ಕ್ರಪೆ  -ವಸಂತ್ ಗಿಳಿಯಾರ್

ಲಕ್ಷಾಂತರ ಜನ ಬೆಂಬಲಿಗರ ಪಾಲಿಗೆ ‘ದೊಡ್ಡವರು’ ಅಂತ ಕರೆಯಿಸಿಕೊಂಡವರು ಎದ್ದು ನಡೆದಿದ್ದಾರೆ! ಹೌದು ಮುತ್ತಪ್ಪ ರೈ ಇತಿಹಾಸವಾಗಿದ್ದಾರೆ. ಅವರು ಪುತ್ತೂರಿನ ಬಲು ಗತ್ತಿನ ಬಂಟರ ಪಾಳಯದ ಗುತ್ತಿನ ಮನೆಯ ನಾರಾಯಣ ರೈ ಮತ್ತು ಸುಶೀಲ ರೈಯವರ ಮಗ. ನಾರಾಯಣ ರೈಗಳು ಸುತ್ತಲೂ ಹತ್ತೂರಿಗೂ ಪರಿಚಿತರು. ಆ ಕಾಲಕ್ಕೇ ಮಕ್ಕಳ ಶಿಕ್ಷಣಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ ಧಾನ,ಧರ್ಮ ಮಾಡಿಕೊಂಡು ಬಂದ ಪುಣ್ಯಾತ್ಮ. ಆ ತಾಯಿ ಸುಶೀಲಾ ರೈಯವರನ್ನ ಯಾರೇ ನೋಡಿದರು ಅಮ್ಮಾ ಎಂದು ತಕ್ಷಣವೇ ಕಾಲಿಗೊರಗಬೇಕು ಎನಿಸುವ ಮಾತಾ ವರ್ಚಸ್ವಿ. ನಾರಾಯಣ ರೈಗಳದ್ದು ಸಮೃದ್ದ ಕೃಷಿ ಕುಟುಂಬ. ಅಂಥಹ ಕುಟುಂಬ  ಮೂಲದಿಂದ ಬಂದ ಮುತ್ತಪ್ಪ ರೈ ಕಾಲೇಜು ದಿನಗಳಲ್ಲೇ ಡೇರ್ ಡೆವಿಲ್ ಎಂದೇ ಗುರುತಿಸಿಕೊಂಡಿದ್ದವರು. ಅವರು ಮಾಡಿಕೊಳ್ಳುತ್ತಿದ್ದ ಗಲಾಟೆಗಳ ವಿಷಯ ಮನೆ ತನಕ ಬಂದಾಗ ನಾರಾಯಣ ರೈಗಳು ಬೆಂಕಿಯಾಗಿ ಬಿಡುತ್ತಿದ್ದರು. ಕೊನೆಗೂ ಮಗ ವಿಜಯ ಬ್ಯಾಂಕಿನಲ್ಲಿ ವೃತ್ತಿ ಆರಂಭಿಸಿದಾಗ ’ದೊಡ್ಡವ ಕೊನೆಗೂ ದಾರಿಗೆ ಬಂದ’ ಎಂದು ಪುತ್ತೂರಿನ ಮಹಲಿಂಗನಿಗೆ ಕೈ ಎತ್ತಿ ಮುಗಿದಿರಬೇಕು ನಾರಾಯಣ ರೈಗಳು! ಆದರೆ ಅದು ಎಷ್ಟು ದಿವಸ? ಕುಂದಾಪುರದ ಶಾಸಕ ಹೈಕಾಡಿ ಪ್ರತಾಪಚಂದ್ರ ಶೆಟ್ಟರೂ ಮತ್ತು ಮುತ್ತಪ್ಪ ರೈಗಳು ಜೊತೆ ಜೊತೆಗೇ ವಿಜಯ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ಆತ್ಮೀಯರಾಗಿದ್ದವರು. ಪ್ರತಾಪಣ್ಣ ರಾಜಕೀಯದ ಕಡೆಗೆ ನಡೆದು ಬಂದರೆ ಮುತ್ತಪ್ಪಣ್ಣನ ಹೆಜ್ಜೆಯ ಜಾಡುಗಳು ಪಾತಕ ಪಾಳಯದ ಕಡೆಗಾಯಿತು. ಅದು ಅನಿವಾರ್ಯವಾಗಿ!

