ಕಾಳಿದಾಸನ ಕಾಲ - ವಾಕಣಕರ್ ಕಂಡಂತೆ....
ಪ್ರದ್ಯೋತಸ್ಯ ಪ್ರಿಯದುಹಿತರಂ ವತ್ಸ ರಾಜೋತ್ರ ಜಹ್ನೇ |
ಹೈಮಂ ತಾಲದ್ರುಮವನಮಭೂದತ್ರ ತಸ್ಯೈವ ರಾಜ್ಞಃ ||
ಅತ್ರೋದ್ಭ್ರಾಂತಃ ಕಿಲನಲಗಿರಿಃ ಸ್ತಂಭಮುತ್ಪಾಟ್ಯದರ್ಪಾ |
ದಿತ್ಯಾಗಂತೂನ್ರಮಯತಿ ಜನೋ ಯತ್ರ ಬಂಧೂನಭಿಜ್ಞಃ || ಇದು ಕಾಳಿದಾಸ ಮೇಘದೂತದಲ್ಲಿ ಬರುವ ಪೂರ್ವಮೇಘದ 32ನೇ ಶ್ಲೋಕ. ಇಲ್ಲಿಂದ ಆರಂಭವಾಗಿ “ಗಂಭೀರಾಯಾಃ ಪಯಸಿ ಸರಿತಶ್ಚೇತಸೀವ ಪ್ರಸನ್ನೇ” ಎನ್ನುವ 42ನೇ ಶ್ಲೋಕದ ತನಕ ಉಜ್ಜಯಿನಿಯ ವರ್ಣನೆ ಮಾಡುತ್ತಾನೆ. ಉಜ್ಜಯಿನಿಯ ವರ್ಣನೆಯಲ್ಲಿ ಅದು ಅತ್ಯಂತ ಮಹತ್ವದ ನಗರಗಳಲ್ಲೊಂದು, ಅದು ಅತ್ಯಂತ ಸುಂದರ ಪ್ರದೇಶ, ಸಂಪತ್ಸಮೃದ್ಧಿಯಿಂದ ಕೂಡಿತ್ತು ಎಂದು ವರ್ಣಿಸುತ್ತಾನೆ.
ನಾನಿಲ್ಲಿ ಕಾಳಿದಾಸನ ಕಾವ್ಯದ ಅರ್ಥವನ್ನೋ ವರ್ಣನೆಯನ್ನೋ ಬರೆಯಲು ಹೋಗುತ್ತಿಲ್ಲ. ನಮ್ಮ ವಿದ್ವದ್ವಲಯದಲ್ಲಿ ಕಾಳಿದಾಸನ ಕಾಲ ನಿರ್ಣಯ ಮಾಡುವಾಗ ಮೊದಲು ಅವನ ಕಾವ್ಯವನ್ನು ಅಧ್ಯಯನ ಮಾಡಿಯೋ ಅಥವಾ ಸಮಕಾಲೀನ ಬೇರೆ ಬೇರೆ ಕೃತಿಗಳಿಂದ ಅವನ ಕಾಲದ ನಿರ್ಣಯ ಮಾಡುವುದು ತೀರಾ ಸಾಮಾನ್ಯ. ಇನ್ನು ಕೆಲವೊಮ್ಮೆ ಕೆಲವು ಕವಿಗಳ ಹೆಸರುಗಳಿಂದ ಅವರ ಕಾಲವನ್ನು ನಿರ್ಣಯಿಸುವುದೂ ಇದೆ. ಇನ್ನು ಕೆಲವೊಮ್ಮೆ ಅವರ ಭಾಷೆ ಮತ್ತು ಶೈಲಿಯಿಂದಲೇ ಕಾಲದ ನಿರ್ಣಯವನ್ನೂ ಮಾಡಲಾಗುತ್ತದೆ. ಆದರೆ ಕಾಳಿದಾಸನ ಜೀವನ ಹಾಗಲ್ಲ. ಆತನ ಬೇರೆ ಬೇರೆ ಕಾವ್ಯಗಳಲ್ಲಿ ಬೇರೆ ಬೇರೆ ಪ್ರದೇಶಗಳ ವರ್ಣನೆ ಕಾಣಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ನಾನು ಮೇಲಿನ ಶ್ಲೋಕವನ್ನು ಬರೆದದ್ದು.
