ತಿನ್ನುವುದಕ್ಕಾಗಿ ಬದುಕುವುದಕ್ಕಿಂತ ಬದುಕಿಗಾಗಿ ತಿನ್ನಿ...
ಭಾರತ ಲಾಕ್ ಡೌನ್ ಘೋಷಣೆಯಾದ ನಂತರ ತರಕಾರಿ ಮಾರುಕಟ್ಟೆಯಲ್ಲಿ ಜನ ಸಂದಣಿ ನೋಡಿ ಆಶ್ಚರ್ಯ ಆಯ್ತು. ಮನುಷ್ಯ ತಿನ್ನಲಿಕ್ಕಾಗಿಯೇ ಬದುಕಿದ್ದಾನೆಯೇ ? ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಹೊಂದಿಕೊಳ್ಳಲಾಗದ ಜನಕ್ಕೆ ಹೇಗೆ ಹೇಳಬಹುದು. ಒಂದೆಡೆ ಇಡೀ ಪ್ರಪಂಚದಲ್ಲಿಯೇ ಕ್ರೂರ, ವಿಕೃತ ವೈರಸ್ ತಾಂಡವವಾಡುತ್ತಿದೆ. ಜನ ನರಳಿ ಸಾಯುತ್ತಿರುವ ಭಿಕರ ದೃಶ್ಯ ಕಾಣುತ್ತಿದೆ. ಆದರೆ ನಮ್ಮ ನೆಲದ ತರಕಾರಿ ಮಾರುಕಟ್ಟೆಗಳಲ್ಲಿ ಜನ ಸಂದಣಿ ನೋಡಿದರೆ ಆಶ್ಚರ್ಯವಾಗುತ್ತದೆ. ನಮ್ಮ ಆಯುಷ್ಯ ಮುಗಿಯುವುದೇ ನಮ್ಮ ತಿನ್ನುವಿಕೆಯ ಅಂತಿಮ ಹಂತ. ಈ ಸ್ವಲ್ಪ ದಿನ ಮನೆಯಲ್ಲಿ ಇರುವುದನ್ನು ತಿಂದು ಪಥ್ಯದಿಂದ ಇದ್ದರೆ ಮುಂದಿನ ಜೀವನ ಆರಾಮವಾಗಿ ಕಳೆಯ ಬಹುದಲ್ಲವೇ? ಇಂದು ನನಗೆ ಈ ಬರಹ ನೆನಪಾಯ್ತು. ತಿನ್ನುವುದಕ್ಕಾಗಿ ಬದುಕುವುದಕ್ಕಿಂತ ಬದುಕಿಗಾಗಿ ತಿನ್ನಬೇಕು. ನಿನ್ನೆ ವೈದ್ಯ ಮಿತ್ರರೊಬ್ಬರು ನನಗೆ ಒಬ್ಬರೇ ಇದ್ದೀರಿ ಊಟ ಹೇಗೆ ಅಂದಾಗ ಅನ್ನ ಮೊಸರು ಸರ್ ಎಂದಾಗ ಹೇಳಿದ ಮಾತಿದು!! ಮುಂದೆ ನೋಡೋಣ. . . .
ಯಮನ ಮಗನಾದ ಶಂಖ ಎನ್ನುವ ಮಹರ್ಷಿಯು ಕಂಡುಕೊಂಡ ವೇದ ಮಂತ್ರದ ಕುರಿತು ನೋಡೋಣ.
ಉದೀರತಾಮವರ ಉತ್ಪರಾಸ ಉನ್ಮಧ್ಯಮಾಃ ಪಿತರಃ ಸೋಮ್ಯಾಸಃ |
ಅಸುಂ ಯ ಈಯುರವೃಕಾ ಋತಜ್ಞಾಸ್ತೇ ನೋವಂತು ಪಿತರೋ ಹವೇಷು ||
ಇಲ್ಲಿ ಅಸು ಎನ್ನುವ ಪದ ಬಳಕೆಗೊಂಡಿದೆ. ಅಸು ಎನ್ನುವ ಶಬ್ದಕ್ಕೆ ವಿಶಾಲವಾದ ಅರ್ಥ ಇರುವುದು ಅಥರ್ವವೇದದಲ್ಲಿ. ಆದರೆ ಇದಕ್ಕೆ ಇರುವ ಅರ್ಥವನ್ನು ಗಮನಿಸಿದಾಗ ಪ್ರಾಣ, ಆತ್ಮಾ ಹಾಗು ಅಸು ಸಮಾನವಾಗಿ ಕಾಣಿಸಿಕೊಳ್ಳುತ್ತವೆ. ಪ್ರಾಣ, ಆತ್ಮಾ ಮತ್ತು ಅಸು ಇವುಗಳು ದೇಹದಲ್ಲಿನ ಶಕ್ತಿ, ಮನಸ್ಸು ಮತ್ತು ಯೋಚನೆಗಳಿಗೆ ಸಂಬಂಧಿಸಿದ್ದು, ಇವೆಲ್ಲವೂ ಜೀವವಾಚಕವನ್ನು ಪ್ರತಿನಿಧಿಸುತ್ತವೆ. ಅಸು ಅಥವಾ ಮನಸ್ಸು ಇದ್ದರೆ ಮಾತ್ರ ಬದುಕು ಇಲ್ಲವಾದರೆ ಸಾವು