 ಸಹಜವಾಗಿಯೇ ಮುತ್ತಪ್ಪ ರೈ ಬೇಕಂತಲೇ ಭೂಗತ ಲೋಕಕ್ಕೆ ನಡೆದು ಬಂದದ್ದಲ್ಲ! ತಮ್ಮವರ ರಕ್ಷಣೆಗೆ ನಿಂತ ರೈ ಆ ಕಾಲದ ರೌಡಿಯೊಬ್ಬನ ವಿರುದ್ದ ಬಿದ್ದು ನಂತರ ತಮಗೆ ಅರಿವಿಲ್ಲದೇ ಒಂದೊಂದೇ ಹೆಜ್ಜೆಯನ್ನು ಬಲವಾಗಿ ಊರುತ್ತಲೇ ಭೂಗತ ಜಗತ್ತಿನ ಕಡೆ ಎಂಟ್ರಿಕೊಟ್ಟರು! ಹಿಂದಿರುಗಿ ನೋಡುವಾಗ ಬಹಳ ದೂರ ನಡೆದು ಬಂದಾಗಿತ್ತು! ಅಂತರಾಷ್ಟ್ರೀಯ ಮಟ್ಟದ ಟೆರರಿಷ್ಟ್ ಜಾಲ ಮುತ್ತಪ್ಪ ರೈ ಕಡೆಗೆ ಬಂಧೂಕಿನ ನಳಿಕೆ ಹಿಡಿದು ನಿಂತಿತ್ತು. ಮುತ್ತಪ್ಪ ರೈನಾ ಕೊಂದೇ ಕೊಲ್ಲಿಸುತ್ತೇನೆ ಎಂದು ಪಾಕ್ಮೋಡಿಯಾದ ಬೀದಿಯಿಂದೆದ್ದು ಪಾಕಿಸ್ತಾನಕ್ಕೆ ಹೋಗಿ ಕುಂತಿದ್ದ ದಾವೋದ್ ಇಬ್ರಾಹಿಮ್ ಘೋಷಿಸಿದ್ದ! ಭಾರತಕ್ಕೆ ಅತೀ ಅಗತ್ಯವಾಗಿ ಬೇಕಿದ್ದ ದಾವೋದ್ ಇಬ್ರಾಹಿಮ್ಮನ ಜಾಡಿನ ಟಿಪ್ ಕೊಡುತ್ತಿದ್ದದ್ದು ಇದೇ ಮುತ್ತಪ್ಪ ರೈ! ಮುತ್ತಪ್ಪ ರೈ ಕೊಟ್ಟ ಮಾಹಿತಿಯ ಆಧಾರದಲ್ಲೇ  RAW ಡಿ ಕಂಪೇನಿಯಾ ಬಹುಕೋಟಿ ರೂಪಾಯಿಗಳ ಅಂತರಾಷ್ಟ್ರೀಯ ಡ್ರಗ್ಸ್ ಜಾಲವನ್ನ ಭೇದಿಸಿತ್ತು! ಮುತ್ತಪ್ಪ ರೈ ಬೆಂಗಳೂರಿನಲ್ಲಿ ಜೈರಾಜನ್ನ ಉಡಾಯಿಸಿದ್ದೇನು ದೊಡ್ಡ ಕಥೆಯಲ್ಲ! ಜಗದಗಲಕ್ಕೆ ಬೆಳೆದು ನಿಂತಿದ್ದ ದಾವೋದ್ ಇಬ್ರಾಹಿಮ್ ಎಂಬ ಪರಮ ಪಾತಕಿಗೆ ಚಿಟಕಿ ಹೊಡೆದು ಆ ಕಾಲಕ್ಕೆ ಅವಾಜ್ ಹಾಕಿದ್ದರು ’ಸಾಲೇ ನಿನ್ನ ನಾನೇ ಉಡಾಯಿಸ್ತೀನಿ! ತಾಕತ್ತು ಅನ್ನೋದಿದ್ದರೆ ನನ್ನ ಟಚ್ ಮಾಡು’ ಎಂದು. ದುಷ್ಟ ದಾವೋದ್ ಕೆಂಡವಾಗಿ ಕೆನ್ನಾಗರದಂತೆ ಕನಲಿಹೋಗಿದ್ದ! ಜಗತ್ತು ಮುತ್ತಪ್ಪ ರೈನನ್ನು ಹಿಂದೂ ಡಾನ್ ಎಂದು ಕರೆದಿತ್ತು. ಮುಂದಿನದ್ದೆಲ್ಲವೂ ಇತಿಹಾಸ!