ಕಾಳಿದಾಸ ಈ ಶ್ಲೋಕದಲ್ಲಿ ವೈಭವೋಪೇತ ಉಜ್ಜಯಿನಿಯನ್ನು ವರ್ಣಿಸಿದ್ದಾನೆ. ಈತನ ಈ ವರ್ಣನೆಯನ್ನು ಗಮನಿಸಿ ಅಧ್ಯಯನ ಮಾಡಿದ ಪದ್ಮಶ್ರೀ ವಿಷ್ಣು ಶ್ರೀಧರ ವಾಕಣಕರ್ ಅವರು ಪುರಾತತ್ವದ ನೆಲೆಯಲ್ಲಿ ಉತ್ಖನನ ಮಾಡುತ್ತಾರೆ. ಆಗ ಅವರಿಗೆ ಉಜ್ಜಯಿನಿಯ ಉಚ್ಛ್ರಾಯ ಮತ್ತು ಅಧಪತನ ಕಾಣಿಸಿಕೊಳ್ಳುತ್ತದೆ. ಅದನ್ನು ಅವರು ಕಾಳಿದಾಸನ ಕಾಲ ನಿರ್ಣಯಕ್ಕೆ ಬಳಸಿಕೊಳ್ಳುತ್ತಾರೆ. ಅದರ ವಿವರ Indian Archaeology A Review 1956 -57, Page No. 20 ರಿಂದ 30 ರ ತನಕ ವಿವರಗಳು ಸಿಗುತ್ತವೆ. ಮತ್ತು Indian Archaeology A Review 1957 -58
ಮಾಹಿಷ್ಮತೀ ನಗರದ ಅವಸಾನದ ನಂತರ ಉಜ್ಜಯಿನಿ ಕಾಣಿಸಿಕೊಳ್ಳುತ್ತದೆ, ಅಥವಾ ಉಚ್ಛ್ರಾಯ ಸ್ಥಿತಿಗೆ ಬರುತ್ತದೆ. ಋಣಮುಕ್ತೇಶ್ವರದಲ್ಲಿ ವಾಕಣಕರ್ ಉತ್ಖನನ ಕೈಗೊಳ್ಳುತ್ತಾರೆ. ಅಲ್ಲಿ ಅವರಿಗೆ ಮೊದಲ ಬಾರಿಗೆ ಸಿಕ್ಕಿದ್ದು ಚಿತ್ರಗಳಿರುವ ಕಂದು ಬಣ್ಣದ ಮಡಕೆ, ಅದು ಸಹ ಮೌರ್ಯರ ಕಾಲಕ್ಕಿಂತಲೂ ಪೂರ್ವದ ನುಣುಪಾದ ಕಪ್ಪು ಬಣ್ಣದ ಪಾತ್ರೆಗಳು. ವಿಕ್ರಮ ಶಕೆಯ ಆರಂಭಕ್ಕೂ 1000 ವರ್ಷಗಳಷ್ಟು ಪೂರ್ವದ ಆಸುಪಾಸಿನವು ಎನ್ನುತ್ತಾರೆ ವಾಕಣಕರ್. ಹಾಗೆಯೇ ವಿಕ್ರಮ ಪೂರ್ವ 500ರ ತನಕವೂ ಇದು ಬಳಕೆಯಲ್ಲಿತ್ತು ಎನ್ನುವುದಾಗಿ ಅಭಿಪ್ರಾಯ ಪಡುತ್ತಾರೆ. ಹೀಗೇ ಮೌರ್ಯ ಪೂರ್ವದಿಂದ ಮೌರ್ಯೋತ್ತರ ಕಾಲದ ತನಕವೂ ಉಜ್ಜಯಿನೀ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎನ್ನುವುದು ದೃಢಪಡುತ್ತದೆ. ವಿಕ್ರಮಾದಿತ್ಯನ ಕಾಲದಲ್ಲಿಯಂತೂ ಉಜ್ಜಯಿನಿಯ ಸ್ಥಿತಿ ಹೇಳಬೇಕು ಅಂತ ಇಲ್ಲ.
