಲ್ಲಿಸಲಿಲ್ಲ. ಕೊನೆಗೆ ರವಿಯೇ ಎದ್ದು ಬಂದು ಸಮಾಧಾನ ಪಡಿಸಿದ ಮೇಲೆ ಉಪ್ಪಿ ಅಳುವುದನ್ನು ನಿಲ್ಲಿಸಿದರು. 
     ಮಾತುಕತೆಯ ನಂತರ ಫೋಟೋ ಸೆಷನ್ ಇತ್ತು. ನನ್ನ ಬಲಗಡೆ ರವಿ, ಎಡಗಡೆ ಉಪೇಂದ್ರ, ನಡುವೆ ನಾನು! ಇದನ್ನೆಲ್ಲಾ ನೋಡುತ್ತಾ ವೇಣು ನಗುತ್ತಿದ್ದರು...ಅಲ್ಲಿಗೆ ರವಿ ಮತ್ತು ಉಪ್ಪಿ ನಡುವಿನ ಭಿನ್ನಾಭಿಪ್ರಾಯಕ್ಕೊಂದು ಫುಲ್'ಸ್ಟಾಪ್ ಬಿದ್ದಿತ್ತು...
      'ಓಂ' ಸಿನಿಮಾ ತೆರೆ ಕಂಡು 25 ವರ್ಷಗಳೇ ಕಳೆದ ಈ ಸಮಯದಲ್ಲಿ ಇವೆಲ್ಲಾ ನೆನಪಾದವು...
◆ 'ಶುಭಂ' ಪುಸ್ತಕದ ಒಂದು ಅಧ್ಯಾಯ. (ತಪ್ಪದೇ ಶುಭಂ ಪುಸ್ತಕ ಓದಿ )