ರಬಕವಿ-ಬನಹಟ್ಟಿ ನಗರಸಭೆ ತೆರಿಗೆ ಹೆಚ್ಚಳ ವಿರೋಧಿಸಿ ಸಭೆಯಲ್ಲಿ ಮಾತನಾಡಿದ ದುಂಡಪ್ಪ ಮಾಚಕನೂರ.
ನೇಕಾರರ ಪರಿಸ್ಥಿತಿ ಅರಿತಿದ್ದರೂ ತೆರಿಗೆ ಹೆಚ್ಚಳಕ್ಕೆ ವಿರೋಧ
ರಬಕವಿ-ಬನಹಟ್ಟಿ,ಮೇ13: ರಬಕವಿ-ಬನಹಟ್ಟಿ ತಾಲೂಕು ನೇಕಾರರಿಂದಲೇ ಕೂಡಿದ್ದಾಗಿದೆ. ಸದ್ಯ ಸ್ಥಳೀಯ ನಗರಸಭೆಯು ಎಲ್ಲ ತೆರಿಗೆಗಳನ್ನು ಶೇ.20 ರಷ್ಟು ಹೆಚ್ಚಳಗೊಳಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುವಂತೆ ಮಾಡುವಲ್ಲಿ ಕಾರಣವಾಗಿದೆ. ತಕ್ಷಣವೇ ಮೊದಲಿದ್ದ ತೆರಿಗೆಯನ್ನೇ ಮುಂದುವರೆಸುವಂತೆ ಸ್ಥಳೀಯರ ಒತ್ತಾಯವಾಗಿದೆ.
ಈ ಕುರಿತು ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ದಿಢೀರ್ ಸಭೆ ಸೇರಿ ಮಾತನಾಡಿದ ದುಂಡಪ್ಪ ಮಾಚಕನೂರ, ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ನೇಕಾರಿಕೆಗೆ ಕೊರೊನಾ ವೈರಸ್‍ನಿಂದ ಉದ್ಯೋಗಕ್ಕೆ ಪಾಶ್ರ್ವವಾಯು ಬಡಿದಂತಾಗಿದೆ. ಇದನ್ನೆಲ್ಲ ಅರಿತು ಈ ಮೊದಲು ಸಿಎಂ ಯಡಿಯೂರಪ್ಪನವರು ನೇಕಾರರು ಪಡೆದ ಸಾಲದಲ್ಲಿ ತಲಾ 1 ಲಕ್ಷ ರೂ. ಮನ್ನಾ ಮಾಡಿದ್ದಾರೆ. ಸೀರೆ ಉದ್ಯೋಗಕ್ಕೆ ಏಪ್ರಿಲ್ ಹಾಗು ಮೇ ತಿಂಗಳು ಅತಿ ಮಹತ್ವದ್ದು, ಇಂತಹ ಸಮಯದಲ್ಲಿ ಕೊರೊನಾ ಮಹಾಮಾರಿಯಿಂದ ಉದ್ಯೋಗವನ್ನೇ ಕಸಿದುಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆ, ಬಾಡಿಗೆ ಸೇರಿದಂತೆ ಇತರೆ ನಗರಸಭೆಯ ತೆರಿಗೆಗಳನ್ನು ಹೆಚ್ಚಳಗೊಳಿಸಿದ್ದನ್ನು ಕೈಬಿಟ್ಟು ಮೊದಲಿದ್ದ ತೆರಿಗೆಯನ್ನೇ ಮುಂದುವರೆಸುವಂತೆ ಒತ್ತಾಯಿಸಿದರು.
ಜವಳಿ ಉದ್ಯಮಿ ಶಂಕರ ಜುಂಜಪ್ಪನವರ ಮಾತನಾಡಿ, ನೇಕಾರರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಉಳ್ಳವರು ನೀಡುತ್ತಿರುವ ಆಹಾರ, ದಿನಸಿ ಹಾಗು ತರಕಾರಿ ಪಟ್ಟಣಗಳಿಂದಲೇ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೆ ಒಂದೆಡೆ ನೇಯ್ಗೆಗೆ ಬೇಕಾದ ಕಚ್ಚಾ ಸಾಮಗ್ರಿಗಳು ದೊರಕದೆ, ಮತ್ತೊಂದೆಡೆ ನೇಯ್ದ ಸೀರೆಗಳು ರಫ್ತಾಗದ ಕಾರಣ ಬದುಕು ಅತಂತ್ರವಷ್ಟೇ ಅಲ್ಲ ಸಂಪೂರ್ಣ ಸಮಾಧಿಯಾಗುವ ಹಂತ ತಲುಪಿದೆ. ಒಟ್ಟಾರೆ ಕೊರೊನಾದಲ್ಲಿನ ಸಮಾಜಿಕ ಅಂತರದಂತೆ ಸೀರೆಗೆ ವ್ಯಾಪಾರಿ ಅಂತರವೂ ದುಪ್ಪಟ್ಟಾಗಿದ್ದು, ತೆರಿಗೆ ಹೆಚ್ಚಳ ಹಿಂಪಡೆಯಬೇಕೆಂದು ಬೇಸರ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಬಾಣಕಾರ, ಧರೆಪ್ಪ ಉಳ್ಳಾಗಡ್ಡಿ, ಸತೀಷ ಹಜಾರೆ, ರಾಮಣ್ಣ ಹುಲಕುಂದ, ಹಟ್ಟಿ, ಬಸವರಾಜ ತೆಗ್ಗಿ, ಮಹಾದೇವ ಚರ್ಕಿ, ಬ್ರಿಜ್‍ಮೋಹನ ಡಾಗಾ, ಚಿದಾನಂದ ಕಕಮರಿ, ಮಲ್ಲು ಕುಚನೂರ, ಮಹಾದೇವ ಧೂಪದಾಳ, ಗೋವಿಂದ ಡಾಗಾ, ಪರಪ್ಪ ಬಿಳ್ಳೂರ, ಮಲ್ಲಣ್ಣ ಕಕಮರಿ, ಓಂಪ್ರಕಾಶ ಕಾಬರಾ, ಮಹಾದೇವ ಮುನ್ನೋಳ್ಳಿ, ಗಣಪತಿ ಹಜಾರೆ ಸೇರಿದಂತೆ ಅನೇಕರಿದ್ದರು.

Social Plugin