ವಿಕ್ರಮ ಶಕೆಯ ನಂತರ 3 - 4 ನೇ ಶತಮಾನದಲ್ಲಿ ಪುನಃ ಆವಂತೀ ಪ್ರದೇಶದಲ್ಲಿ ಸ್ವತಂತ್ರವಾದ ರಾಜ್ಯಾಡಳಿತದ ಆರಂಭವಾಗುತ್ತದೆ. ಮತ್ತು ಈ ಕಾಲದಲ್ಲಿ ವಿಷ್ಣುವಿನಂತೆ ಅಥವಾ ರುದ್ರನಂತೆ ಪರಾಕ್ರಮವನ್ನು ಹೊಂದಿದ ರಾಜನೊಬ್ಬ ಆಳ್ವಿಕೆ ನಡೆಸುತ್ತಿದ್ದ ಎಂದು ವಾಕಣಕರ್ ತಮ್ಮ “ಉಜ್ಜಯಿನೀ ದರ್ಶನ 1965” – “ಉಜ್ಜಯಿನೀ ಕೀ ಪ್ರಾಚೀನ ಮುದ್ರಾಏಂ” ಪುಸ್ತಕದಲ್ಲಿ ವಿವರಿಸುತ್ತಾರೆ. ಇಲ್ಲಿಯೇ ಕೆಲವು ಕಾಲ ನಾಗಾ ಜನರ ರಾಜರು ಆಳುತ್ತಿದ್ದರು. ಅವರಲ್ಲಿ ರವಿ, ಪ್ರಭಾಕರ, ಭವ ಮೊದಲಾದ ನಾಗ ರಾಜರು ಆಳ್ವಿಕೆ ನಡೆಸಿರುವುದಕ್ಕೆ ಅವರ ನಾಣ್ಯಗಳು ಸಿಕ್ಕಿವೆ ಎಂದು Wakankar Catalogue of the Naga coins of Padmavathi ಪುಸ್ತಕವನ್ನು ಆಕರಗ್ರಂಥವಾಗಿ ನೀಡುತ್ತಾರೆ.
ಪರಿತೋಷಿತ ಪ್ರಚಂಡ ಶಾಸನವನ್ನು ನೀಡಿದ ಸಮುದ್ರಗುಪ್ತನ ಪ್ರಯಾಗ ಪ್ರಶಸ್ತಿಯ 22ನೇ ಸಾಲಿನಲ್ಲಿ ಉಲ್ಲೇಖಿಸಿದಂತೆ
“ಸಮತಟಡವಾಕ ಕಾಮರೂಪ ನೇಪಾಲ ಕರ್ತೃಪುರಾದಿ ಪ್ರತ್ಯನ್ತ ನೃಪತಿಭಿರ್ಮ್ಮಾಲವಾರ್ಜುನಾಯನ ಯೌಧೇಯ ಮಾದ್ರಕಾಭೀರ ಪ್ರಾರ್ಜುನ ಸನಕಾನೀಕ ಕಾಕ ಖರಪರಿಕಾದಿಭಿಶ್ಚ” ನಾಗ ಮತ್ತು ಮಾಳವರನ್ನು ತಾನು ಸೋಲಿಸಿ ಜಯ ಹೊಂದಿದೆ ಎಂದಿರುವುದು ಸಮಂಜಸವಾಗಿ ಕಾಣುತ್ತದೆ. ಯಾಕೆಂದರೆ ಆಮೇಲೆ ಯಾವ ನಾಗ ರಾಜರುಗಳ ಮುದ್ರೆಗಳೋ ನಾಣ್ಯಗಳೋ ಲಭ್ಯವಾಗುವುದಿಲ್ಲ. ಇಲ್ಲಿಗೆ ನಾಗಕುಲದ ಪದ್ಮಾವತಿಯ ರಾಜಕೀಯ ಅಂತ್ಯವಾದರೂ ಸಮುದ್ರಗುಪ್ತ ಆಳ್ವಿಕೆ ನಡೆಸಿದ ಅನ್ನುವುದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗುವುದಿಲ್ಲ. ಆದರೆ ಕೆಲವು ವಿದ್ವಾಂಸರು