◆ ಐದು ರೂಪಾಯಿ ಪೆನ್ನು ಐದು ಕೋಟಿ ಚೆಕ್ ಬರೆಯುತ್ತೆ ಗೊತ್ತಾ? ◆
ಅತಿ ಹೀನಾಯವಾಗಿ ಡಿಸ್ಮಿಸ್'ಗೊಂಡು 'ಸಂಯುಕ್ತ ಕರ್ನಾಟಕ' ಕಛೇರಿಯಿಂದ ಹೊರ ಹೋಗುವಾಗ ರವಿಬೆಳಗೆರೆ ಎಂಬ ಸಾಹಸಿ ನನ್ನ ಬಳಿ ಬಂದು ಹೇಳಿದ್ದೇನು ಗೊತ್ತಾ? 'ಗಣೇಶ್, ತುಂಬಾ ಅವಮಾನ ಮಾಡಿಬಿಟ್ರು. ಈಗ ಈ ಗೇಟು ದಾಟಿ ಹೊರ ಹೋಗುತ್ತಿದ್ದೇನೆ. ನನ್ನ ಕೈಲಿರುವುದು ಈ 35 ಪೈಸೆಯ ಒಂದು ರೀಫಿಲ್ ಮಾತ್ರ. ಇದೇ ರೀಫಿಲ್'ನಿಂದ ಎಂಥಾ ಬದುಕು ಕಟ್ಟಿಕೊಳ್ತೇನೆ ಎನ್ನುವುದನ್ನು ನನ್ನ ವಜಾಕ್ಕೆ ಕಾರಣವಾದ ಇದೇ ಸಂಸ್ಥೆ ನೋಡುತ್ತಿರುತ್ತದೆ...' - ಹೀಗೆ ಹೇಳಿ ಹೋದ ರವಿಬೆಳೆಗೆರೆ ಅದೇ ರೀಫಿಲ್'ನಿಂದ ಅದೆಷ್ಟು ಕೋಟಿಯ ಸಾಮ್ರಾಜ್ಯ ಕಟ್ಟಿಕೊಂಡರೋ ನಾವು ನೀವೆಲ್ಲಾ ಜತೆಯಾಗಿ ನೋಡುತ್ತಿದ್ದೇವೆ! - ಇಂಥಾದ್ದೆಲ್ಲಾ ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ! ಆದರೆ ರವಿಬೆಳಗೆರೆ ತಮ್ಮ ನಿಜ ಬದುಕಿನಲ್ಲೇ ಇದನ್ನು ಸಾಧಿಸಿ ತೋರಿಸಿದ ಸಾಧಕ!
- ಇವೆಲ್ಲಾ ಈಗ ಏಕೆ ನೆನಪಾಯಿತೆಂದರೆ : ನಟ ಚರಣ್ ರಾಜ್ ಚೆನ್ನೈನಿಂದ ವಾಟ್ಸಾಪ್ ಮಾಡಿದ ಒಂದು ಪುಟ್ಟ ಶುಭಾಷಿತ! ಶುಭಾಷಿತ ಹೀಗಿದೆ : 'ಇಲ್ಲಿ ಯಾರೂ ದುರ್ಬಲರಲ್ಲ. ಐದು ರೂಪಾಯಿಯ ಪೆನ್ನು ಐದು ಕೋಟಿ ರೂಪಾಯಿಗಳ ಚೆಕ್ ಬರೆಯ ಬಲ್ಲುದು!' ತಕ್ಷಣ ಒಂದು ಮೆಸೇಜ್ ಪಾಸ್ ಮಾಡಿದೆ : 'ಎಲ್ಲಿ ಸಿಗತ್ತೆ ಸಾರ್ ಇಂಥಾ ಅದ್ಭುತ ವರ್ಡಿಂಗ್ಸ್?' - ಈ ಮೆಸೇಜ್ ತಲುಪಿದಾಕ್ಷಣವೇ ಚರಣ್ ರಾಜ್ ಖುದ್ದು ಫೋನ್ ಮೂಲಕ ಸಂಪರ್ಕಿಸಿ ಹೀಗೆ ಹೇಳಿದರು : 'ಗಣೇಶ್'ಜೀ, ತುಮಕೂರಿನ ಸಿದ್ದಗಂಗಾ ಮಠದಲ್ಲೊಬ್ಬರು ಕಿರಿಯ ಸ್ವಾಮೀಜಿಗಳಿದ್ದಾರೆ. ಅವರ ಹೆಸರು : ಮಂಜುನಾಥ ಅಂತ. ಬುದ್ಧಿವಂತರು, ತುಂಬಾ ತಿಳ್ಕೊಂಡವರು. ಅವ್ರು ದಿನಾ ನನ್ನ ಮೊಬೈಲ್'ಗೆ ಇಂಥಾ ಒಳ್ಳೊಳ್ಳೆಯ ಮೆಸೇಜ್ ಕಳಿಸುತ್ತಿರುತ್ತಾರೆ. ನಾನು ಅದನ್ನು ನಿಮ್ಮಂಥ ಒಳ್ಳೊಳ್ಳೆಯ ಗೆಳೆಯರಿಗೆ ಫಾರ್ವರ್ಡ್ ಮಾಡುತ್ತಿರುತ್ತೇನೆ, ಅಷ್ಟೇ...' - ಎಂದು ಮಾತು ನಿಲ್ಲಿಸಿ ಮಂಜುನಾಥ ಸ್ವಾಮಿಗಳನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿಕೊಟ್ಟರು ಚರಣ್ ರಾಜ್!