 ನಾನು  ಮುತ್ತಪ್ಪ ರೈಗಳ ಭೂಗತಲೋಕದ ದಿನಗಳ ಬಗ್ಗೆ ಬರೆಯುವುದಿಲ್ಲ. ಅದನ್ನ ಬಹಳಷ್ಟು ಮಂದಿ ಬರೆದಿದ್ದಾರೆ. ನನಗೆ ಮುತ್ತಪ್ಪ ರೈಗಳ ಬಗ್ಗೆ ಬರೆಯ ಬೇಕಿರುವ ಸಬ್ಜೆಕ್ಟೇ ಬೇರೆ. ನನಗೆ ಸಿಕ್ಕಿದ್ದು ಸಾವಿನ ಹೊಸಿಲಿನಲ್ಲಿ ನಿಂತವ ಬದುಕನ್ನ ನೋಡುವ ಪರಿ ಹೇಗಿರುತ್ತದೆ ಎನ್ನುವುದನ್ನ ತೋರಿಸಿಕೊಟ್ಟ ರೈ! ಮೊತ್ತ ಮೊದಲ ಸಲ ರೈ ಜೊತೆ ಮಾತಾಡುವಾಗ ಅಚ್ಚರಿ ಇತ್ತು. ಅವರು ಗಿಳಿಯಾರ್ರೆ ಹೇಗಿದ್ದೀರಿ? ಎಂದು ಪರಿಚಯದ ಧ್ವನಿಯಲ್ಲಿ ಮಾತಾಡಿದಾಗ ರೋಮಾಂಚನವಾಗಿತ್ತು. ’ನಮ್ಮ ಪುತ್ತೂರಲ್ಲಿ ಒಬ್ರು ಗಿಳಿಯಾರ್ ಇದ್ರು ಅವರ ಪೈಕಿಯಾ ನೀವು? ಕೇಳಿದ್ದರು. ಗಿಳಿಯಾರ್ ಅಂದ್ರೆ ಯಾವುದೋ ಜಾತಿ ಅಂತಂದುಕೊಂಡಿರಬೇಕು ರೈ. ಅವತ್ತು ರೈ ಹೇಳಿದ ಮಾತೊಂದು ಇನ್ನೂ ಕಿವಿಯಲ್ಲಿದೆ ’ನಮ್ಮದೆಲ್ಲ ಏನೂ ಇಲ್ಲ ಗಿಳೀಯಾರ್ರೆ, ಹೊರಗಡೆ ಮಾತ್ರ ಹೀಗಿದ್ದೇವೆ ಒಳಗೆಲ್ಲ ಏನೂ ಇಲ್ಲ’ ಎಂದಿದ್ದರು! ರೈ ಹಾಗೆ ಯಾಕೆ ಮಾತಾಡಿದ್ದರು? ಅವರಿಗೆ ಅದ್ಯಾವ ಭಯವಿತ್ತು? ಗೊತ್ತಿಲ್ಲ! ಯಾರೋ ವಿರೋಧಿ ಪಾಳಯದವರು ನನ್ನ ಮೇಲೆ ಅಟ್ಯಾಕ್ ಮಾಡಿಯಾರು ಎಂಬ ಸಣ್ಣ ಭಯವೂ ಅವರಿಗೆ ಇದ್ದಿರಲಿಲ್ಲ! ಆದರೆ ತನ್ನ ಒಳಗೇ ಶತ್ರು ಬೆಳೆಯುತ್ತಿದ್ದಾನೆ ಎಂಬ ಸಣ್ಣ ಅನುಮಾನವೊಂದು ಅವರನ್ನ ಕಾಡಿತ್ತು! ಅದು ಬಲಿತು ಬಲಿತು ಕೊನೆಗೆ ಅವರನ್ನ ಬಲಿ ಪಡೆಯಿತು. ಅದರ ಹೆಸರು ಕ್ಯಾನ್ಸರ್!

ನಿಮಗಿದು ಗೊತ್ತಿರಲಿಕ್ಕಿಲ್ಲ! ರೈ ಪಾಳಯದೊಳಗಿಂದಲೇ ರೈ ಚಲನವಲನದ  ಟಿಪ್ ಕೊಟ್ಟವರಿದ್ದಾರೆ! ಅದೊಂದು ದಿನ ಎಂ.ಜಿ.ರೋಡಿನ ಶಾಪಿಂಗ್ ಮಾಲಿಗೆ ರೈ ಹೋಗುವ ಸೂಚನೆ ಅವರ ವಿರೋಧಿಗಳಿಗೆ ಗೊತ್ತಾಗಿತ್ತು! ಮತ್ತು ಅಲ್ಲಿ ರೈ ಮೇಲೆ ಅಟ್ಯಾಕ್ ಮಾಡುವ ಪ್ಲಾನ್ ಕೂಡ ನಡೆದಿತ್ತು. ರೈ ನೆಟ್ವರ್ಕಿನ ಸಾಮ್ರಾಜ್ಯ ಎಷ್ಟು ಸ್ಪೀಡಿನಲ್ಲಿದೆ ಎಂದರೆ ಆ ಮೆಸೇಜೂ ಕೂಡ ಮುತ್ತಪ್ಪ ರೈ ಕಿವಿಗೆ ಬಿದ್ದಿತ್ತು! ಮತ್ತು ನೀವು ನಂಬ ಬೇಕು. ಅವತ್ತು ಮುತ್ತಪ್ಪ ರೈ ಎಂ.ಜಿ. ರಸ್ತೆಯ ಯು.ಬಿ. ಸಿಟಿಗೆ ಹೋಗಿಯೂ ಹೋಗಿದ್ದರು!

