ಮಹಾಭಾರತ ಮತ್ತು ನೀರಾವರಿಯ ಯೋಜನೆಗಳು
ಜನಮೇಜಯನ ಕಾಲದಲ್ಲಿ ಧೌಮ್ಯರೆಂಬ ಹೆಸರಿನ ಮಹರ್ಷಿಗಳೊಬ್ಬರಿದ್ದರು. ಅವರಿಗೆ ಆಯೋಧ ಎನ್ನುವ ಹೆಸರೂ ಇತ್ತು. ಇವರಿಗೆ ಶಿಷ್ಯನಾಗಿದ್ದ ಉಪಮನ್ಯುವು ದೌಮ್ಯರ ಸಹೋದರ ಎನ್ನುವುದಾಗಿ ಮಹಾಭಾರತದ ಅನುಶಾಸನ ಪರ್ವದಲ್ಲಿ ಹೇಳಲ್ಪಟ್ಟಿದೆ. ಅವರಿಗೆ ಆರುಣಿ, ಉಪಮನ್ಯು ಮತ್ತು ವೇದ ಎಂಬ ಮೂವರು ಶಿಷ್ಯರಿದ್ದರು ಎಂದು ಆದಿಪರ್ವದಿಂದ ತಿಳಿದು ಬರುತ್ತದೆ. ಅನುಶಾಸನ ಪರ್ವದಲ್ಲಿ ಇವರ ತಂದೆ ವ್ಯಾಘ್ರಪಾದ ಎನ್ನಲಾಗಿದೆ. ವನಪರ್ವ ಮತ್ತು ವಿರಾಟಪರ್ವದಲ್ಲಿ ಪ್ರತ್ಯೂಷ ಎನ್ನುವವರ ಮಗ ಎನ್ನಲಾಗಿದೆ. ಇವರು ಪಾಂಡವರಿಗೆ ಪುರೋಹಿತರಾಗಿದ್ದಲ್ಲದೇ, ತೀರ್ಥಸ್ಥಳಗಳ ಮಹತ್ವವನ್ನು ವಿವರಿಸಿದ್ದರು. ಪಾಂಡವರು ಅಜ್ಞಾತವಾಸಕ್ಕೆ ಹೊರಟಾಗ ಅವರ ಮನೆಯಲ್ಲಿ ಸೇವಕರು ಹೇಗಿರಬೇಕು ಎನ್ನುವುದನ್ನು ತಿಳಿಸಿಕೊಟ್ಟವರು. ಪಾಂಡವರು ಅಜ್ಞಾತವಾಸ ಮಾಡುತ್ತಿದ್ದಾಗ ಅವರ ಜೊತೆಯಲ್ಲಿಯೇ ಅಗ್ನಿಕಾರ್ಯಗಳನ್ನು ಮಾಡಿಕೊಂಡು ಇದ್ದವರು ಎನ್ನುವುದು ವಿರಾಟ ಪರ್ವದಿಂದ ತಿಳಿಯುತ್ತದೆ. ಇವರ ಶಿಷ್ಯರಲ್ಲಿ ಇಬ್ಬರ ಕುರಿತು ಬರೆಯದೇ ಈಗ ಆರುಣಿ ಎನ್ನುವವನ ಕುರಿತು ಬರೆಯುತ್ತಿದ್ದೇನೆ. 

