ಸಂಕಷ್ಟದಲ್ಲಿರುವ ವೀರಗಾಸೆ ಪುರವಂತ ಮಹಾದೇವಪ್ಪ ಸಾವಳಗಿ
ಸಂಕಷ್ಟದಲ್ಲಿ ಕಲಾವಿದ: ಶಸ್ತ್ರಕ್ರಿಯೆ ನೆರವಿಗಾಗಿ ಮನವಿ
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಮೇ10: ಅವನೊಬ್ಬ ಅಪ್ರತಿಮ ವೀರಗಾಸೆ ಪುರವಂತ ಕಲಾವಿದ, ಅವರೊಳಗೆ ಪುರವಂತಿಕೆ ಹಾಸಿಹೊಕ್ಕಿ ಮಲಗಿದೆ. ಪ್ರತಿಯೊಂದು ವೀರಭದ್ರದೇವರ ಕಾರ್ತಿಕೋತ್ಸವ, ಸಾಂಸ್ಕ್ರತಿಕ ಹಾಗು ವಿಶೇಷವಾಗಿ ಗುಗ್ಗಳ ಕಾರ್ಯಕ್ರಮದಲ್ಲಿ ಮುಂಚೂಣಿ ವೀರಗಾಸೆಯಾಗಿ ಸೇವೆ ಸಲ್ಲಿಸುವ ಪಾತ್ರ ಹಿರಿದು ಹೆಸರು ಮಹಾದೇವಪ್ಪ ಸಾವಳಗಿಯೆಂಬ 65ರ ಇಳಿವಯಸ್ಸಿನ ವ್ಯಕ್ತಿ ಅವರ ಊರು ಬನಹಟ್ಟಿ. 
ಈಗ್ಗೆ ಎರಡು ತಿಂಗಲ ಹಿಂದೆ ಯಡೂರಿನ ವೀರಭದ್ರೇಶ್ವರ ದೇವಾಲಯದ ಕಾರ್ಯವೊಂದರಲ್ಲಿ ಸೇವೆ ಮಾಡುವ ಸಂದರ್ಭ ಬಿದ್ದ ಪರಿಣಾಮ ಸೊಂಟದಲ್ಲಿನ ಎಲುಬು ಸೀಳಿದೆ. ಇದರ ಚಿಕಿತ್ಸೆಗೆಂದು ಸ್ಥಳೀಯ ಎಲುಬು ತಜ್ಞರನ್ನು ಸಂಪರ್ಕಿಸಿದಾಗ, ಶಸ್ತ್ರಕ್ರಿಯೆ ಅನಿವಾರ್ಯವಿದ್ದು ಸಾವಿರಾರು ರೂ.ಗಳ ಖರ್ಚು ಕಾರಣ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕಳೆದ ಫೆ.12 ರಂದು ಕರೆದುಕೊಂಡ ಹೋದಾಗ ಕೆಲವೇ ದಿನಗಳಲ್ಲಿ ಕೊರೊನಾ ಮಹಾಮಾರಿಗೆ ಆಸ್ಪತ್ರೆ ಮೀಸಲಿಗೆ ಹಾಗು ಸೊಂಟದಲ್ಲಿ ತುಂಡಾದ ಎಲುಬಿಗೆ ಸಂಬಂಧ ಸಮರ್ಪಕವಾದ ಚಿಕಿತ್ಸೆ ದೊರಕದೆ ವಾಪಸ್ ತಾನಿದ್ದ ಬಾಡಿಗೆ ಮನೆ ತಲುಪಿದ್ದು, ದಿನಂಪ್ರತಿ ಆತನ ನರಕಯಾತನೆ ಹೇಳತೀರದು.
ಸದ್ಯ ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆ ಬಿಟ್ಟು ಯಾವ ಆಸ್ಪತ್ರೆಗೂ ತೆರಳಲಾಗದ ಸಂದಿಗ್ಧ ಪರಿಸ್ಥಿತಿ ಒಂದೆಡೆಯಾದರೆ ಕಿತ್ತು ತಿನ್ನುವ ಬಡತನವೆಂಬ ಬೇಲಿ ಈತನನ್ನು ಸುತ್ತು ಹಾಕಿದೆ. ಉಪಚಾರಕ್ಕೆಂದು ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಆತನೊಬ್ಬನೇ ಪಟ್ಟಣದ ನೀರಿನ ಟಾಕಿ ದಾನಮ್ಮದೇವಿ ದೇವಸ್ಥಾನ ಹತ್ತಿರದ ಇಂಚಲ್‍ನ ಶಿವಾನಂದ ಭಾರತಿ ಸ್ವಾಮಿಗಳ ಶಾಖಾ ಮಠದ ಪುಟ್ಟ ಕೋಣೆಯೊಳಗೆ ನಿತ್ಯ ನೋವಿನಿಂದ ಬಳಲುತ್ತಿದ್ದಾನೆ.
ಸೊಂಟ ಹೊಡೆತಕ್ಕೆಂದು ಅಲ್ಪಸ್ವಲ್ಪವಿದ್ದ ಮಾತ್ರೆಗಳೂ ಖಾಲಿಯಾಗಿದ್ದು, ಖರೀದಿಸಲೂ ಆತನ ಬಳಿ ಹಣವಿಲ್ಲ. ಕೆಲವರು ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆಯ ಅಗತ್ಯವಿದ್ದು, ಸಹಾಯಕ್ಕಾಗಿ 80731-60706 ಕೋರಿದ್ದಾರೆ.