ಮಂಗಳೂರಿನ ಸುದ್ದಿ ವಾಹಿಯೊಂದರ ಪಾಲುದಾರಿಕೆಯ ವಿಷಯದಲ್ಲಿ ಕದನವಿತ್ತು! ಮುತ್ತಪ್ಪ ರೈಗಳು ಮಾತಾಡಿದರೆ ಅದು ಬಗೆ ಹರಿಯುತ್ತದೆ ನೀವೊಂದು ಅವರಿಗೆ ಮಾತಾಡಿ ಎಂದಿದ್ದರು ಅದಕ್ಕೆ ಸಂಬಂಧಿಸಿದ ಒಬ್ಬ ಪಾಲುದಾರ. ಅದರ ಬಗ್ಗೆ ರೈಗಳ ಜೊತೆ ಮಾತಾಡಿದ್ದೆ. ಅವರು ಕನೆಕ್ಟ್ ಮಾಡಿದ್ದು ಗುಣರಂಜನ್ ಶೆಟ್ಟರನ್ನ. ಅದಾದ ನಂತರವೂ ರೈಗಳ ಜೊತೆ ಮೆಸೇಜಿನಲ್ಲಿ ಮಾತು ಮುಂದುವರಿದಿತ್ತು! ತೀರ ಈಚೆಗೆ ರೈ ನಂಬರ್ ಬದಲಿಸಿದ್ದರೂ ಸಿಗ್ನಲ್ ಆಪ್ ಅಲ್ಲಿ ಸಿಕ್ಕಿದ್ದರು. ಬೆಂಗಳೂರಿಗೆ ಬಂದಾಗ ಬನ್ನಿ ಎಂದಿದ್ದರು. ನನಗೂ ಬೆಂಗಳೂರಿಗೆ ಹೋಗಲಿಕ್ಕಿದೆ, ಆದರೆ ಬಿಡದಿಯ ಆ ಕೋಟೆಯೊಳಗೆ ರೈ ಇರುವುದಿಲ್ಲ!

ರೈಗಳ ಬದುಕಿನ ಅಪರೂಪದ ಘಟನೆಗಳನ್ನ, ಯಾರೂ ಅರಿಯದ ರಹಸ್ಯಗಳನ್ನ, ಅಂತರಾಳದೊಳಗಿನ ರೈಗಳ ನಿಜವಾದ ಮುಖವನ್ನ ಜಗತ್ತಿಗೆ ಅನಾವರಣ ಮಾಡಬೇಕು ಎಂದು ನಾವೇ ಒಂದಷ್ಟು ಜನ ಮಾತಾಡಿಕೊಂಡಿದ್ದೆವು. ದೀಪಣ್ಣ, ಮನ್ವಿಜ್, ಪ್ರಕಾಶಣ್ಣ ಜೊತೆಗೆಲ್ಲಾ ಚರ್ಚೆ ನಡೆದಿತ್ತು. ಈ ಕೊರೋನಾ ಕಿರಿ ಕಿರಿ ಮುಗಿಯಲಿ ಎಂದು ಸುಮ್ಮನುಳಿದಿದ್ದೆ! ಇನ್ನೇನು ಮಾಡಲಿ ಹೇಳಿ? ರೈ ಮಾತಿಗೆ ಸಿಗಲಾರರು. ಅವತ್ತು ಬಿಡದಿಯ ಅವರ ಮನೆಯ ವಿಶಾಲವಾದ ವರಾಂಡದಲ್ಲಿ ಕುಳಿತು ಬದುಕಿನ ಬಗ್ಗೆ ಅದೆಷ್ಟು ವಿಶ್ವಾಸದಲ್ಲಿ ಮಾತಾಡಿದ್ದರು ರೈ? ಸಾವಿನ ಹೊಸಿಲಿನಲ್ಲಿದ್ದಾಗಲೂ ಎಂಥಾ ವಿಶ್ವಾಸವಿತ್ತು ರೈಗೆ? ರೈ ಬೆಂಗಳೂರಿಗೆ ಎಂಟ್ರಿ ಕೊಟ್ಟು ಜೈಲಿನೊಳಗೇ ಕುಳಿತು ಹನ್ನೆರಡೂ ಕೇಸುಗಳಿಂದ ಖುಲಾಸೆಯಾಗಿ ಕೇವಲ ಒಂದು ವರ್ಷ ಎಂಟು ತಿಂಗಳಲ್ಲೇ ಜೈಲಿಂದ ಬಿಡುಗಡೆಯಾಗಿ ಹೊರಗೆ ಬಂದಾಗಲೇ ಪಾತಕ ಜಗತ್ತಿಗೆ ಗುಡ್ ಬಾಯ್ ಹೇಳಿ ಬಿಟ್ಟಿದ್ದರು. ಆಗ ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿತ್ತು. ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ. ರಾ ಅಧಿಕಾರಿಗಳು ಜೈಲು ತನಕ ಬಂದು ರೈಯನ್ನ ಬಿಟ್ಟು ಹೋಗಿದ್ದರು. ಉಪ ಪ್ರದಾನಿ ಲಾಲ ಕೃಷ್ಣ ಅಧ್ವಾನಿಯವರೇ ಖುದ್ದು ಎಸ್.