◆ ಯಾತ್ರೆ ಮುಗಿಸಿ ಹೊರಟು ಹೋದ ಶಾಪಗ್ರಸ್ತ ಸೈಕಲ್ ಜಾಕ್ಸನ್!◆
ಕ್ರಪೆ : ಗಣೇಶ್ ಕಾಸರಗೋಡ

     ನೂರು ಸಿನಿಮಾ ಪೂರೈಸಿದಾಗ ಈ ಮೈಕೆಲ್ ಮಧು ಬಗ್ಗೆ ನನ್ನ 'ಚಿತ್ರತಾರಾ'ದಲ್ಲಿ ಪುಟ್ಟದೊಂದು ಐಟಮ್ ಬರೆದಿದ್ದೆ. 15-4-2005ರ ಸಂಚಿಕೆಯಲ್ಲಿ ಅದು ಪ್ರಕಟವಾಗಿತ್ತು. 15 ವರ್ಷಗಳ ನಂತರವೂ, ಅಂದರೆ ಕಳೆದ ವಾರದ ಒಂದು ರಾತ್ರಿ ಫೋನ್ ಮಾಡಿ ಅಳುತ್ತಲೇ ಆ ಐಟಮ್ ಬಗ್ಗೆ ಮಾತಾಡಿದ್ದ : 'ಅಣ್ಣಾ, ನಾನು ಕಲಾವಿದನೇ ಅಲ್ವಾ? ಯಾಕೆ ಇವರೆಲ್ಲಾ ಹೀಗೆ ಟ್ರೀಟ್ ಮಾಡ್ತಾರಣ್ಣಾ? ಅವಕಾಶಗಳಿಲ್ಲ, ದುಡ್ಡೂ ಇಲ್ಲ. ಆತ್ಮೀಯವಾಗಿ ನೋಡುವ ಕಣ್ಣೂ ಇಲ್ಲ. ಸ್ನೇಹಿಸುವ ಹೃದಯವೂ ಇಲ್ಲ, ಮನಸ್ಸೂ ಇಲ್ಲ. ನಾನೇನು ಪಾಪ ಮಾಡಿದ್ದೇನೆ ಅಂತ ಇವರೆಲ್ಲಾ ಹೀಗೆ ತಿರಸ್ಕಾರದಿಂದ ನೋಡ್ತಾರಣ್ಣಾ? ಅವಕಾಶವೂ ಬೇಡ, ದುಡ್ಡೂ ಬೇಡ. ಅಟ್'ಲೀಸ್ಟ್ ಮನುಷ್ಯನ ಹಾಗಾದ್ರೂ ನೋಡಬೇಡ್ವಾ? ಆ ದಿನ ನೀವು ಬರೆದ ಐಟಮ್ ಓದಿ ಎಷ್ಟೊಂದು ಖುಷಿ ಪಟ್ಟೆ ಗೊತ್ತೇನಣ್ಣಾ? ಅದರ ಕಟಿಂಗನ್ನು ಇನ್ನೂ ಜೋಪಾನವಾಗಿ ತೆಗೆದಿಟ್ಟಿದ್ದೇನಣ್ಣಾ...' - ಎಂದೆಲ್ಲಾ ಹೇಳಿ ಅಳುತ್ತಲೇ ಇದ್ದ.
     ಮೈಕೆಲ್ ನನಗೆ ಫೋನ್ ಮಾಡುತ್ತಿದ್ದುದು ರಾತ್ರಿ ಹತ್ತರ ನಂತರ! ಹೃದಯದಲ್ಲಿ ಮಡುಗಟ್ಟಿದ ನೋವುಗಳನ್ನು ಹೊರಹಾಕಲು ಇದು ಪ್ರಶಸ್ತ ಸಮಯವೆಂದು ಮೈಕೆಲ್ ಭಾವಿಸಿದ್ದನೋ ಗೊತ್ತಿಲ್ಲ. ಮಾತಿಗಿಂತಲೂ ಅಳು ಜಾಸ್ತಿ. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಒಂದು ಸಾರಿ ಬರೋಬ್ಬರಿ ಅರ್ಧ ಗಂಟೆ ಕಾಲ ಅಳುತ್ತಲೇ ಇದ್ದ! 'ಯಾಕೆ ಮಾರಾಯಾ? ಏನಾಯಿತು ಹೇಳು, ಆ ಮೇಲೆ ಅಳು...' - ಅಂತ ಎಷ್ಟು ಹೇಳಿಕೊಂಡರೂ ಅಳುತ್ತಲೇ ಇದ್ದ! ಅರ್ಧ ಗಂಟೆಯ ನಂತರ ಫೋನಿಟ್ಟು ಮೌನವಾದ!
