ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಬನಹಟ್ಟಿಯ ನೂಲಿನ ಗಿರಣಿ ಬಳಿ ವಾಹನಗಳ ತಪಾಸಣೆಯಲ್ಲಿ ಪೊಲೀಸರು.
ಊರೊಳಗೆ ವಾಹನ ಬರೋವಂಗಿಲ್ಲ
ರಬಕವಿ-ಬನಹಟ್ಟಿ,ಮೇ2: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ರಸ್ತೆ ಸಂಚಾರಕ್ಕೆ ಸಂಬಂಧ ಬಿಗಿ ಬಂದೋಬಸ್ತ್ ನಡೆಸಿದ ಪೊಲೀಸರು ಜಮಖಂಡಿ-ಕುಡಚಿ, ಮುಧೋಳ-ಬನಹಟ್ಟಿ ಹಾಗು ಗೋಕಾಕ ಕಡೆಗಳಿಂದ ಆಗಮಿಸುವ ವಾಹನಗಳನ್ನು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಆಹಾರ ಹಾಗು ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ವಾಹನಗಳನ್ನು ಮಾತ್ರ ತಪಾಸಣೆ ನಡೆಸಿ ಪಟ್ಟಣದೊಳಗೆ ಪ್ರವೇಶ ಮಾಡುತ್ತಿದ್ದು, ಇನ್ನುಳಿದ ವಾಹನಗಳನ್ನು ಪಟ್ಟಣದ ಹೊರವಲಯ ಹಾಗು ವಾಪಸ್ ಕಳಿಸುವ ವ್ಯವಸ್ಥೆ ಪೊಲೀಸರಿಂದ ನಡೆಯುತ್ತಿದೆ.
ವಿನಾಕಾರಣ ಸಂಚರಿಸುವ ಬೈಕ್ ಸವಾರರು ರಸ್ತೆಗಿಳಿದಂತೆ ಪೊಲೀಸರ ಕಟ್ಟೆಚ್ಚರಕ್ಕೆ ಜನತೆ ಸಹಮತ ತೋರಿದ್ದಲ್ಲದೆ ಕೆಲವರಿಗೆ ಲಾಠಿ ರುಚಿಯೂ ನೀಡಿದ್ದಾರೆ.
ಕೊರೊನಾ ವೈರಸ್‍ನಿಂದ ಸ್ವಲ್ಪಮಟ್ಟಿಗೆ ನಿರಾಳತೆ ಕಂಡಿರುವ ತಾಲೂಕಾಡಳಿತಕ್ಕೆ ವಲಸಿಗರಿಂದ ಭಯ ಶುರುವಾಗಿದೆ. ಈಗಾಗಲೇ ಜಮಖಂಡಿ, ಕುಡಚಿ, ರಾಯಭಾಗ, ಮುಧೋಳ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಕೊರೊನಾ ವೈರಸ್ ಒಕ್ಕರಿಸಿರುವ ಕಾರಣ ಅವರ ಸಂಬಂಧಿ ಕುಟುಂಬಗಳಿರುವ ತಾಲೂಕಿನಾದ್ಯಂತ ಹದ್ದಿನ ಕಣ್ಣು ಇಟ್ಟಿದ್ದು, ಆಗಾಗ ಭೆಟ್ಟಿಯಾಗಿರುವ ವಿಚಾರಣೆಯಲ್ಲಿರುವ ಜನರನ್ನು ಈಗಾಗಲೇ ಕ್ವಾರೆಂಟೈನ್ ಮಾಡಲಾಗುತ್ತಿದೆ.
ಈಗಾಗಲೇ ಕೆಲವರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದವರಲ್ಲಿ ನೆಗೆಟಿವ್ ವರದಿ ಬಂದಿದ್ದರೂ, ಇನ್ನೂ 15 ದಿನಗಳ ಕಾಲ ಅವರನ್ನು ಮನೆಯಲ್ಲಿಯೇ ಹಾಗು ಕೆಲ ಸರ್ಕಾರಿ ಪ್ರದೇಶಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದ್ದು, ಅಂಥವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.