ಎಂ. ಕೃಷ್ಣರಿಗೆ ಸಂದೇಶ ಕೊಟ್ಟಿದ್ದರು. ರೈ ಭೂಗತ ಲೋಕದವರಾಗಿರಬಹುದು ಆದರೆ ಅವರು ಉರುಳಿಸಿದ ತಲೆಗಳು ಯಾವುದೂ ಅಮಾಯಕನದ್ದಲ್ಲ! ಇವತ್ತಿಗೂ ರೈ ಮೇಲೆ ಹಪ್ತಾಕ್ಕಾಗಿ ಬೆದರಿಕೆ ಹಾಕಿದ ಒಂದೇ ಒಂದು ಪ್ರಕರಣ ಇಲ್ಲ! ರಿಯಲ್ ಎಸ್ಟೇಟ್ ಮಾಡದ ಡಾನ್ ಯಾವ ಕಾಲಕ್ಕೂ ಯಾರೂ ಇರಲಿಲ್ಲ. ಅದನ್ನ ಮುತ್ತಪ್ಪ ರೈ ಕೂಡ ಮಾಡಿದ್ದರು. ಲಿಟಿಗೇಶನ್ ಪ್ರಾಪರ್ಟಿಗಳ ಡೀಲ್ ಮಾಡಿದ್ದರು. ಯಾವ ಬಡವನ ಜಾಗೆಗೂ ಆ ಮನುಷ್ಯ ಬೇಲಿ ಸುತ್ತಲಿಲ್ಲ. ಯಾರಿಗೇ ಅನ್ಯಾಯ ಆದರೂ ರೈ ಬಳಿ ನ್ಯಾಯ ಕೇಳಿ ಬಂದರೆ ರೈ ಹೇಳುತ್ತಿದ್ದದ್ದು ಒಂದೇ ಮಾತು ’ನೋಡಿ ಈ ವ್ಯಕ್ತಿ ನನ್ನ ಜನ ಅವರಿಗೆ ತೊಂದರೆ ಕೊಡಬೇಡಿ’ ಇಷ್ಟೇ ಮಾತು. ಮತ್ತೆ ಇನ್ನೊಂದೇ ಒಂದು ಮಾತೂ ರೈ ಆಡುತ್ತಿರಲಿಲ್ಲ. ಆ ಸ್ಟೈಲ್ ಇನ್ನಾವ ಭೂಗತ ದೊರೆಗೂ ಇದ್ದಿರಲಿಲ್ಲ. ಅದೊಂದು ರೀತಿಯಲ್ಲಿ ಧರ್ಮಾಧಿಕಾರಿ ನ್ಯಾಯ ನಿರ್ಣಯ ಮಾಡಿದ ಹಾಗೆ! ಮುಗೀತು! ಎದುರಾಳಿ ಎಂದೂ ರೈ ಮಾತಿಗೆ ಇದಿರು ಮಾತಾಡಿಲ್ಲ. ಇದೊಂದೇ ಮಾತಿನಿಂದ ರೈ ಸಾವಿರಾರು ಜನರಿಗೆ ನ್ಯಾಯ ಕೊಡಿಸಿದ್ದರು. ಟೆರರ್ ಗಳ ಚಲನವಲನಗಳ ಬಹುಮುಖ್ಯ ಮಾಹಿತಿಗಳನ್ನ ರಾ ಅಧಿಕಾರಿಗಳಿಗೆ, ಆಗಿನ ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದರು ಮುತ್ತಪ್ಪ ರೈ. ಅದಕ್ಕಾಗಿಯೇ ಖುದ್ದು ಲಾಲ್ ಕೃಷ್ಣ ಅದ್ವಾನಿ ರೈಗೆ ರಕ್ಷಣೆಯನ್ನೂ ಕೊಟ್ಟಿದ್ದರು.

’ನಾನು ಸಾವಿನ ಭಯದಲ್ಲಿಲ್ಲ, ಎಂದಾದರೊಂದು ದಿನ ಸಾಯೋದು ಖಂಡಿತ ಎಂದ ರೈ ಮನಸಲ್ಲಿ ಯಾವ ವಿರೋಧಿಯೂ ನನ್ನ ಕೊಲ್ಲಲಿಲ್ಲ ನನ್ನ ಸಾವೇನಿದ್ದರೂ ಪ್ರಕೃತಿ ಕೊಟ್ಟ ಸಾವು ಎಂಬ ಸಂತೃಪ್ತಿ ಇದ್ದಿತ್ತಾ? ಇದೇ ಮುತ್ತಪ್ಪ ರೈಯನ್ನು ಇನ್ನೊಬ್ಬ ಕೊಂದಿದ್ದರೆ ಮತ್ತೊಂದು ರಕ್ತಚರಿತ್ರೆಯ ನಿರ್ಮಾಣವಾಗುತ್ತಿತ್ತು. ಆದರೆ ಅದಾಗಲಿಲ್ಲ. ರೈ ತಾವಾಗಿಯೇ ನಿರ್ಗಮಿಸಿದ್ದಾರೆ! ನಿಶ್ವಲವಾಗಿ ಮಲಗಿದ ಅವರ ಮುಖದಲ್ಲಿ ಅದೇ ಸಂತೃಪ್ತಿಯ ಸಣ್ಣದೊಂದು ಛಾಯೆ ಇದ್ದಿತ್ತು.