     ಒಮ್ಮೆ ಕಾನಿಷ್ಕಾ ಹೋಟೆಲಿನಲ್ಲಿ ಊಟ ಮಾಡುತ್ತಿದ್ದೆ. ನನ್ನ ಜತೆ ಅಜ್ಜಿಮನೆ ನಾಗೇಂದ್ರ ಇದ್ದರು. ಉಂಡಾಡಿಗುಂಡ ಗಣಪತಿ ಭಟ್ಟನನ್ನು ಮೀಟ್ ಮಾಡಲೆಂದೇ ಗಾಂಧಿನಗರಕ್ಕೆ ಹೋಗಿದ್ದೆ. ಆತ ಸಿಕ್ಕಿರಲಿಲ್ಲ. ಹಸಿವಾಗಿತ್ತು. ಹೀಗಾಗಿ ತುತ್ತು ಬಾಯಿಗಿಡುತ್ತಾ ನೋಡುತ್ತೇನೆ, ಮೈಕೆಲ್ ಮಧು ಎದುರುಗಡೆಯೇ ನಿಂತಿದ್ದ. ಬೆವೆತಿದ್ದ. ಅಸಹಾಯಕನಾಗಿದ್ದ. ಕಣ್ಣೀರು ತುಳುಕಲು ರೆಡಿಯಾಗಿತ್ತು. ನಾನಂದೆ : 'ಊಟ ಮಾಡ್ತೀಯೇನೋ?'. ಉತ್ತರಿಸದೇ ಮೌನವಾಗಿ ಅಜ್ಜಿಮನೆ ನಾಗೇಂದ್ರ ಪಕ್ಕ ಕೂತೇ ಬಿಟ್ಟ! ಊಟಕ್ಕೆ ಆರ್ಡರ್ ಮಾಡಿದೆ. ಒಂದೂಟ ಸಾಕಾಗಲಿಲ್ಲವೋ ಏನೋ, ಮತ್ತೊಂದು ಊಟ ತರಿಸಿದ! ಹತ್ತೇ ನಿಮಿಷ, ತೇಗುತ್ತಾ ಎದ್ದೇ ಬಿಟ್ಟ! ಹೋಗುವಾಗ ಆತ ಹೇಳಿದ್ದೇನು ಗೊತ್ತಾ? 'ಅಣ್ಣಾ, ದೇವ್ರು ನಿಮ್ಮನ್ನು ಚೆನ್ನಾಗಿ ಇಟ್ಟಿರ್ಲಿ. ಇನ್ನು ನಾಲ್ಕು ದಿನ ಊಟವಿಲ್ಲ. ಅದರ ಮೊದಲು ಯಾರಾದ್ರೂ ಊಟ ಹಾಕಿದ್ರೆ ಉಂಟು, ಇಲ್ಲವಾದ್ರೆ ಇಲ್ಲ...' - ನಾನು ಏನು ಹೇಳಲಿ? ನಾಗೇಂದ್ರನಿಗೆ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಊಟ ಬಿಟ್ಟು ಎದ್ದೇ ಬಿಟ್ರು! 
     ಇಂಥಾ ದುಃಸ್ಥಿತಿಯ ಮೈಕೆಲ್ ಮಧು ಉರುಫ್ 'ಸೈಕಲ್ ಜಾಕ್ಸನ್' ಇಂದು ನಮ್ಮ ಜತೆಯಿಲ್ಲ. ಊಟವೇ  ಬೇಡದೂರಿಗೆ ಪಯಣಿಸಿದ್ದಾನೆ! ರಾತ್ರಿಯ ಹತ್ತರ ಸಮಯದಲ್ಲಿ ಫೋನ್ ರಿಂಗಿಸಿದಾಗಲೆಲ್ಲಾ ಈತನ ನೆನಪು ಆಗುತ್ತಲೇ ಇರುತ್ತದೆ...ಸೋ ಸ್ಯಾಡ್...