ಲೇಖನ : ಹಿರಿಯ ಸಿನಿಮಾ ಪ್ರತ್ರಕರ್ತ "ಗಣೇಶ್ ಕಾಸರಗೋಡ"
◆ ಮುತ್ತಪ್ಪ ರೈ ಕಥೆ ಹೇಳುವಾಗ ಮುನಿರತ್ನಗೆ ಕೊತ್ವಾಲ ರಾಮಚಂದ್ರ ನೆನಪಾಗಲಿಲ್ಲವೇ? ◆
ಮೊನ್ನೆ ಚಾನಲ್'ವೊಂದರಲ್ಲಿ ಕುಳಿತು ಮುನಿರತ್ನ ಅವರು ಮುತ್ತಪ್ಪ 'ರೈ' ಸಿನಿಮಾ ಬಗ್ಗೆ ಮಾತಾಡುತ್ತಿದ್ದರು : 'ಮುತ್ತಪ್ಪ ರೈಗೆ ತನ್ನದೊಂದು ಸಿನಿಮಾ ಆಗಬೇಕೆನ್ನುವ ಆಸೆಯಿತ್ತು. ಹೀಗಾಗಿಯೇ ರಾಮ್ ಗೋಪಾಲ್ ವರ್ಮಾನನ್ನು ಭೇಟಿಯಾಗಿ ಮಾತುಕತೆ ನಡೆಸಿ ಒಪ್ಪಿಸಿದ್ದಲ್ಲದೇ 'ರೈ' ಸಿನಿಮಾಕ್ಕೆ ಸಂಬಂಧಿಸಿದ ಒಂದು ಪುಟ್ಟ ಟೈಟಲ್ ಕ್ಲಿಪ್ಪಿಂಗ್ ಕೂಡಾ ಬಿಡುಗಡೆ ಮಾಡಿದ್ದರು. ಮುತ್ತಪ್ಪ ರೈಗೆ ತನ್ನ ಸಾಮಾಜಿಕ ಕೆಲಸ ಕಾರ್ಯಗಳ ಬಗೆಗಿನ ಸಬ್ಜೆಕ್ಟ್ ಬೇಕಾಗಿತ್ತು. ಆದರೆ ಇದಕ್ಕೊಪ್ಪದ ರಾಮ್ ಗೋಪಾಲ್ ವರ್ಮಾ ರೈಯ ಭೂಗತ ಲೋಕದ ಚಟುವಟಿಕೆಗಳ ಬಗ್ಗೆ ಹೆಚ್ಚು ಕಾನ್ಸೆನ್ಟ್ರೇಟ್ ಮಾಡಿದ್ದೇ ಎಡವಟ್ಟಾಗಿ ಹೋಯಿತು. ಪ್ರಾಜೆಕ್ಟ್ ಮುರಿದು ಬಿತ್ತು...' - ಮುನಿರತ್ನ ಅವರು ಇಷ್ಟನ್ನು ಸ್ಪಷ್ಟವಾಗಿ ಹೇಳುತ್ತಿರುವಂತೆಯೇ ನನಗೆ ನೆನಪಾದದ್ದು 19 ವರ್ಷಗಳ ಹಿಂದಿನ 'ಕೊತ್ವಾಲ' ಪ್ರಾಜೆಕ್ಟ್! ಹೌದು ಇದು ಮುನಿರತ್ನ ಅವರ ಕನಸಾಗಿತ್ತು. ಕೊತ್ವಾಲ ರಾಮಚಂದ್ರನ ಬದುಕಿನ ಘಟನೆಯನ್ನಾಧರಿಸಿ ಸಿದ್ಧಗೊಳ್ಳಬೇಕಿದ್ದ ಈ ಚಿತ್ರ ಅದೇಕೆ ಡ್ರಾಪ್ ಆಯಿತೋ ಗೊತ್ತಿಲ್ಲ.
ಈ ಬಗ್ಗೆ ವಿವರ ತಿಳಿಸಲೆಂದೇ ಮುನಿರತ್ನ ಅವರು ಬೆಂಗಳೂರಿನ ಎಂ.ಜಿ.ರಸ್ತೆಯ ಯುಟಿಲಿಟಿ ಬಿಲ್ಡಿಂಗ್'ನ 24ನೇ ಫ್ಲೋರ್'ನಲ್ಲಿ ಪ್ರೆಸ್ ಮೀಟನ್ನೂ ಕರೆದಿದ್ದರು. ಇದು ನಡೆದದ್ದು 2001ನೇ ಇಸವಿಯಲ್ಲಿ. ಈ ಬಗೆಗಿನ ಮುಖಪುಟ ವರದಿಯನ್ನು ನಾನು 'ವಿಜಯಕರ್ನಾಟಕ'ದಲ್ಲಿ ಪ್ರಕಟಿಸಿದ್ದೆ! 26-10-2001ರ 'ಸಿನಿವಿಜಯ' ಸಪ್ಲಿಮೆಂಟಿನಲ್ಲಿ ಪ್ರಕಟವಾದ ವಿವರ ಹೀಗಿತ್ತು : 'ಮಹತ್ವಾಕಾಂಕ್ಷೆಯಿಂದ ಚಿತ್ರರಂಗ ಪ್ರವೇಶಿಸಿದ ಮುನಿರತ್ನ ಅವರು ಈ ಬಣ್ಣದ ಲೋಕದ ಚಮಕ್ ಅರಿಯದೇ 'ಆಂಟಿ ಪ್ರೀತ್ಸೆ' ಎಂಬ ಡಬ್ಬಾ ಸಿನಿಮಾವನ್ನು ನಿರ್ಮಿಸಿ ಮುಖಭಂಗ ಮಾಡಿಸಿಕೊಂಡದ್ದು ಹಳೆಯ ಕಥೆ. ಹೊಸಕಥೆ ಏನಪ್ಪಾ ಅಂದ್ರೆ 'ಕೊತ್ವಾಲ' ಚಿತ್ರದ ಪ್ರಾಜೆಕ್ಟ್! ಕೊತ್ವಾಲ ರಾಮಚಂದ್ರನ ಪಾತ್ರವನ್ನು ಉಪೇಂದ್ರ ನಿರ್ವಹಿಸಲು ಗೊತ್ತಾಗಿದ್ದಾರೆ. ಆದರೆ 'ದೈತ್ಯದೇಹಿ ಕೊತ್ವಾಲನ ಪಾತ್ರಕ್ಕೆ ಅಂಬರೀಷ್ ಸೂಟ್ ಆಗ್ತಾರಲ್ಲ?' - ಎಂದು ಪತ್ರಕರ್ತರೊಬ್ಬರು ಕೇಳಿದಾಗ ಮುನಿರತ್ನ ತಣ್ಣಗೆ ಉತ್ತರಿಸಿದ್ದು ಹೀಗೆ : 'ಇದು ಹತ್ತು ಕೋಟಿ ಬಜೆಟ್'ನ ದೊಡ್ಡ ಪ್ರಾಜೆಕ್ಟ್. ಅಂಬರೀಶ್'ರನ್ನು ನಂಬಿ ಅಷ್ಟೊಂದು ರಿಸ್ಕ್ ತೆಗೆದುಕೊಳ್ಳಲು ನಾನು ರೆಡಿಯಿಲ್ಲ. ಹಾಗೆ ನೋಡಿದರೆ ಇದು ಕೊತ್ವಾಲನ ಕಥೆಯಲ್ಲ. ರಾಮಚಂದ್ರನ ಕಥೆ. ಆದರೆ ಈ ರಾಮಚಂದ್ರ ಏಕಪತ್ನೀವೃತಸ್ಥನಲ್ಲ. ನಮ್ಮ ಈ ರಾಮಚಂದ್ರನಿಗೆ ಮೂವರು ಪತ್ನಿಯರಿದ್ದಾರೆ. ಮೂರು ಮಂದಿ ನಾಯಕಿಯರ ಆಯ್ಕೆಯಾಗಬೇಕಾಗಿದೆ! ಅಸಂಖ್ಯಾತ ಶಿಷ್ಯಂದಿರು. ಕರ್ನಾಟಕದ ಕ್ರೈಮ್ ಲೋಕದಲ್ಲಿ ಈತನದ್ದು ರಕ್ತಸಿಕ್ತ ಅಧ್ಯಾಯ. ಕೊತ್ವಾಲನ ಪಾತ್ರವನ್ನು ಉಪೇಂದ್ರ, ಜಯರಾಜನ ಪಾತ್ರವನ್ನು ಪ್ರಕಾಶ್ ರೈ ನಿರ್ವಹಿಸಲಿದ್ದಾರೆ...' - ಎಂದೆಲ್ಲಾ ವಿವರ ಕೊಟ್ಟ ಮುನಿರತ್ನ ಆಮೇಲೆ ಯಾಕೆ ಸೈಲೆಂಟ್ ಆದರೋ ಗೊತ್ತಿಲ್ಲ. ಈಗ ಅಂದರೆ 19 ವರ್ಷಗಳ ನಂತರದ ಈ ದಿನಗಳಲ್ಲಿ ಮುನಿರತ್ನ ಅವರು ಮನಸ್ಸು ಮಾಡಿದರೆ 'ಕೊತ್ವಾಲ' ಯಾವ ಗಿಡದ ತೊಪ್ಪಲು ಅಂತೀರಿ?
ಅಂದಹಾಗೆ, 'ಕೊತ್ವಾಲ' ಚಿತ್ರದ ವಿವರಗಳನ್ನು ಮುನಿರತ್ನ ಅವರು ಬಹಿರಂಗಗೊಳಿಸುತ್ತಿರುವಂತೆಯೇ ನಾನು ಮಾಡಿದ ಮೊದಲ ಕೆಲಸವೆಂದರೆ ನಮ್ಮ ಕಲಾವಿದ ಶ್ರೀಪಾದ್ ಕೈಲಿ ಗ್ರಾಫಿಕ್ ಮೂಲಕ ಉಪೇಂದ್ರರನ್ನು ಕೊತ್ವಾಲ ರಾಮಚಂದ್ರನನ್ನಾಗಿಸಿದ್ದು! ಈ ಸುದ್ದಿ ಚಿತ್ರ ಸಮೇತ 'ವಿಜಯಕರ್ನಾಟಕ'ದಲ್ಲಿ ಪ್ರಕಟವಾಗುತ್ತಿರುವಂತೆಯೇ ಆಫೀಸಿಗೆ ಓಡೋಡಿ ಬಂದ ಮುನಿರತ್ನ ಅವರು ದೊಡ್ಡದೊಂದು 'ಥ್ಯಾಂಕ್ಸ್' ಹೇಳಿ ಹೊರಟು ಹೋಗಿದ್ದರು! 19 ವರ್ಷಗಳ ಹಿಂದಿನ ಈ 'ಕೊತ್ವಾಲ' ಪ್ರಾಜೆಕ್ಟ್ ನೆನಪಾದರೆ ಇದನ್ನು ಒಂದು ಸವಾಲೆಂದು ಪರಿಗಣಿಸಿ ಮತ್ತೊಮ್ಮೆ ಯೋಚಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ ಅಲ್ಲವೇ?

Social Plugin