ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಮಳೆ & ಚರಂಡಿ ನೀರಿನಿಂದ ನದಿಯಂತಾದ ಮುಖ್ಯ ರಸ್ತೆ


 

ತೇರದಾಳ: ಪಟ್ಟಣದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜೀರಗೇರಿ ಹತ್ತಿರವಿದ್ದ, ಕೋಟೆಗೋಡೆಗೆ ಹೊಂದಿಕೊಂಡಂತೆ ಹೊಸದಾಗಿ ನಿರ್ಮಿಸಿದ ಮುಖ್ಯ ರಸ್ತೆಯು ಮಳೆ ಹಾಗೂ ಚರಂಡಿ ನೀರಿನಿಂದ ಆವೃತ್ತವಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ರಸ್ತೆ ದಾಟಲು ಪರದಾಡಿ ತೊಂದರೆಗೀಡಾಗಿ ಸಂಬಂಧಿಸಿದ ಇಲಾಖೆಗೆ ಹಿಡಿ ಶಾಪ ಹಾಕಿದ್ದಾರೆ. ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು ಸಮೀಪದ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ನಿರ್ಮಾಣ ಮಾಡಿದ ಇಲಾಖೆಯವರು ರಸ್ತೆಯನ್ನೇನೊ ಮಾಡಿದ್ದಾರೆ ಆದರೆ ಸರಿಯಾದ ಕ್ರಮದಲ್ಲಿ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ರಸ್ತೆಗಳ ಮೇಲೆ ನೀರು ನಿಲ್ಲದಂತೆ ರಸ್ತೆ ನಿರ್ಮಾಣ ಮಾಡುವ ಪದ್ದತಿಯಿದೆ. ಆದರೆ ರಸ್ತೆ ನಿರ್ಮಿಸಿದ ಈ ಮಹಾನುಭಾವರು ಇದಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದ್ದಾರೆ. ಆದರೆ ಪಟ್ಟಣದ ಜನತೆ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಜೋಡಿ ರಸ್ತೆಮಾರ್ಗ ನಿರ್ಮಾಣ ಮಾಡಿದ ಇಲಾಖೆಯವರು ಮುಂದೆ ಸ್ವಲ್ಪೇ ದೂರದಲ್ಲಿ ಒಂದು ರಸ್ತೆಗೆ ಮಾತ್ರ ಚಾಲನೆ ನೀಡಿ ಇನ್ನೊಂದು ರಸ್ತೆಯನ್ನು ಅಲ್ಲಿಯೇ ಮೊಟಕುಗೊಳಿಸಿದ್ದಾರೆ. ಈಗ ಸದ್ಯ ಈ ರಸ್ತೆ ವಾಹನಗಳಿಗೆ ಪಾರ್ಕಿಂಗ ಮಾಡುವ ಪಾರ್ಕಿಂಗ ಸ್ಥಳವಾಗಿ ಮಾರ್ಪಾಟ್ಟಿದೆ. ಕಾರಣ ಸಂಬಂಧಪಟ್ಟ ಇಲಾಖೆಯವರು ಈ ರಸ್ತೆಯ ಮೆಲೆ ಚರಂಡಿ ನೀರು ಹಾಗೂ ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಪಟ್ಟಣದ ಜನತೆ ಈ ಮೂಲಕ ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.