■ 'ಸಂಪತ್ತಿಗೆ ಸವಾಲ್' ಹಾಕಿದ 'ಘಟವಾಣಿ' ಮಂಜುಳಾ ಮತ್ತೆ ನೆನಪಾದಳು ■
ಒಂದು ಎಮೋಷನಲ್ ಸ್ಟೋರಿ ಹೇಳುವ ಮೊದಲು ಪುಟ್ಟದೊಂದು ಇಂಟ್ರಡಕ್ಷನ್ ಕೊಟ್ಟು ಬಿಡುತ್ತೇನೆ :
ಯಥಾಪ್ರಕಾರ ಉಜಿರೆಯ ಅಲೋಕನ ಮನೆಯಿಂದ ಹೊರಟವರು ಶಿರಾಡಿಘಾಟ್, ಹಾಸನ, ಹೊಳೆನರಸೀಪುರ, ಕೆ.ಆರ್.ನಗರ ದಾಟಿ ಮೈಸೂರು ಸೇರಿಕೊಂಡಾಗ ಮಧ್ಯಾಹ್ನದ 2 ಗಂಟೆ. ಹೆಬ್ಬಾಳುವಿನಲ್ಲಿ ಅಕ್ಕ ಭಾನುಮತಿ ನಮಗಾಗಿ ಕಾಯುತ್ತಿದ್ದಳು. ಪೊಗದಸ್ತಾದ ಊಟದ ನಂತರ ಒಂದಷ್ಟು ಹಳೆಯ ಫೋಟೋಗಳನ್ನು ನಮ್ಮ ಮುಂದೆ ಹರವಿ ಕೂತಳು ಭಾನಕ್ಕ. ನಾನು ಮತ್ತು ಗಾಯತ್ರಿ ಅವುಗಳನ್ನು ನೋಡುತ್ತಿರುವಂತೆಯೇ 20-30 ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದೆವು! ತಕ್ಷಣವೇ ಮತ್ತೆ ವಾಸ್ತವಕ್ಕೆ ಮರಳಲು ಕಾರಣವಾದದ್ದು ಒಂದು ಫೋಟೋ. ಅದು ಚಿತ್ರನಟಿ ಮಂಜುಳಾ ಒಂದು ಮಗುವನ್ನು ಎತ್ತಿಕೊಂಡಿರುವ ಅದ್ಭುತವಾದ ಫೋಟೋ. ಅದನ್ನು ಕೈಲಿ ಹಿಡಿದು ಪ್ರಶ್ನಾರ್ಥಕವಾಗಿ ಭಾನಕ್ಕನ ಮುಖ ನೋಡಿದೆ. ಆಕೆ ಹೇಳಿದಳು : 'ನಂಗೆ ಮಂಜುಳಾ ಅಂದ್ರೆ ತುಂಬಾ ಇಷ್ಟ. ಆಕೆ ಅಗ್ನಿ ದುರಂತದಲ್ಲಿ ತೀರಿಕೊಂಡಾಗ ನಾನೆಷ್ಟು ಅತ್ತಿದ್ದೇನೋ ನೆನಪಿಲ್ಲ. ಈ ಫೋಟೋವನ್ನು ಆಕೆಯ ನೆನಪಿಗಾಗಿ ತೆಗೆದಿಟ್ಟಿದ್ದೇನೆ...' - ಭಾನಕ್ಕನನ್ನೇ ದಿಟ್ಟಿಸಿದೆ. ಮಂಜುಳಾ ಕಂಡಳಾ ಗೊತ್ತಿಲ್ಲ...
ಬೆಂಗಳೂರಿಗೆ ಬಂದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಮಂಜುಳಾ ಫೋಟೋವನ್ನು ಆಕೆಯ ಮಗ ಅಭಿಷೇಕ್'ಗೆ ವಾಟ್ಸಾಪ್ ಮಾಡಿದ್ದು. ಆ ಫೋಟೋ ನೋಡಿ ಅಭಿ ಎಷ್ಟು ಖುಷಿಪಟ್ಟ ಅಂದ್ರೆ ಮೆಸೇಜ್ ಮಾಡಿ ಥ್ಯಾಂಕ್ಸ್ ಹೇಳಿದ : ' I will never forget u in my life' - ಅಂತ ಮೆಸೇಜ್ ಮಾಡಿದ. ನಾನು ಉತ್ತರಿಸಿದೆ : 'ನಿನ್ನನ್ನು ನಾನು ಮರೆಯಲಾರೆ, ಯಾಕಂದ್ರೆ ನನ್ನ ಹಿರಿ ಮಗನ ಹೆಸರು ಅಭಿಷೇಕ್...!'