ಹೇಳುವುದು ಮಾತ್ರ ಗುಪ್ತರು ಉಜ್ಜಯಿನೀ ಮತ್ತು ಮಾಲವ ಎರಡನ್ನು ಗೆದ್ದರು. ಬೇಸಿಗೆಯಲ್ಲಿ ಗ್ರೀಷ್ಮದಲ್ಲಿ ಅವರು ಇಲ್ಲಿ ಬಂದು ನೆಲೆಸುತ್ತಿದ್ದರು ಎನ್ನುವ ಬುಡವಿಲ್ಲದ ವಾದ ಮಾಡುತ್ತಾರೆ. ಆದರೆ ಅದಕ್ಕೆ ಸಹ ಯಾವುದೇ ಆಧಾರಗಳಿಲ್ಲ. ಮಾಲವದ ದಶಪುರ ಅಥವಾ ಆವಂತಿಯನ್ನು ಆಳಿದ ಕುರಿತು ಯಾವುದೇ ದಾಖಲೆಗಳು ಸಿಗುವುದಿಲ್ಲ.
ಇನ್ನು ಒಂದು ವಿಷಯವನ್ನು ನಾವು ಶಾಸನಗಳ ಆಧಾರದಲ್ಲಿ ತಿಳಿಯಲೇ ಬೇಕು ಮೂರು ಮತ್ತು ನಾಲ್ಕನೇ ಶತಮಾನದಲ್ಲಿನ ಗುಪ್ತರ ಕಾಲದಲ್ಲಿ ಉಜ್ಜಯಿನೀ ಅವಸಾನದ ಅಂಚಿನಲ್ಲಿತ್ತೇ ಹೊರತು ಉಚ್ಛ್ರಾಯ ಸ್ಥಿತಿಯಲ್ಲಿ ಇರಲೇ ಇಲ್ಲ. ಈ ಕಾಲದಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ನಡೆಯದೇ ಕುಂಠಿತಗೊಂಡಿದ್ದಲ್ಲದೇ ಯಾವುದೇ ಕಲಾತ್ಮಕ ಕೆಲಸಗಳು ನಡೆದಿಲ್ಲ.
ವಾಕಣಕರ್ ಅವರು ಮೂರ್ತಿಗಳ ಅನ್ವೇಷಣೆ, ಶಿಲಾ ಮತ್ತು ತಾಮ್ರ ಶಾಸನಗಳ ಅನ್ವೇಷಣೆ, ಮತ್ತು ನಾಣ್ಯಗಳ ಅನ್ವೇಷಣೆ ಹೀಗೇ ಮೂರು ರೀತಿಯಲ್ಲಿ ಉತ್ಖನನ ನಡೆಸಿದ್ದಾರೆ.
1956ರಲ್ಲಿ ಪುರಾತತ್ವ ಸರ್ವೇಕ್ಷಣೆ ಮಾಡಿ 6000 ಮೂರ್ತಿಗಳನ್ನು ಹೊರತೆಗೆಯುತ್ತಾರೆ. ಅವುಗಳಲ್ಲಿ 3 ಪ್ರತಿಮೆಗಳನ್ನು ಹೊರತು ಪಡಿಸಿ ಬೇರಾವುದೂ ಗುಪ್ತರ ಕಾಲದ್ದಲ್ಲ. ಇದನ್ನು “ಉಜ್ಜಯಿನೀ ಕೀ ಪ್ರಾಚೀನ ಮುದ್ರಾಏಂ” ಪುಸ್ತಕದಲ್ಲಿ ವಿವರಿಸುತ್ತಾರೆ. ಅವರು ಉತ್ಖನನದಲ್ಲಿ ಕಂಡು ಕೊಂಡ ಮುದ್ರೆಗಳಲ್ಲಿ ಗುಪ್ತರ ಕಾಲದ ಮುದ್ರೆಗಳು ಸಿಗಲೇ ಇಲ್ಲ. ಮುದ್ರೆಗಳಲ್ಲಿ ಕೆಲವು ರಾಮ ಎಂದು ಬರೆದಿರುವುದನ್ನು ವಿದ್ವಾಂಸರನೇಕರು ರಾಮಗುಪ್ತನದ್ದು ಎಂದು ತರ್ಕಿಸಿದ್ದಾರೆ.