ಕಾಲದ ಗಾಲಿಯಡಿ ನೂರಾರು ರಾಯರು ಬಂದರು ಹೊದರು! ಆದರೆ ಕೆಲವರು ಮಾತ್ರ ನೆನಪಲ್ಲಿ ಉಳಿಯುತ್ತಾರೆ! ಕುಕ್ಕೆ ಸುಬ್ರಹ್ಮಣ್ಯಕ್ಕೆ ಐದುನೂರು ವರ್ಷದ ಹಿಂದೆ ರಥ ಕೊಟ್ಟ ರಾಯ ಇಂದಿಗೂ ದಾಖಲಾರ್ಹ! ಹಾಗೆಯೇ ಮುಂದಿನ ಐದುನೂರು ವರ್ಷಕ್ಕೂ ಆಚೆಗೆ ಬ್ರಹ್ಮರಥ ಸಮರ್ಪಣೆ ಮಾಡಿದ ರೈ ಕೂಡ ಚರಿತ್ರೆಯ ಪುಟದಲ್ಲಿ ದಾಖಲಾಗಿರುತ್ತಾರೆ. ಆಗ ನಾವು ನೀವು ಯಾರೂ ಇರುವುದಿಲ್ಲ! ಆದರೆ ಬ್ರಹ್ಮರಥ ಕೊಟ್ಟ ದಾನಿ ಯಾರು ಎಂಬ ಪ್ರಶ್ನೆ ಬಂದಾಗ ಮುತ್ತಪ್ಪ ರೈ ಎಂಬ ಹೆಸರು ಪ್ರಜ್ವಲಿಸಿ ಬಿಡುತ್ತದೆ! ಸೋಮನಾಥ ರಥ, ಪುತ್ತೂರು ಮಹಾಲಿಂಗೇಶ್ವರ ರಥ ಹೀಗೆ ಶತಮಾನಗಳಾಚೆಗೂ ಮುತ್ತಪ್ಪ ರೈ ದಾನ ಮಾಡಿದ ರಥಗಳ ಮೇಲೆ ಕೊಟ್ಯಾಂತರ ಹೃದಯಗಳ ಆರಾಧ್ಯ ದೇವರ, ಸಾವಿರ ಸಾವಿರ ವರುಷಗಳ ಇತಿಹಾಸವುಳ್ಳ, ಸಹಸ್ರ ರಾಯರು ನಮಸ್ಕರಿಸಿದ, ಸಹಸ್ರ ಸಹಸ್ರ ಅರ್ಚಕರು ಅರ್ಚಿಸಿದ ಉತ್ಸವ ಮೂರ್ತಿಗಳ ಮೆರವಣಿಗೆಯಾಗುತ್ತದೆ! ಅದರ ಪವಿತ್ರ ಬಳ್ಳಿಯನ್ನ ಕೋಟಿ ಭಕ್ತರ ಕರಗಳು ಎಳೆಯುತ್ತವೆ. ಅದು ರೈ ಎಂಬ ರಾಜನಂತೆ ಬದುಕಿದ ಮನುಷ್ಯನ ಆತ್ಮಕ್ಕೆ ಸಂತೃಪ್ತಿಯನ್ನ ಎರೆಯುತ್ತದೆ.

ಮುತ್ತಪ್ಪ ರೈ ಮನಸು ಮಾಡಿದ್ದರೆ ಪುತ್ತೂರಿನಲ್ಲಿ ಚುನಾವಣೆಗೆ ನಿಂತು ಗೆದ್ದು ಶಾಸಕನಾಗಬಹುದಿತ್ತು. ಅದಕ್ಕೆ ಮುತ್ತಪ್ಪ ರೈ ಹೆಸರು ಬೇಕಿರಲಿಲ್ಲ! ಪುಣ್ಯಾತ್ಮ ನಾರಾಯಣ ರೈಗಳ ಹೆಸರು ಸಾಕಿತ್ತು! ಅವರ ಕುಟುಂಬದ ಹಿರಿಮೆ ಸಾಕಿತ್ತು. ಆದರೆ ರೈ ಅದಕ್ಕಿಳಿಯಲಿಲ್ಲ. ಇವತ್ತು  ಜಯಕರ್ನಾಟಕ ಎಂಬ ಸಂಘಟನೆಯಲ್ಲಿ ನಲವತ್ತೈದು ಲಕ್ಷ ಜನ ಅಧಿಕೃತವಾಗಿ ಸದಸ್ಯರಿದ್ದಾರೆ! ನೀವಿದನ್ನ ನಂಬುತ್ತೀರಾ? ಮೊನ್ನೆ ಕೊರೋನಾ ಅಲ್ಲದಿದ್ದರೆ ರೈಗಳ ಅಂತಿಮ ನಮನಕ್ಕೆ ಲಕ್ಷ ಲಕ್ಷ ಜನ ನೆರೆಯದಿರುತ್ತಿದ್ದರಾ? ಹಾಗೆ ಜನ ಸೇರುವುದು ಅವರಿಗೆ ಇಷ್ಟವಿರಲಿಲ್ಲ ಎನ್ನುವುದು ನಿಮಗೆ ಗೊತ್ತಾ? ಅದನ್ನ ರೈ ನಮ್ಮ ಜೊತೆ ಹಂಚಿಕೊಂಡಿದ್ದರು!

