- ಬನಹಟ್ಟಿಯಲ್ಲಿ ಮೊದಲ ಕೊರೊನಾ ವೈರಸ್ ಪತ್ತೆಯಾದ ಕಾರಣ ಲಕ್ಷ್ಮೀನಗರದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾದ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಭೆಟ್ಟಿ ನೀಡಿದರು.
ಬನಹಟ್ಟಿಗೆ ತಬ್ಲಿಘಿ ನಂಟು: ಮೊದಲ ಕೊರೊನಾ ಪತ್ತೆ
ರಬಕವಿ-ಬನಹಟ್ಟಿ,ಮೇ11: ಗುಜರಾತ್‍ನ ಅಹಮದಾಬಾದ್‍ನಿಂದ ಆಗಮಿಸಿದ್ದ ತಬ್ಲಿಘಿಗಳಾದ 12 ಜನರ ಪೈಕಿ ಓರ್ವ 20 ವರ್ಷದ ಯುವಕನಿಗೆ ಇಂದು ಬೆಳಿಗ್ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ನಗರದ ಕೆಲ ಪ್ರದೇಶಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗದೆ.
ಲಾಕ್‍ಡೌನ್ ಜಾರಿ ನಂತರ ತಾಲೂಕಿಗೆ ಹಿಂದಿರಗಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಸಂಬಂಧ ರಾಜ್ಯದ ಗಡಿಪ್ರದೇಶವಾದ ನಿಪ್ಪಾಣಿ ಚೆಕ್‍ಪೋಸ್ಟ್‍ನಲ್ಲಿ ಎಲ್ಲರನ್ನೂ ಮೂರು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ನಂತರ ದಿ.8 ರಂದು ಬೆಳಗಿನ ಜಾವ ಬನಹಟ್ಟಿಯಲ್ಲಿ 12 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ಪರಿಣಾಮ ಪಿ-854 ರೋಗಿಗೆ ಕೊರೊನಾ ಪಾಸಿಟಿವ್ ಖಚಿತವಾದ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕೊರೊನಾ ಆಸ್ಪತ್ರೆಯ ಐಶೋಲೇಶನ್‍ಗೆ ಕಳುಹಿಸಲಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಇದಾಗಿದ್ದು ನಿರಾಳತೆಯಲ್ಲಿದ್ದ ತಾಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ. ಕ್ವಾರಂಟೈನ್‍ನಲ್ಲಿದ್ದ 12 ಜನರಿಗೆ ಚಾಲಕ ಸೇರಿದಂತೆ ಇಬ್ಬರು ಸಾರ್ವಜನಿಕರು ಸಂಪರ್ಕ ಹೊಂದಿದ್ದ ಕಾರಣ ಅವರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಸ್ಪಷ್ಟಪಡಿಸಿದರು.
ಭಯ ಬೇಡ: ರಬಕವಿ-ಬನಹಟ್ಟಿ ತಾಲೂಕಿನ ಜನತೆ ಕೊರೊನಾ ವೈರಸ್‍ನ ಬಗ್ಗೆ ಯಾವದೇ ಆತಂಕ ಪಡುವ ಅಗತ್ಯವಿಲ್ಲ. ಓರ್ವನಿಗೆ ಕೊರೊನಾ ತಗುಲಿರುವದು ಹೊರ ರಾಜ್ಯದಿಂದ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದವವರಿಗೆ ಬಂದಿದೆ. ಇದಕ್ಕೆ ಸಂಬಂಧ ಪ್ರಾಥಮಿಕ ಸಂಪರ್ಕ ಹೊಂದಿದವರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಆತಂಕ ಬದಲಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯದೊಂದಿಗೆ ಎಚ್ಚರಿಕೆಯಿಂದ ಅಗತ್ಯವಿದ್ದರೆ ಮಾತ್ರ ಸಂಚರಿಸಬೇಕೆಂದು ಉಪವಿಭಾಗಾಧಿಕಾರಿ ಜನತೆಗೆ ತಿಳಿಸಿದ್ದಾರೆ.
ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ 20 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದರೂ ಯಾರಿಗೂ ಶಾರೀರಿಕ ತೊಂದರೆಯಾಗಿಲ್ಲ. ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಪೊಳ್ಳು ವಿಷಯಗಳಿಗೆ ಕಿವಿಗೊಡದೆ ಅಂತರ ಕಾಯ್ದುಕೊಳ್ಳಬೇಕೆಂದರು.
ಮತ್ತೊಮ್ಮೆ ಪರೀಕ್ಷೆ: ಈಗಾಗಲೇ ಗುಜರಾತ್‍ನಿಂದ ಆಗಮಿಸಿದ್ದ 12 ಜನರ ಪೈಕಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದಲ್ಲಿ ಓರ್ವ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇವರಿಗೆ ಸಂಬಂಧ ಮತ್ತೆ ಮೂವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲ 14 ಜನರ ಗಂಟಲು ದ್ರವ ಪರೀಕ್ಷೆಯನ್ನು ಮತ್ತೊಮ್ಮೆ ನಂತರದ 12 ದಿನಗಳ ನಂತರ ಪರೀಕ್ಷೆಗೆ ಕಳುಹಿಸಲಾಗುವದೆಂದು ಹುಲ್ಲೋಳ್ಳಿ ತಿಳಿಸಿದರು.
ಜನರಿಗೆ ಪ್ರವೇಶ ನಿಷೇಧ: ಪಟ್ಟಣದ ಲಕ್ಷ್ಮೀ ನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸುಖಾಸುಮ್ಮನೆ ಜನರು ಈ ಭಾಗದಲ್ಲಿ ಸಂಚರಿಸುವಂತಿಲ್ಲ. ವಾಯು ವಿಹಾರ ಸೇರಿದಂತೆ ಯಾವದೇ ಕೆಲಸಕ್ಕೆಂದು ರಸ್ತೆಗಿಳಿಯುವಂತಿಲ್ಲವೆಂದರು.
ಇದೇ ಸಂದರ್ಭ ತಹಶೀಲ್ದಾರ ಪ್ರಶಾಂತ ಚನಗೊಂಡ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಸೇರಿದಂತೆ ತಾಲೂಕಾಡಳಿತವೇ ಸ್ಥಳದಲ್ಲಿತ್ತು.

Social Plugin