ಒಮ್ಮೆ ಧೌಮ್ಯರು ಪಾಂಚಾಲದೇಶೀಯನಾದ ಆರುಣಿಯನ್ನು ಕರೆದು ಒಡೆದುಹೋಗಿದ್ದ ಗದ್ದೆಯ ಬದುವನ್ನು ಕಟ್ಟಿಬರುವಂತೆ ಹೇಳಿ ಕಳುಹಿಸುತ್ತಾರೆ. ಗುರುಗಳಿಂದ ನಿರ್ದೇಶಿತನಾದ ಆರುಣಿಯು ಗದ್ದೆಯ ಬಳಿಗೆ ಹೋಗಿ ಕೊಚ್ಚಿಹೋಗುತ್ತಿದ್ದ ಬದುವನ್ನು ಸರಿಪಡಿಸಲು ತುಂಬಾ ಪ್ರಯತ್ನಿಸುತ್ತಾನೆ. ಅವನು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿಹೋಗುತ್ತವೆ. ಹೀಗೆಯೇ ಪ್ರಯತ್ನವನ್ನು ಬಹುಕಷ್ಟದಿಂದ ಮುಂದುವರಿಸುತ್ತಿದ್ದಾಗ ಅವನಿಗೊಂದು ಉಪಾಯವು ಹೊಳೆಯುತ್ತದೆ. ಅದರಂತೇ ಮಾಡಲು ಮುಂದಾಗುತ್ತಾನೆ. ನೀರು ಹರಿಯುತ್ತಿದ್ದ ಕಡೆ ಅಡ್ಡಲಾಗಿ ಮಲಗಿಬಿಡುತ್ತಾನೆ. ಒಡನೆಯೇ ಹೊರಗೆ ಹೋಗುತ್ತಿದ್ದ ನೀರು ನಿಂತುಹೋಗುತ್ತದೆ. ಸ್ವಲ್ಪ ಹೊತ್ತಾದ ನಂತರದಲ್ಲಿ ಆಯೋದ ಧೌಮ್ಯರು ಶಿಷ್ಯರನ್ನು ಕೇಳುತ್ತಾರೆ : “ಆರುಣಿಯು ಎಲ್ಲಿ ಹೋಗಿದ್ದಾನೆ?” ಅದಕ್ಕೆ ಶಿಷ್ಯರು ತಾವೇ ಆರುಣಿಯನ್ನು ಕೊಚ್ಚಿಹೋಗುತ್ತಿದ್ದ ಗದ್ದೆಯ ಬದುವನ್ನು ಸರಿಪಡಿಸಿ ಬರುವಂತೆ ಆಜ್ಞೆಮಾಡಿ ಕಳುಹಿಸಿಕೊಟ್ಟಿದ್ದೀರಿ.” ಎನ್ನುತ್ತಾರೆ. ಶಿಷ್ಯರು ಹೀಗೆ ಹೇಳಿದೊಡನೆಯೇ ಆಯೋದಧೌಮ್ಯರು ಆರುಣಿಯಿರುವ ಕಡೆಗೆ ಎಲ್ಲರೂ ಹೋಗೋಣವೆಂದು ಹೇಳಿ ಶಿಷ್ಯರ ಸಮೇತರಾಗಿ ಗದ್ದೆಯ ಬಳಿಗೇ ಹೊರಟು ಬಿಡುತ್ತಾರೆ. ಗದ್ದೆಯ ಹತ್ತಿರ ಬಂದು ಚಪ್ಪಾಳೆಯನ್ನು ತಟ್ಟಿ ಗಟ್ಟಿಯಾಗಿ ಹೇಳುತ್ತಾರೆ : “ಆರುಣಿ, ಎಲ್ಲಿರುವೆ ಬೇಗ ಬಾ” ಎಂದು ಕೂಗುತ್ತಾರೆ. ಗುರುಗಳು ಕೂಗಿದುದನ್ನು ಕೇಳಿದೊಡನೆಯೇ ಆರುಣಿಯು ಗದ್ದೆಯ ಬದುವಿನಿಂದ ಮೇಲೆದ್ದು ಗುರುಗಳ ಸಮ್ಮುಖದಲ್ಲಿ ನಿಂತು ವಿನಯಪೂರ್ವಕವಾಗಿ ಹೇಳುತ್ತಾನೆ : “ಪೂಜ್ಯರೇ, ಬದುವು ಕೊಚ್ಚಿಹೋಗಿ ಗದ್ದೆಯಿಂದ ಹರಿದುಹೋಗುತ್ತಿದ್ದ ನೀರನ್ನು ತಡೆಯಬೇಕೆಂದು ತಮ್ಮಿಂದ ಆಜ್ಞಪ್ತನಾದ ನಾನು ಇದುವರೆಗೂ ಹರಿದುಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಮಲಗಿದ್ದೆ. ತಮ್ಮ ಕೂಗನ್ನು ಕೇಳುತ್ತಲೇ ಗದ್ದೆಯ ಬದುವನ್ನು ಬಿಟ್ಟು ಬಂದೆನು. ತಮ್ಮನ್ನು ಅಭಿವಾದನಮಾಡಿ ಕೇಳಿಕೊಳ್ಳುತ್ತೇನೆ. ನಾನು ತಮಗಾಗಿ ಬೇರೆ ಯಾವ ಕಾರ್ಯವನ್ನು ಮಾಡಲಿ?” ಎನ್ನುತ್ತಾನೆ. ಆಯೋದಧೌಮ್ಯರು ಆರುಣಿಯ ಮಾತುಗಳನ್ನು ಕೇಳಿ “ನನ್ನ ಕೂಗನ್ನು ಕೇಳಿದೊಡನೆಯೇ ನೀನು ಗದ್ದೆಯ ಬದುವನ್ನು ಭೇದಿಸಿಕೊಂಡು ಬಂದೆಯಾದ ಕಾರಣ ನೀನು ಅದೇ ಹೆಸರಿನಿಂದ ಪ್ರಸಿದ್ಧನಾಗುವೆ. ಗದ್ದೆಯ ಬದುವನ್ನೊಮ್ಮೆ ಕಟ್ಟಿ ಪುನಃ ಬದುವನ್ನು ಭೇದಿಸಿಕೊಂಡು ಬಂದೆಯಾದಕಾರಣ ನೀನು ಉದ್ದಾಲಕನೆಂಬ ಹೆಸರನ್ನೇ ಪಡೆಯುವೆ” ಎಂದು ಅವನನ್ನು ಅನುಗ್ರಹಿಸಿ ಪುನಃ ಹೇಳಿದರು : “ನೀನು ನನ್ನ ಆಜ್ಞೆಯನ್ನು ಯಥಾವತ್ತಾಗಿ ಪಾಲಿಸಿದೆಯಾದ ಕಾರಣ ನೀನು ಶ್ರೇಯೋವಂತನಾಗುವೆ. ಎಲ್ಲ ವೇದಗಳೂ, ಸಮಸ್ತ ಧರ್ಮಶಾಸ್ತ್ರಗಳೂ ನಿನ್ನ ಬುದ್ಧಿಗೆ ಗೋಚರವಾಗುತ್ತವೆ.” ಎನ್ನುತ್ತಾರೆ. ಹೀಗೆ ಗುರುಗಳಿಂದ ಅನುಗೃಹೀತನಾದ ಉದ್ದಾಲಕನು ಗುರುಗಳಿಂದ ಬೀಳ್ಕೊಡುತ್ತಾನೆ. ಇದರ ಮುಂದಿನ ಭಾಗ ಅತ್ಯಂತ ಮುಖ್ಯವಾಗಿ ನನ್ನನ್ನು ಬಾಧಿಸುತ್ತಿದೆ. ಅದನ್ನು ಮುಂದೆ ಬರೆಯುವೆ.
ನೀರಾವರಿ ಬಳಕೆಗೆ ನೀರನ್ನು ಹೇಗೆ ಹಿಡಿದಿಟ್ಟುಕೊಂಡು ಅದನ್ನು ಹೇಗೆ ಉಪಯೋಗಿಸಿಕೊಳ್ಳ ಬಹುದೆನ್ನುವುದಕ್ಕೆ ಇದು ಬಹಳ ಮುಖ್ಯವಾಗುತ್ತವೆ. 

#ಉದ್ದಾಲಕ_ದೌಮ್ಯ