ವಾಕಣಕರ್ ಅವರು ಹೇಳುವಂತೆ ತನ್ನ ಶಿಲಾಶಾಸನಗಳ ಅಧ್ಯಯನದಲ್ಲಿ ಕಂಡಂತೆ ಉಜ್ಜಿಯಿನಿಯಲ್ಲಿ ಮೌರ್ಯ ಮತ್ತು ಮೌರ್ಯೋತ್ತರ ಕಾಲದ, ಕ್ಷತ್ರಪರ, ಹಾಗೂ ಪರಮಾರರ ಕಾಲದ ಅನೇಕ ಶಿಲಾ ಶಾಸನಗಳು ಸಿಕ್ಕಿದ್ದರೂ ಸಹ ಗುಪ್ತರ ಕಾಲದ್ದು ಸಿಗಲಿಲ್ಲ ಎನ್ನುತ್ತಾರೆ. ಅಂದರೆ ಗುಪ್ತರ ಕಾಲದಲ್ಲಿ ಉಜ್ಜಯಿನಿ ಅವಸಾನದ ಸ್ಥಿತಿಯಲ್ಲಿತ್ತು. ಸಮೃದ್ಧವಾಗಿರಲಿಲ್ಲ. ಮಾಲವವನ್ನು ಗೆದ್ದ ಉಲ್ಲೇಖ ಅವರ ಶಾಸನಗಳಲ್ಲಿ ಸಿಕ್ಕಿದರೂ ಅದು ದಶಾರ್ಣದ ದಶಪುರದ ಮಾಲವರು. ಆ ಕಾಲದಲ್ಲಿ ಮಾಲವ ಜಯಪುರದ ಹತ್ತಿರ ನಾಗರ ಆಸುಪಾಸಿನಲ್ಲಿತ್ತು. ಆದರೆ ಉಜ್ಜಯಿನಿಯಂಥಹ ಅತ್ಯಂತ ಪ್ರಸಿದ್ಧ ರಾಜ್ಯವನ್ನು ಬಿಟ್ಟಿರುವುದು ಗಮನಿಸಿದರೆ ಆ ಕಾಲದಲ್ಲಿ ಉಜ್ಜಯಿನಿ ಮಹತ್ವ ಕಳೆದು ಕೊಂಡಾಗಿತ್ತು.
ಉಜ್ಜಯಿನಿಯ ಇತಿಹಾಸವನ್ನು ಗಮನಿಸುತ್ತಾ ಹೋದರೆ ಇತಿಹಾಸದಲ್ಲಿ ಎರಡು ಸಲ ಈ ನಗರ ಅವಸಾನ ಕಂಡಿತ್ತು. ಇದು ಇತಿಹಾಸಕಾರರಿಂದಲೂ ದೃಢಪಟ್ಟಿದೆ. ಮೊದಲ ಸಲ ಗುಪ್ತರಕಾಲದಲ್ಲಾದರೆ ಆಮೇಲೆ ಮುಸ್ಲೀಂ ಆಡಳಿತದ ಸಮಯದಲ್ಲಿ.