ಈಗ ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ : ಈ ಹಿಂದೆ ನಾನು 'ವಿಜಯವಾಣಿ' ಪತ್ರಿಕೆಯಲ್ಲಿ ಇದೇ ಮಂಜುಳಾ ಬಗ್ಗೆ ಬರೆದಾಗ ಒಂದು ಪುಟ್ಟ ವಾಕ್ಯವನ್ನು ಸೇರಿಸಿದ್ದೆ : 'ಕೋಟೆ ಕಟ್ಟಿ ಮೆರೆದ ಮಂಜುಳಾ ಏನಾದರು? ನಿಜ ಹೇಳಬೇಕಂದರೆ ಮಂಜುಳಾ ಅವರದ್ದು ದುರಂತ ಬದುಕು ಮತ್ತು ಸಾವು. 1980ರಿಂದ ಅವರು ಸಿನಿಮಾದಿಂದ ಬಹುತೇಕ ದೂರವಾದರು. ದೂರವಾಗುವುದಕ್ಕೆ ಕಾರಣವಾದದ್ದು ಅವರ ನಿಷ್ಠುರ ವ್ಯಕ್ತಿತ್ವ ಮತ್ತು ದುರಹಂಕಾರದ ಇಮೇಜ್ ಎಂದು ಅವರನ್ನು ತುಂಬಾ ಹತ್ತಿರದಿಂದ ಬಲ್ಲವರೊಬ್ಬರು ಹೇಳುವ ಮಾತು. ಬಹಾದ್ದೂರ್ ಹೆಣ್ಣಿನಂತೆ ಬದುಕು ನಡೆಸಿದ ಮಂಜುಳಾ ಅವಕಾಶ ಕಮ್ಮಿಯಾಗುತ್ತಿರುವಂತೆಯೇ ಕೈಗೆ ಸಿಕ್ಕ ಕಾಮಿಡಿ ಪಾತ್ರಗಳಲ್ಲಿ ಅಭಿನಯಿಸುವಂತಾಯಿತು!' - ಇದನ್ನು ಓದಿದ ಅಭಿಷೇಕ್ ತಕ್ಷಣವೇ ನನ್ನನ್ನು ಸಂಪರ್ಕಿಸಿ ಹೇಳಿದ್ದೇನು ಗೊತ್ತಾ? 'ಶುದ್ಧ ಸುಳ್ಳು ಸಾರ್. ನನ್ನಮ್ಮ ಕೋಟೆಕಟ್ಟಿ ಮೆರೀಲಿಲ್ಲ. ಅವರದ್ದು ನಿಷ್ಠುರ ವ್ಯಕ್ತಿತ್ವ ಅಲ್ಲ. ಅವರು ದುರಹಂಕಾರಿ ಖಂಡಿತಾ ಅಲ್ಲ. ಅವರದ್ದು ಮಾತೃಹೃದಯ. ನನ್ನಮ್ಮ ಇಷ್ಟು ದೊಡ್ಡ ಕಲಾವಿದೆ ಅಂತ ನನ್ಗೆ ಗೊತ್ತೇ ಇರಲಿಲ್ಲ. ಸ್ಕೂಲಲ್ಲಿ ಎಲ್ರೂ ಹೇಳ್ತಾ ಇದ್ರೆ ನಂಗೆ ಆಶ್ಚರ್ಯ ಆಗೋದು. ಅಂಥಾ ಅಮ್ಮ ಈಗಲೂ ನನ್ನ ಜೊತೆ ಇರ್ಬೇಕಾಗಿತ್ತು...' - ಎಂದು ಹೇಳಿ ಮೌನವಾಗಿದ್ದ ಅಭಿಷೇಕ್...
ಈ ಲೇಖನದ ಎಮೋಷನಲ್ ಹಂತಕ್ಕೆ ಹೋಗೋದಿದ್ರೆ...ಅಂದು ಹೆಣವಾಗಿ ಮಲಗಿದ್ದ ಜಯನಗರದ ಮಂಜುಳಾ ಮನೆಗೆ ನಾನೂ ಹೋಗಿದ್ದೆ. 'ಚಿತ್ರತಾರಾ' ಆಫೀಸಿಗೆ ಕೂಗಳತೆ ದೂರದಲ್ಲಿತ್ತು ಮಂಜುಳಾ ಮನೆ. ಒಳಹೋಗುತ್ತಿರುವಂತೆಯೇ ನಟ ಶ್ರೀನಾಥ್ ನನ್ನನ್ನು ಕಂಡೊಡನೆಯೇ 'ಗೆಳೆಯಾ ನನ್ನ ಮಂಜುಳಾ ಈ ಪ್ರಣಯರಾಜನನ್ನು ಬಿಟ್ಟು ಹೊರಟು ಹೋದಳಪ್ಪಾ...' - ಎಂದು ಹೇಳುತ್ತಾ ಜೋರಾಗಿ ಅಳಲು ಶುರುವಿಟ್ಟುಕೊಂಡದ್ದು ಈಗಲೂ ಕಣ್ಣಲ್ಲಿದೆ! ನಂತರ ನನ್ನ ತೋರು ಬೆರಳನ್ನು ಆಕೆಯ ಕೆನ್ನೆಗೆ ತಾಗಿಸಿದರು! ಅಲ್ಲೊಂದು ಪುಟ್ಟ ಹೊಂಡ! ಫಕ್ಕನೇ ಬೆರಳನ್ನು ಹಿಂಪಡೆದಿದ್ದೆ! ಬೆಂದು ಹೋದ ಮಂಜುಳಾ ಅವರ ಆ ಮುಖವನ್ನು ನಾನಿನ್ನೂ ಮರೆತಿಲ್ಲ.
