ಕಿರುತೆರೆ ಮೇಲಿನ 'ರಾಧಾಕೃಷ್ಣ'ರ ತುಂಟಾಟವೂ, ಡಬ್ಬಿಂಗ್ ವಿರುದ್ಧ ಸಿಂಗ್ ಬಾಬು ಹೋರಾಟವೂ...!
ಡಬ್ಬಿಂಗ್ ವಿರುದ್ಧ ನಮ್ಮ ಹಿರಿಯರಾದ ಎಸ್. ವಿ.ರಾಜೇಂದ್ರಸಿಂಗ್ ಬಾಬು ಅವರು ಗಟ್ಟಿ ದನಿಯೆತ್ತಿದ್ದಾರೆ. ಸ್ವಾಗತಾರ್ಹ. ಆದರೆ ಈ ದನಿಗೆ ಅವರು ಸರ್ವಥಾ ಅರ್ಹರಲ್ಲ ಎಂಬುದಕ್ಕೆ 21 ವರ್ಷಗಳ ಹಿಂದೆ ನಡೆದ ಈ ಕೆಳಗಿನ ಒಂದು ಘಟನೆಯೇ ಸಾಕ್ಷಿ :
ಇದು 1999ರ ಕಥೆ. ಆಗ ಬಾಬು ಅವರು 'ಭಾರತ್-2000' ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಚಿತ್ರೀಕರಣ ನಡೆಯುತ್ತಿದ್ದುದು ಹೈದರಾಬಾದ್'ನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ. ಏಕೆಂದರೆ ಈ ಚಿತ್ರದ ನಿರ್ಮಾಪಕರು ಸ್ವತಃ ರಾಮೋಜಿ ರಾಯರೇ. ಹೀಗಾಗಿ ಚಿತ್ರೀಕರಣ ವೀಕ್ಷಿಸಲೆಂದು ಬೆಂಗಳೂರಿನಿಂದ ಸಿನಿಮಾ ಪತ್ರಕರ್ತರನ್ನು ರಾಮೋಜಿ ಫಿಲಂ ಸಿಟಿಗೆ ಬಾಬು ಕರೆಸಿಕೊಂಡಿದ್ದರು. ಚಿತ್ರೀಕರಣ ವೀಕ್ಷಿಸಿದ ನಂತರ ಪತ್ರಿಕಾ ಗೋಷ್ಠಿ.
ಹಿಂದಿನ ದಿನವಷ್ಟೇ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಅವರ AK47 ಚಿತ್ರ ತೆರೆ ಕಂಡಿತ್ತು. ಆದ್ಯಾರು ಫೋನ್ ಮಾಡಿ ಬಾಬು ಅವರಿಗೆ AK47 ಚಿತ್ರದ ಕಲೆಕ್ಷನ್ ಬಗ್ಗೆ ನೆಗೆಟಿವ್ ಆಗಿ ಹೇಳಿದ್ದಾರೋ ಗೊತ್ತಿಲ್ಲ, ಬಾಬು ಖುಶಿಯಿಂದಿದ್ದರು! ಕಾರಣ ದೊಡ್ಡ ಮಟ್ಟದ ಅಸೂಯೆ! ಫೋನ್ ಮಾಡಿದ್ದವರು ಹೇಳಿದ್ದಿಷ್ಟು : 'AK47 ಒಂದು ಫ್ಲ್ಯಾಪ್ ಫಿಲಂ. ಚಿತ್ರಮಂದಿರ ಖಾಲಿ ಹೊಡೆಯುತ್ತಿದೆ. ನೋ ರೆಸ್ಪೋನ್ಸ್ ಅಟ್ ಆಲ್...'
ಅಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ 'ಭಾರತ್ 2000' ಚಿತ್ರದ ಬಗ್ಗೆ ಹೇಳಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ 'AK47' ಚಿತ್ರದ ಬಗ್ಗೆ ನೆಗೆಟಿವ್ ಆಗಿ ಮಾತಾಡುವುದರಲ್ಲೇ ಬಾಬು ಕಾಲ ಕಳೆದರು. ಆದರೆ ಹೈದರಾಬಾದಿನಿಂದ ಬೆಂಗಳೂರಿಗೆ ಹೊರಡುವ ಹೊತ್ತಿಗೆ ರಾಮು ಅವರು ಮಾರನೇ ದಿನ ಸಕ್ಸಸ್ ಪ್ರೆಸ್ ಮೀಟ್ ಅರೇಂಜ್ ಮಾಡಿರುವ ಬಗ್ಗೆ ಮೆಸೇಜ್ ಬಂತು. ಮೆಸೇಜ್ ಓದಿ ಆಶ್ಚರ್ಯವಾಯಿತು. ಈ ಆಶ್ಚರ್ಯ ಮತ್ತು ಬಾಬು ಸ್ಪೋಟಿಸಿದ ಬಾಂಬು ಎರಡನ್ನೂ ಸೇರಿಸಿಕೊಂಡು 25-6-1999ರ 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ನಾನೊಂದು ರಿಪೋರ್ಟ್ ಬರೆದೆ. ಹೆಡ್ಡಿಂಗ್ : 'ಬಂದೂಕು ವಿರುದ್ಧ ಬಾಬು ಬಾಂಬು'.
ಮುಖಪುಟದಲ್ಲಿ ದೊಡ್ಡದಾಗಿ ಪ್ರಕಟವಾದ ಸುದ್ದಿಯನ್ನು ಓದಿ ಬಾಬು ಕೆಂಡಾಮಂಡಲ! ತಕ್ಷಣ ಜಾಗೃತರಾದ ಬಾಬು ನನ್ನ ವಿರುದ್ಧ ನಮ್ಮ ವ್ಯವಸ್ಥಾಪಕ ಸಂಪಾದಕರಾಗಿದ್ದ ಶಾಮರಾವ್ ಅವರಿಗೊಂದು ಪತ್ರ ಬರೆದರು. ಮುಂದೇನಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು! ಹೀಗಾಗಿ ನಾನು ಅಂದು ಆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪತ್ರಕರ್ತ ಮಿತ್ರರ ಅಭಿಪ್ರಾಯ ಪಡೆದು ಸಹಿ ಸಮೇತ ಒಂದು ಪತ್ರವನ್ನು ರೆಡಿ ಮಾಡಿಟ್ಟುಕೊಂಡೆ. ಆಗ ಚಾಲ್ತಿಯಲ್ಲಿದ್ದ 'ಕರ್ನಾಟಕ ಚಲನಚಿತ್ರ ಪತ್ರಕರ್ತರ ವೇದಿಕೆ' ಅಧ್ಯಕ್ಷರಿಗೆ ಮತ್ತೊಂದು ಪತ್ರ ಬರೆದೆ.
ಮತ್ತೊಬ್ಬರಿಗೆ ಕೇಡು ಬಗೆದರೆ, ಅದೇ ಕೇಡು ತಿರುಗುಬಾಣವಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮತ್ತೆ ಇದೇ ಬಾಬು ಹೆಸರನ್ನೇ ಉಲ್ಲೇಖಿಸಬೇಕಾಗಿದೆ. ಯಾವ ಚಿತ್ರದ (ಭಾರತ್ 2000) ಪ್ರೆಸ್ ಮೀಟ್'ನಲ್ಲಿ 'AK47' ಬಗ್ಗೆ ಲಘುವಾಗಿ ಮಾತಾಡಿ ವಿವಾದಕ್ಕೆ ಕಾರಣರಾದರೋ ಅದೇ ಚಿತ್ರದ ಕಾರಣಕ್ಕಾಗಿ ಬಾಬು ಅವರಂಥಾ ದೊಡ್ಡ ನಿರ್ದೇಶಕರ ಹೆಸರ ಮೇಲೆ ಕೆಸರು ಮೆತ್ತಿಕೊಳ್ಳುವಂಥಾ ಪ್ರಸಂಗ ನಡೆಯಿತು...
ವಿಷಯ ಏನಪ್ಪಾ ಅಂದ್ರೆ : 'ಭಾರತ್ 2000' ಅಪ್ಪಟ ಡಬ್ಬಿಂಗ್ ಚಿತ್ರ. ಮೊದಲು ತೆಲುಗಿನಲ್ಲಿ ಚಿತ್ರಿಸಿ ನಂತರ ಕನ್ನಡಕ್ಕೆ ಡಬ್ ಮಾಡಿರುವುದನ್ನು ವಿರೋಧಿಸಿ ಅಂದಿನ ಮೀಡಿಯಗಳೆಲ್ಲಾ ಸಾಮೂಹಿಕವಾಗಿ ಹೋರಾಟಕ್ಕಿಳಿದಾಗ ಅನಿವಾರ್ಯವಾಗಿ ಬಾಬು ಒಪ್ಪಿಕೊಂಡು, ನಿರ್ದೇಶಕರ ಸಂಘಕ್ಕೆ ರಾಜೀನಾಮೆ ನೀಡಬೇಕಾಯಿತು! 3-10-1999ರಂದು ಬಾಬು ಅವರು ರಾಜೀನಾಮೆ ನೀಡಿದರು. 8-11-1999ರಂದು ಈ ಪತ್ರ ಸ್ವೀಕೃತಿಯಾಗಿರುವ ಬಗ್ಗೆ ನಿರ್ದೇಶಕರ ಸಂಘದಿಂದ ಪ್ರಕಟಣೆಯೂ ಹೊರಬಿತ್ತು!
ಒಟ್ಟಿನಲ್ಲಿ ಇದನ್ನೆಲ್ಲಾ ಇಲ್ಲಿ ಯಾಕೆ ನೆನಪಿಸಿಕೊಳ್ಳ ಬೇಕಾಯಿತೆಂದರೆ : ಇತ್ತೀಚೆಗಿನ ದಿನಗಳಲ್ಲಿ ಬೆಣ್ಣೆ ಕಳ್ಳ ಶ್ರೀಕೃಷ್ಣ ನನ್ನ ರಾತ್ರಿಯ ಅಮೂಲ್ಯವಾದ 2 ಗಂಟೆ ಸಮಯವನ್ನು ಅನಾಮತ್ತಾಗಿ ಕಳ್ಳತನ ಮಾಡಿದ್ದಾನೆ! 'ಸ್ಟಾರ್ ಸುವರ್ಣ'ದಲ್ಲಿ ಪ್ರಸಾರವಾಗುತ್ತಿರುವ 'ರಾಧಾಕೃಷ್ಣ' ಮತ್ತು 'ಮಹಾಭಾರತ' ಧಾರಾವಾಹಿಗಳು ನನ್ನ ಫೇವರಿಟ್ ಆಗಿವೆ! ಇವೆರಡೂ ಡಬ್ಬಿಂಗ್ ಧಾರಾವಾಹಿಗಳು. ಎಂಥಾ ಕೊರತೆಗಳೇ ಇರಲಿ ಕಿರುತೆರೆ ಮೇಲೆ ಈ ಕೃಷ್ಣನ ತುಂಟತನ ಮತ್ತು ರಾಧೆಯ ಮುಗ್ಧತನವನ್ನು ಕಂಡಾಗ ಎಲ್ಲಾ ಕೊರತೆಗಳೂ ಮಂಗಮಾಯ! ಯಾವ ನಿರ್ದೇಶಕರೋ, ಯಾವ ಕಲಾವಿದರೋ, ಎಲ್ಲಿಂದ ಇದನ್ನು ಹೊತ್ತು ತಂದರೋ ಗೊತ್ತಿಲ್ಲ. ಆದರೆ ಇಂದಿನ ಮೀಡಿಯಾಗಳ 'ಲಕ್ಡೌನ್ ಕಂಟಕ'ದಿಂದ ಈ ಧಾರಾವಾಹಿ ನನ್ನನ್ನು ಮತ್ತು ನನ್ನಂಥವರನ್ನು ಪಾರು ಮಾಡಿದೆ ಎನ್ನುವುದು ಮಾತ್ರ ಸತ್ಯಸ್ಯಸತ್ಯ!

Social Plugin