ಕಾಳಿದಾಸ ತನ್ನ ಕಾವ್ಯದಲ್ಲಿ ಸಮೃದ್ಧವಾದ ಸುಂದರವಾದ ವಿದಿಶಾ ಮತ್ತು ಉಜ್ಜಯಿನಿಯ ವರ್ಣನೆ ಮಾಡಿದ್ದಾನೆ. ಕಾಳಿದಾಸನ ಕಾಲದಲ್ಲಿ ಉಜ್ಜಯಿನಿ ಸಮೃದ್ಧವಾಗಿ ಕಾಣಿಸಿಕೊಂಡಿದ್ದು ಒಂದೋ ಗುಪ್ತರಿಗಿಂತ ಪೂರ್ವದಲ್ಲಿಯೇ ಇದ್ದಿರಬಹುದು, ಇಲ್ಲವಾದರೆ ಆಮೇಲೆ ಇದ್ದಿರಬಹುದು. ಆಮೇಲೆ ಇರಲಿಕ್ಕಿಲ್ಲ ಎನ್ನುವುದಕ್ಕೆ ಅನೇಕ ಶಾಸನಗಳಲ್ಲಿ ಕಾಳಿದಾಸನ ಹೆಸರು ಬಂದಿದೆ. ಆದರೆ ವಾಕಣಕರ್ ಈ ನಿರ್ಣಯ ಮಾಡುವವರಿಗೆ ಸ್ಪಷ್ಠವಾಗಿ ಹೇಳುತ್ತಾರೆ ಕಾಳಿದಾಸನ ಕಾಲ ನಿರ್ಣಯಕ್ಕೆ ಅವನು ಉಲ್ಲೇಖಿಸಿದ ರಾಜ್ಯಗಳ ಮತ್ತು ಪ್ರದೇಶಗಳ ಅಂದಿನ ಸ್ಥಿತಿಗತಿಗಳ ಅಧ್ಯಯನ ಅಗತ್ಯ. ಕೇವಲ ಅವನ ಭಾಷೆಯ ದೃಷ್ಟಿಯಿಂದ ಅಥವಾ ಸಾಹಿತ್ಯದ ದೃಷ್ಟಿಯಿಂದ ಅವನನ್ನು ವಿಕ್ರಮೋತ್ತರ ಕಾಲದಲ್ಲಿ ಕಾಣಬೇಡಿ ಎನ್ನುತ್ತಾರೆ. ನನ್ನ ಅಧ್ಯಯನದಲ್ಲಿ ಕಾಲಿದಾಸನು ವಿಕ್ರಮಾದಿತ್ಯನ ಕಾಲದಲ್ಲಿದ್ದ ಎನ್ನುವುದಾದರೂ ಆಗ ಉಜ್ಜಯಿನಿ ಸಂಪದ್ಭರಿತವಾಗಿತ್ತು. ನಾನು ಕಂಡುಕೊಂಡಂತೆ ಮತ್ತು ದಾಖಲೆಗಳ ಅಧ್ಯಯನದಂತೆ ಕಾಳಿದಾಸ ವಿಕ್ರಮ ಶಕೆಯ ಆರಂಭದಲ್ಲಿದ್ದ. ಅಂದರೆ ವಾಕಣಕರ್ ಅವರ ಅಭಿಪ್ರಾಯದಂತೆಯೂ ಸಹ ಕಾಳಿದಾಸ ಕ್ರಿಸ್ತ ಪೂರ್ವದಲ್ಲಿಯೇ ಇದ್ದ. ಆದರೆ ಅದ್ಯಾಕೋ ನಮ್ಮವರಿಗೆ ಸಹಿಸಲು ಸಾಧ್ಯವಾಗದೇ ಆತನನ್ನು ಮೂರ್ನಾಲ್ಕು ಶತಮಾನ ಈಚೆಗೆ ತರುತ್ತಾರೆ.
#ಕಾಳಿದಾಸ_ಕ್ರಿಸ್ತ_ಪೂರ್ವದಲ್ಲಿಯೇ
ನಮ್ಮ "ಸ್ವರೂಪ ಸಂದರ್ಶನ " ( ಸ್ವರೂಪ sandarshan ) ಕನ್ನಡ ಯೌಟ್ಯೂಬ್ ಚಾನೆಲ್ ತಪ್ಪದೇ ಸಬ್ಸ್ಕ್ರೈಬ್ ಮಾಡಿ ವಿಶೇಷ ಸಂದರ್ಶನ ಸುದ್ದಿಗಳನ್ನು ನೋಡಿ
https://www.youtube.com/channel/UCuijpgXCcALhTUk0HijPdLQ

Social Plugin