ಬನಹಟ್ಟಿಯಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿರುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಭೆಟ್ಟ ನೀಡಿ ಪರಿಶೀಲಿಸಿದರು.
ಕ್ವಾರಂಟೈನ್ ಮಾಡಿದವರಿಂದಲೇ ಕೊರೊನಾ: ಆತಂಕ ಬೇಡ
ರಬಕವಿ-ಬನಹಟ್ಟಿ,ಮೇ12: ರಬಕವಿ-ಬನಹಟ್ಟಿ ತಾಲೂಕು ಇಷ್ಟು ದಿನಗಳ ಕಾಲ ಸುರಕ್ಷಿತವಾಗಿತ್ತು. ಈಗಲೂ ಸುರಕ್ಷಿತವಾಗಿದೆ. ಯಾವದೇ ಕಾರಣಕ್ಕೂ ಜನರು ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ಸ್ಪಷ್ಟಪಡಿಸಿದರು.
ಮಂಗಳವಾರ ಬನಹಟ್ಟಿಯ ಲಕ್ಷ್ಮೀ ನಗರದಲ್ಲಿನ ಸರ್ಕಾರಿ ಉರ್ದು ಶಾಲೆಯಲ್ಲಿ ಕಂಟ್ಯಾಮಿನೆಟೆಡ್ ಝೋನ್‍ನ ನಿರ್ಭಂದಿತ ಪ್ರದೇಶಕ್ಕೆ ಭೆಟ್ಟಿ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾಲೂಕಿಗೆ ಸಂಬಂಧ ಮೊದಲ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಆತನ ಸಂಪರ್ಕದಲ್ಲಿರುವ ಒಟ್ಟು 14 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಳೆದ ಮೂರು ದಿನಗಳಲ್ಲಿ 280 ಜನರು ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಮಂಗಳವಾರದವರೆಗೆ ಒಟ್ಟು 500 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇನ್ನೂ ಸುಮಾರು 1500 ಜನರು ಬಾಗಲಕೋಟೆ ಜಿಲ್ಲೆಯಾದ್ಯಂತ ಆಗಮಿಸುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧ 9 ಜನ ನೋಡಲ್ ಅಧಿಕಾರಿಗಳನ್ನು ಜಿಲ್ಲೆಯಾದ್ಯಂತ ನೇಮಿಸಲಾಗಿ, ಹೊರ ರಾಜ್ಯಗಳಿಂದ ಆಗಮಿಸುವ ಎಲ್ಲರೂ ಬಾಗಲಕೋಟೆಯ ನವನಗರ ಬಸ್ ನಿಲ್ದಾಣಕ್ಕೆ ಆಗಮಿಸಿದ ನಂತರ ಸ್ವ-ಗ್ರಾಮಕ್ಕೆ ತೆರಳುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಇದಕ್ಕೆ ಸಂಬಂಧ ಕ್ವಾರಂಟೈನ್ ಮಾಡುವಲ್ಲಿ ಎಲ್ಲ ತಯಾರಿ ನಡೆಸಲಾಗುತ್ತಿದೆ. ಬಿಸಿಎಂ ಹಾಸ್ಟೇಲ್, ಸರ್ಕಾರಿ ಶಾಲೆ, ನವೋದಯ ಹೀಗೆ ಸರ್ಕಾರಿ ಸ್ಥಳಗಳಲ್ಲಿ ಹಾಗು ಗ್ರಾಮೀಣ ಪ್ರದೇಶದಲ್ಲಿನ ಪ್ರತಿ ಶಾಲೆಗಳಲ್ಲಿಯೂ ಕ್ವಾರಂಟೈನ್‍ಗೆ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಕೆ. ರಾಜೇಂದ್ರ ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಲಾಕ್‍ಡೌನ್ ಸಡಿಲಿಕೆಗೊಳಿಸಿದೆ ಎಂದ ಮಾತ್ರಕ್ಕೆ ಮಾಸ್ಕ್ ಹಾಗು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಇವುಗಳನ್ನು ನಿರ್ಲಕ್ಷಿಸಿದ್ದಲ್ಲಿ ನಗರಸಭೆ, ಪುರಸಭೆ ಹಾಗು ಪಂಚಾಯ್ತಿಗಳಿಂದ ದಂಡ ಕಟ್ಟಿಟ್ಟ ಬುತ್ತಿ. ಜನತೆ ವಿನಾಕಾರಣ ರಸ್ತೆಗಿಳಿಯಬಾರದೆಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ ಪ್ರಶಾಂತ ಚನಗೊಂಡ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಉಪಸ್ಥಿತರಿದ್ದರು.

Social Plugin