- ನೋಡಿ, ಇವೆರಡೂ ಪೆನ್ನು ಮತ್ತು ಅದರೊಳಗಿರುವ ರೀಫಿಲ್ ಕಥೆ! ಎಷ್ಟೊಂದು ಅರ್ಥಪೂರ್ಣವಾಗಿವೆಯಲ್ಲವೇ? ಇದೇ ಚರಣ್ ರಾಜ್ ರೀಫಿಲ್ ಬದಲು ಗಿಟಾರ್ ಹಿಡ್ಕೊಂಡು ಬೆಂಗಳೂರು ಬಿಟ್ಟವರು! ಮಲ್ಲೇಶ್ವರದ 'ರತನ್ ಮಹಲ್' ಎಂಬ ಹೋಟೆಲಿನ ರೂಮೊಂದರಲ್ಲಿದ್ದುಕೊಂಡು ಆರ್ಕೆಸ್ಟ್ರಾಗಳಲ್ಲಿ ಗಿಟಾರ್ ನುಡಿಸುತ್ತಾ ಬದುಕು ನಡೆಸುತ್ತಿದ್ದ ಇವರಿಗೆ ಮತ್ತೊಂದು ಬದುಕನ್ನು ದಾನ ಮಾಡಿದವರು ನಿರ್ದೇಶಕ ಸಿದ್ದಲಿಂಗಯ್ಯ. ಅಲ್ಲಿಂದ ಹಿಂದಿರುಗಿ ನೋಡದ ಚರಣ್ ರಾಜ್ ಆಮೇಲೆ ಏನೇನಾದರು ಎನ್ನುವುದೆಲ್ಲಾ ಈಗ ಇತಿಹಾಸ! ಈಗ ಇವರ ಮಕ್ಕಳ ಕಾಲ. ಚೆನ್ನೈನ ಬಂಗಲೆಯ ಗೋಡೆ ಮೇಲೆ ಈಗಲೂ ಸಿದ್ಧಲಿಂಗಯ್ಯನವರ ಫೋಟೋ ಇಟ್ಟು ಪೂಜಿಸುತ್ತಿದ್ದಾರೆ ಚರಣ್ ರಾಜ್! ಇಲ್ಲಿ ಈ ಕಡೆ ಬಂದರೆ ರವಿಬೆಳಗೆರೆ ಆಫೀಸಿನ ಟೇಬಲ್ ಮೇಲಿನ ಪುಟ್ಟ ಪ್ಲಾಸ್ಟಿಕ್ ಲೋಟದಲ್ಲಿ ಅಂದು ನನಗೆ ತೋರಿಸಿದ ರೀಫಿಲ್ ಇದೆ! ಬದುಕೇ ಸಿನಿಮಾವಾಗುವುದು ಇಂಥಾ ಸಂದರ್ಭಗಳಲ್ಲಲ್ಲವೇ?
ಮತ್ತೊಂದು ಸಂದರ್ಭದಲ್ಲಿ ನಾನು ಮತ್ತು ರವಿಬೆಳಗೆರೆ ವಿಷ್ಣುವರ್ಧನ್ ಅವರನ್ನು ಭೇಟಿಯಾಗುವ ಅವಕಾಶವೊಂದು ಬಂತು. ಆಗ ನಾನು ವಿಷ್ಣುವರ್ಧನ್ ಅವರಲ್ಲಿ ರವಿಬೆಳಗೆರೆಯವರ ರೀಫಿಲ್ ಕಥೆ ಹೇಳಿಕೊಂಡಾಗ ಸಖೇದಾಶ್ಚರ್ಯಗೊಂಡು ತಾವಾಗಿಯೇ ಇಷ್ಟಪಟ್ಟು ನಮ್ಮ ಮೂವರ ಫೋಟೋ ಕ್ಲಿಕ್ಕಿಸಿಕೊಂಡದ್ದು ಕೂಡಾ ಈಗ ಇತಿಹಾಸ!
- ಇಂಥಾ ರೋಚಕ ಬದುಕಿನ ಸೂಕ್ಷ್ಮ ವಿಷಯಗಳೆಲ್ಲಾ ನಾನು ಬರೆದ 'ಶುಭಂ' ಪುಸ್ತಕದಲ್ಲಿವೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ ಮೃಷ್ಟಾನ್ನ ಭೋಜನ!. 'ಕರೋನಾ ರಜಾ' ಒಂದು ಹಂತಕ್ಕೆ ಬಂದಿರುವುದರಿಂದ ಕೊರಿಯರ್ ವ್ಯವಸ್ಥೆ ಶುರುವಾಗಿದೆ. ನೀವು ಬಯಸಿದರೆ 'ಶುಭಂ' ನಿಮ್ಮ ಮನೆ-ಮನ ಸೇರಲಿದೆ.
◆ 'ಶುಭಂ' ಪುಸ್ತಕ ಬೇಕಿದ್ದವರು ವಾಟ್ಸಾಪ್ ಮೂಲಕ ನನ್ನನ್ನು ಸಂಪರ್ಕಿಸಬಹುದು : 7899945653
◆ ಮುಖ್ಯ ಫೋಟೋ : ಮಂಜುನಾಥ ಸ್ವಾಮೀಜಿಗಳ ಜತೆ ನಟ ಚರಣ್ ರಾಜ್...
◆ ಕೊನೆಯ ಫೋಟೋ : ಚರಣ್ ರಾಜ್ ಪತ್ನಿ ಜತೆ ಮಕ್ಕಳ ಸಂಭ್ರಮ : ಹಿರಿಯ ಮಗ - ತೇಜ್ (ನಟ), ಕಿರಿಯ ಮಗ - ದೇವೇಂದ್ರ (ಪೈಲೆಟ್)

Social Plugin