ಎನ್ನುವುದು ಅಥರ್ವವೇದದ ಮಂತ್ರ. ಮೂರು ಲೋಕಗಳಲ್ಲೂ ಪಿತೃಗಳಿದ್ದಾರೆ ಎನ್ನುವ ಅರ್ಥವನ್ನು ಈ ಋಕ್ಕು ಸೂಚಿಸುತ್ತದೆ. ಇನ್ನು ಅದೇ ಸೂಕ್ತದ ಮುಂದಿನ ಋಕ್ಕಿನ ಕುರಿತು ಹೇಳುವೆ ’ಯೇ ಪಾರ್ಥಿವೇ ರಜಸ್ಯಾ ನಿಷತ್ತಾ’ ಎನ್ನುವಲ್ಲಿನ ಒಂದು ಪದ ಪ್ರಯೋಗವನ್ನು ಗಮನಿಸಿದರೆ ಅಲ್ಲಿ ’ಪಾರ್ಥಿವೇ’ ಎಂದು ಬಂದಿದೆ. ನಮ್ಮಲ್ಲಿ ಶವವನ್ನು ಪಾರ್ಥಿವ ದೇಹ ಅಥವಾ ಶರೀರ ಎನ್ನುತ್ತೇವಲ್ಲ. ಈ ಪಾರ್ಥಿವ ಅನ್ನುವುದು ಭೂಮಿಯ ಮೇಲಿರುವುದಕ್ಕೆ ಹೊರತು, ಭೂಮಿಯಿಂದ ಹೊರತಾಗಿರುವುದಕ್ಕಲ್ಲ. ಭೂಮಿಯನ್ನು ಪೃಥಿವೀ ಎಂದದ್ದರಿಂದ ಅಲ್ಲಿರುವುದು ಪಾರ್ಥಿವ.
ಇನ್ನು ಕುತ್ಸ ಆಂಗಿರಸ ಋಷಿಯು ಋಗ್ವೇದ ಒಂದನೇ ಮಂಡಲದಲ್ಲಿ ಅಸುವಿನ ಕುರಿತು ಹೇಳಿದ್ದಾನೆ. . .
ಉದೀರ್ಧ್ವಂ ಜೀವೋ ಅಸುರ್ನ ಆಗಾದಪ ಪ್ರಾಗಾತ್ತಮ ಆ ಜ್ಯೋತಿರೇತಿ |
ಆರೈಕ್ಪಂಥಾಂ ಯಾತವೇ ಸೂರ್ಯಾಯಾಗನ್ಮ ಯತ್ರ ಪ್ರತಿರಂತ ಆಯುಃ ||
ಎನ್ನುವಲ್ಲಿ ಹೇ! ಮನುಷ್ಯರೇ ಏಳಿ ನಮಗೆ ಪ್ರೇರಕ ಶಕ್ತಿಯಾದ ಸೂರ್ಯನು ಉದಯಿಸಿ ಅಂಧಕಾರವನ್ನು ಹೋಗಲಾಡಿಸಿದ್ದಾನೆ. ಸೂರ್ಯನು ಸಹ ನಮಗೆ ಜೀವಾತ್ಮ ಸ್ವರೂಪನು. ಸೂರ್ಯನು ಬಂದದ್ದರಿಂದ ಕತ್ತಲೆಯು ಹೋಗಿ ನಮಗೆ ಮಾರ್ಗವನ್ನು ತೋರಿಸುತ್ತಿದ್ದಾನೆ ನಾವು ಅನ್ನ ಸಿಗುವ ಸ್ಥಳಕ್ಕೆ ಹೋಗೋಣ ಎನ್ನಲಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ’ಅಸು’ ಎನ್ನುವುದು ಪ್ರೇರಕ ಅಥವಾ ಪ್ರೇರಣಾದಾಯಿ ಶಕ್ತಿ ಎಂದೆನಿಸಿಕೊಳ್ಳುತ್ತದೆ. ಇನ್ನು ಇಲ್ಲಿ ಪ್ರತಿರಂತ ಆಯುಃ ಎನ್ನುವ ಕೊನೆಯ ಪದಕ್ಕೆ ’ಆಯುಃ’ ಎನ್ನುವುದನ್ನು ಅನ್ನ ಅಥವಾ ಆಹಾರವನ್ನು. ಅಂದರೆ ಆಯುಸ್ಸು ಎನ್ನುವುದು ಆಹಾರವನ್ನು ಸೂಚಿಸುತ್ತದೆ. ಆಯುಸ್ಸು ಅಥವಾ ಆಯುಷ್ಯ ಮುಗಿಯಿತು ಎಂದರೆ ಆತನಿಗೆ ಭೋಗಜೀವನ ಮುಗಿಯಿತು. ಅಥವಾ ಈ ಭೂಮಿಯ ಮೇಲಿನ ಅನ್ನದ ಋಣ ಮುಗಿಯಿತು ಎನ್ನುವುದು. ಇನ್ನು ಪ್ರಜ್ಞೆಯ ವಿಷಯಕ್ಕೆ ಬಂದಾಗ ’ಪ್ರಜ್ಞೆ’ಯೇ ಅಸು ಎಂದೆನಿಸಿಕೊಳ್ಳುತ್ತದೆ ಎನ್ನುವುದು ಸಾಯಣಾಚಾರ್ಯರ ಅಭಿಮತ.
ದೀರ್ಘತಮಾ ಔಚಥ್ಯ ಎನ್ನುವ ಋಷಿ ಅಸುವನ್ನು ಕುರಿತು ಹೇಳುತ್ತಾ..
ತಾಸಾಂ ಜರಾಂ ಪ್ರಮುಂಚನ್ನೇತಿ ನಾನದದಸುಂ ಪರಂ ಜನಯನ್ ಜೀವ ಮಸ್ತೃತಂ || ೧ : ೧೪೦ : ೮
ಪ್ರೇಮವನ್ನು ಕುರಿತು ಮತ್ತು ಅದರ ಜ್ವಾಲೆಯನ್ನು ಹೇಳುತ್ತಾ ಅತ್ಯಂತ ಶ್ರೇಷ್ಠವಾದ ಚೈತನ್ಯವನ್ನೂ ಅಕುಂಠಿತವಾದ ಪ್ರಾಣಧಾರಣ ಶಕ್ತಿಯನ್ನೂ ಉಂಟುಮಾಡುತ್ತಾ .... ಎನ್ನುವಲ್ಲಿ ಅಸು ಎನ್ನುವುದು ಚೈತನ್ಯ ಎಂದು ಋಷಿ ಹೇಳುತ್ತಾನೆ.
ಉಶನಾ ಎನ್ನುವ ಋಷಿಯು ಯೋಚನೆ ಮತ್ತು ಭಾವನೆಗಳಿಗೆ ಆಶ್ರಯತಾಣ ಎನ್ನುವುದು ನಮ್ಮ ಹೃದಯ ಎಂದು ಬಣ್ಣಿಸುತ್ತಾನೆ ಇವೆಲ್ಲವೂ ಸಹ ಅಸು ಅಥವಾ ಚೈತನ್ಯಕ್ಕೆ ಸಮಾನ ಎಂದು ಹೇಳಲಾಗಿದೆ. ಇವೆಲ್ಲವೂ ಸಹ ಜೀವವಾಚಕ. ಅಸುನೀತ ಅಥವಾ ಅಸುನೀತಿ ಎನ್ನುವುದು ಮೃತರ ಆತ್ಮ ಹೋಗುವ ಊರ್ಧ್ವಲೋಕ ಮಾರ್ಗವನ್ನು ನಿರ್ದೇಶಿಸುತ್ತದೆ.
ಆದರೆ ಮೃತನ ಅಂತ್ಯ ಸಂಸ್ಕಾರದಲ್ಲಿ ಅಸು ಅಥವಾ ಮನಸ್ ಎನ್ನುವ ಶಬ್ದ ಪ್ರಯೋಗವೇ ಕಾಣ ಸಿಗುವುದಿಲ್ಲ. !! ಪಿತೃ ಮತ್ತು ಮಾತೃ ಮುಂತಾದ ಪದ ಪ್ರಯೋಗವೇ ಬರುವುದು.
ಮನುಷ್ಯನ ಆಹಾರದ ಋಣ ಎಂದಿಗೆ ನಿಲ್ಲುವುದೋ ಅಂದಿಗೆ ಅವನ ಅಸುವಿನ ಸ್ಥಿತಿ ನಿಂತು ಆಯುಸ್ಸು ಪೂರ್ಣವಾಗಿ ಚೈತನ್ಯದಿಂದ ಜಡತ್ವ ಪ್ರಾಪ್ತನಾಗಿ ರೂಪ ರಸ ಗಂಧ ಸ್ಪರ್ಷಾದಿಗಳಿಂದ ದೂರನಾಗುತ್ತಾನೆ ಎನ್ನುವ ಅಭಿಪ್ರಾಯ ಸಿಗುತ್ತದೆ. ಮಿತವಾಗಿ ಹಿತವಾಗಿ ಬದುಕುವುದಕ್ಕಾಗಿ ತಿನ್ನಿ. ತಿನ್ನುವುದಕ್ಕಾಗಿ ಬದುಕಬೇಡಿ. ಸ್ವಲ್ಪ ದಿನ ತಡೆದುಕೊಂಡಲ್ಲಿ ಆಯುಷ್ಯ ನಿಮ್ಮದು ಮಾತ್ರವಲ್ಲ ಎಲ್ಲರದ್ದೂ ಹೆಚ್ಚುತ್ತದೆ. ಆರಾಮವಾಗಿರೋಣ. ’ಆಯುರ್ ವರ್ಧತಾಂ’.
#ಬದುಕಿ_ಬದುಕಲುಬಿಡಿ

Social Plugin