ಬನಹಟ್ಟಿ ಸಹಕಾರಿ ನೂಲಿನ ಗಿರಣಿ
ಗಿರಣಿಯ ಗೋದಾಮಿನಲ್ಲಿ ಧೂಳು ತಿನ್ನುತ್ತಿರುವ ನೂಲು
ರಬಕವಿ-ಬನಹಟ್ಟಿ,ಮೇ20: ಅದು 1990ರ ದಶಕ. ಜವಳಿ ಕ್ಷೇತ್ರದಲ್ಲಿ ಇಡೀ ದೇಶವೇ ತನ್ನತ್ತ ನೋಡುವ ಮೂಲಕ 2ನೇ ಅತ್ಯಂತ ಬಲಿಷ್ಠ ಹಾಗು ಪ್ರಾಬಲ್ಯ ಹೊಂದಿದ್ದ ಗಿರಣಿ. ಸದ್ಯ ಕೊರೊನಾ ವೈರಸ್‍ನ ಲಾಕ್‍ಡೌನ್‍ಗೆ ನಲುಗಿ ಇಡೀ ಗಿರಣಿ ಮುಚ್ಚುವ ಭೀತಿಯಲ್ಲಿರುವದು ನಿಜಕ್ಕೂ ಖೇಧಕರ ಸಂಗತಿ.
ಕರ್ನಾಟಕದಲ್ಲಿಯೇ ಸಹಕಾರಿ ಕ್ಷೇತ್ರ ಅದರಲ್ಲೂ ನೇಕಾರರಿಂದ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸಹಕಾರಿ ನೂಳಿನ ಗಿರಣಿ ನಿಜಕ್ಕೂ ಅತ್ಯಂತ ಶೋಚನೀಯ ಸ್ಥಿತಿ ತಲುಪಿದೆ. ಮೊದಲೇ ಸಮಸ್ಯೆಗಳ ಸರಮಾಲೆಯಲ್ಲಿ ಬಳಲುತ್ತಿದ್ದ ಗಿರಣಿಗೆ ಕೊರೊನಾ ವೈರಸ್‍ನ ಲಾಕ್‍ಡೌನ್ ಪಾಶ್ರ್ವವಾಯು ಬಡಿದಂತಾಗಿದೆ.
ಕಳೆದ ಏಪ್ರಿಲ್ ಹಾಗು ಮೇ ತಿಂಗಳಲ್ಲಿ ಗಿರಣಿಯ ಕೆಲಸ ಕಾರ್ಯ ಮತ್ತು ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡ ಕಾರಣ ಕಾರ್ಮಿಕರಿಗೆ, ಸಿಬ್ಬಂದಿಗೆ ಸಂಭಾವಣೆ ನೀಡಿಲ್ಲ. ಒಟ್ಟಾರೆ ಮುನ್ನೂರಕ್ಕೂ ಅಧಿಕ ಕಾರ್ಮಿಕ, ಸಿಬ್ಬಂದಿಗಳಿದ್ದು ತಲಾ 10 ಸಾವಿರ ರೂ.ಗಳಷ್ಟು ವೇತನ ನೀಡಬೇಕು. ಇಲ್ಲಿಯವರೆಗೆ ವೇತನ ಬಟವಡೆ ಮಾಡಲು ಸಾಧ್ಯವಾಗಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಶೂನ್ಯ ಬಂಡವಾಳದಲ್ಲಿರುವ ಗಿರಣಿ ಸಂಕಷ್ಟ ಹೇಳತೀರದು.
ಕೈಕೊಟ್ಟ ವ್ಯಾಪಾರ: ಇಲ್ಲಿ ತಯಾರಾಗುವ ನೂಲು ಮಹಾರಾಷ್ಟ್ರದ ಇಂಚಲಕರಂಜಿ, ಕೊಲ್ಲಾಪುರ, ಮಾಲೆಗಾಂವ್, ಮುಂಬೈ, ಬೇವುಂಡಿ ಸೇರಿದಂತೆ ಇತರೆ ಪ್ರದೇಶಗಳಿವೆ. ಸದ್ಯ ಅವೆಲ್ಲವೂ ಕೆಂಪು ವಲಯದಲ್ಲಿರುವ ಕಾರಣ ಅಲ್ಲಿನ ಕಾರ್ಖಾನೆಗಳು ಪ್ರಾರಂಭಗೊಂಡಿಲ್ಲ. ಹೀಗಾಗಿ 2.5 ಕೋಟಿ ರೂ.ಗಳಷ್ಟು ತಯಾರಾದ ನೂಲು ಗೋದಾಮು ಸೇರಿದೆ. ಇದನ್ನು ಕೇಳುವವರೇ ಇಲ್ಲ.
ಕಾರ್ಮಿಕರಿಲ್ಲ: ಸದ್ಯ ಗಿರಣಿ ಪ್ರಾರಂಭಿಸಬೇಕೆಂದರೆ ಎಲ್ಲ ಕಾರ್ಮಿಕರು ವಾಪಸ್ ತಮ್ಮ ತಮ್ಮ ಊರಿಗೆ ತೆರಳಿದ್ದಾರೆ. ಗಿರಣಿ ಪ್ರಾರಂಭವಾದರೂ ಖರೀದಿಸಲು ಯಾರೂ ಮುಂದೇ ಬರುತ್ತಿಲ್ಲ. ಹೀಗಾಗಿ ಕಾರ್ಮಿಕರ ಬದುಕು ಅಧೋಗತಿಯಾಗಿದೆ.
ಹೆಸ್ಕಾಂ ಭಾರ: ಪ್ರತಿ ತಿಂಗಳು 30 ಲಕ್ಷ ರೂ.ಗಳಷ್ಟು ವಿದ್ಯುತ್ ಬಿಲ್ ಕಟ್ಟುತ್ತಿರುವ ಈ ಗಿರಣಿಯು ಸದ್ಯ ಎರಡು ತಿಂಗಳಿಂದ ವಿದ್ಯುತ್ ಉರಿಸದೇ ಇದ್ದರೂ ಕನಿಷ್ಠ ದರ ಮಾಸಿಕ 2.7 ಲಕ್ಷ ರೂ.ಗಳನ್ನಾದರೂ ಕಟ್ಟಲೇಬೇಕಿದೆ. ಇದರ ಹಣ ಸರಿದೂಗಿಸಲೂ ಕಠಿಣ ಪರಿಸ್ಥಿತಿ ಗಿರಣಿಯದ್ದಾಗಿದೆ.
ಒಟ್ಟಾರೆ ಸಾವಿರಾರು ಕುಟುಂಬಗಳು ಈ ಗಿರಣಿಯನ್ನೇ ನಂಬಿ ಬದುಕುತ್ತಿರುವವರು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ತಕ್ಷಣವೇ ಗಿರಣಿಯ ಪುನಶ್ಚೇತನಕ್ಕೆ ಸಹಕಾರಿಯಾದಲ್ಲಿ ಈ ಭಾಗದ ನೇಕಾರರ ಬದುಕು ಕೊಂಚ ನಿರಾಳವಾಗಬಹುದು. ಇಲ್ಲವಾದಲ್ಲಿ ವಾಪಸ್ ತನ್ನ ಗತ ವೈಭವವನ್ನು ಮುನ್ನಡೆಸಲು ಹರಸಾಹಸ ಪಡುವಲ್ಲಿ ಕಾರಣವಾಗಲಿದೆ.

Social Plugin