ರಾಮ್ ಗೋಪಾಲ್ ವರ್ಮಾ ಎಂಬ ದೈತ್ಯ ನಿರ್ದೇಶಕ ರೈ ಕುರಿತಾದ ಚಿತ್ರ ನಿರ್ಮಿಸುತ್ತಿದ್ದದ್ದು ಹಳೇ ಸಂಗತಿ. ಅದರಲ್ಲಿ ವಿವೇಕ್ ಓಬೆರಾಯ್ ರೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. ಆದರೆ ಖುದ್ದು ಮುತ್ತಪ್ಪ ರೈ ಅದೇಕೋ ಮನಸು ಬದಲಿಸಿ ಚಿತ್ರವನ್ನ ಬಿಡುಗಡೆ ಮಾಡುವುದೇ ಬೇಡ ಎಂದು ಬಿಟ್ಟರು! ಅದನ್ನೇ ನಾವಂದು ಪ್ರಶ್ನಿಸಿದಾಗ ರೈ ಹೇಳಿದ್ದಿಷ್ಟು. ’ನಾವು ಜಯ ಕರ್ನಾಟಕ ಕಟ್ಟಿ ಹೊಗೇನಕಲ್ ಹೋರಾಟಕ್ಕೆ ಹೊರಟಾಗ ಕೊಟ್ಟ ಒಂದೇ ಒಂದು ಕರೆಗೆ ಬಂದದ್ದು ಎರಡು ಸಾವಿರಕ್ಕೂ ಹೆಚ್ಚು ಕಾರುಗಳು! ಮುತ್ತಪ್ಪ ರೈ ಎಂದರೆ ಏನು ಎಂದು ಜನ ಆಗ ತಿರುಗಿ ನೋಡಿದ್ದರು. ಈಗ ಯೋಚಿಸಿದರೆ ಅದೆಲ್ಲವೂ ಮುಂದಿನ ಪೀಳಿಗೆಯವರಿಗೆ ಕೆಟ್ಟ ಪ್ರೇರಣೆಯಾದೀತು ಎನಿಸುತ್ತಿದೆ. ನೋಡಿ, ಡಾನ್ ಆದ್ರೆ ಮುತ್ತಪ್ಪ ರೈ ಹಾಗೆ ಆಗಬೇಕು, ಹಾಗೆ ಮೆರೆಯಬೇಕು, ನೂರಾರು ಗನ್ ಮ್ಯಾನುಗಳಿರಬೇಕು ಎಂದೆಲ್ಲ ಯಾವುದೋ ಹುಡುಗನೊಬ್ಬನಿಗೆ crime ಜಗತ್ತು inspire ಆಗಕೂಡದು. ನಾನು ಡಾನ್ ಆಗಬೇಕು ಎಂದು ಬಂದವನಲ್ಲ. ಬದುಕಬೇಕು ಎಂದು ಬೆಂಗಳೂರಿಗೆ ಬಂದವ. ಬದುಕಲ್ಲಿ ಏನೇನೋ ಆಗಿ ಹೋಯಿತು. ದೇಹದೊಳಗೆ ಐದು ಬುಲೇಟುಗಳು ನುಗ್ಗಿದಾಗ ನನ್ನ ಸಾವಿನ ಸುದ್ದಿ ಹಂಚಿದವರಿದ್ದಾರೆ! ಆದರೆ ಆಗಲೂ ನಾನು ಬದುಕಿ ಬಂದೆ! ನನ್ನ ಮಕ್ಕಳಿಗಾಗಲಿ, ನನ್ನ ಪ್ರೀತಿಸುವವರಿಗಾಗಲಿ ನಾನು ಮಾದರಿಯಾಗುವುದಿದ್ದರೆ ’ಡಾನ್ ಮುತ್ತಪ್ಪ ರೈ’ ಅಲ್ಲ ’ಸಮಾಜಕ್ಕಾಗಿ ಬದುಕಿದ ಮುತ್ತಪ್ಪ ರೈ’ ಆಗಬೇಕು. ಈ ಸಿನೇಮಾಗಳಲ್ಲಿ ನನ್ನ ಹಳೇದಿನಗಳ ಹೈಲೆಟ್ ಆಗೋದು! ಅದು ಇನ್ನಾರಿಗೋ ಒಂದು ಪ್ರೇರಣೆ ಆಗೋದೆಲ್ಲ ನಂಗೆ ಇಷ್ಟ ಇರಲಿಲ್ಲ. ಅದಕ್ಕೆ ನಿಲ್ಲಿಸಿ ಬಿಡಿ ಎಂದೆ’ ಎಂದರು ರೈಗಳು.

