ಬಾರದ ಮಾರ್ಗಸೂಚಿ: ಅತಂತ್ರದಲ್ಲಿ ನೇಕಾರರು
ರಬಕವಿ-ಬನಹಟ್ಟಿ,ಮೇ26: ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿರುವ `ನೇಕಾರ ಸಮ್ಮಾನ ಯೋಜನೆ’ಗೆ ಬಾಗಲಕೋಟೆ ಜಿಲ್ಲೆಯ ಸಾವಿರಾರು ನೇಕಾರರಿಗೆ `ಸಂಜೀವಿನಿ’ಯಾಗಿದೆ. ಕೊರೊನಾ ವೈರಸ್‍ನ ಲಾಕ್‍ಡೌನ್‍ಗೆ ತತ್ತರಿಸಿ ಹೋಗಿದ್ದ ನೇಕಾರ ಕುಟುಂಬಗಳ ಕನಿಷ್ಠ ನಿರ್ವಹಣೆಗೆ ಈ ಯೋಜನೆ ಆಶಾಕಿರಣವಾಗಬೇಕಿತ್ತು. ಬದಲಾಗಿ ಸರ್ಕಾರದ ವಿಳಂಬನೀತಿಯಿಂದಾಗಿ ಕನ್ನಡಿಯಲ್ಲಿನ ಯೋಜನೆಯಾಗಿಯೇ ಸಾಗುತ್ತಿರುವದು ವಿಪರ್ಯಾಸ.
ಕೇವಲ ಕೈಮಗ್ಗ ನೇಕಾರರಿಗೆ ಸಂಬಂಧ ಕೆಎಚ್‍ಡಿಸಿ ಹಾಗು ಖಾಸಗಿ ಸಂಸ್ಥೆಗಳಿಂದ ಪಾಸ್‍ಬುಕ್ ಸೇರಿದಂತೆ ಇತರೆ ದಾಖಲೆಗಳನ್ವಯ ಅಂಥವರಿಗೆ ಯೋಜನೆಗೆ ಸಂಬಂಧ ಪ್ರಕ್ರಿಯೆ ಮುಂದುವರೆದಿದೆ. ಆದರೆ ವಿದ್ಯುತ್ ಮಗ್ಗಗಳ ನೇಕಾರರು ಸರ್ಕಾರದ ಯೋಜನೆಯಲ್ಲಿ ಎಂದಿಗೂ ಎಲ್ಲಿಯೂ ಗುರ್ತಿಸಿಕೊಂಡಿಲ್ಲ. ಇವರ ಬಗ್ಗೆ ಸಮೀಕ್ಷೆಯೂ ನಡೆದಿಲ್ಲ. ಈಗಲೂ ನಡೆಯದಿರುವದು ವಿದ್ಯುತ್ ಮಗ್ಗ ನೇಕಾರರಲ್ಲಿ ಆತಂಕ ಸೃಷ್ಠಿಸುವಲ್ಲಿ ಕಾರಣವಾಗಿದೆ.
ಯೋಜನೆಯು ಕಟ್ಟಕಡೆಯ ಕುಟುಂಬಕ್ಕೆ ಸಹಾಯವಾಗಬೇಕಿದೆ. ಹೊತ್ತು ಊಟಕ್ಕೂ ಪರಿತಪಿಸುತ್ತಿರುವ ನೇಕಾರ ಕುಟುಂಬಗಳಿಗೆ ಸರ್ಕಾರದಿಂದ ಬಹುಬೇಗನೆ ಯೋಜನೆಯ ಹಣ ತಲುಪಬೇಕಾದ ಅಗತ್ಯವಿದೆ. ಹೀಗಿದಾಗ್ಯೂ ಸಂಬಂಧಪಟ್ಟ ಸರ್ಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಕುಂಠಿತಗೊಳ್ಳುವಲ್ಲಿ ಕಾರಣವಾಗಿ ವಿಳಂಬವಾಗಿದೆ. ಮತ್ತಷ್ಟು ದಿನಗಳು ವಿಳಂಬವಾದಲ್ಲಿ ಯೋಜನೆಯ ಮಹತ್ವ ಕಳೆದುಕೊಳ್ಳುವದಲ್ಲದೆ ನೇಕಾರರ ಹೊಟ್ಟೆಯ ಮೇಲಿನ ತಣ್ಣೀರ ಬಟ್ಟೆ ಹಾಗೇ ಮುಂದುವರೆಯಲಿದೆ.
`ಕಳೆದೆರಡು ತಿಂಗಳಿಂದ ಸಾವಿರಾರು ನೇಕಾರರು ಉದ್ಯೋಗವಿಲ್ಲದೆ ತುತ್ತು ಊಟಕ್ಕೂ ಗತಿಯಿಲ್ಲ. ಸರ್ಕಾರದ ಯೋಜನೆ ಅನುಷ್ಠಾನಗೊಳ್ಳಲು ಇನ್ನೂ ಮಾರ್ಗಸೂಚಿಯೇ ಬಾರದಿರುವದು ಬೇಸರ ತರುವಂಥದ್ದು, ತಕ್ಷಣವೇ ವಿದ್ಯುತ್ ಮಗ್ಗಗಳ ನೇಕಾರರ ಸಮೀಕ್ಷೆ ಹಾಗು ಅಂಥಹ ಕುಟುಂಬಗಳಿಗೆ ಆರ್ಥಿಕ ಸಬಲೀಕರಣ ಸರ್ಕಾರದಿಂದ ತಕ್ಷಣವೇ ನಡೆಯಬೇಕು. ಇಲ್ಲವಾದಲ್ಲಿ ಯೋಜನೆಯ ಮಹತ್ವ ಕಳೆದುಕೊಳ್ಳಲಿದೆ.’----ಮಲ್ಲಿಕಾರ್ಜುನ ಜುಮನಾಳ, ಕಾರ್ಯದರ್ಶಿ, ಕಾರ್ಮಿಕ ಸಂಘ, ರಬಕವಿ-ಬನಹಟ್ಟಿ.


ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ.... 

ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698...