- ಬನಹಟ್ಟಿಯ ಲಕ್ಷ್ಮೀ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಸಾಯನಿಕ ದ್ರವ ಸಿಂಪರಣೆಯಲ್ಲಿರುವದು.
ತಪ್ಪದ ಕ್ವಾರಂಟೈನ್ ವ್ಯಕ್ತಿಗಳ ಕಾಲ
ಸಾಂಸ್ಥಿಕ ಕ್ವಾರಂಟೈನ್ ಅವ್ಯವಸ್ಥೆ
ರಬಕವಿ-ಬನಹಟ್ಟಿ,ಮೇ13: ತಾಲೂಕಿನ ಬನಹಟ್ಟಿಯ ಲಕ್ಷ್ಮೀ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಕಳೆದ ದಿ.8 ರಂದು 12 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅದರ ಪೈಕಿ ಓರ್ವನಿಗೆ ಕೊರೊನಾ ವೈರಸ್ ತಗುಲಿದ ಕಾರಣ ಜನತೆ ಭಯಭೀತರಾಗುವಲ್ಲಿ ಕಾರಣವಾಗಿದೆ.
ಅಲ್ಲಿನ ಸಾಂಸ್ಥಿಕ ಕ್ವಾರಂಟೈನ್‍ನಿಂದ ಓರ್ವನಿಗೆ ಶಸ್ತ್ರಕ್ರಿಯೆ ಅನಿವಾರ್ಯವಾಗಿತ್ತು. ಇದಕ್ಕೆ ಸಂಬಂಧ 108 ವಾಹನದಿಂದ ದಿ. 9 ರಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿ ಪರಿಚಯ ಸುಳ್ಳು ಹೇಳುವ ಮೂಲಕ ಅಲ್ಲಿಯೇ ಶಸ್ತ್ರಕ್ರಿಯೆಗೆಂದು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದಾನೆ. ಮರುದಿನ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಾಕ್ಷಣ ವಾಪಸ್ ಸಾಂಸ್ಥಿಕ ಕ್ವಾರಂಟೈನ್‍ಗೆ ಕರೆದೊಯ್ಯಲಾಗಿದೆ. ಅಷ್ಟರೊಳಗೆ ಅವರಲ್ಲಿದ್ದ ಓರ್ವನಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಾಗಿತ್ತು. ಆ ವ್ಯಕ್ತಿಯನ್ನು ಸದ್ಯ ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದ್ದು, ಉಳಿದ ವ್ಯಕ್ತಿಗಳನ್ನು ಪಟ್ಟಣದಲ್ಲಿಯೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಹೋಂ ಕ್ವಾರಂಟೈನ್: ಇದಕ್ಕೆ ಸಂಬಂಧ ಸ್ಥಳೀಯ ಖಾಸಗಿ ಆಸ್ಪತ್ರೆ ವೈದ್ಯ ಸೇರಿದಂತೆ ಏಳು ಜನರನ್ನು ಹೋಂ ಕ್ವಾರಂಟೈನ್‍ಗಾಗಿ ತಾಲೂಕಾಡಳಿತ ಸಮಕ್ಷಮ ತೆರಳಿ ತಿಳಿಸಿದೆ.
ಪ್ರಮಾದ: ದಿ. 8 ರಂದು ಗುಜರಾತ್‍ನ ಅಹಮದಾಬಾದ್ ನಿಂದ ಆಗಮಿಸಿದ್ದ 12 ಜನ ತಬ್ಲಿಘಿಗಳನ್ನು ಕರೆ ತರುವಲ್ಲಿ ಸ್ಥಳೀಯ ಮೂವರು ನಿರ್ಲಕ್ಷ್ಯತನದಿಂದ ಅವರೊಂದಿಗೆ ಬೆರೆತ ಕಾರಣ ಅವರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಯಾವದೇ ವ್ಯಕ್ತಿಯ ಕೈಗೆ ಸೀಲು ಹಾಕದ ಕಾರಣ ಹಾಗು ಬೇಕಾಬಿಟ್ಟಿ ಹೊರ ಸಂಚಾರದಿಂದ ಇಂತಹ ಘಟನೆ ಸಂಭವಿಸುವಲ್ಲಿ ಕಾರಣವಾಗಿದೆ. ಈ ಕುರಿತು ಜಿಲ್ಲಾಡಳಿತ ಎಚ್ಚರ ವಹಿಸಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರವವರ ಬಗ್ಗೆ ಹೆಚ್ಚಿನ ಕಾಳಜಿ ಹಾಗು ನಿಯಮಗಳನ್ನು ಪಾಲಿಸಬೇಕಿದೆ.
ರಬಕವಿಯಲ್ಲಿಯೂ ಅವ್ಯವಸ್ಥೆ: ಜಿಲ್ಲಾಡಳಿತ ಮಾಡಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ರಾಜ್ಯದ ಬೆರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಸುಮಾರು 20 ಕ್ಕೂ ಅಧಿಕ ಜನರನ್ನು ರಬಕವಿಯ ಅನೇಕ ಕಡೆಗಳ ಸರ್ಕಾರಿ ಪ್ರದೇಶಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂಬ ಆರೋಪ ಕ್ವಾರಂಟೈನ್‍ನಲ್ಲಿರುವವರದ್ದಾಗಿದೆ. 
ಬೆಡ್‍ಶೀಟ್‍ಗಳಿಲ್ಲ, ಆಗಾಗ ವಿದ್ಯುತ್ ಕೈಕೊಡುತ್ತದೆ. ವಿಪರೀತ ಸೊಳ್ಳೆಗಳ ಕಾಟ ಎಲ್ಲರಿಗೂ ಸೇರಿ ಒಂದೇ ಶೌಚ, ಸ್ನಾನ, ಊಟ ಚೆನ್ನಾಗಿಲ್ಲವೆಂದು ಆರೋಪವಾಗಿದೆ. ಜಿಲ್ಲಾಡಳಿತ ಮಾಡಿರುವ ಈ ವ್ಯವಸ್ಥೆಯಿಂದ ಬೇಸರವಾಗಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ನಮಗೆ ಕಾಯಿಲೆ ಇಲ್ಲ. ಆದರೆ ಒಂದೇ ಕಡೆ ಇಷ್ಟೊಂದು ಜನರನ್ನು ಇಟ್ಟಿರುವದರಿಂದಲೇ ಕಾಯಿಲೆ ಬರುವ ಆತಂಕವಿದೆ ಎನ್ನುತ್ತಾರೆ ಕ್ವಾರಂಟೈನಿಗಳು.