ರೈಗಳ ಬಗ್ಗೆ ಬರೆಯಲಿಕ್ಕಿದೆ. ಜಗತ್ತು ಇದುವರೆಗೂ ಕಂಡಿದ್ದು ಕೇಳಿದ್ದು ಅವರ ಇನ್ನೊಂದು ಜಗತ್ತಿನ ಬಗ್ಗೆ! ಆದರೆ ರೈ ಒಳಗಿನ ರೈ ಯಾರು? ಏನು? ಎನ್ನುವುದು ಬಹುತೇಕರಿಗೆ ಗೊತ್ತಿರಲಿಲ್ಲ. ಅದು ದಾಖಲಾಗಬೇಕಲ್ಲವೆ? ನಾನು ಮುತ್ತಪ್ಪ ರೈಗಳ ಕ್ರೈಮ್ ಜಗತ್ತಿನ ಬಗ್ಗೆ ಆಸಕ್ತಿಯಲ್ಲಿಲ್ಲ! ಜಯಕರ್ನಾಟಕ ಎಂಬ ಸಂಘಟನೆ ಕಟ್ಟಿ ನೆರೆ ಹಾವಳಿಯಾದಾಗ ಲಕ್ಷಾಂತರ ಜನರಿಗೆ ಬಟ್ಟೆ ಬರೆ, ಆಹಾರದ ಚೀಲ ಕಳಿಸಿದ ರೈ ಹೆಚ್ಚಿನವರಿಗೆ ಗೊತ್ತಿಲ್ಲ! ನೀರಿಗೆ ಹಾಹಾಕಾರವಾದಾಗ ಸಾವಿರಾರು ಟ್ಯಾಂಕರುಗಳು ನೀರು ಹೊತ್ತು ಬೆಂಗಳೂರಿಗರ ಬೇಗೆ ತಣಿಸಿದ ಕಥೆ ಕೇಳಿದವರಿಲ್ಲ, ರಾಜ್ಯದಾದ್ಯಂತ ಬೇರೆ ಬೇರೆ ನಗರಗಳಲ್ಲಿನ ಸಣ್ಣ ಪುಟ್ಟ ಕಾಂಡಿಮೆಂಟ್ಸ್, ಹೊಟೆಲ್, ಬೇಕರಿಯವರು ಯಾರೇ ಕರಾವಳಿ ಮೂಲದವರಿಗೆ ಲೋಕಲ್ ಪುಡಿ ರೌಡಿಗಳಿಂದ ಅನ್ಯಾಯಾವಾಗುತ್ತಿದ್ದಾಗ ಕಾಯುತ್ತಿದ್ದ ರೈ ಎಂಬ ನಾಮದ ಬಲದ ಬಗ್ಗೆ ಗೊತ್ತಿಲ್ಲ! ಅದೇ ರೈ ಎಂಬ ಹೆಸರಲ್ಲಿ ಕೋಟ್ಯಾಂತರ ಸಂಪಾದಿಸಿದವರ ಎಲ್ಲಾ ಮುಖಗಳೂ ಎಲ್ಲಿಯೂ ಅನಾವರಣಗೊಂಡಿಲ್ಲ! ನಿಮಗೆ ಅದೆಲ್ಲ ಕಥೆಯನ್ನೂ ಹೇಳಬೇಕಿದೆ. ನಾನು ಮತ್ತೆ ಸಿಗುತ್ತೇನೆ. ’ರೈಗಳೇ “ಆತ್ಮ, ದೇಹವೆಂಬ ಅಂಗಿಯನ್ನ ಬದಲಿಸುತ್ತದೆ”ಎಂದಿದ್ದ ಗೀತೆಯಲ್ಲಿ ಶ್ರೀ ಕೃಷ್ಣ. ಕೇಸುಗಳಿಂದ ಕೈ ತೊಳೆದುಕೊಂಡು ಮೊದಲು ಬಂದು ನೀವು ಅಡ್ಡ ಬಿದ್ದದ್ದೂ ಇದೇ ಕೃಷ್ಣನೆಲದ ಪೊಡವಿಗೊಡೆಯನಿಗೆ. ಪುನರಪಿ ಜನನಂ ಪುನರಪಿ ಮರಣಂ ಎಂದದ್ದು ನಾನಲ್ಲ, ನೀವಲ್ಲ ಶ್ರೀ ಶಂಕರ ಭಗವದ್ಪಾದರು. ಮತ್ತಿಲ್ಲೇ ಹುಟ್ಟಿ ಬರುತ್ತೀರಿ. ಜಯಕರ್ನಾಟಕ ಜಯಕರಾವಳಿ.