ಸಾಂಸ್ಥಿಕ ಕ್ವಾರಂಟೈನ್: ನನ್ನ ಹಸ್ತಕ್ಷೇಪವಿಲ್ಲ-ಸವದಿ
ರಬಕವಿ-ಬನಹಟ್ಟಿ, ಮೇ14: ರಬಕವಿ-ಬನಹಟ್ಟಿ ತಾಲೂಕಾದ್ಯಂತ ಎಲ್ಲೆಡೆ ಜಿಲ್ಲಾಡಳಿತದಿಂದ ಅನ್ಯ ರಾಜ್ಯಗಳಿಂದ ಬರುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಆದರೆ ನನ್ನ ಕಾರ್ಯವೈಖರಿ ಅಥವಾ ಹಸ್ತಕ್ಷೇಪವೇನೂ ಇಲ್ಲ. ವಿನಾಕಾರಣ ಕೆಲ ಕಿಡಿಗೇಡಿಗಳು ನನ್ನನ್ನೇ ಗುರಿಯಿಟ್ಟು ಇಲ್ಲಸಲ್ಲದ ಟೀಕೆ ಸರಿಯಲ್ಲವೆಂದುಶಾಸಕ ಸಿದ್ದು ಸವದಿ ಖಾರವಾಗಿ ನುಡಿದರು.
ಈಚೆಗೆ ಲಕ್ಷ್ಮೀ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ಲೋಪದೋಷಕ್ಕೆ ಉತ್ತರಿಸಿದ ಅವರು, ಕೊರೊನಾ ವೈರಸ್ ತಡೆಯುವಲ್ಲಿ ಸಾಂಸ್ಥಿಕ ಕ್ವಾರಂಟೈನ್ ಪ್ರಮುಖ ಅಸ್ತ್ರವಾಗಿದೆ. ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಯಾವದೇ ರಾಜಕೀಯ ಬೇಡ. ನಿಯಮಗಳನ್ನು ಗಾಳಿಗೆ ತೂರಿ ಹುಚ್ಚಾಟ ನಡೆಸಲೂ ಬಾರದು ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಎಲ್ಲರೂ ಪಾಲಿಸಬೇಕೆಂದು ಸವದಿ ಹೇಳಿದರು.
ವ್ಯಾಪಾರ ಸಡಿಲಿಕೆ ಜನರ ಬೇಡಿಕೆ: ಈಚೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಾಲೂಕಾದ್ಯಂತ ಸಾರ್ವಜನಿಕರ ಮಾರುಕಟ್ಟೆ ಬೇಡಿಕೆ ಕಾರಣ ವ್ಯಾಪಾರ ಸಡಿಲಿಕೆ ಮಾಡಲಾಗಿದೆ. ಇದೇ ಕಾರಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸಾರ್ವಜನಿಕರು ಇದನ್ನು ಬೇಡವೆಂದಲ್ಲಿ ಮತ್ತೇ ಸಂಪೂರ್ಣ ಸೀಲ್‍ಡೌನ್ ಮಾಡುವಲ್ಲಿ ತಯಾರಿ ಎಂದು ಶಾಸಕ ಸವದಿ ಸ್ಪಷ್ಟನೆ ನೀಡಿದರು.