ಇಷ್ಟಕ್ಕೂ ಅಂದು ನಡೆದಿದ್ದೇನು? ಬಹಾದ್ದೂರ್ ಹೆಣ್ಣಿನಂತೆ ಬಾಳಿದ ಮಂಜುಳಾ ಕೊನೆಕೊನೆಯಲ್ಲಿ ಎಲ್ಲರಿಂದಲೂ ದೂರವಾದರು. ಹಿಂದೆ ಮುಂದೆ ಸುತ್ತುತ್ತಿದ್ದವರೆಲ್ಲಾ ಜಾರಿಕೊಂಡರು. ಕೆಲಸವಿಲ್ಲದೇ ಮನೆಯಲ್ಲಿ ಕೂರುವಂಥಾ ದುಃಸ್ಥಿತಿ ನಿರ್ಮಾಣವಾಯಿತು. ಇಂಥಾ ದುರ್ಭರ ದಿನಗಳಲ್ಲೇ ಮಂಜುಳಾ ಅಗ್ನಿ ಆಕಸ್ಮಿಕಕ್ಕೆ ಈಡಾಗಿ ಹಸಿಹಸಿ ಬೆಂದು ಹೋದರು. ಇದನ್ನೇ ಕೆಲವರು ಆತ್ಮಹತ್ಯೆ ಅಂದರು. ಆದರೆ ಅಂದು ನಿಜವಾಗಿಯೂ ನಡೆದದ್ದೇನು? ಅಂದು ಶುಕ್ರವಾರ. ಸೆಪ್ಟೆಂಬರ್ 5, 1986ನೇ ಇಸವಿ. ಹಾಲು ಬಿಸಿ ಮಾಡಲೆಂದು ಅಡುಗೆ ಮನೆಗೆ ಹೋದರು ಮಂಜುಳಾ. ಹಾಲಿನ ಪ್ಯಾಕೆಟ್ ಒಡೆದು ಬಟ್ಟಲಿಗೆ ಸುರಿದು ಸ್ಟೌ ಮೇಲಿಟ್ಟು ಗ್ಯಾಸ್ ಲೈಟರ್ ಒತ್ತಿದರು. ಅಷ್ಟೇ...ಸಿಂಥೆಟಿಕ್ ನೈಟಿಗೆ ಬೆಂಕಿ ತಗುಲಿದ್ದೇ ತಡ ಮಂಜುಳಾ ಕಿರುಚಿಕೊಂಡು ಹೊರಬಂದರು. ಅಷ್ಟರಲ್ಲೇ ಎದೆಯ ಎಡಭಾಗ ಸಂಪೂರ್ಣ ಸುಟ್ಟು ಹೋಗಿತ್ತು. ಮುಖ ಬೆಂದು ಹೋಗಿತ್ತು. ಆಸ್ಪತ್ರೆ ಸೇರಿಕೊಂಡ ಈ ನಟಿ ಒಂದು ವಾರ ಕಾಲ ಸುಟ್ಟ ಗಾಯಗಳಿಂದ ನರಳಿದರು. ಕೊನೆಗೆ ಸೆಪ್ಟೆಂಬರ್ 12ರ ರಾತ್ರಿ 8.30ಕ್ಕೆ ಕೊನೆಯುಸಿರೆಳೆದರು. ಹೀಗೆ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ತಮ್ಮ ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದುಕೊಂಡಿದ್ದ ಮಂಜುಳಾ ಸಾವಿನ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಏಕಮೇವಾದ್ವಿತೀಯ ಅಭಿನೇತ್ರಿಯಾಗಿ ಮೆರೆದ ಮಂಜುಳಾ ನೋವಿನ ಸಾವು ಕಂಡದ್ದು ಮಾತ್ರ ದುರಂತ...
ಭಾನಕ್ಕನ ಸಂಗ್ರಹದಲ್ಲಿದ್ದ ಮಂಜುಳಾ ಮತ್ತು ಮಗು ಅಭಿಷೇಕನ ಫೋಟೋವನ್ನು ನೋಡುತ್ತಾ ಇವೆಲ್ಲಾ ನೆನಪಾದುವು...

Social Plugin